27 ಜನ ಶಿಕ್ಷಕರಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ; ಬಳ್ಳಾರಿಯಲ್ಲಿ ಜಿಲ್ಲಾ ಮಟ್ಟದ ಶಿಕ್ಷಕರ ದಿನ ಆಚರಣೆ ಗುಣಮಟ್ಟದ ಶಿಕ್ಷಣ ನೀಡಿಕೆಯಲ್ಲಿ ಬಳ್ಳಾರಿ ಜಿಲ್ಲೆ ಮಾದರಿಯಾಗಲಿ: ಶಾಸಕ ಸೋಮಶೇಖರ್ ರೆಡ್ಡಿ

0
110

ಬಳ್ಳಾರಿ,ಸೆ.05 : ಗುಣಮಟ್ಟ ಶಿಕ್ಷಣದ ವಿಷಯದಲ್ಲಿ ಬಳ್ಳಾರಿ ಜಿಲ್ಲೆ ರಾಜ್ಯದಲ್ಲಿ ಗುರುತಿಸಿಕೊಳ್ಳಬೇಕು ಎನ್ನುವುದು ನಮ್ಮೆಲ್ಲರ ಕಳಕಳಿ ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಹೇಳಿದರು.
ಬಳ್ಳಾರಿ/ವಿಜಯನಗರ ಜಿಲ್ಲಾಡಳಿತ, ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ
ನಗರದ ಬಿಡಿಎಎ ಫುಟ್‍ಬಾಲ್ ಮೈದಾನದ ಸಭಾಂಗಣದಲ್ಲಿ ಭಾನುವಾರ ನಡೆದ ಡಾ.ಸರ್ವಪಲ್ಲಿ ರಾಧಕೃಷ್ಣನ್‍ರವರ 133ನೇ ಜಯಂತಿಯ ಅಂಗವಾಗಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮದಲ್ಲಿ ಡಾ.ಸರ್ವಪಲ್ಲಿ ರಾಧಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ತಂದೆ ತಾಯಿ ಜನ್ಮ ಕೊಟ್ಟರೆ, ಶಿಕ್ಷಕರು ಬದುಕು ರೂಪಿಸಲು ನೆರವಾಗುತ್ತಾರೆ. ನಮ್ಮ ಜೀವನ ಸುಧಾರಿಸುವಲ್ಲಿ ಶಿಕ್ಷಕರ ಪಾತ್ರ ತುಂಬಾ ಮುಖ್ಯ. ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಬಳ್ಳಾರಿ ಜಿಲ್ಲೆ ರಾಜ್ಯದಲ್ಲಿ ಗುರುತಿಸಿಕೊಳ್ಳಬೇಕು ಎನ್ನುವುದು ನಮ್ಮ ಕಳಕಳಿ ಎಂದರು.
ಜಿಲ್ಲೆಗೆ ಇತರೆ ಜಿಲ್ಲೆಗಳಿಂದ ಬರುವ ಶಿಕ್ಷಕರು ಒಂದೆರಡು ವರ್ಷಕ್ಕೆ ವರ್ಗಾವಣೆ ಆಗುತ್ತಿದ್ದಾರೆ.ಹೀಗಾಗಿ ಜಿಲ್ಲೆಯಲ್ಲಿ ಶಿಕ್ಷಕರ ಕೊರತೆಯುಂಟಾಗಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಹೈದ್ರಾಬಾದ್ – ಕರ್ನಾಟಕದವರನ್ನೇ ಜಿಲ್ಲೆಗೆ ನೇಮಿಸಿಕೊಳ್ಳಲು ಅವಕಾಶ ನೀಡುವಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಮನವಿ ಮಾಡಲಾಗುವುದು.
ಮುಂದಿನ ದಿನಗಳಲ್ಲಿ ಕೆಎಂಆರ್‍ಸಿ ಅಡಿಯಲ್ಲಿ ಜಿಲ್ಲೆಗೆ 1,300 ಕೋಟಿ ಅನುದಾನ ಬಿಡುಗಡೆಯಾಗುತ್ತಿದ್ದು, ಅನುದಾನ ಬಂದ ಕೂಡಲೇ ಶಿಕ್ಷಕರ ಬಹಳ ದಿನಗಳ ಬೇಡಿಕೆಯಾದ ಗುರುಭವನ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಮಾತನಾಡಿ ಮನೆಯಲ್ಲಿ ಪೋಷಕರು ಮಕ್ಕಳನ್ನು ತಿದ್ದುವ ಹಾಗೆ ಶಿಕ್ಷಕರು ಮಕ್ಕಳ ಭವಿಷ್ಯಕ್ಕೆ ಬೇಕಾದ ಎಲ್ಲಾ ಕೌಶಲ್ಯ ತುಂಬುವ ಮೂಲಕ ಅವರ ಸರ್ವತೋಮುಖ ಬೆಳವಣಿಗೆಗೆ ನೆರವಾಗುತ್ತಿದ್ದಾರೆ. ಸಮಾಜ ತಿದ್ದುವ ಕೆಲಸ ಶಿಕ್ಷಕರಿಂದ ಮಾತ್ರ ಸಾಧ್ಯ ಎಂದರು.
ಹಗಲು ರಾತ್ರಿ ಎನ್ನದೇ ದುಡಿಯುತ್ತ ತಮ್ಮದೇ ಆದ ಸಲಹೆ ಮಾರ್ಗದರ್ಶನದ ಮೂಲಕ ಸಮಾಜದ ಒಳಿತಿಗೆ ಶ್ರಮಿಸುವ ಶ್ರಮಜೀವಿ ಶಿಕ್ಷಕ. ಯಾವತ್ತಿಗೂ ಶಿಕ್ಷಕರ ಸ್ಥಾನಮಾನ ಕಡಿಮೆ ಆಗುವುದಿಲ್ಲ. ಶಿಕ್ಷಕರು ಹೆಚ್ಚಿನ ರೀತಿಯ ಕೆಲಸ ಮಾಡಿ, ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಾ, ಸಮಾಜ ತಿದ್ದುವ ಶಿಕ್ಷಕರ ಕಾರ್ಯ ಹೀಗೆ ನಿರಂತರವಾಗಿ ಸಾಗಲಿ ಎಂದರು.
ಕೋವಿಡ್ ಸಮಯದ ಎರಡು ವರ್ಷ ತುಂಬಾ ಕಷ್ಟದ ಸಮಯವಾಗುತ್ತು. ಇಂತಹ ಸಮಯದಲ್ಲಿ ಮಕ್ಕಳಿಗೆ ಆನ್ ಲೈನ್ ಮೂಲಕ ತರಗತಿಗಳನ್ನು ಮಾಡಿದ್ದಾರೆ. ಇನ್ನೂ ಹೆಚ್ಚಿನ ಆಸಕ್ತಿ ವಹಿಸಿ ಕಾರ್ಯನಿರ್ವಹಿಸಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ ಎಂದು ಅವರು ಹೇಳಿದರು.
ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಹೆಚ್.ಹನುಮಂತಪ್ಪ ಅವರು ಮಾತನಾಡಿ ಸಮಾಜದಲ್ಲಿ ಒಬ್ಬ ಒಳ್ಳೆಯ ಪ್ರಜೆಯಾಗಿ ರೂಪುಗೊಳ್ಳಲು ಉತ್ತಮ ಶಿಕ್ಷಣ ಬೇಕು, ಉತ್ತಮ ಶಿಕ್ಷಣ ನೀಡಲು ಒಬ್ಬ ಉತ್ತಮ ಶಿಕ್ಷಕ ಬೇಕು, ಯಾವುದೇ ಒಬ್ಬ ವ್ಯಕ್ತಿಗೆ ಜೀವನ ಕಟ್ಟಿಕೊಳ್ಳಲು ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ವೃತ್ತಿಗಳಲ್ಲಿಯೇ ಶಿಕ್ಷಕ ವೃತ್ತಿ ಅತ್ಯಂದ ಶ್ರೇಷ್ಠವಾದದ್ದು. ಸಮಾಜವನ್ನು ಸರಿದಾರಿಗೆ ತರುವಲ್ಲಿ ಶಿಕ್ಷಕರ ಜವಾಬ್ದಾರಿ ಮತ್ತು ಕರ್ತವ್ಯ ತುಂಬಾ ಮುಖ್ಯ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ರಾಮಪ್ಪ ಅವರು ಮಾತನಾಡಿ, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಬಳ್ಳಾರಿ ಜಿಲ್ಲೆ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಪ್ರಸಕ್ತ ಸಾಲಿನಲ್ಲಿ ಮಕ್ಕಳ ದಾಖಲಾತಿಯಲ್ಲಿ ಬಳ್ಳಾರಿ ಮೊದಲ ಸ್ಥಾನ ಪಡೆದಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯ 3077 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 5.49 ಲಕ್ಷ ಮಕ್ಕಳು ದಾಖಲಾಗಿದ್ದಾರೆ. ಬಳ್ಳಾರಿ ನಗರ ಒಂದರಲ್ಲಿ 3976 ಜನ ಮಕ್ಕಳಿದ್ದಾರೆ. ಜಿಲ್ಲೆಯ ಎಲ್ಲಾ ಶಾಲೆಗಳ ಮೂಲಸೌಕರ್ಯಗಳ ಅಭಿವೃದ್ಧಿಗೆ ಡಿಎಂಎಫ್,ಕೆಕೆಆರ್‍ಡಿಬಿ, ನಂಜುಂಡಪ್ಪ ವರದಿಯ ಪ್ರಕಾರ ಹಿಂದುಳಿದ ಪ್ರದೇಶದ ಅನುದಾನ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಜಿಲ್ಲೆಯ 11 ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಮಾಡಲು ಯೋಜನೆ ರೂಪಿಸಲಾಗಿದೆ. ಕೋವಿಡ್ ಎಲ್ಲರಿಗೂ ಹಲವಾರು ಪಾಠ ಕಲಿಸಿದೆ. ಎಲ್ಲಾ ಶಿಕ್ಷಕರು ಇಂದು ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮಕ್ಕಳಿಗೆ ಬೋಧಿಸುವುದನ್ನು ಕಲೆಯುತ್ತಿದ್ದಾರೆ. ಇಂತಹ ಸಮಯದಲ್ಲೂ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವ ಮೂಲಕ, ಕಷ್ಟದ ಸಂದರ್ಭದಲ್ಲಿ ಉತ್ತಮ ಫಲಿತಾಂಶ ನೀಡಲಾಯಿತು ಎಂದರು.
ಕಿರಿಯ ಪ್ರಾಥಮಿಕ,ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ 27 ಜನ ಶಿಕ್ಷಕರಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಪಂ ಸಹಾಯಕ ಕಾರ್ಯದರ್ಶಿ ಶ್ರೀಕುಮಾರ್, ಶಾಲಾ ಶಿಕ್ಷಕರ ವಿವಿಧ ಸಂಘಗಳ ಅಧ್ಯಕ್ಷರು,ಉಪಾಧ್ಯಕ್ಷರು ಮತ್ತು ಪದಾಧಿಕಾರಿಗಳು,ಸಂಘದ ಸದಸ್ಯರು, ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯ ಅಧಿಕಾರಿಗಳು ಮತ್ತು ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here