ಮಕ್ಕಳಿಗೆ ಪ್ರತಿ 06 ತಿಂಗಳಿಗೊಮ್ಮೆ ತಪ್ಪದೇ ಜಂತುಹುಳು ನಿವಾರಕ ಮಾತ್ರೆ ಕೊಡಿಸಿ: ಡಾ ವೈ.ರಮೇಶ್‍ಬಾಬು

0
40

ಬಳ್ಳಾರಿ,ಮೇ 13: ಮಗುವಿನ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ಪ್ರತಿ 06 ತಿಂಗಳಿಗೊಮ್ಮೆ ತಪ್ಪದೇ 2 ರಿಂದ 16 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಜಂತುಹುಳು ನಿವಾರಕ ಮಾತ್ರೆಗಳನ್ನು ಪಾಲಕರು ಕೊಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್‍ಬಾಬು ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಆಶ್ರಯದಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದಡಿ ಕೌಲ್‍ಬಜಾರ್‍ನ ಬ್ರೂಸ್‍ಪೇಟೆ ನಗರ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಮುದಾಯ ಆಧಾರಿತ ಜಂತುಹುಳು ನಿವಾರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳ ಬೆಳವಣಿಗೆಯ ಆರಂಭದಲ್ಲಿಯೇ ರಕ್ತಹೀನತೆಯನ್ನು ಗುರುತಿಸುವುದರಿಂದ ದೇಹದ ಬೆಳವಣಿಗೆಗೆ ಆಗುವ ಕುಂಠಿತ ತೊಂದರೆಗಳು ಹಾಗೂ ಇತರೆ ಸಾಮಾನ್ಯ ತೊಂದರೆಗಳನ್ನು ಗುರುತಿಸಿ ಮಗುವಿನ ಬಾಲ್ಯವನ್ನು ಸದೃಢಗೊಳಿಸಲು 01 ರಿಂದ 02 ವರ್ಷದೊಳಗಿನ ಮಕ್ಕಳಿಗೆ 200 ಮಿಲಿಗ್ರಾಂ ಮಾತ್ರೆ ಹಾಗೂ 2 ರಿಂದ 16 ವರ್ಷದೊಳಗಿನ ಮಕ್ಕಳಿಗೆ 400 ಮಿಲಿಗ್ರಾಂ ಮಾತ್ರೆಗಳನ್ನು ಮಗುವಿಗೆ ಚೀಪಿಸಲು ಕೊಡಲು ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಲಭ್ಯವಿದ್ದು, ಎಲ್ಲಾ ಪಾಲಕರು ಇದರ ಸದುಪಯೋಗ ಪಡೆದುಕೊಂಡು ಮಗುವಿನ ಸದೃಢ ಆರೋಗ್ಯಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಹನುಮಂತಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಎಲ್ಲಾ ಗ್ರಾಮ, ಪಟ್ಟಣ ಹಾಗೂ ನಗರಗಳಲ್ಲಿ ಮಾತ್ರೆಗಳನ್ನು ವಿತರಿಸಲು ತಂಡಗಳನ್ನು ರಚಿಸಲಾಗಿದ್ದು, ಮೇ 13 ರಿಂದ 23 ರವರೆಗೆ ಆರೋಗ್ಯ ಇಲಾಖೆಯ ವೈದ್ಯಕೀಯ ತಂಡದವರು ಆಗಮಿಸಿ ಮಾತ್ರೆಗಳನ್ನು ಚೀಪಿಸಲು ಬಂದಾಗ ಪಾಲಕರು ಸಹಕರಿಸಬೇಕು ಎಂದು ವಿನಂತಿಸಿದರು.
ಕ್ಷೇತ್ರ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರನ್ನೊಳಗೊಂಡ ವೈದ್ಯಕೀಯ ತಂಡವು ಜಿಲ್ಲೆಯ ಪ್ರತಿ ಮನೆ ಮನೆಯ ಭೇಟಿಯ ಮೂಲಕ 4,05,388 ಮಕ್ಕಳಿಗೆ ಜಂತುಹುಳು ನಿವಾರಕ ಆಲ್ಬಂಡೋಜೋಲ್ ಮಾತ್ರೆಗಳನ್ನು 1 ರಿಂದ 16 ವರ್ಷ ವಯಸ್ಸಿನ ಮಕ್ಕಳಿಗೆ ಮನೆಗಳಲ್ಲಿಯೇ ವಿತರಿಸಲಿದ್ದು, ಮಗುವಿಗೆ ಯಾವುದೇ ಕಾರಣಕ್ಕೂ ನುಂಗಿಸದೇ ಮಾತ್ರೆಗಳನ್ನು ಚೀಪಿಸಲು ತಿಳಿಸಬೇಕು ಎಂದು ವಿನಂತಿಸಿದರು.

ಜಂತು ನಿವಾರಣೆಯಿಂದ ಮಕ್ಕಳಿಗೆ ಅನುಕೂಲಗಳು:
ಪರೋಕ್ಷ ಅನುಕೂಲಗಳು: ರಕ್ತ ಹೀನತೆ ನಿಯಂತ್ರಣ, ಪೌಷ್ಠಿಕತೆಯಲ್ಲಿ ಸುಧಾರಣೆ. ಅಪರೋಕ್ಷ ಅನುಕೂಲಗಳು: ರೋಗ ನಿರೋಧಕ ಶಕ್ತಿಯ ಸುಧಾರಣೆ. ಏಕಾಗ್ರತೆ, ಓದಿನಲ್ಲಿ ಹೆಚ್ಚಿನ ಆಸಕ್ತಿ, ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿಯಲ್ಲಿ ಸುಧಾರಣೆ. ಕರ್ತವ್ಯ ನಿರ್ವಹಣೆಯಲ್ಲಿ ಕ್ಷಮತೆ, ಜೀವನ ನಿರ್ವಹಣೆಯಲ್ಲಿ ಸುಧಾರಣೆ. ಸಮುದಾಯದಲ್ಲಿ ಜಂತುಹುಳುವಿನ ಬಾದೆಯ ತೊಂದರೆಯನ್ನು ತಡೆಗಟ್ಟುವಲ್ಲಿ ಸಹಾಯಕ.

ಮಗು ಖಾಯಿಲೆ ಬಳಲದೇ ಇದ್ದರೂ ಜಂತು ನಿವಾರಕ ಮಾತ್ರೆಯನ್ನು ನುಂಗಿಸಿಲು ಕಾರಣವೆಂದರೆ?:
ಜಂತು ಹುಳುಗಳ ಬಾಧೆಯಿಂದ ಸಮುದಾಯದಲ್ಲಿ ಎಲ್ಲಾ ಮಕ್ಕಳನ್ನು ರಕ್ಷಣೆ ಮಾಡುವುದಕ್ಕಾಗಿ. ಕೆಲವು ಬಾರಿ ಮಕ್ಕಳಲ್ಲಿಯ ಜಂತುಹುಳುವಿನ ತೊಂದರೆಯ ಲಕ್ಷಣಗಳು ಕಾಣದಿರಬಹುದು. ಮಗುವಿನ ಭವಿಷ್ಯದ ಆರೋಗ್ಯ ಶೈಕ್ಷಣಿಕ ಮತ್ತು ಸರ್ವತೋಮುಖ ಅಭಿವೃದ್ದಿಗಾಗಿ. ಜಂತುಹುಳು ನಿವಾರಕ ಮಾತ್ರೆ ಮಕ್ಕಳು ಮತ್ತು ವಯಸ್ಕರಿಗೆ ಸುರಕ್ಷಿತ ಮತ್ತು ಪರಿಣಾಮಕಾರಿ. ಜಂತುಹುಳು ನಿವಾರಕ ಮಾತ್ರೆಯು ಮಗುವಿನ ದೈಹಿಕ ಮತ್ತು ಮಾನಸಿಕ ಆರೋಗ್ಯ ರಕ್ಷಣೆಗೆ ಸಹಕಾರಿ.

ಅಲ್ಬೆಂಡಾಜೋಲ್ ಮಾತ್ರೆಯ ಡೋಸೆಜ್ ವಿವರ:
1-2 ವರ್ಷ ವಯಸ್ಸಿನ ಮಕ್ಕಳಿಗೆ ಅರ್ಧಮಾತ್ರೆಯನ್ನು ತುಂಡರಿಸಿ ಎರಡು ಚಮಚಗಳಷ್ಟು ಪುಡಿಮಾಡಬೇಕು. ಮಾತ್ರೆಯನ್ನು ನೀಡಲು ಸಹಾಯವಾಗುವುದಕ್ಕೆ ಒಂದೆರಡು ಸುರಕ್ಷಿತ ನೀರಿನ ಹನಿ ಸೇರಿಸಬೇಕು. 2-3 ವರ್ಷ ವಯಸ್ಸಿನ ಮಕ್ಕಳಿಗೆ ಒಂದು ಪೂರ್ಣ ಮಾತ್ರೆಯನ್ನು ಎರಡು ಚಮಚಗಳಷ್ಟು ಪುಡಿ ಮಾಡಬೇಕು. ಮಾತ್ರೆಯನ್ನು ನೀಡಲು ಸಹಾಯವಾಗುವದಕ್ಕೆ ಒಂದೆರಡು ಸುರಕ್ಷಿತ ನೀರಿನ ಹನಿ ಸೇರಿಸಬೇಕು. 3-16 ವರ್ಷ ವಯಸ್ಸಿನ ಮಕ್ಕಳಿಗೆ ಒಂದು ಪೂರ್ಣ ಮಾತ್ರೆಯನ್ನು ನೀಡಬೇಕು. ಗಂಟಲಲ್ಲಿ ಸಿಲುಕಿಸಿಕೊಳ್ಳವುದನ್ನು ತಪ್ಪಿಸಲು ಜಂತು ನಿವಾರಕ ಮಾತ್ರೆಯನ್ನು ಯಾವಾಗಲೂ ಅಗೆಯಬೇಕು.

ಕಾರ್ಯಕ್ರಮದಲ್ಲಿ ಬ್ರೂಸ್‍ಪೇಟೆ ನಗರ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸುರೇಖಾ, ವೈದ್ಯಾಧಿಕಾರಿ ಡಾ.ಕರುಣಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಡಿಎನ್‍ಒ ಗಿರೀಶ್, ಆರ್.ಕೆ.ಎಸ್.ಕೆ ಸಲಹೆಗಾರ ಮನೋಹರ್ ಸೇರಿದಂತೆ ಸಿಬ್ಬಂದಿಗಳಾದ ಚೈತ್ರಾ, ಪ್ರಸನ್ನ ಜ್ಯೋತಿ, ಸುನೀತಾ, ಪಲ್ಲವಿ ನಾಯ್ಕ್, ಅರುಣ ಜ್ಯೋತಿ, ಎಸ್.ತುಳಸಿ, ಅಲೀಯಾ ಬೇಗಂ, ಜಾನ್ಹ್ ಅಬ್ರಹಾಂ, ಮರಿಸ್ವಾಮಿ, ಗಂಗಾಧರ, ಯಶೋಧಾ ಮಹಮ್ಮದ್ ಹಾಗೂ ಆಶಾ ಕಾರ್ಯಕರ್ತೆಯರು, ಆರೊಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here