ಕುರುಗೋಡು ಪಟ್ಟಣದಲ್ಲಿ ಸಂವಿಧಾನ ಜಾಗೃತಿ ಜಾಥಾಗೆ ಅದ್ದೂರಿ ಸ್ವಾಗತ; ಹಬ್ಬದ ವಾತಾವರಣ

0
19

ಬಳ್ಳಾರಿ,ಫೆ.13: ಸಂವಿಧಾನ ಅಂಗೀಕಾರಗೊಂಡು 75 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಸಾರ್ವಜನಿಕರಿಗೆ ಅರಿವು ಮೂಡಿಸಲು ಹಮ್ಮಿಕೊಂಡಿರುವ “ಸಂವಿಧಾನ ಜಾಗೃತಿ ಜಾಥಾ”ವು ಜಿಲ್ಲೆಯಾದ್ಯಂತ ಯಶಸ್ವಿಯಾಗಿ ಸಂಚರಿಸುತ್ತಿದೆ.
ಸೋಮವಾರದಂದು ಕುರುಗೋಡು ಪಟ್ಟಣಕ್ಕೆ ಆಗಮಿಸಿದ್ದ ಸಂವಿಧಾನ ಜಾಗೃತಿ ಜಾಥಾವನ್ನು ತಾಲ್ಲೂಕು ಆಡಳಿತ ಮತ್ತು ಪುರಸಭೆ ಅಧಿಕಾರಿ ವರ್ಗದವರು, ನೇತಾರರ ವೇಷ ಭೂಷಣಗಳನ್ನು ಧರಿಸಿದ ವಿದ್ಯಾರ್ಥಿಗಳು, ಹಲಗೆ ಮತ್ತು ಡೊಳ್ಳು ಕಲಾವಿದರು, ಹಗಲು ವೇಷಗಾರರು, ಸುಡುಗಾಡು ಸಿದ್ಧರ ವೇಷ ಧರಿಸಿದ ಸುಡುಗಾಡು ಸಿದ್ಧರು, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಗ್ರಾಮದ ಜನಪ್ರತಿನಿಧಿಗಳು, ಊರಿನ ಮುಖಂಡರು ಹಾಗೂ ಸಾರ್ವಜನಿಕರು ಎಲ್ಲಾ ಸೇರಿ ಅತ್ಯಂತ ಸಂಭ್ರಮ, ಸಡಗರದಿಂದ ಸ್ವಾಗತಿಸಿದರು.

ಜಾಥಾವು ಕುರುಗೋಡು ಪಟ್ಟಣದ ವಿವಿಧ ವಾರ್ಡ್‍ಗಳಲ್ಲಿ ಮೆರವಣಿಗೆ ಮೂಲಕ ಸಾಗಿತು. ಜಾಥಾದೊಂದಿಗೆ ಶಾಲಾ ಮಕ್ಕಳ ಸೈಕಲ್ ಜಾಥಾ, ಹೂವಿನ ಸೂಸುಗ ಧರಿಸಿ ಕಳಶ ಹಿಡಿದು ಹೆಂಗಳೆಯರು, ಹಗಲು ವೇಷಧಾರಿಗಳು, ಸುಡುಗಾಡು ಸಿದ್ಧರು, ಡೊಳ್ಳು ಕಲಾವಿದರು ಭಾಗವಹಿಸಿದ್ದು, ಪಟ್ಟಣದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು.
ಹಗಲು ವೇಷಧಾರಿಗಳು ರಾಮಾಯಣದ ವಿವಿಧ ಪಾತ್ರಗಳ ಹಗಲು ವೇಷ ಧರಿಸಿ ರಾಮಾಯಣ ಮಹಾಕಾವ್ಯದ ಪ್ರಸಂಗವನ್ನು ಮೆರವಣಿಗೆಯುದ್ದಕ್ಕೂ ನಡೆಸಿಕೊಟ್ಟರು. ಸುಡುಗಾಡು ಸಿದ್ಧರು ಕುರ್ರಮಾಮ ವೇಷ ಧರಿಸಿ ಮಹಾಭಾರತದ ಪಾಂಡವರ ಕಥೆ ಹೇಳುತ್ತಾ ಮೆರವಣಿಗೆಗೆ ಮೆರಗು ತಂದರು. ಡೊಳ್ಳು ಕಲಾವಿದರು ಡೊಳ್ಳು ಕುಣಿತದ ಮೂಲಕ ಮನರಂಜಿಸಿದ್ದು ವಿಶೇಷವಾಗಿತ್ತು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಪೂಜೆ ಸಲ್ಲಿಸಲಾಯಿತು. ಕುರುಗೋಡು ಶ್ರೀ ದೊಡ್ಡ ಬಸವೇಶ್ವರ ದೇವಸ್ಥಾನದ ಹತ್ತಿರದ ಮುಖ್ಯ ವೃತ್ತದಲ್ಲಿ ನೀಲಿ ಬಾವುಟಗಳ ಮೂಲಕ ಸಿಂಗರಿಸಲಾಗಿತ್ತು.

ಜಾಥಾದಲ್ಲಿ ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಸಂವಿಧಾನ ರಚನಾ ಸಭೆ ಹಾಗೂ ಸಂವಿಧಾನದ ಕುರಿತ ವೀಡಿಯೋ ತುಣುಕುಗಳನ್ನು ಸಾರ್ವಜನಿಕರಿಗೆ ಪ್ರದರ್ಶಿಸಲಾಯಿತು. ಇದೇ ಸಂದರ್ಭದಲ್ಲಿ ಸಂವಿಧಾನ ಪ್ರಸ್ತಾವನೆಯ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿ ಜಾಥಾದ ಉದ್ದಕ್ಕೂ ಸಂವಿಧಾನ ಪ್ರಸ್ತಾವನೆಯ ಪ್ರತಿಗಳನ್ನು ಹಂಚಿಕೆ ಮಾಡಲಾಯಿತು.
ಜಾಥಾ ಕಾರ್ಯಕ್ರಮದಲ್ಲಿ ತಹಶೀಲ್ದಾರ ರೇಣುಕಾ, ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಪುರಸಭೆಯ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here