ಉಸ್ತುವಾರಿ ಸಚಿವರು ಹಾಗೂ ಜನಪ್ರತಿನಿಧಿಗಳಿಂದ ಕೋವಿಡ್ ಪರಿಸ್ಥಿತಿ ಪರಿಶೀಲನೆ

0
180

ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ ಇವರು ಹೊನ್ನಾಳಿ, ನ್ಯಾಮತಿ, ಚನ್ನಗಿರಿ ತಾಲ್ಲೂಕುಗಳ ಆಸ್ಪತ್ರೆಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕೋವಿಡ್ ಪರಿಸ್ಥಿತಿ ಕುರಿತು ಶನಿವಾರ ಅಲ್ಲಿಯ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಚನ್ನಗಿರಿ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿ ನಂತರ ಇಲ್ಲಿಯ ಆಡಳಿತ ಭವನದ ರಾಜೀವ್‍ಗಾಂಧಿ ಸಭಾಂಗಣದಲ್ಲಿ ಕೋವಿಡ್-19 ನಿಯಂತ್ರಣ ಕುರಿತು ಕೈಗೊಳ್ಳಲಾಗಿರುವ ಹಾಗೂ ಕೈಗೊಳ್ಳಬೇಕಾಗಿರುವ ಮುಂಜಾಗ್ರತಾ ಕ್ರಮಗಳ ಕುರಿತು ತಾಲ್ಲೂಕಿನ ಜನಪ್ರತಿನಿಧಿಗಳು ಜಿಲ್ಲಾ ಹಾಗೂ ತಾಲ್ಲೋಕು ಮಟ್ಟದ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿ ಈಗಾಗಲೇ ಮುಖ್ಯಮಂತ್ರಿಗಳು ಅಗತ್ಯವಿರುವ ವಸ್ತುಗಳನ್ನು ತೆಗೆದುಕೊಳ್ಳಲು ಬೆಳಿಗ್ಗೆ ಇಂತಿಷ್ಟು ಸಮಯ ನಿಗದಿಪಡಿಸಲಾಗಿದ್ದು, ಈ ಸಮಯ ಮೀರಿ ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ಯಾವುದೇ ಮುಲಾಜಿಲ್ಲದೇ, ರಿಯಾಯಿತಿ ಕೊಡದೇ ಅಂತಹವರ ಮೇಲೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಸೋಂಕು ಹರಡದಂತೆ ತಾಲ್ಲೂಕಿನ ಎಲ್ಲಾ ಅಧಿಕಾರಿಗಳು ಶ್ರಮವಹಿಸಿ ಕಾರ್ಯನಿರ್ವಹಿಸಬೇಕು ಎಂದರು.
ಮಾನ್ಯ ಮುಖ್ಯಮಂತ್ರಿಗಳು ನೀಡಿರುವ ಆದೇಶ ಪಾಲಿಸುವ ಮೂಲಕ ಕೋವಿಡ್ ಚೈನ್ ಲಿಂಕ್ ತಪ್ಪಿಸುವ ಕಾರ್ಯ ಮಾಡಬೇಕಿದೆ. ಜನರ ಪ್ರಾಣ ರಕ್ಷಣೆ ನಮ್ಮ ಆದ್ಯತೆಯಾಗಬೇಕಿದೆ, ನಮ್ಮಿಂದ ಯಾವುದೇ ಸಹಕಾರ ಕೇಳಿದರೂ ನೀಡಲು ಸಿದ್ದ ಎಲ್ಲಾ ಅಧಿಕಾರಿಗಳು ಸಂಘಟಿತರಾಗಿ ಕಾರ್ಯ ನಿರ್ವಹಿಸುವ ಮೂಲಕ ವಾರದೊಳಗೆ ಪ್ರಕರಣಗಳಲ್ಲಿ ಇಳಿಮುಖ ಕಾಣಲು ಕಾರ್ಯ ಪ್ರವೃತ್ತರಾಗಬೇಕು ಎಂದರು.
ಈ ವೇಳೆ ಟಿಹೆಚ್‍ಒ ಡಾ.ಪ್ರಭು ಮಾತನಾಡಿ, ಮಾರ್ಚ್ 2020 ರಿಂದ 2021 ರ ಮೇ.7 ರವರೆಗೆ ತಾಲ್ಲೂಕಿನಲ್ಲಿ ಒಟ್ಟು 2,675 ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ. ಕಳೆದ 2 ತಿಂಗಳಿಂದ 509 ಪಾಸಿಟಿವ್ ಪ್ರಕರಣಗಳು ಬಂದಿದ್ದು, 204 ಜನ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 305 ಸಕ್ರಿಯ ಪ್ರಕರಣಗಳಿವೆ. ಹಾಗೂ 18 ಜನರನ್ನು ದಾವಣಗೆರೆಯ ಸಿಜಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ ಅವರು, 188 ಜನರನ್ನು ಹೋಮ್ ಐಸೋಲೇಷನ್‍ಲ್ಲಿ ಇರಿಸಿದ್ದು ವೈದ್ಯರು, ಸಿಬ್ಬಂದಿಗಳು ಅವರ ಮೇಲೆ ನಿಗಾವಹಿಸುತ್ತಿದ್ದಾರೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಯಾವ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿರುತ್ತದೆಯೋ ಅವರನ್ನು ಕೂಡಲೇ ಕೋವಿಡ್ ಕೇರ್ ಸೆಂಟರ್‍ಗೆ ಕರೆತಂದು ಅವರನ್ನು ಐಸೋಲೇಟ್ ಮಾಡಬೇಕು. ಆದಷ್ಟು ಸೋಂಕನ್ನು ಹರಡದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದರು.
ತಹಶೀಲ್ದಾರ್ ಪಟ್ಟರಾಜ ಗೌಡ ಮಾತನಾಡಿ, ಸರ್ಕಾರದ ಮಾರ್ಗಸೂಚಿಯಂತೆ ತಳ್ಳುವ ಗಾಡಿಗಳಿಗೆ, ಹಣ್ಣು ತರಕಾರಿ ವ್ಯಾಪರಸ್ಥರಿಗೆ, ಎಪಿಎಂಸಿ ಮತ್ತು ದಿನಸಿ ಅಂಗಡಿಗಳಿಗೆ ಅನುಮತಿ ನೀಡಲಾಗಿದೆ. ನಿಯಮ ಉಲ್ಲಂಘನೆ ಮಾಡಿದವರಿಗೆ ಎಚ್ಚರಿಕೆ ನೀಡಿದ್ದು 28,500 ರೂ ದಂಡ ವಿಧಿಸಲಾಗಿದೆ. ಮಾಸ್ಕ್ ಹಾಕದವರಿಗೆ 75 ಸಾವಿರ ದಂಡ ವಿಧಿಸಲಾಗಿದೆ. ಪ್ರತಿನಿತ್ಯ ಆರೋಗ್ಯ ಇಲಾಖೆಯಿಂದ ಬರುವ ಪಾಸಿಟಿವ್ ಪ್ರಕರಣಗಳನ್ನು ಡಿಎಲ್‍ಒ, ಆಶಾಕಾರ್ಯಕರ್ತೆಯರು, ಪುರಸಭೆ ಅಧಿಕಾರಿಗಳು ಪರಿಶೀಲಿಸಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನ ಪತ್ತೆ ಹಚ್ಚುತ್ತಿದ್ದಾರೆ. ಮನೆಯಲ್ಲಿ ಪ್ರತ್ಯೇಕವಾಗಿ ಇರಿಸಲ್ಪಟ್ಟವರ ಮೇಲೆ ನಿಗಾವಹಿಸಲಾಗಿದೆ.
ಹಾಗೂ ಲಸಿಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಪಟ್ಟಣದ 23 ವಾರ್ಡ್‍ಗಳಲ್ಲಿ ಕ್ಲೋರಿಯನ್, ಡೈಕ್ಲೋರಿಯನ್ ಸಿಂಪಡಿಸಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಲು ಬ್ಲೀಚಿಂಗ್ ಪೌಡರ್ ಸಿಂಪಡಿಸಲಾಗಿದೆ. ಒಟ್ಟು 208 ಜನರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದ್ದು ಅವರ ಫೋಟೋ ತೆಗೆದು ಅಪ್ಲೋಡ್ ಮಾಡಲಾಗಿದೆ. ಹೊನ್ನಾಳಿ ರಸ್ತೆಯಲ್ಲಿ 100 ಬೆಡ್‍ಗಳ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಿದ್ದೇವೆ. ಪ್ರತಿ ವಾರಕ್ಕೊಮ್ಮೆ ಆರೋಗ್ಯ ಇಲಾಖೆಯಿಂದ ತಪಾಸಣೆ ನಡೆಸುತ್ತಿದ್ದೇವೆ. ಮಾ.23 ರಿಂದ ಇಲ್ಲಿವರೆಗೆ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರ 813 ಸ್ವ್ಯಾಬ್ ಪರೀಕ್ಷೆ ಮಾಡಲಾಗಿದೆ. ಪ್ರತಿನಿತ್ಯ ತಹಶೀಲ್ದಾರ್ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ಸಮಿತಿ ನಡೆಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಪೊಲೀಸ್ ಇಲಾಖೆಯ ಮಧು ಮಾತನಾಡಿ, ಅನಗತ್ಯವಾಗಿ ಸಂಚರಿಸುವ 44 ವಾಹನಗಳನ್ನು ಸೀಜ್ ಮಾಡಲಾಗಿದೆ. 2205 ಮಾಸ್ಕ್ ಕೇಸ್ ಆಗಿದ್ದು 2,20,000 ದಂಡ ವಿಧಿಸಲಾಗಿದೆ. ಅನಗತ್ಯವಾಗಿ ಓಡಾಡುವ ವಾಹನಗಳನ್ನು ನಿಲ್ಲಿಸಿ ಎಚ್ಚರಿಸುತ್ತಿದ್ದೇವೆ ಎಂದರು.
ತಹಶೀಲ್ದಾರ್ ಪಟ್ಟರಾಜಗೌಡ ಮಾತನಾಡಿ, ತಾಲ್ಲೂಕಾಧಿಕಾರಿ ನೇತೃತ್ವದಲ್ಲಿ ಪ್ರತಿನಿತ್ಯ ಟಾಸ್ಕ್‍ಪೋರ್ಸ್ ಸಭೆ ನಡೆಸುತ್ತಿದ್ದೇವೆ. ಬೆಂಗಳೂರಿನಿಂದ ಬಂದಿರುವ 1123 ಜನರನ್ನು ಪತ್ತೆಹಚ್ಚಲಾಗಿದ್ದು ಅವರನ್ನು ಹೋಮ್ ಐಸೋಲೇಷನ್ ಮಾಡಲಾಗಿದೆ. ಗ್ರಾ.ಪಂ ಮಟ್ಟದಲ್ಲಿ ಒಬ್ಬ ನೋಡಲ್ ಅಧಿಕಾರಿ ಹಾಗೂ 6 ಗ್ರಾಮ ಪಂಚಾಯಿತಿ ಸೇರಿ ಒಬ್ಬ ಮೇಲ್ವಿಚಾರಕನನ್ನು ನೇಮಿಸಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಕೋವಿಡ್ ವಾರ್ ತಂಡ ರಚಿಸಿ ಪ್ರತಿನಿತ್ಯ ಸಭೆ ನಡೆಸಿ ಪರಿಶೀಲನಾ ಸಭೆ ನಡೆಸಿ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಟ್ರೇಸ್ ಮಾಡುತ್ತಿದ್ದೇವೆ. ರಾಣಿ ಚೆನ್ನಮ್ಮ ವಸತಿ ಶಾಲೆಯನ್ನು ಮೇ.4 ರಂದು ಕೋವಿಡ್ ಕೇರ್ ಸೆಂಟರ್ ಆಗಿ ಪ್ರಾರಂಭ ಮಾಡಿದ್ದು ಪ್ರಸ್ತುತ 17 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಶಾಸಕ ಮಾಡಳ್ ವಿರೂಪಾಕ್ಷಪ ಮಾತನಾಡಿ, ವ್ಯಾಕ್ಸಿನೇಷನ್ ಕುರಿತು ಈಗಾಗಲೇ ಜನರಲ್ಲಿ ಒಳ್ಳೆಯ ಅಭಿಪ್ರಾಯ ಬಂದಿದ್ದು, ವ್ಯಾಕ್ಸಿನೇಷನ್ ಹಾಕಿಸಿಕೊಂಡರೆ ಜೀವ ಉಳಿಯುತ್ತದೆ ಎಂಬ ನಂಬಿಕೆಯು ಅಚಲವಾಗಿದೆ. ಚನ್ನಗಿರಿಯಲ್ಲಿ ಮೊದಲ ಹಂತದಲ್ಲಿ 38 ಸಾವಿರ ವ್ಯಾಕ್ಸಿನೇಷನ್ ನೀಡಲಾಗಿದ್ದು, 2ನೇ ಹಂತದ ಡೋಸ್‍ಗಾಗಿ ಸಾಕಷ್ಟು ಜನರು ಮನವಿ ಮಾಡುತ್ತಿದ್ದಾರೆ. ಹಾಗಾಗಿ ತಾಲ್ಲೂಕಿಗೆ ವ್ಯಾಕ್ಸಿನ್ ಬಿಡುಗಡೆ ಮಾಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದ ಅವರು, ಚನ್ನಗಿರಿಯಲ್ಲಿ 50 ಆಕ್ಸಿಜನ್ ಬೆಡ್‍ಗಳಿವೆ. ಸಂತೆಬೆನ್ನೂರು, ಬಸವಾಪಟ್ಟಣ, ಕೆರೆಬಿಳಚಿಗಳಲ್ಲಿ 30-30 ಬೆಡ್‍ಗಳಿದ್ದು ಆಕ್ಸಿಜನ್ ವ್ಯವಸ್ಥೆ ಮಾಡಬೇಕು ಎಂದು ಕೋರಿದರು.
ಡಿಹೆಚ್‍ಒ ಡಾ.ನಾಗರಾಜ್ ಮಾತನಾಡಿ, ಜಿಲ್ಲೆಯಲ್ಲಿ 4 ಸಮುದಾಯ ಆರೋಗ್ಯ ಕೇಂದ್ರಗಳಿದ್ದು ಅಲ್ಲಿ 30-30 ಆಕ್ಸಿಜನ್ ಬೆಡ್‍ಗಳ ವ್ಯವಸ್ಥೆ ಮಾಡಲಾಗಿದೆ. ಚನ್ನಗಿರಿ ತಾಲ್ಲೂಕಿನ ಕೆರೆಬಿಳಚಿ ಮತ್ತು ಸಂತೆಬೆನ್ನೂರಿನಲ್ಲಿ 30 ಆಕ್ಸಿಜನ್ ಬೆಡ್‍ಗಳಿದ್ದು ವೈದ್ಯರ ಕೊರತೆಯಿದೆ. ಕೇವಲ ಇಬ್ಬರು ವೈದ್ಯರಿದ್ದಾರೆ. ಸದ್ಯದಲ್ಲೇ ವೈದ್ಯರ ನೇಮಕಾತಿ ಮಾಡಿಕೊಳ್ಳುತ್ತೇವೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಬಿ.ಎ.ಬಸವರಾಜ್ ವ್ಯಾಕ್ಸಿನೇಷನ್ ಕುರಿತು ಯಾರು ಆತಂಕ ಪಡಬೇಡಿ. ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು ಆದಷ್ಟು ಬೇಗ ಪ್ರತಿ ನಾಗರಿಕರಿಗೆ ವ್ಯಾಕ್ಸಿನೇಷನ್ ದೊರಕಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಬಸವಪಟ್ಟಣ, ಕೆರೆಬಿಳಚಿ, ಸಂತೆಬೆನ್ನೂರಿಗೆ
ಆಕ್ಸಿಜನ್ ಬೆಡ್ ವ್ಯವಸ್ಥೆಯನ್ನು ಕೂಡಲೇ ಮಾಡಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಸರ್ಕಾರ ಜಾರಿಗೊಳಿಸಿದ್ದ ಮಾರ್ಗಸೂಚಿಗಳನ್ನು ಎಲ್ಲರೂ ಪಾಲಿಸಬೇಕು. ಜಿಲ್ಲಾಡಳಿತ ನಿಮ್ಮೊಂದಿಗಿದೆ. ಜನರು ಹಾಗೂ ವಾಹನಗಳು ನಿಗದಿತ ಅವಧಿಯ ಬಳಿಕವೂ ಅನಗತ್ಯವಾಗಿ ರಸ್ತೆಯಲ್ಲಿ ಸಂಚರಿಸುತ್ತಿರುವುದು ಕಂಡುಬರುತ್ತಿದೆ. ತರಕಾರಿ ಮತ್ತಿತರ ಸಾಮಗ್ರಿ ಖರೀದಿ ಸ್ಥಳದಲ್ಲಿ ಈಗಲೂ ಜನಸಂದಣಿ ಕಂಡುಬರುತ್ತಿದೆ. ಹೀಗಾದಲ್ಲಿ ಕೋವಿಡ್ ಇನ್ನಷ್ಟು ವ್ಯಾಪಕವಾಗಿ ಹರಡಲು ಕಾರಣವಾಗುತ್ತದೆ. ಬರುವ ಒಂದು ವಾರದ ಒಳಗಾಗಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖಗೊಳಿಸಲು ತಾಲ್ಲೂಕಾಡಳಿತ ಹಾಗೂ ಪೊಲೀಸ್ ಇಲಾಖೆ ಇನ್ನಷ್ಟು ನಿರ್ದಾಕ್ಷಿಣ್ಯ ಹಾಗೂ ಕಠಿಣ ಕ್ರಮ ಜರುಗಿಸಲು ಮುಂದಾಗಬೇಕು. ತಹಸಿಲ್ದಾರರು, ಪೊಲೀಸ್ ಅಧಿಕಾರಿಗಳು ತಾಲ್ಲೂಕು ಮಟ್ಟದಲ್ಲಿ ಕಠಿಣಾತಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಯಾವುದೇ ಕಠಿಣ ಕ್ರಮಗಳಿಗೆ ನಾವು ಬೆಂಬಲ ನೀಡುತ್ತೇವೆ ಎಂದು ಸೂಚಿಸಿದರು. .ಸಂಸದರಾದ ಜಿ.ಎಂ.ಸಿದ್ದೇಶ್ವರ ಸಲಹೆ ಸೂಚನೆ ನೀಡಿದರು.
82 ಕೋಟಿ ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ: ಚನ್ನಗಿರಿ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆಗಾಗಿ ರೂ.82 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿದೆ. ಆದಷ್ಟು ಬೇಗ ಗುದ್ದಲಿ ಪೂಜೆ ನೆರವೇರಿಸಲಿದ್ದೇವೆ. ಕೋವಿಡ್ ಅಂತಹ ಕ್ಲಿಷ್ಟಕರ ಸನ್ನಿವೇಶದಲ್ಲೂ ಅಭಿವೃದ್ಧಿ ಕೆಲಸಗಳು ಎಲ್ಲಿಯೂ ನಿಂತಿಲ್ಲ. ಅಭಿವೃದ್ಧಿಯೊಂದಿಗೆ ಕೋವಿಡ್ ನಿಯಂತ್ರಣವನ್ನು ಸಮರ್ಪಕವಾಗಿ ನಿಭಾಯಿಸುತ್ತಿದ್ದೇವೆ ಎಂದು ಸಚಿವ ಬಿ.ಎ.ಬಸವರಾಜ್ ತಿಳಿಸಿದರು.
ನಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ್,ಸಂಸದರಾದ ಜಿ.ಎಂ.ಸಿದ್ದೇಶ್ವರ ಶಾಸಕರಾದ ಮಾಡಳ್ ವಿರೂಪಾಕ್ಷಪ್ಪ, ಶಾಸಕರಾದ ಎಂ.ಪಿ. ರೇಣುಕಾಚಾರ್ಯ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ತಂಡ ಹೊನ್ನಾಳಿ ತಾಲ್ಲೂಕಿನ ಮೊರಾರ್ಜಿ ದೇಸಾಯಿ ಶಾಲೆಗೆ ಭೇಟಿ ನೀಡಿ ಅಲ್ಲಿಯ ಕೋವಿಡ್ ವಾಸ್ತವಿಕತೆಯನ್ನು ಪರಿಶೀಲಿಸಿ ಸೋಂಕಿತರೊಂದಿಗೆ ಮಾತುಕತೆ ನಡೆಸಿದರು

ಹೊನ್ನಾಳಿ ಭೇಟಿ: ಹೊನ್ನಾಳಿ ಮತ್ತು ನ್ಯಾಮತಿ ತಾಲೋಕುಗಳ ಕೋವಿಡ್ ಸ್ಥಿತಿಗತಿಗಳ ಮಾಹಿತಿ ಪಡೆದು ಪತ್ರಕರ್ತರೊಂದಿಗೆ ಸಚಿವರು ಮಾತನಾಡಿ, ಹೊನ್ನಾಳಿ ಮತ್ತು ನ್ಯಾಮತಿ ಈ ಎರಡು ಅವಳಿ ತಾಲ್ಲೂಕುಗಳು ಸೇರಿ ತಾಲ್ಲೂಕಾಸ್ಪತ್ರೆಯಲ್ಲಿ 30 ಹಾಸಿಗೆಗಳಿದ್ದು, ಮೊರಾರ್ಜಿ ಶಾಲೆಯಲ್ಲಿ 122 ಬೆಡ್‍ಗಳಿವೆ ಮೊರಾರ್ಜಿ ದೇಸಾಯಿ ಶಾಲೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಮಾಡಿದ್ದು 99 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. 9 ಜನ ಬಿಡುಗಡೆ ಹೊಂದಿದ್ದು, 50 ಜನ ಹೋಮ್ ಐಸೋಲೇಷನ್‍ಲ್ಲಿದ್ದಾರೆ. ಸರ್ಕಾರ ಜನರ ಪರವಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡುತ್ತಿದ್ದು, ಕೋವಿಡ್ ಸೋಂಕನ್ನು ತಡೆಗಟ್ಟಲು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಸರ್ಕಾರದಿಂದ ಮಾತ್ರ ಸೋಂಕಿನ ವಿರುದ್ಧ ಹೋರಾಡಲು ಸಾಧ್ಯವಿಲ್ಲ. ಇದಕ್ಕೆ ಜನರ ಸ್ಪಂದನೆಯೂ ಮುಖ್ಯವಾಗಿದ್ದು, ಸಾರ್ವಜನಿಕರು ಸೋಂಕಿನ ಕುರಿತು ನಿರ್ಲಕ್ಷ್ಯತಾಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ. ಅವಾಗವಾಗ ಕೈಗಳನ್ನು ಶುಚಿ ಮಾಡಿಕೊಳ್ಳಬೇಕು. ಅನಾಗತ್ಯವಾಗಿ ಓಡಾಡಬಾರದು. ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸುರಕ್ಷಿತರಾಗಿರಿ ಎಂದು ಮನವಿ ಮಾಡಿದರು.
ಶಾಸಕರಾದ ಎಂ.ಪಿ ರೇಣುಕಾಚಾರ್ಯ ಮಾತನಾಡಿ, ತಾಲೋಕಿನ ರಾಮೇಶ್ವರದಲ್ಲಿ ಮೇ.7 ರಂದು ರ್ಯಾಪಿಡ್ ಪರೀಕ್ಷೆ ಮಾಡಲಾಗಿದ್ದು 21 ಜನರಿಗೆ ಪಾಸಿಟಿವ್ ಬಂದಿದೆ. ಇಂದು 6 ಜನರಿಗೆ ಪಾಸಿಟಿವ್ ಬಂದಿದ್ದು, ಇಬ್ಬರು ಗಂಡ-ಹೆಂಡತಿ ಮೃತರಾಗಿದ್ದಾರೆ. ಇದು ತುಂಬಾ ಬೇಸರ ತಂದಿದೆ. ಕೋವಿಡ್ ಸೋಂಕಿನ ಲಕ್ಷಣ ಕಂಡು ಬಂದಾಕ್ಷಣ ಆಸ್ಪತ್ರೆಗಳಿಗೆ ಬಂದರೆ ಜೀವ ಉಳಿಸಬಹುದು. ಆದರೆ ಶ್ವಾಸಕೋಶಕ್ಕೆ ಧಕ್ಕೆಯಾಗಿ ಕೊನೆಯ ಹಂತಕ್ಕೆ ಬಂದರೆ ಜೀವ ಉಳಿಸಲು ಕಷ್ಟವಾಗುತ್ತದೆ. ಹಾಗೂ ಕೆಮ್ಮು, ಜ್ವರ, ಶೀತ ಬಂದರೆ ಮೆಡಿಕಲ್ ಅಂಗಡಿಗಳಿಗೆ ತೆರಳಿ ಮಾತ್ರೆಗಳನ್ನು ನುಂಗಬೇಡಿ ಆದಷ್ಟು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ. ಸೋಂಕಿನ ಕುರಿತು ಭಯ ಬೇಡ ಎಂದು ತಿಳಿಸಿದ ಅವರು, ಅನಗತ್ಯವಾಗಿ ಎಲ್ಲೆಡೆ ಸಂಚಾರ ಮಾಡುತ್ತಿರುವುದು ಕಂಡುಬರುತ್ತಿದೆ. ಇದರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿದರು. ಮಾದನಬಾವಿ ಕೋವಿಡ್ ಕೇರ್ ಸೆಂಟರ್‍ಗೆ ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಿಸಿದರು
ಸಭೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಸಲಹೆ ನೀಡಿದರು. ಹಾಗೂ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here