ಆಗಸ್ಟ್ 6, ವಿಶ್ವದ ಚರಿತ್ರೆಯಲ್ಲೊಂದು ಕರಾಳ ದಿನ.!

0
680

ಆಗಸ್ಟ್ 6, 1945 ವಿಶ್ವದ ಚರಿತ್ರೆಯಲ್ಲೊಂದು ಕರಾಳ ದಿನ. ವಿಜ್ಞಾನಿಯ ಸಾಮರ್ಥ್ಯ ವಿನಾಶದ ಹಾದಿ ಹಿಡಿದ ದಿನ. ಯಾವನೋ ಒಬ್ಬ ಅಧಿಕಾರ ಶಾಹಿ ಯುದ್ಧ ಬೇಕೇ ಬೇಕು ಎಂದು ಪಟ್ಟು ಹಿಡಿದದ್ದಕ್ಕೆ ಒಂದು ದೇಶ ಮತ್ತು ಇಡೀ ಜನಾಂಗವೇ ಬೆಲೆ ತೆತ್ತ ದಿನ. ಮನುಷ್ಯನ ಕೈನಲ್ಲಿ ವಿನಾಶಕಾರಕವಾದ ಅಸ್ತ್ರ ಇದ್ದರೆ ಅದನ್ನು ಹೆಚ್ಚು ದಿನ ಪ್ರಯೋಗಿಸದೆ ಆತ ಸುಮ್ಮನಿರಲಾರ ಎಂಬುದು ದೃಢ ಪಟ್ಟ ದಿನ.
ಮಹಾಯುದ್ಧವನ್ನು ಮುಗಿಸುವ ಅಮೆರಿಕಾದ ಅಧ್ಯಕ್ಷ ಟ್ರೂಮನ್ನನ ಆಶಯ ಮತ್ತು ಮಿತ್ರರಾಷ್ಟ್ರಗಳ ಆಗ್ರಹವನ್ನು ಅಂದಿನ ಜಪಾನಿನ ಪ್ರಧಾನಿ ಕಂಟಾಕೋ ಸುಜೂಕಿ ನಿರ್ಲಕ್ಷಿಸಿಬಿಟ್ಟ. ಹಾಗಾಗಿ ಅಮೆರಿಕಾ ತನ್ನ ಬಾಂಬ್ ದಾಳಿಗಾಗಿ ಒಂದು ಲಕ್ಷಕ್ಕೂ ಹೆಚ್ಚು ಸೈನಿಕರನ್ನು ಹೊಂದಿದ್ದು, ಅಗಾಧ ಮದ್ದು ಗುಂಡುಗಳನ್ನು ಶೇಖರಿಸಿದ್ದ ಜಪಾನಿನ ಮಿಲಿಟರಿ ಕೇಂದ್ರವಾದ ಹಿರೋಷಿಮಾ ನಗರವನ್ನು ಆಯ್ಕೆ ಮಾಡಿಕೊಂಡಿತು.
ಆಗಸ್ಟ್ 6, 1945ರ ಬೆಳಿಗ್ಗೆ 8.16ರ ಸಮಯದಲ್ಲಿ ಭೀಕರ ಶಬ್ದದೊಂದಿಗೆ 20,000 ಟನ್ನಿಗೂ ಅಧಿಕ ಶಕ್ತಿಯೊಂದಿಗೆ ಸ್ಪೋಟ ವಿಚ್ಛಿದ್ರಕಾರಕ ರೂಪದಲ್ಲಿ ಸಂಭವಿಸಿತು. ಕ್ಷಣಾರ್ಧದಲ್ಲೇ ರಾಕ್ಷಸ ಗಾತ್ರದ ಹಣಬೆಯಾಕಾರದ 40,000 ಅಡಿ ಎತ್ತರದ ಮೋಡ ಸೃಷ್ಟಿಯಾಗಿ ಹಿರೋಷಿಮಾದ ಸುಮಾರು 10 ಚದರ ಮೈಲಿ ಸುತ್ತಳತೆಯ ಪ್ರದೇಶದಲ್ಲಿದ್ದ ಯಾವ ಮನೆಯೂ ಉಳಿಯಲಿಲ್ಲ. 68,000 ಮಂದಿ ಒಮ್ಮೆಗೆ ಬೆಂದು ಹೋದರು. ಅಗಾಧ ಉಷ್ಣತೆಯ ಪರಿಣಾಮದಿಂದಾಗಿ ಕೆಲಕಾಲದಲ್ಲೇ ಕರಿ ನೀರಿನ ಮಳೆ ಹಿರೋಷಿಮಾದಲ್ಲಿ ಸುರಿಯಿತು.
ಈ ದಾಳಿಯ ನಂತರ ಟ್ರೂಮನ್ನನ ದಾಹಾಗ್ನಿಯೇನೂ ಹಿಂಗಲಿಲ್ಲ. ಹಿರೋಷಿಮಾ ಬೆಂಕಿಯ ಜೊತೆಯಲ್ಲಿನ ಆಂತರಿಕ ಬೇಗೆಯಲ್ಲಿ ಬೇಯುತ್ತಿದ್ದ ಜಪಾನ್ ಶರಣಾಗತಿ ಪ್ರಕಟಿಸಲಿಲ್ಲ ಎಂಬ ಕಾರಣಕ್ಕಾಗಿ ಅಮೆರಿಕ, ನಾಗಸಾಕಿ ಪಟ್ಟಣದ ಮೇಲೆ ಆಗಸ್ಟ್ 9ರಂದು ದಾಳಿ ನಡೆಸಿ ಮತ್ತೆ 60,000 ಜನರನ್ನು ಭಸ್ಮ ಮಾಡಿ ಹಾಕಿತು.
ಈ ಘಟನೆಗಳಲ್ಲಿ ಒಟ್ಟಾರೆಯಾಗಿ ಅಣು ವಿಕಿರಣಕ್ಕೆ ಸಿಕ್ಕಿ ತೊಂದರೆಗೊಳಪಟ್ಟವರು ಸುಮಾರು ಒಂದು ಲಕ್ಷ ನಲವತ್ತು ಸಾವಿರ ಜನಕ್ಕೂ ಹೆಚ್ಚು.
ಈ ಘಟನೆಯ ನಂತರದಲ್ಲಿ ಎರಡನೆಯ ಮಹಾಯುದ್ಧವೇನೋ ಮುಕ್ತಾಯವಾಯಿತು. ಆದರೆ ಮನುಷ್ಯ ಮತ್ತು ರಾಷ್ಟ್ರಗಳು ಇದರಿಂದ ಪಾಠವನ್ನೇನೂ ಕಲಿತಿಲ್ಲ. ಅಂದು ಬಾಂಬ್ ಹಾಕಿದ ಅಮೆರಿಕಾ, ನಾನು ನಿಮಗೆಲ್ಲಾ ಮಾನಿಟರ್. ನಾನು ಬಾಂಬ್ ಇಟ್ಕೋಬಹುದು. ನೀವೆಲ್ಲಾ ಜವಾಬ್ಧಾರಿ ಇರೋವ್ರಲ್ಲ, ನೀವು ಇಟ್ಕೋಬೇಡಿ ಅಂತ ಬಾಯಿ ಮಾತಲ್ಲಿ ಹೇಳ್ಕೊಂಡು ಕ್ಷುದ್ರವಾಗಿ ಬದುಕ್ತಾ, ಹಿಂದಿನ ಬಾಗಿಲಿನಿಂದ ತನ್ನ ಬಾಂಬ್ ತಂತ್ರಜ್ಞಾನವನ್ನು ಮಾರಿ ಕಾಸು ಮಾಡೋ ಹೀನ ಬುದ್ಧಿಯನ್ನು ಮುಂದುವರೆಸುತ್ತಲೇ ಇದೆ. ಜಪಾನ್ ಕೆಲವರ್ಷದ ಹಿಂದೆ ಸುನಾಮಿ ಸಂದರ್ಭದಲ್ಲಿ, ಸುನಾಮಿ ಕಷ್ಟ ತಡೆಯೋದಕ್ಕಿಂತ ಹೆಚ್ಚಿಗೆ ಅಣುವಿಕಿರಣ ಸೋರಿಕೆ ತಡೆಯೋಕೆ ತಿಪ್ಪರಲಾಗ ಹಾಕಿದ್ದು ಜಗಜ್ಜಾಹೀರಾಗಿದೆ. ಚಿಂದಿ ಚಿಂದಿಯ ರಾಷ್ಟ್ರವಾದರೂ ಸೋವಿಯತ್ ರಷ್ಯಾ ಇನ್ನೂ ತನ್ನ ಯುದ್ಧ ತಂತ್ರಜ್ಞಾನದ ಪೊಗರು ಬಿಟ್ಟಿಲ್ಲ. ಮಧ್ಯ ಪ್ರಾಚ್ಯ ದೇಶಗಳು ತಮಗೆ ಪ್ರಕೃತಿ ದಯಪಾಲಿಸಿರುವ ಶ್ರೀಮಂತಿಕೆಯಿದ್ದೂ ಯಾವುದೋ ಮಣ್ಣುಹಂಟೆಯ ದುರಾಸೆಯಲ್ಲಿ ತಮ್ಮ ಮೇಲೆ ತಾವೇ ಬಾಂಬ್ ಹಾಕಿಕೊಳ್ಳತೊಡಗಿವೆ. ಯಾರನ್ನೂ ನಂಬದ ಚೀಣಾ ತನಗೆ ಲಭ್ಯವಾದ ಶ್ರೀಮಂತಿಕೆಯನ್ನು ಒಳಿತಿಗಾಗಿ ಉಪಯೋಗಿಸಿಕೊಳ್ಳದೆ ಪುಟ್ಟ,ಪುಟ್ಟ ದೇಶಗಳಿಗೆ ಅಭಿವೃದ್ಧಿ ಮಾಡುವೆ ಎಂದು ವ್ಯಾಪಾರ ವಿಸ್ತರಿಸುತ್ತಾ, ತನಗೆ ಯಾರಾದರೂ ಪ್ರತಿಸ್ಪರ್ಧಿ ಹುಟ್ಟಿ ತನ್ನ ದೇಶಕ್ಕೆ ಪ್ರಜಾಪ್ರಭುತ್ವ ಬಂದುಬಿಟ್ರೆ ಎಂಬ ಭಯದಲ್ಲಿ ದಿನಾ ಹೊಸ ಹೊಸ ರೀತಿಯ ಕರೋನಾವನ್ನು ವಿಶ್ವಕ್ಕೆ ಬಿತ್ತುತ್ತಾ ಸಾಗಿದೆ. ಭಾರತ ಪಾಕಿಸ್ಥಾನ ದೇಶದ ಸರ್ಕಾರಗಳು ತನ್ನ ಜನರಿಗೆ ಕುಡಿಯೋ ನೀರು ಸರಿಯಾಗಿ ಸಿಗದಿದ್ರೂ ಪರಮಾಣು ಅಸ್ತ್ರ ಮಾಡೋ ಷೋಕಿ ಮಾತ್ರ ನಿಲ್ಲೋದೇ ಇಲ್ಲ.
ಈ ಹುಚ್ಚಾಟಕ್ಕೆ ಎಂದಾದರೂ ಕೊನೆ ಬರುತ್ತದೆಯೇ? “ವಿಶ್ವದ ಇತಿಹಾಸ ತುಂಬಿರೋದು ಎರಡೇ ಎರಡರಿಂದ. ಒಂದು ಯುದ್ಧದಿಂದ, ಮತ್ತೊಂದು ಯುದ್ಧದ ಸಿದ್ಧತೆಗಳಿಂದ”.
ಈ ಮಧ್ಯೆ ಈ ಸುಡುಬೂದಿಗಳಿಂದ ಮೈದಳೆದು ಮಹೋನ್ನತವಾಗಿ ಬದುಕನ್ನು ನಡೆಸಿ ತೋರಿರುವ ಜಪಾನಿನ ಸಾಮರ್ಥ್ಯ ಅಭಿನಂದನೀಯ ಕೂಡಾ. ಆದರೆ ವಿಶ್ವದಲ್ಲಿನ ಬಾಂಬ್ ಕರಾಳತೆಯ ನೆರಳು ಕರಗುವವರೆಗೆ ಎಲ್ಲವೂ ಕ್ಷಣಿಕ. ಅದು ಎಲ್ಲಾ ದೇಶಗಳೂ ತಮ್ಮ ಅಹಂ ಅನ್ನು ಬಿಸಾಕಿ ಒಮ್ಮೆಲೆ ಮಾಡಬೇಕಿರುವ ಅನಿವಾರ್ಯ ಕಾಯಕ.

ಕೃಪೆ:-ಕನ್ನಡ ಸಂಪದ

LEAVE A REPLY

Please enter your comment!
Please enter your name here