ಸಂಡೂರು ತಾಲೂಕಿನ ಇನಾಂ ಗ್ರಾಮಗಳ ಸರ್ವೇ ಸೆಟಲ್‍ಮೆಂಟ್ ಪ್ರಾಥಮಿಕ ಅಧಿಸೂಚನೆ ಪ್ರಕಟ; ಕಾರ್ತಿಕೇಶ್ವರ ಗ್ರಾಮದ ಇನಾಂ ಸರ್ವೆ ಸೆಟ್ಲಮೆಂಟ್ ಪ್ರಾಥಮಿಕ ಅಧಿಸೂಚನೆ ಪ್ರಕಟ: ತಕರಾರುಗಳಿದ್ದಲ್ಲಿ 3 ತಿಂಗಳೊಳಗಾಗಿ ಸಲ್ಲಿಸಿ

0
456

ಬಳ್ಳಾರಿ,ಮಾ.10 : ಜಿಲ್ಲೆಯ ಸಂಡೂರು ತಾಲೂಕಿನ ಇನಾಂ ಗ್ರಾಮಗಳನ್ನು ಸರ್ವೇ ಸೆಟಲ್ ಮೆಂಟ್ ಮಾಡಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆಗಳು ಮತ್ತು ತಕರಾರುಗಳಿದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ 3 ತಿಂಗಳೊಳಗಾಗಿ ಸಂಡೂರು ತಾಲೂಕು ಕಚೇರಿಯಲ್ಲಿ ಸಲ್ಲಿಸಬೇಕು ಎಂದು ಬಳ್ಳಾರಿ ಸಹಾಯಕ ಆಯುಕ್ತ ಡಾ.ಆಕಾಶ ಶಂಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಡೂರು ತಾಲೂಕಿನಲ್ಲಿರುವ ಗ್ರಾಮಗಳಾದ ಧರ್ಮಾಪುರ, ಕಾರ್ತಿಕೇಶ್ವರ, ದೇವಗಿರಿ, ಸುಶೀಲಾನಗರ, ಸಿದ್ದಾಪೂರ, ರಾಮಘಡ, 18-ಹುಲಿಕುಂಟೆ, ರಣಜಿತಪುರ, ಶಂಕ್ರಾಪುರ, ಮುರಾರಿಪುರ, ಎಸ್.ಓಬಳಾಪುರ, ಜೋಡಿ ಬೊಮ್ಮನಹಳ್ಳಿ ಜೋಡಿ ಕಸಿನಾಯ್ಕನಹಳ್ಳಿ ಮತ್ತು ತಿಪ್ಪನಮರಡಿ ಈ ಗ್ರಾಮಗಳ ಸರ್ವೆ ಸೆಟಲ್‍ಮೆಂಟ್ ಕಾರ್ಯ ಕೈಗೊಳ್ಳಬೇಕಿದ್ದು, ಈ ಗ್ರಾಮಗಳಲ್ಲಿ ಕರ್ನಾಟಕ ಭೂಕಂದಾಯ ಅಧಿನಿಯಮ 1964 ರ ಕಲಂ:106, 112, 114, 116 ರ ಪ್ರಕಾರ ಮರುಭೂಮಾಪನ ಜಾರಿಗೊಳಿಸಿ ಸೆಟಲ್‍ಮೆಂಟ್ ಕಾರ್ಯ ಪೂರ್ಣಗೊಳಿಸಲು ಸರ್ಕಾರವು ಆದೇಶಿಸಿದೆ ಎಂದು ಅವರು ವಿವರಿಸಿದ್ದಾರೆ.

ಸಂಡೂರು ತಾಲೂಕಿನ 14 ಇನಾಂ ಗ್ರಾಮಗಳ ಪೈಕಿ 10 ಗ್ರಾಮಗಳು ಕರ್ನಾಟಕ (ಸಂಡೂರು ಪ್ರದೇಶ) ಇನಾಂಗಳ ರದ್ದಿಯಾತಿ ವ್ಯಾಪ್ತಿಗೆ ಮತ್ತು 3 ಗ್ರಾಮಗಳು ಮೈಸೂರು ಇನಾಂ ರದ್ದಿಯಾತಿ ವ್ಯಾಪ್ತಿಗೆ ಒಳಪಡುತ್ತವೆ. ಕರ್ನಾಟಕ (ಸಂಡೂರು ಪ್ರದೇಶ) ಇನಾಂಗಳ ರದ್ದಿಯಾತಿ ಅಧಿನಿಯಮ 1976 ಕಲಂ:8(2) ರಲ್ಲಿ ಜಿಲ್ಲಾಧಿಕಾರಿಗಳು ಅಥವಾ ಅವರ ಸ್ಥಾನದಲ್ಲಿ ವಿಶೇಷ ಜಿಲ್ಲಾಧಿಕಾರಿಗಳು ಸೆಟ್ಲಮೆಂಟ್ ಅಧಿಕಾರಿಯಾಗಿರುತ್ತಾರೆ. ಆದ್ದರಿಂದ ಸಂಡೂರು ತಾಲೂಕಿನ ಸದರಿ ಗ್ರಾಮಗಳ ಮರುಭೂಮಾಪನ ಕಾರ್ಯವು ಅಂತಿಮಗೊಂಡಿರುವುದರಿಂದ ಸೆಟ್ಲಮೆಂಟ್ ಜಾರಿಗೊಳಿಸಲು ವಿಶೇಷ ಜಿಲ್ಲಾಧಿಕಾರಿಗಳ ಬದಲಾಗಿ ಸದರಿ ಅಧಿಕಾರವನ್ನು ಸರಕಾರವು ಬಳ್ಳಾರಿ ಉಪವಿಭಾಗಧಿಕಾರಿಗಳಿಗೆ ಪ್ರತ್ಯಾಯೋಜಿಸಿದ್ದು, ಬಳ್ಳಾರಿ ಸಹಾಯಕ ಆಯುಕ್ತರು ಈ ಗ್ರಾಮಗಳಿಗೆ ಸೆಟ್ಲಮೆಂಟ್ ಅಧಿಕಾರಿಯಾಗಿ ನೇಮಕ ಮಾಡಿದೆ ಎಂದು ಅವರು ತಿಳಿಸಿದ್ದಾರೆ.

ಆದ್ದರಿಂದ ಸೆಟ್ಲಮೆಂಟ್ ಅಧಿಕಾರಿಯಾಗಿರುವ ನಾನು 14 ಇನಾಂ ಗ್ರಾಮಗಳಿಗೆ ಲಭ್ಯವಿರುವ ದಾಖಲೆಗಳನ್ನು ಪರಿಶೀಲಿಸಿ ನಿಯಮಾನುಸಾರ ಪ್ರಕ್ರಿಯೆ ಕೈಗೊಂಡು ಅಂತಿಮ ಪಟ್ಟಿ ಸಲ್ಲಿಸಲು ವಿವಿಧ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಅದರಂತೆ ಕಾರ್ತಿಕೇಶ್ವರ ಗ್ರಾಮದ ದಾಖಲೆಗಳನ್ನು ಪರಿಶೀಲಿಸಿ ಈ ಕೆಳಕಂಡ ಪಟ್ಟಿ ತಯಾರಿಸಲಾಗಿದೆ.
“ಆಕಾರಬಂದ್ ಪ್ರಕಾರ ಕಾರ್ತಿಕೇಶ್ವರ ಗ್ರಾಮದ ವಿಸ್ತೀರ್ಣ 1307-62 ಹೊಂದಿದ್ದು, ಪಹಣಿ ಪ್ರಕಾರವೂ 1307-62 ವಿಸ್ತೀರ್ಣ ಹೊಂದಿದೆ ಹೆಸರು:ಶ್ರೀ ಕುಮಾರಸ್ವಾಮಿ ದೇವರು, ಅನುಭವದ ಪ್ರಕಾರ 1307-62 ವಿಸ್ತೀರ್ಣ ಹೊಂದಿದ್ದು ದೊಡ್ಡ ದೊಡ್ಡ ಮರ ಗಿಡಗಳಿಂದ ಆವೃತ್ತವಾಗಿ ಬೀಳು ಆಗಿರುತ್ತದೆ ಮತ್ತು ಶ್ರೀ ಕುಮಾರಸ್ವಾಮಿ ದೇವಸ್ಥಾನ ಇರುತ್ತದೆ. ದಾಖಲೆ ಮತ್ತು ಅನುಭವದಂತೆ ಅಂತಿಮಗೊಳಿಸದ ಹಕ್ಕುಗಳ ವಿವರ: ಶ್ರೀ ಕುಮಾರಸ್ವಾಮಿ ದೇವಸ್ಥಾನ 500 ಎಕರೆ, ಅರಣ್ಯ ಇಲಾಖೆ 632.22 ಎಕರೆ ಮತ್ತು ಸರಕಾರ-175.40 ಎಕರೆ ಇದೆ.”.
ಈ ಗ್ರಾಮಕ್ಕೆ ಸಂಭಂದಿಸಿದಂತೆ ಪ್ರಾಥಮಿಕ ಅಧಿಸೂಚನೆಯನ್ನು ಈ ಮೂಲಕ ಹೊರಡಿಸಲಾಗಿದೆ ಎಂದು ತಿಳಿಸಿರುವ ಸಹಾಯಕ ಆಯುಕ್ತ ಡಾ.ಆಕಾಶ ಶಂಕರ್ ಅವರು ಈ ಪಟ್ಟಿಯನ್ನು ಸಂಡೂರು ತಾಲೂಕಿನ ಗ್ರಾಮಲೆಕ್ಕಾಧಿಕಾರಿಗಳ ಕಾರ್ಯಾಲಯದ ಚಾವಡಿಯಲ್ಲಿ, ಗ್ರಾಮ ಪಂಚಾಯತಿಗಳ ಚಾವಡಿಯಲ್ಲಿ ಮತ್ತು ತಾಲೂಕು ಕಛೇರಿಯ ನೋಟಿಸ್ ಬೋರ್ಡಿನಲ್ಲಿ ಹಾಗೂ ಇತರೆ ಸೂಕ್ತ ಸ್ಥಳಗಳಲ್ಲಿ ನಿಯಮಾನುಸಾರ ಪ್ರಚಾರ ಪಡಿಸಲಾಗಿದೆ.
ಸದರಿ ಅಧಿಸೂಚನೆಗೆ ಯಾವುದೇ ತಕಾರಾರು ಇದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ ಕರ್ನಾಟಕ ಭೂಕಂದಾಯ ಕಾಯ್ದೆ 1964 ರ ಕಲಂ 119 ರ ಅನ್ವಯ 3 ತಿಂಗಳೊಳಗಾಗಿ ಸಂಡೂರು ತಾಲೂಕು ಕಛೇರಿಯಲ್ಲಿ ನಿಗದಿಪಡಿಸಿರುವ ಅಧಿಕಾರಿ/ಸಿಬ್ಬಂದಿಯವರಲ್ಲಿ ಸಲ್ಲಿಸಲು ಅವರು ಸೂಚನೆ ನೀಡಿದ್ದಾರೆ.

LEAVE A REPLY

Please enter your comment!
Please enter your name here