ಕೌಶಲ್ಯ ಉದ್ಯಮಶೀಲತೆ ಅಭಿವೃದ್ಧಿಗೆ ಸಿಡಾಕ್ ಉತ್ತಮ ವೇದಿಕೆ -ಡಾ.ವೀರಣ್ಣ ಹವಾಲ್ದಾರ್

0
115

ಧಾರವಾಡ ನ.03: ಸ್ವಯಂಉದ್ಯೋಗ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಯುವಜನರಲ್ಲಿ ಕೌಶಲ್ಯ, ಉದ್ಯಮಶೀಲತೆ ಅಭಿವೃದ್ಧಿಪಡಿಸಿ ಭವಿಷ್ಯ ರೂಪಿಸಲು ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್) ಉತ್ತಮ ವೇದಿಕೆಯಾಗಿದೆ. ಸಿಡಾಕ್ ತರಬೇತಿಗಳನ್ನು ಯುವಜನರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಂಸ್ಥೆಯ ನಿರ್ದೇಶಕ ಡಾ.ವೀರಣ್ಣ ಹವಾಲ್ದಾರ್ ಹೇಳಿದರು.

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಸಹಯೋಗದಲ್ಲಿ ಮಾಳಮಡ್ಡಿಯ ಲಿಂಗರಾಜ ಪ್ರೆಸ್ ಆವರಣದ ಭವಾನಿ ನೃತ್ಯ ಶಾಲೆಯಲ್ಲಿ ಏರ್ಪಡಿಸಿರುವ 30 ದಿನಗಳ ಮೊಬೈಲ್ ಹ್ಯಾಂಡ್‍ಸೆಟ್ ರಿಪೇರಿ ಮತ್ತು ಸೇವಾ ಕೌಶಲ್ಯ ಆಧಾರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೋವಿಡ್ ನಿಯಂತ್ರಣದ ಮುನ್ನೇಚ್ಚರಿಕೆಯೊಂದಿಗೆ ಜೀವ ಮತ್ತು ಜೀವನ ಎರಡೂ ಮುಖ್ಯವಾಗಿರುವುದರಿಂದ ಸರ್ಕಾರದ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ಸಿಡಾಕ್ ಸಂಸ್ಥೆ ಕಳೆದ ಎರಡು ತಿಂಗಳಿನಿಂದ ಪುನ: ತನ್ನ ತರಬೇತಿಗಳನ್ನು ಪ್ರಾರಂಭಿಸಿದೆ. ಸಂಪನ್ಮೂಲ ವ್ಯಕ್ತಿಗಳ ಮೂಲಕ ವೈವಿಧ್ಯಮಯ ವೃತ್ತಿ ಕೌಶಲ್ಯ ಅಭಿವೃದ್ಧಿ ತರಬೇತಿಗಳನ್ನು ಆಯೋಜಿಸುತ್ತಿದೆ. ತರಬೇತಿ ನಂತರ ಸ್ವಯಂ ಉದ್ಯೋಗ ಕೈಗೊಳ್ಳಲು ಬ್ಯಾಂಕುಗಳ ಮೂಲಕ ಆರ್ಥಿಕ ನೆರವು, ಸಾಲ ಸೌಲಭ್ಯಗಳನ್ನು ಕಲ್ಪಿಸಲು ಸಹಕರಿಸುತ್ತದೆ ಎಂದರು.

ಸ್ಟೇಟ್‍ಬ್ಯಾಂಕ್ ಆಫ್ ಇಂಡಿಯಾ ವಲಯ ಕಚೇರಿಯ ಪ್ರಾದೇಶಿಕ ವ್ಯವಸ್ಥಾಪಕ ಜೆ.ಸಿ. ಚಂದ್ರ ಮಾತನಾಡಿ, ಇಂದು ನಮ್ಮ ದೇಶ ಅಷ್ಟೇ ಅಲ್ಲ ಜಗತ್ತಿನಾದ್ಯಂತ ಜನಸಂಖ್ಯೆಗಿಂತಲೂ ಅಧಿಕ ಸಂಖ್ಯೆಯಲ್ಲಿ ಮೊಬೈಲ್ ಹ್ಯಾಂಡ್‍ಸೆಟ್‍ಗಳಿವೆ. ಮೊಬೈಲ್ ತಂತ್ರಜ್ಞಾನ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಬದಲಾವಣೆಗಳನ್ನು ನಾವೆಲ್ಲ ಅರಿಯಬೇಕು. ಉತ್ತಮ ಸೇವೆ, ರಿಪೇರಿ, ಗ್ರಾಹಕರ ವಿಶ್ವಾಸಾರ್ಹತೆ, ನಗುಮೊಗದಿಂದ ವ್ಯವಹಾರ ಕೈಗೊಳ್ಳುವ ಜಾಣ್ಮೆ ಬೆಳೆಸಿಕೊಳ್ಳಬೇಕು ಎಂದರು.

ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಡಾ: ಚಂದ್ರಪ್ಪ ಮಾತನಾಡಿ, ಪ್ರಸ್ತುತ ಜಿಡಿಪಿಗೆ ಸೇವಾ ವಲಯದ ಕೊಡುಗೆ ಅಧಿಕವಾಗಿದೆ. ಯುವಜನರು ಸೇವಾ ವಲಯದಲ್ಲಿ ಇರುವ ಅವಕಾಶಗಳನ್ನು ಗುರುತಿಸಿ ವೃತ್ತಿ ಕೌಶಲ್ಯ ಬೆಳೆಸಿಕೊಳ್ಳಬೇಕು. ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಹಲವು ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿದೆ. ಅವುಗಳನ್ನು ಸದುಪಯೋಗ ಮಾಡಿಕೊಳ್ಳಲು ಕರೆ ನೀಡಿದರು.

ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ, ಸಿಡಾಕ್ ಜಂಟಿ ನಿರ್ದೇಶಕ ಸಿ.ಎಚ್. ಅಂಗಡಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಮಹೇಂದ್ರ ಸಿಂಗ್, ರೋಹಿಣಿ ಘಂಟಿ, ರಂಜನಾ ಪೇಟೆ, ಚಂದ್ರಶೇಖರ್ ರಾಹುತರ್, ಮೌನೇಶ್ ಬಡಿಗೇರ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here