ಮಹಾನಗರ ಪಾಲಿಕೆ ಚುನಾವಣೆ ಕುರಿತು ರಾಜಕೀಯ ಪಕ್ಷಗಳ ಸಭೆ ಧಾರ್ಮಿಕ ಕಟ್ಟಡ, ಧಾರ್ಮಿಕ ಚಿಹ್ನೆಗಳನ್ನು ಚುನಾವಣಾ ಪ್ರಚಾರಕ್ಕಾಗಿ ಉಪಯೋಗಿಸುವಂತಿಲ್ಲ: ಆಯುಕ್ತೆ ಪ್ರೀತಿ ಗೆಹ್ಲೋಟ್

0
105

ಬಳ್ಳಾರಿ,ಏ19 : ಧಾರ್ಮಿಕ ಕಟ್ಟಡಗಳನ್ನು ಮತ್ತ ಧಾರ್ಮಿಕ ಚಿಹ್ನೆಗಳನ್ನು ಚುನಾವಣಾ ಪ್ರಚಾರಕ್ಕಾಗಿ ಉಪಯೋಗಿಸುವಂತಿಲ್ಲ ಎಂದು ಮಹಾನಗರ ಪಾಲಿಕೆ ಆಯುಕ್ತೆ ಪ್ರಿತಿ ಗೆಹ್ಲೋಟ್ ಅವರು ತಿಳಿಸಿದರು.
ಮಹಾನಗರಪಾಲಿಕೆ ಸಾರ್ವತ್ರಿಕ ಚುನಾವಣೆ-2021ರ ಚುನಾವಣಾ ಪ್ರಕ್ರಿಯೆಯು ಏ.08ರಿಂದ ಪ್ರಾರಂಭವಾಗಿದ್ದು, ಶನಿವಾರ ಪಾಲಿಕೆಯ ಸಭಾಂಗಣದಲ್ಲಿ ನಡೆದ ರಾಜಕೀಯ ಪಕ್ಷಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮತದಾರರನ್ನು ಮತಗಟ್ಟೆಗಳಿಗೆ ವಾಹನದ ಮೂಲಕ ಕರೆತರುವಂತಿಲ್ಲ, ಚುನಾವಣಾ ಪ್ರಚಾರಕ್ಕಾಗಿ ಉಪಯೋಗಿಸುವ ವಾಹನಗಳಿಗೆ ಕಡ್ಡಾಯವಾಗಿ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯಬೇಕು. ಚುನಾವಣಾಧಿಕಾರಗಳ ಪರವಾನಿಗೆಯಿಲ್ಲದೆ ಪೋಸ್ಟರ್‍ಗಳು, ಕರಪತ್ರಗಳು, ಪತ್ರಿಕಾ ಪ್ರಕಟಣೆ, ಸಾಮಾಜಿಕ ಜಾಲತಾಣದಲ್ಲಿ ಪ್ರಚುರಪಡಿಸತಕ್ಕದ್ದಲ್ಲ. ಮತದಾರರನ್ನು ಆಕರ್ಷಿಸಲು ಹಣ, ಮದ್ಯ, ಸಾಮಾಗ್ರಿ ಇತ್ಯಾದಿ ವಸ್ತುಗಳನ್ನು ನೀಡುವಂತಿಲ್ಲ ಎಂದು ಸೂಚನೆ ನೀಡಿದ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು ಕಟ್ಟಡ ಮಾಲಿಕರ ಮತ್ತು ಚುನವಣಾಧಿಕಾರ ಲಿಖಿತ ಅನುಮತಿ ಇಲ್ಲದೆ ಬಾವುಟ, ಪತಾಕೆ, ಭಿತ್ತಿಪತ್ರ, ಗೋಡೆ ಬರಹಗಳ ಮೂಲಕ ಪ್ರಚುರಪಡಿಸುವಂತಿಲ್ಲ. ಕೋವಿಡ್-19ರ ನಿಯಮಾನುಸಾರ 50 ಜನರಿಗಿಂತ ಮೆಲ್ಪಟ್ಟು ಸಭೆ, ಮೆರವಣಿಗೆ, ಪ್ರಚಾರ ಏರ್ಪಡಿಸುವಂತಿಲ್ಲ ಎಂದು ಹೇಳಿದರು.
ಪ್ರಚಾರದಲ್ಲಿ ತೊಡಗಿದವರಿಗೆ ನೀರು ಹೊರತುಪಡಿಸಿ ಊಟ-ಉಪಚಾರ ಮಾಡತಕ್ಕದಲ್ಲ. ಧ್ವನಿ ವರ್ಧಕ, ಸಭೆ, ಮೆರವಣಿಗೆಗಳಿಗೆ ಪೊಲೀಸ್ ಪ್ರಾಧಿಕಾರ ಮತ್ತು ಚುನಾವಣಾಧಿಕಾರಿಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಅಧಿಕಾರದಲ್ಲಿರುವ ಪಕ್ಷವು ತನ್ನ ಚುನಾವಣಾ ಪ್ರಚಾರಕ್ಕಾಗಿ ಅಧಿಕಾರವನ್ನು ಉಪಯೋಗಿಸುವಂತಿಲ್ಲ. ಸಚಿವರುಗಳು ತಮ್ಮ ಅಧಿಕೃತ ಭೇಟಿಯನ್ನು ಚುನಾವಣಾ ಕಾರ್ಯಗಳೊಂದಿಗೆ ಸೇರಿಸುವಂತಿಲ್ಲ. ಪ್ರತಿ ಅಭ್ಯರ್ಥಿಯು ಗರಿಷ್ಠ 3 ಲಕ್ಷದವರೆಗೆ ಮಾತ್ರ ಚುನಾವಣಾ ಪ್ರಚಾರಕ್ಕಾಗಿ ಖರ್ಚು ಮಾಡಲು ಅವಕಾಶವಿದ್ದು, ಖರ್ಚಿನ ಬಗ್ಗೆ ಸೂಕ್ತ ದಾಖಲೆಗಳನ್ನು ಚುನಾವಣಾಧಿಕಾರಿಗೆ ಸಲ್ಲಿಸತಕ್ಕದ್ದು. ಪ್ರಚಾರದ ಸಮಯದಲ್ಲಿ ಯಾವುದೇ ಪ್ರಚೋದನಕಾರಿ ಹೇಳಿಕೆಗಳನ್ನು ನಿಡುವಂತಿಲ್ಲ ಮತ್ತು ಸಾರ್ವಜನಿಕರ ಶಾಂತಿಗೆ ಭಂಗ ತರುವಂತಹ ಹೇಳಿಕೆ ಮತ್ತು ಯಾವುದೇ ರೀತಿಯ ಪ್ರದರ್ಶನ ನೀಡುವಂತಿಲ್ಲ ಎಂದು ಸಭೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮತ್ತು ಚುನಾವಣಾ ಸಿಬ್ಬಂದಿ ಇದ್ದರು.

LEAVE A REPLY

Please enter your comment!
Please enter your name here