ನೀನು ಕರೆದಾಗ ಬರಲು ರೆಡಿ ಅನ್ನಿ ಗುರುಗಳ ದಂಡೇ ಸಿಗುತ್ತದೆ

0
123

ಸಾರ್,ನೀವು ಸೆಕ್ಯೂಲರ್ ಅಂತೆ.ದೇವರನ್ನು ನಂಬುವುದಿಲ್ಲವಂತೆ ಹೌದಾ?ಅಂತ ನಾವು ಗೆಳೆಯರು ಕುತೂಹಲದಿಂದ ಕೇಳಿದೆವು.
ಆಗ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪ ನಮ್ಮ ಮುಖ ನೋಡಿ,ಹಾಗಂದರೇ?ಅಂತ ಕೇಳಿದರು.ಅದೇ ಸರ್,ಧರ್ಮ ನಿರಪೇಕ್ಷತೆ ಇರುವವರು ಅನ್ನುತ್ತಾರಲ್ಲ ಅವರು.ದೇವರು ಎಂಬುದೇ ಸುಳ್ಳು ಅಂತ ವಾದಿಸುವವರು ಇರುತ್ತಾರಲ್ಲ ಅವರು ಅಂತ ನಾವು ಹೇಳಿದೆವು.ಅದಕ್ಕವರು ವಿಷಾದದ ನಗು ನಕ್ಕು ಹೇಳಿದರು.
ರೀ,ಮನುಷ್ಯ ಸೆಕ್ಯುಲರ್ ಆಗಿರುವುದಕ್ಕೂ,ದೇವರನ್ನು ನಂಬುವುದಕ್ಕೂ ಏನು ಸಂಬಂಧ?ಹಾಗೆಯೇ ಮತ್ತೊಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಿ.ಇವನೇ ದೇವರು.ಇವನ ರೂಪ ಹೀಗಿರುತ್ತದೆ ಅಂತ ಬದುಕಿನಲ್ಲಿ ಒಮ್ಮೆಯೂ ನೋಡದೆ ಯಾವನು ಹೇಳುತ್ತಾನೋ?ಅವನೇ ಈ ಜಗತ್ತಿನ ದಿ ಬೆಸ್ಟು ದಲ್ಲಾಳಿ.ತಕ್ಷಣವೇ ಆ ದಲ್ಲಾಳಿಯ ಅನ್ನದ ಅಗತ್ಯವನ್ನು ಮನವರಿಕೆ ಮಾಡಿಕೊಂಡು ಸುಮ್ಮನಿದ್ದು ಬಿಡಿ.ಯಾಕೆಂದರೆ ಇಂತಹ ದಲ್ಲಾಳಿಗಳು ನಿಜವಾದ ಗುರುಗಳಾಗಲು ಸಾಧ್ಯವೇ ಇಲ್ಲ.
ಅದೇ ರೀತಿ ಕೆಲವೇ ಧರ್ಮದ ದೇವರನ್ನು ನಂಬುತ್ತೇವೆ ಅನ್ನುವ ಅಥವಾ ದೇವರನ್ನು ನಂಬುವುದೇ ಇಲ್ಲ ಎನ್ನುವವರನ್ನೂ ಈ ಪಟ್ಟಿಯಿಂದ ತೆಗೆದು ಹಾಕಿ ಬಿಡಿ.ಅದರ ಬದಲು ನೀವೇ ದೇವರನ್ನು ಹುಡುಕಿ.ಯಾಕೆಂದರೆ ಅವನಿರದ ಜಾಗವೇ ಇರಲು ಸಾಧ್ಯವಿಲ್ಲ.ಹಾಗಂತ ಆತನಿಗೆ ಯಾವ ರೂಪವಿದೆ?ಅಂತ ನಾನು ಹೇಳಲಾರೆ.ಯಾಕೆಂದರೆ ನಾನೂ ದೇವರನ್ನು ನೋಡಿಲ್ಲ.ಆದರೆ ದೇವರಂತೆ ಬದುಕಿನಲ್ಲಿ ಬಂದವರನ್ನು ನೋಡಿದ್ದೇನೆ.ಯಾಕೆಂದರೆ ದೇವರ ರೂಪವೇ ಒಳ್ಳೆಯತನ.
ನಿಜ,ಈ ಜಗತ್ತಿನಲ್ಲಿ ಎಲ್ಲವನ್ನೂ ತೋರಿಸಲು ಗುರು ಇರುತ್ತಾನೆ.ಹಾಗಂತ ಆ ಗುರುವನ್ನು ನೀವಾಗಿಯೇ ಹುಡುಕಿಕೊಂಡು ಹೋಗಬೇಕಿಲ್ಲ.ಅವರೇ ನಿಮ್ಮ ಜೀವನಕ್ಕೆ ಅಗತ್ಯ ಬಿದ್ದಾಗ ಎದುರಾಗುತ್ತಾರೆ.
ನಮ್ಮ ಬದುಕಿಗೆ ಅವರಾಗಿಯೇ ಬರುವ ಈ ಗುರುಗಳು ಮುಂದೊಂದು ದಿನ ಒಳ್ಳೆಯತನವೇ ದೇವರು ಎಂಬುದನ್ನು ಮನಗಾಣಿಸುತ್ತಾರೆ.ಅಂತವರು ನನಗೂ ಸಿಕ್ಕಿದ್ದಾರೆ.ಆದರೆ ಪದೇ ಪದೇ ಒಂದು ವಿಷಯವನ್ನು ಮನದಟ್ಟು ಮಾಡಿಕೊಳ್ಳಿ.ದೇವರನ್ನು ತೋರಿಸಲು ನಾವೇ ಸರಿ ಎನ್ನುವ ದಲ್ಲಾಳಿಗಳನ್ನು ಮೊದಲು ದೂರವಿಡಿ.ಯಾಕೆಂದರೆ ನಿಮಗೆ ದೇವರನ್ನು ತೋರಿಸುತ್ತೇವೆ ಎನ್ನುವವರ ಪಾಲಿಗೆ ನೀವು ದೇವರಾಗಬಹುದೇ ಹೊರತು,ಇನ್ನೇನೂ ಆಗುವುದಿಲ್ಲ.ಅವರ ಹೊಟ್ಟೆ ತುಂಬಿಸಲು ನೀವೇ ದೇವರ ರೂಪದಲ್ಲಿ ಸಜ್ಜಾಗುತ್ತೀರಿ.ಆದರೆ ನಿಜವಾದ ದೇವರನ್ನು ಅರಿತುಕೊಳ್ಳಬೇಕೆಂದರೆ ಮೊದಲು ಅವರನ್ನು ದೂರವಿಡಿ.ದೇವರ ಜತೆ ನೀವೇ ನೇರ ಸಂಪರ್ಕ ಸಾಧಿಸಿ.
ಅವತ್ತು ಹೈಗ್ರೌಂಡ್ಸ್ ನ ತಮ್ಮ ನಿವಾಸದಲ್ಲಿ ಬಂಗಾರಪ್ಪ ಆಡಿದ ಮಾತುಗಳನ್ನು ಕೇಳಿ ನಮಗೆ ಕುತೂಹಲವಾಯಿತು.ಸಾರ್.ನೀವು ದೇವರನ್ನು ನಂಬುವುದೇ ಇಲ್ಲ ಅಂದುಕೊಂಡಿದ್ದೆವು ಅಂತ ನಾವು ಕೇಳಿದೆವು.
ಅರೇ,ದೇವರೇ ಇಲ್ಲ ಅಂತ ನಿಖರವಾಗಿ ಹೇಳಲು ನಾನ್ಯಾರು?ಎಂದರು ಬಂಗಾರಪ್ಪ.ನಾನು ದೇವರನ್ನು ನಂಬುತ್ತೇನೆ.ನಂಬುವುದಿಲ್ಲ ಅನ್ನುವವರು ಪ್ರಕೃತಿಯನ್ನಾದರೂ ನಂಬಬೇಕು.ಹಾಗೇನಾದರೂ ಇದ್ದರೆ ಅದು ಬೇರೆ ಮಾತು.ಅಳಿಯ ಅಲ್ಲ,ಮಗಳ ಗಂಡ ಅಂದ ಹಾಗೆ.
ಆದರೆ,ದಲ್ಲಾಳಿಗಳ ಮೂಲಕ ದೇವರನ್ನು ನೋಡಬಹುದು ಅಂತ ಯಾರಾದರೂ ನಿಖರವಾಗಿ ಹೇಳುವುದಾದರೆ ಅವರ ಅಡ್ರೆಸ್ಸು ಕೊಡಿ.ನಾನು ತುಂಬ ಜನರನ್ನು ಚೆಕ್ ಮಾಡಿದೆ.ಅವರೆಲ್ಲ ದೇವರನ್ನು ನೋಡಬಹುದಾದ ಮಾರ್ಗ ಹೇಳಿದರೇ ಹೊರತು,ದೇವರನ್ನು ತೋರಿಸಲಿಲ್ಲ ಎಂದರು.
ಒಬ್ಬ ಮುಖ್ಯಮಂತ್ರಿ ಆಡಿದ ಮಾತುಗಳನ್ನು ಕೇಳಿ ನಾವು ದಂಗಾದೆವು.ಅದಕ್ಕವರು ಮತ್ತೆ ನಕ್ಕು ಹೇಳಿದರು:ನೀವು ಕಷ್ಟದಲ್ಲಿದ್ದಾಗ ನಿಮ್ಮ ನೆರವಿಗೆ ಬರುತ್ತಾರಲ್ಲ?ಅವರನ್ನು ದೇವರೇ ಕಳಿಸಿರುತ್ತಾನೆ.ನೋ ಡೌಟ್.ಹಾಗಂತ ನನಗನ್ನಿಸುತ್ತದೆ.ಆದರೆ ಯಾವುದಾದರೂ ದೇವಾಲಯದಲ್ಲಿ ಇಂತಿಂತಹ ಜಾತಿಯವರೇ ಬಂದು ಪ್ರಸಾದ ತೆಗೆದುಕೊಳ್ಳಬೇಕು ಅಂತ ಹೇಳಿದರು ಅಂದುಕೊಳ್ಳಿ.ನೋ ಡೌಟ್.ಅಲ್ಲಿ ದೇವರನ್ನು ಹರಾಜಿಗಿಟ್ಟು,ಹೊಟ್ಟೆ ತುಂಬಿಸಿಕೊಳ್ಳುವ ದಲ್ಲಾಳಿಗಳ ಪಡೆ ರೆಡಿ ಆಗಿದೆ ಎಂದೇ ಅರ್ಥ.ಅಂತವರಿಗೆ ಕವಡೆ ಕಾಸಿನ ಬೆಲೆ ಕೊಡಬೇಡಿ.ನಿಜವಾದ ಭಿಕ್ಷುಕರು ಅವರು.ಇಂತವರನ್ನು ನೋಡಲು ನೀವು ಯತ್ನಿಸಬೇಡಿ.ನಿಜವಾದ ದೇವರನ್ನು ನೋಡಲು ಯತ್ನಿಸಿ.
ಅಂದ ಹಾಗೆ ಇವರು ಮಾಡುವ ಯಡವಟ್ಟಿಗಾಗಿ ದೇವರ ಮೇಲಿನ ನಂಬಿಕೆಯನ್ನು ನಾವು ಕಳೆದುಕೊಳ್ಳಬೇಕಿಲ್ಲ.ಆದರೆ ದಲ್ಲಾಳಿಯ ಅಗತ್ಯ ನಮಗಿಲ್ಲ.ನಾವೇ ನೇರವಾಗಿ ದೇವರನ್ನು ಪ್ರಾರ್ಥಿಸುವುದು ಸೂಕ್ತ ಎಂಬುದನ್ನು ಮನದಟ್ಟು ಮಾಡಿಕೊಂಡರೆ ಸಾಕು.ನಿಮ್ಮನ್ನು ಪ್ರೀತಿಸುವ ಜೀವಗಳನ್ನು ನಿಮ್ಮ ಸುತ್ತ ಇಟ್ಟಿರುವವನೇ ದೇವರು ಎಂದು ನಂಬಿದರೆ ಸಾಕು.ಬದುಕಿನಲ್ಲಿ ಯಾವುದೇ ವಿಷಯ ಇರಲಿ,ದಲ್ಲಾಳಿಗಳನ್ನು ನಂಬಿದವರು ಉದ್ದಾರವಾಗಿದ್ದನ್ನು ನಾನು ನೋಡಿಲ್ಲ.
ಹೀಗಾಗಿ ನನ್ನನ್ನು ಪ್ರೀತಿಸುವವರೇ,ದೇವರು ಕಳಿಸಿಕೊಟ್ಟ ರಕ್ಷಕರು ಎಂದು ನಂಬಿಕೊಂಡು ತೃಪ್ತಿಯಿಂದಿರುತ್ತೇನೆ ಎಂದರು ಬಂಗಾರಪ್ಪ.ಆವತ್ತು ಬಂಗಾರಪ್ಪ ಅವರ ಆ ಮಾತುಗಳನ್ನು ನೆನಪಿಸಿಕೊಂಡಾಗ ಇವತ್ತು ತಕ್ಷಣವೇ ನನಗೆ ನೆನಪಾದವಳು ಗುಂಡಮ್ಮ!
ಆಕೆಯ ನಿಜವಾದ ಹೆಸರು ಜಿ.ಹೆಚ್.ಸುಮಿತ್ರಾ.ಹೊನ್ನಾಳಿ ತಾಲ್ಲೂಕು ಕುಳಗಟ್ಟೆ ಗ್ರಾಮದ ನಮ್ಮ ಚಿಕ್ಕಪ್ಪ-ಚಿಕ್ಕಮ್ಮ,ಹಾಲೇಶ್ ರಾವ್ ಹಾಗೂ ಮಂಜುಳಮ್ಮ ಅವರ ಮಗಳು ಆಕೆ.ನಾನು ಬೆಂಗಳೂರಿಗೆ ಕೆಲಸಕ್ಕೆ ಅಂತ ಬಂದ ಸ್ವಲ್ಪ ದಿನಗಳಲ್ಲೇ ಬಂಗಾರಪ್ಪ ಸಿಎಂ ಆಗಿದ್ದರು.ಇವತ್ತು ವಿಧಾನಸಭಾಧ್ಯಕ್ಷರಾಗಿರುವ ಕಾಗೋಡು ತಿಮ್ಮಪ್ಪ ಅವತ್ತು ಗೃಹ ಮಂಡಳಿಯ ಅಧ್ಯಕ್ಷರಾಗಿದ್ದರು.
ಅವತ್ತು ಈ ಇಬ್ಬರು ದೀವ ಜನಾಂಗದ ಪರಮೋಚ್ಚ ನಾಯಕರ ಜೀವನ ಚರಿತ್ರೆ ಬರೆಯಬೇಕು ಅಂತ ನಾನು ಹೊರಟಾಗ ಅನಿವಾರ್ಯವಾಗಿ ಸಾಗರಕ್ಕೆ ಹೋಗಲೇಬೇಕಿತ್ತು.ಇಲ್ಲಿ ಪ್ರಜಾವಾಣಿ ಆಫೀಸಿನಲ್ಲಿ ತಿಂಗಳಾನುಗಟ್ಟಲೆ ಕಾಲ ಕುಳಿತು ಮೂವತ್ತು ವರ್ಷಗಳ ಪೇಪರ್ ಗಳನ್ನು ಓದಿದೆ.ಆದರೆ ಬಂಗಾರಪ್ಪ ಹಾಗೂ ಕಾಗೋಡು ತಿಮ್ಮಪ್ಪ ಅವರ ಸ್ವಂತ ಊರಾದ ಸೊರಬ ಹಾಗೂ ಸಾಗರದುದ್ದ ತಿರುಗದೆ ಆ ಜೀವನ ಚರಿತ್ರೆ ಪೂರ್ಣವಾಗಲು ಸಾಧ್ಯವಿರಲಿಲ್ಲ.
ಹಾಗಂತಲೇ ನಾನು ಸಾಗರಕ್ಕೆ ಹೋದೆ.ಆಗ ಗುಂಡಮ್ಮ ಸಾಗರದ ನಮ್ಮ ಮನೆಯಲ್ಲೇ ಇದ್ದು ಓದುತ್ತಿದ್ದಳು.ಆಕೆಗೆ ನಾನು ಎಂದರೆ ಜೀವ.ಆಗ ನಾನು ಊರೂರು ತಿರುಗಿ ಬಂದು ಬರೆಯಲು ಕುಳಿತರೆ ಇವಳು,ಮೇಜು,ಪೆನ್ನು ಸೇರಿದಂತೆ ಬರೆಯಲು ಅಗತ್ಯವಾದ ಎಲ್ಲವನ್ನೂ ರೆಡಿ ಮಾಡಿ ಕೊಡುತ್ತಿದ್ದಳು.
ಅಷ್ಟೇ ಅಲ್ಲ,ಬರೆಯುವುದರಿಂದ ಹಿಡಿದು ಊಟದ ತನಕ.ಚರ್ಚೆಯಿಂದ ಹಿಡಿದು ಮಲಗುವ ತನಕ ಸದಾ ಕಾಲ ನನ್ನನ್ನು ಥೇಟ್ ಒಂದು ಮಗುವಿನಂತೆ ನೋಡಿಕೊಳ್ಳುತ್ತಿದ್ದಳು.ಒಂದೊಂದು ಸಲ ಮಟ ಮಟ ಮಧ್ಯಾಹ್ನ ಸುಸ್ತಾಗಿ ನಾನು ಮಲಗಿ ಬಿಡುತ್ತಿದ್ದೆ.ಆಗೆಲ್ಲ ಹಾಕಿಕೊಂಡ ಲುಂಗಿ ಅಸ್ತವ್ಯಸ್ಥವಾಗುತ್ತಿತ್ತು.ಈ ಟೈಮಿನಲ್ಲಿ ಯಾರಾದರೂ ಮನೆಗೆ ಬಂದರೆ ಹುಡುಗಿ ನನ್ನ ಮೇಲೆ ಪ್ರೀತಿಯಿಂದ ರೇಗುತ್ತಿದ್ದಳು.
ಈ ಅಣ್ಣನಿಗೆ ಮೈ ಮೇಲೆ ಸ್ವಲ್ಪವೂ ಜ್ಞಾನ ಇರಲ್ಲಪ್ಪ,ಲುಂಗಿಯನ್ನೂ ನೆಟ್ಟಗೆ ಉಟ್ಟುಕೊಳ್ಳುವುದಿಲ್ಲ ಎಂದು ಗೊಣಗುತ್ತಾ ನನ್ನ ಮೈ ಮೇಲೊಂದು ರಗ್ಗು ಹೊದಿಸಿಯೇ ಬಾಗಿಲು ತೆರೆಯುತ್ತಿದ್ದಳು.ಬಂದವರು,ನಾನು ರಗ್ಗು ಹೊದ್ದು ಮಲಗಿದ್ದನ್ನು ನೋಡಿ,ಆರೇ,ಗುಂಡಮ್ಮ,ಇದ್ಯಾರು ಈ ಸೆಕೆಯಲ್ಲಿ ರಗ್ಗು ಹಾಕಿಕೊಂಡು ಮಲಗಿರೋದು?ಎಂದು ಕೇಳುತ್ತಿದ್ದರು.
ಆಗೆಲ್ಲ ಗುಂಡಮ್ಮ,ಅಯ್ಯೋ,ಅದು ನಮ್ಮಣ್ಣ.ಅವರು ಹಾಗೇ.ಎಷ್ಟೇ ಸೆಕೆಯಿರಲಿ.ರಗ್ಗು ಹೊದ್ದು ಮಲಗುತ್ತಾರೆ ಎಂದು ಬಿಡುತ್ತಿದ್ದಳು.ಬಂದವರು,ಪಾಪ ಕಣೇ ನಿಮ್ಮಣ್ಣ ಅನ್ನುತ್ತಿದ್ದರು.ಅಯ್ಯೋ,ಅದರ ಕತೆ ಹಾಳಾಗಲಿ.ಈಗ ಬಂದಿದ್ದೇಕೆ ಹೇಳಿ ಎನ್ನುತ್ತಿದ್ದಳು ಗುಂಡಮ್ಮ.
ಯಾಕೂ ಇಲ್ಲ ಕಣೇ ಸುಮ್ಮನೆ ಬೇಜಾರಾಯಿತು.ಅದಕ್ಕಾಗಿ ಬಂದೆವು ಅಂತ ಅವರೇನಾದರೂ ಹೇಳಿದರೋ?ಇವಳ ಪಿತ್ಥ ಕೆರಳಿ ಬಿಡುತ್ತಿತ್ತು.ಅರೇ,ನಿಮಗೆ ಮಾಡಲು ಕೆಲಸವಿಲ್ಲ ಅಂತ ಬಂದಿರಾ?ನಿಮಗೆ ಟೈಮಾದಾಗ ಹೇಳಿ.ಮಾತನಾಡಲು ನಾನೇ ನಿಮ್ಮ ಮನೆಗೆ ಬರುತ್ತೇನೆ ಎಂದು ರಪ್ಪಾ ರಪ್ಪಂತ ಹೇಳಿಬಿಡುತ್ತಿದ್ದಳು.
ಆಗೆಲ್ಲ ನನ್ನ ಮನಸ್ಸು ತುಂಬ ಸಂಕಟದಲ್ಲಿದ್ದ ಕಾಲ.ಹೀಗಾಗಿ ಮುಖೇಶ್ ಹಾಡಿದ ಹಿಂದಿ ಹಾಡುಗಳನ್ನು ಹೆಚ್ಚಾಗಿ ಕೇಳುತ್ತಿದ್ದೆ.ಹೀಗೆ ತನ್ನ ಅಣ್ಣ ಕೇಳುವುದು ಹೆಚ್ಚಾಗಿ ಮುಖೇಶನ ಹಾಡನ್ನು ಅಂತ ಗೊತ್ತಿದ್ದ ಗುಂಡಮ್ಮ ಕೂಡಾ ಅವೇ ಹಾಡುಗಳನ್ನು ಕೇಳುತ್ತಿದ್ದಳು.
ಮೊದಲೇ ದು:ಖ ಭರಿತ ಹಾಡುಗಳು.ಮೊದಲೇ ನೊಂದ ನನ್ನ ಮನಸ್ಸಿಗೆ ಅವು ಹಿತ ನೀಡುತ್ತಿದ್ದವು.ಆದರೆ ಇವಳು ಚಿಕ್ಕ ಹುಡುಗಿ.ಹೀಗಾಗಿ ಅದರ ರಾಗ ಕೇಳಿಯೇ ಮಂಕು ರಾಚಿಕೊಂಡಂತಾಗಿ ಬಿಡುತ್ತಿದ್ದಳು.
ಒಂದು ದಿನ ನಮ್ಮ ತಾಯಿ ನನ್ನನ್ನು ಕರೆದು,ಲೇಯ್,ಆ ಗುಂಡಮ್ಮನ್ನ ನೋಡಿದ್ದೀಯಾ?ಅಂದರು.ಅರೇ,ನೋಡಿದ್ದೀನಲ್ಲ.ಗುಂಡು ಗುಂಡಗೆ ಚೆನ್ನಾಗಿಯೇ ಇದ್ದಾಳೆ ಎಂದೆ.ಅದಕ್ಕವರು ಸೀರಿಯಸ್ಸಾಗಿ,ಈ ಎಮೋಷನಲ್ ಹಾಡುಗಳನ್ನು ಕೇಳುವುದು ಬಿಡು. ಇಲ್ಲದಿದ್ದರೆ ನನ್ನಣ್ಣ ಮಾಡುವುದೇ ಸರಿ ಎಂದುಕೊಂಡು ಆ ಹುಡುಗಿಯೂ ಅವೇ ಹಾಡುಗಳನ್ನು ಕೇಳುತ್ತಾಳೆ.ಚಾಂದ್ ಕೀ ದೀವಾರ್ ನ ತೋಡೆ,ಪ್ಯಾರ್ ಭರಾ ದಿಲ್ ತೋಡ್ ದಿಯಾ ಅಂದರೆ ನಿನಗೆ ಅರ್ಥವಾಗಬಹುದು.ಆಕೆಗೆ ಅರ್ಥವಾಗದೇ ಇರಬಹುದು.ಆದರೆ ಅದರಲ್ಲಿರುವ ದು:ಖ ಆಕೆಗೆ ಅರಿವಾಗುತ್ತದೆ ಎಂದರು.ನಾನು ಗಬಕ್ಕಂತ ಎಚ್ಚೆತ್ತುಕೊಂಡು ಬಿಟ್ಟೆ.ನಿಜಕ್ಕೂ ಹುಡುಗಿ ಮಂಕಾಗಿದ್ದಳು.
ಅವತ್ತಿನಿಂದಲೇ ಮುಖೇಶ್ ಹಾಡುಗಳನ್ನು ಕೇಳುವುದನ್ನು ಬಿಟ್ಟೆ.ಬದಲಿಗೆ ಮೋಜು-ಮಸ್ತಿಯ ರಾಗಗಳನ್ನೇ ಹೆಚ್ಚಾಗಿ ಕೇಳತೊಡಗಿದೆ.ಸಹಜವಾಗಿ ಇವೇ ಹಾಡುಗಳನ್ನು ಕೇಳುತ್ತಾ ಆಕೆಯ ಮುಖವೂ ಗೆಲುವಿನಿಂದ ಚಿಮ್ಮತೊಡಗಿತು.
ಇದಾದ ಕೆಲವೇ ದಿನಗಳಲ್ಲಿ ನಮ್ಮಮ್ಮ ಹೇಳಿದರು,ನೋಡು,ಒಬ್ಬರನ್ನು ಗೆಲುವಿನತ್ತ ಕೊಂಡೊಯ್ಯಲು ನೀನು ಅನುಸರಿಸುವ ಮಾರ್ಗ ನೆಟ್ಟಗಿರಬೇಕು.ಅದನ್ನು ಬಿಟ್ಟು ನೀನು ದಲ್ಲಾಳಿಯ ತರ,ನಾನು ಕೇಳಿದ್ದೇ ಪರಮಪವಿತ್ರ ಅನ್ನುವ ತರ ಆಡಬೇಡ.ಅದನ್ನು ಇನ್ನಷ್ಟು ಕಾಲ ನಂಬಿದ್ದರೆ ಹುಡುಗಿ ಇನ್ನಷ್ಟು ಮಂಕಾಗುತ್ತಿದ್ದಳು ಎಂದು ಗದರಿದರು.
ಬಂಗಾರಪ್ಪ ಅವರಾಡಿದ ಮಾತು ಕೇಳಿದ ಕೂಡಲೇ ನನಗೆ ನೆನಪಿಗೆ ಬಂದಿದ್ದೇ ಈ ಘಟನೆ.ಹೀಗಾಗಿ ನಾನು ದೇವರನ್ನು ನಂಬುವ ವಿಷಯದಲ್ಲಿ ದಲ್ಲಾಳಿಗಳನ್ನು ತಪ್ಪಿಯೂ ನಂಬುವುದಿಲ್ಲ.ನೀವು ಒಳ್ಳೆಯ ದಾರಿಯಲ್ಲಿ ನಡೆಯಬೇಕು ಎಂದರೆ ಗುರುವೇ ನಿಮ್ಮನ್ನು ಹುಡುಕಿಕೊಂಡು ಬರುತ್ತಾನೆ.ಶಿಷ್ಯ ಗುರುವನ್ನು ಹುಡುಕಿಕೊಂಡು ಹೋಗಬೇಕಿಲ್ಲ.
ನೀವು ಹುಡುಕಿಕೊಂಡು ಹೋದರೆ ನಿಜವಾದ ಗುರು ಸಿಗುವ ಲಕ್ಷಣ ಕಡಿಮೆ.ನನ್ನ ಬದುಕಿನಲ್ಲಿ ಕನ್ನಡವನ್ನು ಅಚ್ಚುಕಟ್ಟಾಗಿ ಮನವರಿಕೆ ಮಾಡಿಕೊಟ್ಟ ಮೇರಿ ಟೀಚರ್ ಅಗಲಿ.ಕಾಲೇಜು ಲೆವೆಲ್ಲಿನಲ್ಲಿ ಪೋಲಿ ಪುಂಡನ ತರ ಮಂಗಾಟ ಮಾಡುತ್ತಿದ್ದಾಗ,ನೀನು ಮಾಡುತ್ತಿರುವುದು ಸರಿ.ಇದರ ಜತೆ ಓದಿಕೊಂಡು ಬಿಟ್ಟರೆ,ರಿಯಲಿ,ಯೂ ಆರ್ ಹೀರೋ ಅಂತ ನಂಬಿಸಿದ ಸಾಗರದ ಸರ್ಕಾರಿ ಪಿಯೂ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕರಾದ ವಿ.ಗಣೇಶ್ ಅವರಾಗಲೀ,ನೀವು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸುತ್ತೀರಿ ಎಂದು ಬೆನ್ನು ತಟ್ಟುತ್ತಿದ್ದ ಎಲ್ .ಬಿ.ಕಾಲೇಜಿನ ಕನ್ನಡ ಉಪನ್ಯಾಸಕರಾದ ಜಿ.ಎಸ್.ಭಟ್ಟರೇ ಆಗಲಿ,ಬದುಕಿನಲ್ಲಿ ನಾನು ಹುಡುಕಿಕೊಂಡು ಹೋದ ಗುರುಗಳೇನಲ್ಲ.
ಅವರು ನನ್ನ ಬದುಕಿನ ಹಾದಿಯಲ್ಲಿ ತಾವಾಗಿಯೇ ಸಿಕ್ಕವರು.ನನ್ನ ಮೇಲೆ ಅಗಾಧ ಪ್ರೀತಿ ತೋರುವ ಗುಂಡಮ್ಮ ಕೂಡಾ ನಾನು ಹುಡುಕಿಕೊಂಡು ಹೋದಾಗ ಸಿಕ್ಕವಳಲ್ಲ.ಇವರೆಲ್ಲ ಬದುಕಿನ ದಾರಿಯಲ್ಲಿ ತಾವಾಗಿಯೇ ಸಿಕ್ಕವರು.ನಿಷ್ಕಲ್ಮಶವಾಗಿ ಪ್ರೀತಿಸಿದವರು.ಅವತ್ತು ಬಂಗಾರಪ್ಪ ಅವರಾಡಿದ ಮಾತುಗಳನ್ನು ನೆನಪಿಸಿಕೊಂಡಾಗ ಇದೆಲ್ಲವನ್ನೂ ನೆನೆದು ಅಚ್ಚರಿಯಾಯಿತು.
ಅವತ್ತು ಮಾತನಾಡುವ ಸಂದರ್ಭದಲ್ಲಿ ಅವರ ಫೋಟೋ ಆಲ್ಬಂ ಒಂದನ್ನು ನೋಡುತ್ತಾ ಒಂದು ಫೋಟೋ ನೋಡಿ ನಾನು ಅಚ್ಚರಿಯಿಂದ,ಸಾರ್,ನೀವು ಎಲ್ಲರಿಗೂ ಕಾಣುವಂತೆ ಕೈ ಎತ್ತಿ ತೋರುತ್ತಿರುವುದೇಕೆ?ಎಂದಿದ್ದೆ.
ಆಗ ಬಂಗಾರಪ್ಪ ನಗುತ್ತಾ ಹೇಳಿದ್ದರು,ವಾಸ್ತವವಾಗಿ ಅದು ಜನರಿಗೆ ತೋರುವ ಕೈಯ್ಯಲ್ಲ.ನೀನು ಯಾವಾಗ ಕರೆಯುತ್ತೀಯೋ?ಆಗ ಬರಲು ನಾನು ರೆಡಿ ಎಂದು ದೇವರಿಗೆ ಹೇಳುತ್ತಿರುವುದು.ಹಾಗಂತ ಒಂದು ಸಲ ಮನದಟ್ಟು ಮಾಡಿಕೊಳ್ಳಿ.ನಿಮಗೆ ಗುರುಗಳ ದಂಡೇ ಸಿಗುತ್ತದೆ ಎಂದರು.
ವಾವ್,ನೀನು ಯಾವಾಗ ಕರೆಯುತ್ತೀಯೋ?ಆಗ ಬರಲು ನಾನು ರೆಡಿ ಎನ್ನುವುದು ಎಷ್ಟು ಸುಂದರವಾದ ಮಾತು.ಈ ಮಾತಿಗೆ ಉಚ್ಚಾರವೇ ಬೇಕಿಲ್ಲ.ಸಂಜ್ಞೆಯೇ ಸಾಕಲ್ಲವೇ?ಅನ್ನಿಸಿತು.ತಕ್ಷಣ ನನ್ನ ಬಳಿಯಿದ್ದ ಒಂದು ಫೋಟೋ ಅನ್ನು ಅದೇ ಬಾವದಿಂದ ನಿಮ್ಮ ಬಳಿ ಹಂಚಿಕೊಂಡೆ.ಮನಸ್ಸಿಗೇನೋ ಸಮಾಧಾನ.

                                                                                          ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here