ಜಿಲ್ಲಾ ಪ್ರಗತಿ ಪರಿಶೀಲನೆ ಸಭೆ ಕೃಷಿ ಸಮ್ಮಾನ್ ಯೋಜನೆಯಡಿ ಉತ್ತಮ ಸಾಧನೆ : ಬಿ.ಎ.ಬಸವರಾಜ

0
73

ದಾವಣಗೆರೆ,ಜಿಲ್ಲೆಯಲ್ಲಿ ಕೃಷಿ ಸಮ್ಮಾನ್ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಯಿಂದ ರೂ.219.47 ಕೋಟಿ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗಿದ್ದು, ಉತ್ತಮ ಪ್ರಗತಿ ಸಾಧಿಸಲಾಗಿದೆ ಎಂದು ನಗರಾಭಿವೃದ್ದಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ ಹೇಳಿದರು.
ಬುಧವಾರ ಜಿಲ್ಲಾಡಳಿತ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರ ಅವರು ಜಿಲ್ಲೆಯಲ್ಲಿ ಕೃಷಿ ಸಮ್ಮಾನ್ ಯೋಜನೆಯಡಿ ಉತ್ತಮ ಪ್ರಗತಿ ಸಾಧಿಸಲಾಗಿದೆ. ಜೊತೆಗೆ ಕೋವಿಡ್‍ನಿಂದ ಕಳೆದ ಬಾರಿ ಲಾಕ್‍ಡೌನ್‍ನಿಂದ ಹೂ-ಹಣ್ಣು ಬೆಳೆ ಹಾನಿ ಅನುಭವಿಸಿದ ರೈತರಿಗೆ ರೂ.5.10 ಕೋಟಿ ಪರಿಹಾರ ವಿತರಿಸಿ ಅನುಕೂಲ ಮಾಡಿಕೊಡಲಾಗಿದ್ದು, ಈ ಯೋಜನೆಗಳ ಉಪಯೋಗ ಪಡೆದ ಕೆಲವು ರೈತರೊಂದಿಗೆ ದೂರವಾಣಿ ಮುಖಾಂತರ ತಾವು ಖುದ್ದಾಗಿ ಮಾತನಾಡಿ, ವಿಚಾರಿಸುತ್ತೇನೆ ಎಂದು ಸಭೆಯಲ್ಲಿ ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮಾತನಾಡಿ, ಜಿಲ್ಲೆಯಲ್ಲಿ 2020-21 ನೇ ಸಾಲಿನ ಏ.19 ರವರೆಗೆ ಸರಾಸರಿ ಮಳೆ 27 ಮಿ.ಮೀ ವಾಡಿಕೆಗೆ 67 ಮಿ.ಮೀ ವಾಸ್ತವಿಕ ಮಳೆಯಾಗಿದ್ದು, ಒಟ್ಟಾರೆ ಶೇ. 150 ರಷ್ಟು ಮಳೆಯಾಗಿದೆ. ಬೇಸಿಗೆ ಹಂಗಾಮಿನಲ್ಲಿ ಒಟ್ಟು 55579 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಗೆ ಹಮ್ಮಿಕೊಂಡಿದ್ದು, ಇದುವರೆಗೂ 54528 ಹೆಕ್ಟೇರ್ ಪ್ರದೇಶದಲ್ಲಿ ಒಟ್ಟು ಶೇ.99 ಬಿತ್ತನೆಯಾಗಿದೆ.
ಮುಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗಳ ಹಾಗೂ ವಿವಿಧ ತಳಿಗಳ 40463 ಕ್ವಿಂಟಾಲ್ ಬಿತ್ತನೆ ಬೀಜಗಳ ಬೇಡಿಕೆ ಇದ್ದು, 20 ರೈತ ಸಂಪರ್ಕ ಕೇಂದ್ರಗಳು ಹಾಗೂ 36 ಹೆಚ್ಚುವರಿ ಬೀಜ ವಿತರಣಾ ಕೆಂದ್ರಗಳ ಮುಖಾಂತರ ರಿಯಾಯಿತಿ ದರದಲ್ಲಿ ವಿವಿಧ ಬೆಳೆಗಳ ಬಿತ್ತನೆ ಬೀಜಗಳ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ.
ಏಪ್ರಿಲ್ ತಿಂಗಳಲ್ಲಿ 13650 ಮೆ.ಟನ್ ವಿವಿಧ ರಸಗೊಬ್ಬರಗಳ ಬೇಡಿಕೆ ಇದ್ದು, ಕಾಪು ದಾಸ್ತಾನು ಸೇರಿ ಒಟ್ಟು 14470 ಮೆ.ಟನ್ ರಸಗೊಬ್ಬರಗಳ ದಾಸ್ತಾನು ಲಭ್ಯವಿದ್ದು, ಯಾವುದೇ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಕೊರತೆ ಇರುವುದಿಲ್ಲ.
219.47 ಕೋಟಿ ರೈತರ ಖಾತೆಗೆ : ಪ್ರಧಾನ್ ಮಂತ್ರಿ ಕೃಷಿ ಸಮ್ಮಾನ್ ನಿಧಿ ಯೋಜನೆಯಡಿ ಕೇಂದ್ರದ ರೂ.164.76 ಕೋಟಿ ಹಾಗೂ ರಾಜ್ಯದ ರೂ. 54.71 ಕೋಟಿ ಸೇರಿ ಒಟ್ಟು 219.47 ಕೋಟಿ ರೂಗಳನ್ನು 1,56,000 ರೈತರ ಖಾತೆಗೆ ನೇರವಾಗಿ ಜಮಾ ಆಗಿರುತ್ತದೆ.
ಬೆಳೆ ಸಮೀಕ್ಷೆ ಯೋಜನೆಯಲ್ಲಿ ಬೇಸಿಗೆ ಹಂಗಾಮಿಗೆ ಒಟ್ಟು 366443 ಪ್ಲಾಟ್‍ಗಳ ಸರ್ವೇ ಕಾರ್ಯ ಪೂರ್ಣಗೊಳಿಸಲಾಗಿದ್ದು, ಶೇ. 91 ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಲಕ್ಷ್ಮೀಕಾಂತ ಬೊಮ್ಮನ್ನಾರ್ ಮಾತನಾಡಿ, ಕಳೆದ ಸಾಲಿನಲ್ಲಿ ಲಾಕ್‍ಡೌನ್ ವೇಳೆ ನಷ್ಟಕ್ಕೊಳಗಾದ ಹೂವು ಮತ್ತು ಹಣ್ಣು ಬೆಳೆಗಾರರಿಗೆ ಒಟ್ಟು ರೂ.5.10 ಕೋಟಿ ಪರಿಹಾರ ವಿತರಿಸಲಾಗಿದೆ.
ರಾಜ್ಯದಲ್ಲಿ ನಂ.1 ಸ್ಥಾನ : ನರೇಗಾ ಯೋಜನೆಯಡಿ ತೋಟಗಾರಿಕೆ ಬೆಳೆಗಳಾದ ಬಾಳೆ ನುಗ್ಗೆ ಗುಲಾಬಿ ತೆಂಗು , ಡ್ರ್ಯಾಗನ್ ಫ್ರೂಟ್ ಪಪ್ಪಾಯ, ಎಲೆಬಳ್ಳಿ ಬೆಳೆಯಲು ಅನುಕೂಲವಾಗುವಂತೆ ಜಿಲ್ಲೆಗೆ ಒಟ್ಟು 12.40 ಲಕ್ಷ ಮಾನವ ದಿನಗಳನ್ನು ನೀಡಲಾಗಿದ್ದು ರೈತರಿಗೆ ಒಟ್ಟು ರೂ.32 ಪಾವತಿಸಲಾಗಿದೆ. ಇದರಲ್ಲಿ ಅಡಿಕೆ ಬೆಳೆಯುವ ತಾಲ್ಲೂಕುಗಳಾದ ಚನ್ನಗಿರಿ ಮತ್ತು ಹೊನ್ನಾಳಿಯಲ್ಲಿ 8.90 ಲಕ್ಷ ಮಾನವ ದಿನಗಳನ್ನು ನೀಡಲಾಗಿ ರೂ.24 ಕೋಟಿ ರೈತರಿಗೆ ಪಾವತಿಸಲಾಗಿದ್ದು ರಾಜ್ಯದಲ್ಲೇ ನಂ. 1 ಸ್ಥಾನ ನಮ್ಮ ಜಿಲ್ಲೆ ಪಡೆದುಕೊಂಡಿದೆ ಎಂದರು.
ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಅಡಿಕೆ, ಕಾಳುಮೆಣಸು ಮತ್ತು ದಾಳಿಂಬೆ ಬೆಳೆಗೆ ಜಿಲ್ಲೆಯಲ್ಲಿ 6563 ಜನ ನೋಂದಣಿ ಮಾಡಿಸಿಕೊಂಡಿದ್ದು ರೂ 3.46 ಕೋಟಿ ಪ್ರೀಮಿಯಂ ಪಾವತಿಸಿದ್ದ 6533 ರೈತರಿಗೆ ರೂ. 12.58 ಕೋಟಿ ವಿಮೆ ಸೌಲಭ್ಯ ದೊರೆತಿದೆ ಎಂದು ಮಾಹಿತಿ ನೀಡಿದರು.
ಸಂಸದರಾದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಜಿಲ್ಲೆಯ ಹರಿಹರ, ದಾವಣಗೆರೆ ಸೇರಿದಂತೆ ಜಿಲ್ಲೆಯಾದ್ಯಂತ ಅಡಿಕೆ ಬೆಳೆಯುತ್ತಿದ್ದು ನರೇಗಾ ಯೋಜನೆಯನ್ನು ಜಿಲ್ಲಾದ್ಯಂತ ಅಡಿಕೆ ಬೆಳೆಗಾರರಿಗೆ ವಿಸ್ತರಿಸಲು ಕ್ರಮ ಜರುಗಿಸಬೇಕೆಂದರು.
ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಭಾಸ್ಕರ್‍ನಾಯ್ಕ್ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ ಮೇವಿನ ಕೊರತೆ ಇಲ್ಲ. ಇನ್ನೂ 35 ವಾರಗಳಿಗೆ ಆಗುವಷ್ಟು ಮೇವು ದಾಸ್ತಾನು ರೈತರಲ್ಲಿದೆ. ಔಷಧಿ, ಲಸಿಕೆ ಕೊರತೆಯೂ ಇಲ್ಲ. ಕೆಲವು ದಿನಗಳ ಹಿಂದೆ ಕೊಂಡಜ್ಜಿ ಬಳಿ ಕೋಳಿ ಜ್ವರ ಕಾಣಿಸಿಕೊಂಡಿದೆ ಎಂಬ ಸುದ್ದಿ ಪ್ರಕಟವಾಗಿದ್ದು, ಅಲ್ಲಿಗೆ ತಜ್ಞರ ತಂಡದೊಂದಿಗೆ ತೆರಳಿ ಪರಿಶೀಲಿಸಲಾಗಿ ಅಲ್ಲಿ ಯಾವುದೇ ಕೋಳಿ ಜ್ವರ ಇಲ್ಲ ಎಂಬುದು ದೃಢವಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಜಿ.ಪಂ ಉಪ ಕಾರ್ಯದರ್ಶಿ ಆನಂದ್ ಮಾತನಾಡಿ, ನರೇಗಾ ಯೋಜನೆಯಡಿ ಜಿಲ್ಲೆಗೆ ಕಳೆದ ಸಾಲಿನಲ್ಲಿ 40 ಲಕ್ಷ ಮಾನವ ದಿನಗಳ ಗುರಿ ನೀಡಲಾಗಿದ್ದು, 34.10 ಲಕ್ಷ ಮಾನವ ದಿನಗಳನ್ನು ಪೂರೈಸಿ ಶೇ.85 ಪ್ರಗತಿ ಸಾಧಿಸಲಾಗಿದ್ದು ಪ್ರಸಕ್ತ ಸಾಲಿಗೆ 31 ಲಕ್ಷ ಮಾನವ ದಿನಗಳನ್ನು ನೀಡಲಾಗಿದೆ. ಈಗಾಗಲೇ 1.3 ಲಕ್ಷ ಮಾನವ ದಿನಗಳ ಗುರಿ ಸಾಧಿಸಲಾಗಿದೆ. ಜಲಶಕ್ತಿ ಅಭಿಯಾನದಡಿ ಏಪ್ರಿಲ್, ಮೇ ಮತ್ತು ಜೂನ್‍ನಲ್ಲಿ ಜಿಲ್ಲೆಯಲ್ಲಿ ನೀರಿನ ಮೂಲ ಉಳಿಸುವ ಮತ್ತು ಮರುಪೂರಣಗೊಳಿಸುವ ಸಂಬಂಧ 642 ಕಾಮಗಾರಿಗಳ ಕ್ರಿಯಾಯೋಜನೆ ರೂಪಿಸಿ ಈ ಪೈಕಿ 240 ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಕುಡಿಯುವ ನೀರು ಸರಬರಾಜು ಇಲಾಖೆಯ ಕಾರ್ಯಪಾಲಕ ಅಭಿಯಂತರ ನಾಗಪ್ಪ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ ಎಲ್ಲೂ ಕುಡಿಯುವ ನೀರಿನ ಕೊರತೆ ಇಲ್ಲ. ಆದರೂ ಸಮಸ್ಯೆ ಬರುಬಹುದಾದ ಸಮಸ್ಯಾತ್ಮಕ 43 ಗ್ರಾಮಗಳನ್ನು ಗುರುತಿಸಿ 47 ಖಾಸಗಿ ಕೊಳವೆ ಬಾವಿ ಮೂಲಕ ನೀರು ಪೂರೈಸುವ ಬಗ್ಗೆ ಕಂಟಿಂಜೆನ್ಸಿ ಪ್ಲಾನ್ ಮಾಡಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.
ಉಸ್ತುವಾರಿ ಸಚಿವರು ಪ್ರತಿಕ್ರಿಯಿಸಿ, ಕೃಷಿ ಸಮ್ಮಾನ್ ಯೋಜನೆ ಮತ್ತು ಹೂ-ಬೆಳೆ ಪರಿಹಾರ ಪಡೆದ ರೈತರ ಜೊತೆ ದೂರವಾಣಿ ಮೂಲಕ ಮಾತನಾಡುತ್ತೇನೆ ಎಂದ ಅವರು ಕುಡಿಯುವ ನೀರಿಗೆ ಯಾವುದೇ ತೊಂದರೆ ಆಗದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಹಾಗೂ ಪೂರಕ ವ್ಯವಸ್ಥೆ ಮಾಡಿಕೊಳ್ಳಬೇಕು. ಜಗಳೂರು ತಾಲ್ಲೂಕಿನಲ್ಲಿ ಸ್ಥಳೀಯ ಶಾಸಕರು ಹೇಳಿದಂತೆ ಬೋರ್ ಕೊರೆಸಬೇಕು. ಮುಂದಿನ ಬಾರಿ ನಾನು ಭೇಟಿ ನೀಡಿ ವೀಕ್ಷಿಸುತ್ತೇನೆ ಎಂದರು.
ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಹಳ್ಳಿಗಳಲ್ಲಿ ನಿರ್ಮಿಸಿರುವ ಚರಂಡಿಗಳಲ್ಲಿ ಕಸ, ಕಟ್ಟಿಗೆಗಳನ್ನು ತುಂಬಲಾಗುತ್ತಿದೆ. ಸಂಬಂಧಿಸಿದ ಗ್ರಾಮಗಳ ಪಿಡಿಓ ಮತ್ತು ಕಾರ್ಯದರ್ಶಿಗಳು ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದರು. ಸಚಿವರು ಪ್ರತಿಕ್ರಿಯಿಸಿ, ಚರಂಡಿಗಳಿಗೆ ಸ್ಲಾಬ್ ಹಾಕಿಸಲು ಕ್ರಮ ಕೈಗೊಳ್ಳಬೇಕೆಂದರು.
ಸಭೆಯಲ್ಲಿ ಶಾಸಕರುಗಳಾದ ಎಸ್.ಎ. ರವೀಂದ್ರನಾಥ್, ಎಸ್.ವಿ. ರಾಮಚಂದ್ರಪ್ಪ, ಜಿ.ಪಂ. ಅಧ್ಯಕ್ಷೆ ಶಾಂತಕುಮಾರಿ, ಮಹಾನಗರಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್, ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ
ಡಾ. ಮೀನಾಕ್ಷಿ, ಜಿಲ್ಲಾಸ್ಪತ್ರೆ ಜಿಲ್ಲಾ ಸರ್ಜನ್ ಡಾ. ಜಯಪ್ರಕಾಶ್, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ತಹಶೀಲ್ದಾರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here