ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ 63ನೇ ಪದವಿ ಪ್ರದಾನ ಸಮಾರಂಭ, ವೈದ್ಯಕೀಯ ಪದವೀಧರರು ಉತ್ತಮ ವೈದ್ಯಕೀಯ ಸೇವೆ ನೀಡಿ: ಡಾ.ಚಂದ್ರಮೋಹನ್

0
17

ಬಳ್ಳಾರಿ,ಮಾ.28: ವೈದ್ಯಕೀಯ ಪದವಿ ಪೂರ್ಣಗೊಳಿಸಿದ ಪಧವೀದರರು ಸಮಾಜದಲ್ಲಿ ಉತ್ತಮ ವೈದ್ಯಕೀಯ ಸೇವೆ ನೀಡಬೇಕು ಎಂದು ತಮಿಳುನಾಡು ಸರ್ಕಾರದ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಚಂದ್ರಮೋಹನ್.ಬಿ ಅವರು ಹೇಳಿದರು.
ಇಲ್ಲಿಯ ವಿಮ್ಸ್ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ 63ನೇ ಪದವಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೈದ್ಯಕೀಯ ವೃತ್ತಿಯಲ್ಲಿ ತೊಡಗುವವರು ವೈದ್ಯಕೀಯ ಕ್ಷೇತ್ರಕ್ಕೆ ಸೀಮಿತವಾಗದೇ, ಬಾಹ್ಯ ಪ್ರಪಂಚವನ್ನು ಉತ್ಸುಕದಿಂದ ಅನ್ವೇಷಿಸುವ ಕಾರ್ಯ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ವೈದ್ಯಕೀಯ ಪದವಿ ಪೂರ್ಣಗೊಳಿಸಿದವರು ನೀವು ಎಷ್ಟು ದೂರ ಬಂದಿದ್ದೀರಿ ಎಂಬುದರ ಬಗ್ಗೆ ಹೆಮ್ಮೆಪಡಬೇಕು ಮತ್ತು ಅದೇರೀತಿ ಎಷ್ಟು ಎತ್ತರ ಬೆಳೆಯಬಹುದು ಎಂಬುದರಲ್ಲಿ ನಂಬಿಕೆ ಇಟ್ಟು, ಜನಸಾಮಾನ್ಯರಿಗೆ ಪ್ರಾಮಾಣಿಕ ಸೇವೆ ನೀಡುವುದರ ಮೂಲಕ ತಮ್ಮ ಕರ್ತವ್ಯವನ್ನು ಆನಂದಿಸಬೇಕು ಎಂದು ಕಿವಿಮಾತು ಹೇಳಿದರು.
ವೈದ್ಯಕೀಯ ವಿದ್ಯಾರ್ಥಿಗಳು ಹೃದಯದಲ್ಲಿ ಧೈರ್ಯ, ಮನಸ್ಸಿನಲ್ಲಿ ನಮ್ರತೆ ಮತ್ತು ಬದಲಾವಣೆ ರೂಪಿಸುವ ಅಚಲ ಸಂಕಲ್ಪದೊಂದಿಗೆ ಮುಂದುವರಿಯಿರಿ ಎಂದು ಕರೆ ನೀಡಿದರು.

ಜಿಲ್ಲಾಧಿಕಾರಿ ಹಾಗೂ ವಿಮ್ಸ್ ಆಡಳಿತ ಮಂಡಳಿಯ ಸದಸ್ಯರಾದ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಮಾತನಾಡಿ, ವೈದ್ಯರು ರೋಗಿಗಳೊಡನೆ ಉತ್ತಮವಾಗಿ ಸ್ಪಂದಿಸಿ ತಾಳ್ಮೆಯಿಂದ ವರ್ತಿಸುವುದು ವೈದ್ಯರ ಆದ್ಯ ಕರ್ತವ್ಯವಾಗಿದ್ದು, ಸಹಕಾರ-ಸಹಾಯ ಮನೋಭಾವನೆ ಗುಣ ವೈದ್ಯರಲ್ಲಿ ಇರಬೇಕು. ಇದರಿಂದ ಜಿಲ್ಲೆಯ ಜನ ಸಾಮಾನ್ಯರು ತಮ್ಮ ಬಗ್ಗೆ ಹೆಮ್ಮೆಪಡಬೇಕು ಎಂದು ಹೇಳಿದರು.
ವಿಮ್ಸ್‍ನ ನಿರ್ದೇಶಕ ಹಾಗೂ ಡೀನ್ ಆದ ಡಾ.ಟಿ.ಗಂಗಾಧರ ಗೌಡ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಿಕೆ ಎನ್ನುವುದು ಜೀವನದುದ್ದಕ್ಕೂ ಇದ್ದು, ಇದಕ್ಕೆ ಕೊನೆಯಿಲ್ಲ, ವೈದ್ಯಕೀಯ ವಿದ್ಯಾರ್ಥಿಗಳು ಪ್ರಸ್ತುತವಿರುವ ಜ್ಞಾನಕ್ಕೆ ತಕ್ಕಂತೆ ನವೀಕರಣಗೊಂಡು ಅಭಿವೃದ್ಧಿ ಹೊಂದಬೇಕು ಎಂದು ಕಿವಿ ಮಾತು ಹೇಳಿದರು.

ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ವೈದ್ಯಕೀಯ ಪದವಿ ಪಡೆದ ಪದವೀಧರರು ವಿಶ್ವದಾದ್ಯಂತ ಮನ್ನಣೆಗಳಿಸಿದ್ದಾರೆ. ಅವರಂತೆ ತಾವೂ ಕೂಡ ಸಾಧನೆಯ ಮೈಲಿಗಲ್ಲು ತಲುಪಬೇಕು ಎಂದು ಪದವಿ ಪಡೆದ ವೈದ್ಯಕೀಯ ವಿದ್ಯಾರ್ಥಿಗಳನ್ನು ಆಶಿಸಿದರು.
ಯು.ಎಸ್.ಎ ನ ವಾಸ್ಕ್ಯುಲರ್ ಶಸ್ತ್ರಚಿಕಿತ್ಸಕ ಡಾ.ಪಿ.ವಿ.ಪತಂಜಲಿ ಶರ್ಮಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಬಳ್ಳಾರಿಯಲ್ಲಿ ಮೆಡಿಕಲ್ ಕಾಲೇಜ್ ನಿರ್ಮಾಣದ ಕನಸು ಈಗ ನನಸಾಗಿದ್ದು, ನನ್ನ ಎಲ್ಲಾ ಸಾಧನೆಗೆ ವಿಮ್ಸ್ ಸಂಸ್ಥೆಯು ಅಡಿಪಾಯವಾಗಿದೆ ಎಂದರು.
ಕಳೆದ ಸಾಲಿನಿಂದ ಡಾ.ಪಿ.ವಿ.ಪತಂಜಲಿ ಶರ್ಮಾ ಅವರ ಪ್ರಾಯೋಜಕತ್ವದಲ್ಲಿ ಬಂಗಾರದ ಪದಕ ಮತ್ತು ಹತ್ತು ಸಾವಿರ ನಗದು ಹಣವನ್ನು ರ್ಯಾಂಕ್ ಪಡೆದ ಮೂರು ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೊಡುಗೆಯಾಗಿ ನೀಡಲಾಗುತ್ತಿದೆ. ಇದು ಸಂತಸದ ವಿಷಯವಾಗಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ 95 ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ 55 ಸ್ನಾತಕ ಪದವಿ ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ 150 ವೈದ್ಯಕೀಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಈ ಸಂಧರ್ಭದಲ್ಲಿ ಕರ್ನಾಟಕ ವೈದ್ಯಕೀಯ ಮಂಡಳಿಯ ಸದಸ್ಯ ಡಾ.ವೈ.ಸಿ. ಯೋಗಾನಂದ ರೆಡ್ಡಿ, ವಿಮ್ಸ್‍ನ ಪ್ರಭಾರಿ ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಸುಮಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು, ಜಿಲ್ಲಾ ಆಸ್ಪತ್ರೆಯ ನಿರ್ದೇಶಕ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ.ಎನ್ ಸೇರಿದಂತೆ ವಿಮ್ಸ್‍ನ ಹಳೆಯ ವಿದ್ಯಾರ್ಥಿಗಳು, ನಿವೃತ್ತ ಪ್ರಾಂಶುಪಾಲರು, ವೈದ್ಯಕೀಯ ವಿದ್ಯಾರ್ಥಿಗಳು, ಪೋಷಕರು ಮತ್ತು ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here