ವಿಶಿಷ್ಟ ಆಚರಣೆಯ ಕಾಡಗೊಲ್ಲರ ದನಗಳ ಗೂಡಿನ ಹಬ್ಬ

0
142

ಚಳ್ಳಕೆರೆ ತಾಲ್ಲೂಕಿನ ಚಿಕ್ಕೇನಹಳ್ಳಿ ಯಲಗಟ್ಟೆ ಗೊಲ್ಲರ ಹಟ್ಟಿ ಬಳಿ ನಡೆಯುತ್ತಿರುವ ಕಾಡುಗೊಲ್ಲ ಬುಡಕಟ್ಟು ಸಮುದಾಯದ ದನಗಳ ಗೂಡಿನ ಆಚರಣೆ

 ಪ್ರತಿ ದಸರಾ ಹಾಗೂ ದೀಪಾವಳಿ ಸಂದರ್ಭದಲ್ಲಿ ಈ ಭಾಗದ ಕಾಡುಗೊಲ್ಲ ಬುಡಕಟ್ಟು ಸಮುದಾಯದವರು 5 ದಿನಗಳ ಕಾಲ ಆಚರಿಸುವ ‘ದನಗಳ ಗೂಡಿನ ಹಬ್ಬ’ಕ್ಕೆ ಶುಕ್ರವಾರ ಚಾಲನೆ ದೊರೆತಿದ್ದು, ಮಂಗಳವಾರ ಸಮಾಪನೆಗೊಳ್ಳಲಿದೆ.

ಈ ಹಬ್ಬದಲ್ಲಿ ಪ್ರಮುಖ ಆಚರಣೆ ‘ಹಾಲು ಮೀಸಲು’. 5 ದಿನಗಳ ಕಾಲ ಮನೆಯ ಸದಸ್ಯರು ಹಾಲನ್ನು ಬಳಸದೆ ಪೂಜೆಗೆ ಮಾತ್ರ ಬಳಸುತ್ತಾರೆ. ಉಳಿದ ಹಾಲನ್ನು 5 ದಿನವೂ ಹೆಪ್‌ ಹಾಕಲಾಗುತ್ತದೆ. ಈ ಸಮಯದಲ್ಲಿ ಕರುಗಳಿಗೆ ಹೆಚ್ಚು ಹಾಲುಣಿಸಲಾಗುತ್ತದೆ. ತಾಲ್ಲೂಕಿನ ಚಿಕ್ಕೇನಹಳ್ಳಿ ಯಲಗಟ್ಟೆ ಗೊಲ್ಲರಹಟ್ಟಿಯಲ್ಲಿ ಈ ಹಬ್ಬ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಕೂಡ್ಲಿಗಿ, ಬಳ್ಳಾರಿ, ತುಮಕೂರು, ಬೆಂಗಳೂರು, ಹಿರಿಯೂರು, ಆಂಧ್ರ ಪ್ರದೇಶದ ಮಡಕಶಿರಾ, ರಾಯದುರ್ಗ, ಕಲ್ಯಾಣದುರ್ಗ ಮುಂತಾದ ಭಾಗದಿಂದ ಎತ್ತಪ್ಪ, ಜುಂಜಪ್ಪ, ಚಿತ್ತಯ್ಯ, ಕಾಟಯ್ಯ ಮುಂತಾದ ಆರಾಧ್ಯ ದೈವಗಳ ಆರಾಧಕರು ಗೂಡಿನ ಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ.

ಪಶು ಸಂಪತ್ತು ಹೆಚ್ಚಿಸಬೇಕು ಎನ್ನುವ ಉದ್ದೇಶದಿಂದ ಕಾಡುಗೊಲ್ಲರು ಬಹಳ ಹಿಂದಿನಿಂದಲೂ ಹಬ್ಬವನ್ನು ಆಚರಿಸುತ್ತಾ ಬಂದಿದ್ದಾರೆ.

ವಿಶಿಷ್ಟ ಆಚರಣೆ ಕಾಟಂದೇವರು ಹೊಂಬು ಹೊಡೆದ ಒಂಬತ್ತು ದಿನದ ನಂತರ ಗೂಡಿನ ಹಬ್ಬ ಪ್ರಾರಂಭವಾಗುತ್ತದೆ. ಹಟ್ಟಿಯ ಹೊರ ಭಾಗದಲ್ಲಿ ಹೊಸದಾಗಿ ಕಳ್ಳೆ ಮುಳ್ಳಿನಿಂದ (ರೊಪ್ಪ) ಗೂಡನ್ನು ನಿರ್ಮಿಸಿ ದನ, ಕರು, ಹಸು ಮತ್ತು ಕುರಿ ಹಿಂಡನ್ನು ಬಿಡುತ್ತಾರೆ. ಪ್ರತಿ ಗೂಡಿಗೆ ಮೂಡ ಮತ್ತು ಪಡುವ ಭಾಗಕ್ಕೆ ಎರಡೆರಡು ಬಾಗಿಲು ಇರುತ್ತವೆ.

ಹಬ್ಬದ ಎರಡನೇ ದಿನ ಉರುಮೆ ವಾದ್ಯದ ಮೂಲಕ ಪೂಜಾರಿ ಹಟ್ಟಿ ಯಿಂದ ಹಾಲುಕಂಬಿಯನ್ನು ದನಗಳ ಗೂಡಿಗೆ ಕೊಂಡೊಯ್ಯುತ್ತಾರೆ. ಪ್ರತಿ ಮನೆಯಿಂದ ಅಕ್ಕಿ, ರಾಗಿಹಿಟ್ಟು, ಬೆಲ್ಲ, ಬದನೆಕಾಯಿ, ಹಸಿ ಮೆಣಸಿನಕಾಯಿ ಮುಂತಾದ ವಸ್ತುಗಳನ್ನು ಗೌಡರ ಮನೆಗೆ ಕೊಡುತ್ತಾರೆ.

ಅಲ್ಲದೆ ದನದ ಹಟ್ಟಿಯ ಒಳಗೆ ಹಸಿ ಸಗಣಿಯಿಂದ ಕಟ್ಟಿದ ಚಿಕ್ಕ ಚಿಕ್ಕ ಗೂಡುಗಳಿಗೆ ಬಟ್ಟಣ್ಣ, ಮಾರಣ್ಣ, ಮೈಲಣ್ಣ, ಬಡ ಮೈಲ, ಚಿಕ್ಕರೆಂಬೆ, ಅತಿರೆಂಬೆ, ಗೊಡ್ಡುಗಾಳಿ ಎಂದು ದನಗಳ ಹೆಸರನ್ನಿಟ್ಟು ಹಾಲು–ಮೊಸರಿನಿಂದ ಪೂಜೆ ಸಲ್ಲಿಸಲಾಗುತ್ತದೆ. ಮೀಸಲಿರಿಸಿದ ಹಾಲಿನಿಂದ ತಯಾರಿಸಿದ ಹಾಲುಹುಗ್ಗಿ, ರಾಗಿಮುದ್ದೆ, ಬದನೆಕಾಯಿ ಬಜ್ಜಿಯನ್ನು ದೇವರಿಗೆ ನೈವೇದ್ಯ ಅರ್ಪಿಸುವ ಮೂಲಕ ಸಾಮೂಹಿಕ ದಾಸೋಹ ನಡೆಯುತ್ತದೆ. ನಂತರ ಗೂಡಿನ ಹಬ್ಬದ ಆಚರಣೆಗೆ ತೆರೆಬೀಳುತ್ತದೆ.

ಬುಡಕಟ್ಟು ಸಮುದಾಯದ ಸಾಂಸ್ಕೃತಿಕ ಪರಿಕರಗಳಾದ ಹಾಲುಕಂಬಿ, ಚಿಪ್ಪುಕೊಡಲಿ, ಉಳೆಬಾಳೆ ಕೋಲು, ಕಲ್ಲಿ, ಗಣೆ, ಕಡೆಗೋಲು ಮುಂತಾದ ಪರಿಕರಗಳನ್ನು ದನದ ಗೂಡಿನ ಬಳಿ ಇಟ್ಟು ಪೂಜಿಸಲಾಗುತ್ತದೆ.

ಕೃಪೆ:- ಪ್ರಜಾವಾಣಿ
ಸಂಗ್ರಹಣೆ:- ಕಾಡುಗೊಲ್ಲರ ಜನಪದ ಸೊಗಡು

LEAVE A REPLY

Please enter your comment!
Please enter your name here