ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಯ ಹಣ ಕೂಡಿಟ್ಟು ಮಗಳಿಗೆ ಚಿನ್ನ ಖರೀದಿಸಿದ ಮಹಿಳೆ.

0
35

ಹೊಸಪೇಟೆ : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು 2 ಸಾವಿರ ಹಣ ಹಾಗು ಅನ್ನಭಾಗ್ಯ ಯೋಜನೆಯಡಿ ಪಡಿತರ ಅಕ್ಕಿಯ ಹಣ ಕೂಡಿಟ್ಟು, ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಾಕುಬಾಳು ಗ್ರಾಮದ ಕೆ.ವಿಜಯಲಕ್ಷ್ಮಿ ಎಂಬುವವರು ತನ್ನ ಮಗಳಿಗೆ ಚಿನ್ನದ ಕಿವಿಯೋಲೆ (ರಿಂಗ್)ಖರೀದಿಸಿದ್ದಾರೆ.

ಚಿನ್ನದ ದರ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಬಡವರಿಗೆ ಚಿನ್ನ ಖರೀದಿ ಗಗನ ಕುಸುಮವಾಗಿತ್ತು. ಮದುವೆ ಸಮರಂಭಗಳಿಗೆ ಮಾತ್ರ ಅನಿವಾರ್ಯವಾಗಿ ಚಿನ್ನ ಖರೀದಿಸುತ್ತಿದ್ದ ಬಡವರಿಗೆ, ಇನ್ನುಳಿದ ದಿನಗಳಲ್ಲಿ ಯೋಚನೆ ಕೂಡ ಮಾಡುವಂತಿದ್ದಿಲ್ಲ. ಇಂಥಹ ಸಂಧರ್ಭದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಅನ್ನಭಾಗ್ಯ ಪಡಿತರ ಹಣವನ್ನು ಕೂಡಿಟ್ಟು, 22 ಸಾವಿರ ರೂ.ಬೆಲೆಯ 3.35 ಗ್ರಾಂ.ನಲ್ಲಿ ತನ್ನ ಮಗಳು ಅಂಕಿತಾಳಿಗೆ ಚಿನ್ನದ ಕಿವಿಯೋಲೆ(ರಿಂಗ್) ಕೊಡಿಸಿದ್ದಾರೆ.

ಈ ಕುರಿತು ಪತ್ರಿಕೆಯೊಂದಿಗೆ ಸಂತಸ ಹಂಚಿಕೊಂಡ ವಿಜಯಲಕ್ಷ್ಮಿಯವರು, ಮಗಳಿಗೆ ಕಿವಿಯೋಲೆ(ರಿಂಗ್) ಕೊಡಿಸುವ ಆಸೆ ಇತ್ತು. ಆದರೆ ಒಮ್ಮೆಲೆ ಕೊಂಡುಕೊಳ್ಳಲು ತ್ರಾಸು ಆಗುತ್ತಿತ್ತು. ಕೊನೆಗೆ ಯೋಚನೆ ಮಾಡಿ, ಇದೇ ಹಣವನ್ನು 10 ತಿಂಗಳು ಕೂಡಿಟ್ಟರೆ ಖರೀದಿಸಬಹುದಲ್ಲ ಎಂದು ತಿಳಿದು, ಕೊನೆಗೆ ಅದೇ ರೀತಿ ಹಣ ಕೂಡಿಟ್ಟು, ಮಗಳಿಗೆ ಕಿವಿಯೋಲೆ ಖರೀದಿಸಿದೆ ಎಂದರು.

ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡವರಿಗೆ ವರದಾನವಾಗಿವೆ. ಗೃಹಪಯೋಗಿ ವಸ್ತುಗಳನ್ನು ಕೊಂಡಂತೆ ಚಿನ್ನವನ್ನು ಸಹ ಖರೀದಿಸಬಹುದು ಎಂಬ ಆತ್ಮವಿಶ್ವಾಸ ಮೂಡಿದೆ. ಇಂಥಹ ಜನ ಕಲ್ಯಾಣ ಯೋಜನೆಗಳನ್ನು ಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ನಮ್ಮ ಧನ್ಯವಾದಗಳು ಎಂದು ತಿಳಿಸಿದರು.

LEAVE A REPLY

Please enter your comment!
Please enter your name here