ಅಕ್ಷರ ದಾಸೋಹ ಕಾರ್ಮಿಕರ ರಾಜ್ಯಾದ್ಯಂತ ಪ್ರತಿಭಟನೆ

0
166

ಬಳ್ಳಾರಿ:ಆಗಸ್ಟ್:೨೬: ಎಐಯುಟಿಯುಸಿ ಕಾರ್ಮಿಕ ಸಂಘಟನೆಗೆ ಸಂಯೋಜನೆ ಗೊಂಡಿರುವ “ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘ” ಟನೆಯು ಇಂದು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದು ಬಳ್ಳಾರಿಯ ಡಿಸಿ ಕಛೇರಿಯ ಅವರಣದಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗು ಮಾನ್ಯ ಶಿಕ್ಷಣ ಸಚಿವರಿಗೆ ಮನವಿಪತ್ರ ಸಲ್ಲಿಸಲಾಯಿತು.

ಈ ಪ್ರತಿಭಟನೆಯಲ್ಲಿ ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಎ.ದೇವದಾಸ್, ಅಕ್ಷರ ದಾಸೋಹ ಕಾರ್ಮಿಕರ ಸಂಘಟನೆಕಾರರಾದ ಎಸ್.ಜಿ‌.ನಾಗರತ್ನ ಪ್ರತಿಭಟನೆಯ ಅಧ್ಯಕ್ಷತೆ ವಹಿಸಿದ್ದರು. ಎಐಯುಟಿಯುಸಿ ಜಿಲ್ಲಾ ಸಮಿತಿ ಸದಸ್ಯರಾದ ಸುರೇಶ್.ಜಿ ಹಾಗು ಕಾರ್ಮಿಕರಾದ ನಾಗರತ್ನ, ಲಕ್ಷ್ಮೀ, ಮಂಜುಳ, ಶಾರಧ ಮುಂತಾದವರು ಭಾಗವಹಿಸಿದ್ದರು.

*ಅಕ್ಷರ ದಾಸೋಹ ಕಾರ್ಮಿಕರಿಗೆ ಇಲ್ಲಿನ ವರೆಗೆ ಬಾಕಿ ಇರುವ ಗೌರವಧನವನ್ನು ಕೂಡಲೇ ಬಿಡುಗಡೆ ಮಾಡಿ.

*ಅಕ್ಷರ ದಾಸೋಹ ಕಾರ್ಮಿಕರು ಗೌರವಯುತ ಜೀವನ ನಡೆಸಲು ಯೋಗ್ಯವಾದ ಗೌರವ ಧನ ಹೆಚ್ಚಳ ನೀಡಿ.

*ಅಕ್ಷರ ದಾಸೋಹ ಕಾರ್ಮಿಕರಿಗೆ ಅಗತ್ಯ ಸಮವಸ್ತ್ರ ಆರೋಗ್ಯ ವಿಮೆ ಮತ್ತು ಗುರುತಿನ ಚೀಟಿಗಳನ್ನು ಒದಗಿಸಿ.
ಎಂಬ ಬೇಡಿಕೆಗಳನ್ನು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಯಿತು.

ಪ್ರತಿಭಟನೆ ಉದ್ದೇಶಿಸಿ ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಎ.ದೇವದಾಸ್ ಮಾತನಾಡುತ್ತಾ “ರಾಜ್ಯ ಸರ್ಕಾರವು ಅಕ್ಷರದಾಸೋಹ ಕಾರ್ಮಿಕರಿಗೆ ಲಾಕ್ಡೌನ್ ಅವಧಿಯಿಂದ ಹಿಡಿದು ಇಲ್ಲಿಯ ವರೆಗೆ ಅವರ ಗೌರವ ಧನವನ್ನು ಯಥಾರೀತಿಯಾಗಿ ಪಾವತಿಸಿರುವುದನ್ನು ನಮ್ಮ ಸಂಘಟನೆಗೆ ಸೇರಿದ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘ ವು ರಾಜ್ಯ ಸರ್ಕಾರವನ್ನು ಅಭಿನಂದಿಸುತ್ತದೆ ಇಂದು ರಾಜ್ಯಾದ್ಯಂತ ಅಕ್ಷರ ದಾಸೋಹ ಯೋಜನೆಯ ಅನುಷ್ಠಾನಕ್ಕೆ ನಿರಂತರವಾಗಿ ದುಡಿಯುತ್ತಿರುವ ಅಕ್ಷರ ದಾಸೋಹ ಕಾರ್ಮಿಕರಿಗೆ ಸಂದ ಗೌರವವಾಗಿದೆ.

ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಕೊಟ್ಟರೂ, ಶಾಲಾ ಆವರಣದಲ್ಲಿ ಸ್ವಚ್ಚಗೊಳಿಸುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದಿಗೂ ಶಾಲೆಗಳು ಸ್ವಚ್ಛವಾಗಿವೆ ಎಂದರೆ ಅದು ಅಕ್ಷರ ದಾಸೋಹ ಕಾರ್ಮಿಕರ ಶ್ರಮವಾಗಿದೆ. ಈ ಯೋಜನೆಯ ಅನುಷ್ಠಾನದಲ್ಲಿನ ಮಕ್ಕಳಿಗೆ ಊಟ ಹಾಲು ನೀಡುವ ಕೆಲಸಗಳಷ್ಟೇ ಅಲ್ಲದೇ ಇಡೀ ಶಾಲಾ ಆವರಣದ ಸ್ವಚ್ಛತೆ, ಕೈತೋಟದ ಕೆಲಸ ಇತ್ಯಾದಿ ನಿರ್ವಾಹಣೆ ಕೆಲಸಗಳನ್ನು ಕೂಡ ಮಾಡುತ್ತಾ ಇಡೀ ಶಾಲೆಯನ್ನೇ ತಮ್ಮ ಮನೆಯಂತೆ ಪ್ರೀತಿಸುವ ಮಹಾ ತಾಯಂದಿರಾಗಿದ್ದಾರೆ.
ಇದೀಗ ತರಗತಿಗಳು ಶುರುವಾಗಿದ್ದರೂ ಶಾಲೆಗಳು ತೆರೆದಿವೆ. ಇವರುಗಳು ಶಾಲೆಗಳಿಗೆ ಬರಲೇಬೇಕೆಂಬ ಆದೇಶ ಇರದಿದ್ದರೂ ದಿನನಿತ್ಯ ಅವರುಗಳು ಶಾಲೆಗಳಿಗೆ ಹೋಗಿ ಬರುತ್ತಿದ್ದಾರೆ. ಆದರೆ ಇಲ್ಲಿಯವರೆಗೂ ಗೌರವ ಧನ ಬಂದಿಲ್ಲ. ಈ ಪಿಡಿಗಾಸಿನ ಗೌರವ ಧನವನ್ನು ನಂಬಿರುವ ಈ ಕುಟುಂಬಗಳು ಇದೀಗ ಬೀದಿಗೆ ಬಂದಿವೆ
ಎಂದರು.

ಅಕ್ಷರ ದಾಸೋಹ ಜಿಲ್ಲಾ ಮುಖಂಡರಾದ ಎಸ್.ಜಿ.ನಾಗರತ್ನ ರವರು ಮಾತನಾಡುತ್ತಾ ಇವರುಗಳು ಬಹುಮಟ್ಟಿಗೆ ಒಂಟಿ ಹೆಣ್ಣು ಮಕ್ಕಳು, ವಿಧವೆಯರು, ಇಡೀ ಕುಟುಂಬದ ಜವಾಬ್ದಾರಿ ಹೊತ್ತಿರುವರೇ ಆಗಿದ್ದಾರೆ. ಇಂದಿನ ಬೆಲೆಏರಿಕೆ ದಿನಗಳಲ್ಲಿ ಇವರುಗಳ ಕಷ್ಟಗಳು ಮಾತ್ರ ಬೆಟ್ಟದಷ್ಟು ಬೆಳೆಯುತ್ತಲೇ ಇವೆ. ಹಳ್ಳಿಗಾಡಿನಲ್ಲಿ ಈ ಸಮಸ್ಯೆಗಳು ಒಂದು ರೀತಿಯಾದರೆ, ಪಟ್ಟಣಗಳಲ್ಲಿ ಇವರ ಕಷ್ಟ ಹೇಳತೀರದು. ಇವರಿಗೆ ಸಿಗುವ ವೇತನ ಪುಡಿಗಾಸಿನಂತಿದೆ. ಈ ವೇತನ ಯಾವುದಕ್ಕೂ ಸಾಕಾಗುವುದಿಲ್ಲ. ಸರ್ಕಾರವು ಕನಿಷ್ಟ ಅನುಕೂಲಗಳನ್ನು ಮಾಡಿಕೊಡಬೇಕೆಂದು ಹಾಗು ಈ ಬೇಡಿಕೆಗಳನ್ನು ಈಡೇರಿಸಬೇಕೆಂದು ರಾಜ್ಯವ್ಯಾಪಿ ಪ್ರತಿಭಟಿಸಿ ಆಗ್ರಹಿಸಲಾಗುತ್ತಿದೆ ಎಂದರು.

ವರದಿ:-ಮಹೇಶ್

LEAVE A REPLY

Please enter your comment!
Please enter your name here