ನಮ್ಮನ್ನು ನಾವು ಪರಿವರ್ತಿಸಿಕೊಂಡಾಗ ಮಾತ್ರ ಸಾಮಾಜಿಕ ನ್ಯಾಯ: ನ್ಯಾ.ರಾಜೇಶ್ ಎನ್.ಹೊಸಮನಿ

0
14

ಬಳ್ಳಾರಿ,ಫೆ.20:ಸಾಮಾಜಿಕ ನ್ಯಾಯ ಪಡೆಯುವಲ್ಲಿ ನಮ್ಮನ್ನು ನಾವು ಪರಾಮರ್ಶಿಸಿಕೊಂಡು ಪರಿವರ್ತನೆ ಹೊಂದಿದಾಗ ಮಾತ್ರ ಸಾಮಾಜಿಕ ನ್ಯಾಯ ಸಿಗುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನಿ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಮಾಜ ಕಲ್ಯಾಣ ಇಲಾಖೆ ಮತ್ತು ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ಡಾ.ಬಿ.ಆರ್.ಅಂಬೇಡ್ಕರ್‍ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಭಾರತವು ವಿವಿಧತೆಯಲ್ಲಿ ಏಕತೆ ಹೊಂದಿದ ದೇಶವಾಗಿದೆ. ಸಮಾನತೆಯನ್ನು ಭವ್ಯ ಸಂವಿಧಾನದ ಮೂಲಕ ಎತ್ತಿ ಹಿಡಿದಿದ್ದೇವೆ. ಚಂದ್ರನತ್ತ ಹೋಗಿಬಂದರೂ ಸಹ ನಮ್ಮಲ್ಲಿ ಕೆಲವೆಡೆ ಸಾಮಾಜಿಕ ಅಸಮಾನತೆ ಉಳಿದಿದೆ. ಸಮಾಜದಲ್ಲಿನ ಜಾತಿ, ಭೇದ-ಭಾವ, ಲಿಂಗ ತಾರತಮ್ಯ, ಧರ್ಮ ಅಸಮಾನತೆಗಳನ್ನು ಹೋಗಲಾಡಿಸಿದಾಗ ಮಾತ್ರ ನಿಜವಾದ ಸಾಮಾಜಿಕ ನ್ಯಾಯ ಸಿಗುತ್ತದೆ ಎಂದರು.

ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಹೊನ್ನುರ್ ಅಲಿ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಇಂದಿನ ಯುವ ಪೀಳಿಗೆಯು ಸಂವಿಧಾನವನ್ನು ಕೂಲಂಕುಶವಾಗಿ ಅಧ್ಯಯನ ಮಾಡಬೇಕಿದೆ. ಸರ್ವ ಶ್ರೇಷ್ಠವಾದ ಭಾರತ ಸಂವಿಧಾನವು ಸುಭದ್ರವಾಗಿದ್ದು, ಸಂವಿಧಾನದ ಆಶಯ ಮತ್ತು ಅದರ ಧ್ಯೇಯೋದ್ದೇಶಗಳನ್ನು ಅರ್ಥೈಸಿಕೊಳ್ಳಬೇಕು. ಅದರಂತೆ ಸಂವಿಧಾನದ ಪ್ರಸ್ತಾವನೆಯಲ್ಲಿ ಸಮಾನತೆಯನ್ನು ಅಳವಡಿಸಿಕೊಂಡು ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ ಎಂದು ತಿಳಿಸಿದರು.

ಸಮಾನತೆ ಮತ್ತು ಸ್ವಾತಂತ್ರ್ಯ ಇವೆರಡು ದೇಶದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿದಾಗ ನಿಜವಾದ ಸಾಮಾಜಿಕ ಸಮಾನತೆ ದೊರೆಯುತ್ತದೆ. ಅಸಮಾನತೆಯನ್ನು ತೊಲಗಿಸಬೇಕೆಂದರೆ ಸಮಾನತೆಯ ಹಂಚಿಕೆಯನ್ನು ಕ್ರಮವಾಗಿ ಮಾಡಬೇಕು ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಸಂವಿಧಾನ ಜಾರಿಗೊಂಡು 75 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಸಂವಿಧಾನ ಪ್ರಸ್ತಾವನೆಯ ಪ್ರತಿಜ್ಞಾ ವಿಧಿಯನ್ನು ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನಿ ಅವರು ಭೋಧಿಸಿದರು.

ಈ ಸಂಧರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಬಿ.ಸತೀಶ್, ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಹೆಚ್.ಮಂಜುನಾಥ ರೆಡ್ಡಿ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಕಾಲೇಜಿನ ಸಹಾಯಕ ಪ್ರಾಧ್ಯಾಪಕರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here