ಜಲಜೀವನ್ ಮಿಷನ್ ಯೋಜನೆ ಜಿಲ್ಲೆಯಲ್ಲಿ ಪರಿಣಾಮಕಾರಿ ಅನುಷ್ಠಾನ
-ಜಿಪಂ ಸಿಇಓ ಡಾ.ಸುರೇಶ ಇಟ್ನಾಳ

0
104

ಧಾರವಾಡ : ಏ.11: ಜಲ ಜೀವನ ಮಿಷನ್ ಯೋಜನೆಯಡಿ ಮನೆ ಮನೆಗೆ ಕುಡಿಯುವ ನೀರಿನ ನಳದ ಸಂಪರ್ಕ ಕಲ್ಪಿಸುವ ಕಾರ್ಯ ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು.ಜಿಲ್ಲೆಯ 103 ಜನವಸತಿಗಳಲ್ಲಿ ಈಗಾಗಲೇ ನೀರಿನ ಸಂಪರ್ಕ ಕಲ್ಪಿಸಲಾಗಿದೆ.ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಜಿಲ್ಲೆಯ 177 ಶಾಲಾ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಪದ್ದತಿ ಅಳವಡಿಸಲಾಗುತ್ತಿದೆ. ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ ಹೇಳಿದರು.

ರಾಯಾಪುರದ ಖಾಸಗಿ ಹೋಟೆಲವೊಂದರಲ್ಲಿ ಜಿಲ್ಲಾ ಪಂಚಾಯತ, ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಯೋಗದೊಂದಿಗೆ ಜಲ ಜೀವನ ಮಿಷನ್ ಯೋಜನೆ ಅನುಷ್ಠಾನ ಕುರಿತು ತಾಂತ್ರಿಕ ಸಿಬ್ಬಂದಿಗೆ ಹಮ್ಮಿಕೊಳ್ಳಲಾದ ಎರಡು ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಜಲ ಜೀವನ ಮಿಷನ್ ಯೋಜನೆಯ ಭೌತಿಕ ಅನುಷ್ಠಾನದ ಸಂದರ್ಭದಲ್ಲಿ ಎದುರಾಗಬಹುದಾದ ತಾಂತ್ರಿಕ ಸಮಸ್ಯೆಗಳಿಗೆ ನಿಖರ ಪರಿಹಾರ ಕಂಡುಕೊಳ್ಳಲು ತರಬೇತಿ ಕಾರ್ಯಾಗಾರ ಅಗತ್ಯವಾಗಿದೆ.

ಗ್ರಾಮಗಳ ಪ್ರತಿ ಮನೆಗೂ ನಳದ ಸಂಪರ್ಕ ಕಲ್ಪಿಸುವ ಜೊತೆಗೆ ಪ್ರತಿದಿನ ಕುಡಿಯುವ ನೀರು ಸರಬರಾಜು ಮಾಡುವುದು ಮುಖ್ಯವಾಗಿದೆ. ಜಲಮೂಲವನ್ನು ಸುಸ್ಥಿರವಾಗಿಟ್ಟು, ನೀರು ಮಲಿನವಾಗದಂತೆ ನೋಡಿಕೊಳ್ಳಬೇಕು. ತ್ಯಾಜ್ಯ ನೀರಿನ ನಿರ್ವಹಣೆ, ಮರುಬಳಕೆ, ನೀರು ಇಂಗಿಸಿ ಅಂತರ್ಜಲ ಮಟ್ಟ ಹೆಚ್ಚಿಸುವುದು ಇಂದಿನ ಅಗತ್ಯವಾಗಿದೆ. ನೀರಿನ ಭದ್ರತೆ,ಶುದ್ಧ ಕುಡಿಯುವ ನೀರಿನ ಪೂರೈಕೆ ನಮ್ಮೆಲ್ಲರ ಹೊಣೆಯಾಗಿದೆ.ನೀರಿನ ಗುಣಮಟ್ಟದ ಪರೀಕ್ಷಾ ಪ್ರಯೋಗಾಲಯ ಧಾರವಾಡದಲ್ಲಿದೆ. ಗ್ರಾಮೀಣ ನೀರು ನಿರ್ವಹಣಾ ಸಮಿತಿಗಳು ಪ್ರಯೋಗಾಲಯದ ಬಳಕೆ ಮಾಡಿಕೊಳ್ಳಲು ಉತ್ತೇಜಿಸಬೇಕು ಎಂದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಬೆಳಗಾವಿ ವೃತ್ತದ ಅಧೀಕ್ಷಕ ಅಭಿಯಂತರ ಸಿ.ಜಿ.ಹುಲಮನಿ ಮಾತನಾಡಿ, ಜಲ ಜೀವನ್ ಮಿಷನ್ ಯೋಜನೆಯಡಿ 2023 ರೊಳಗೆ ಎಲ್ಲಾ ಗ್ರಾಮೀಣ ಮನೆ ಮನೆಗೂ ನೀರು ತಲುಪಿಸುವ ಗುರಿ ಹೊಂದಿದೆ. ಎಲ್ಲರ ಸಹಕಾರ ಅಗತ್ಯವಾಗಿದೆ. ಗ್ರಾಮೀಣ ಜನರಿಗೆ ಅರಿವು ಮೂಡಿಸುವುದು ಮುಖ್ಯವಾಗಿದೆ ಎಂದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನಿವೃತ್ತ ಅಧೀಕ್ಷಕ ಇಂಜಿನಿಯರ್ ಚಂದ್ರಶೇಖರ ಮಸಗುಪ್ಪಿ, ಹಾಗೂ ವೆಂಕಟೇಶ ಅವರು ರಾಜ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಆರ್.ವಿ.ಮುನವಳ್ಳಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ.ಗಾಯಿತ್ರಿ ದೇಶಪಾಂಡೆ ನಾಡಗೀತೆ ಪ್ರಸ್ತುತ ಪಡಿಸಿದರು. ಶಿವಪುತ್ರ ಮಠಪತಿ ಸ್ವಾಗತಿಸಿದರು. ಜಿಲ್ಲಾ ಯೋಜನೆಯ ವ್ಯವಸ್ಥಾಪಕಿ ಮಂಜುಳಾ ಹೂಗಾರ ಕಾರ್ಯಕ್ರಮ ನಿರೂಪಿಸಿದರು. ಜಗದೀಶ ಪಾಟೀಲ ವಂದಿಸಿದರು.

ಗಮನ ಸೆಳೆದ ಪ್ರಾತ್ಯಕ್ಷಿಕೆ: ರಾಯಾಪುರದ ಖಾಸಗಿ ಹೋಟೆಲಿನಲ್ಲಿ ನಡೆಯುತ್ತಿರು ಜಲಜೀವನ್ ಮಿಷನ್ ಯೋಜನೆ ತಾಂತ್ರಿಕ ಸಿಬ್ಬಂದಿ ತರಬೇತಿ ಕಾರ್ಯಾಗಾರದಲ್ಲಿ ಆಯೋಜಿಸಿರುವ ಪ್ರಾತ್ಯಕ್ಷಿಕೆ ಗಮನ ಸೆಳೆಯುತ್ತಿದೆ. ಯೋಜನೆಯಡಿಯಲ್ಲಿ ಬಳಸಲಾಗುತ್ತಿರುವ ವಿವಿಧ ಮಾದರಿಯ ಹೆಚ್‍ಡಿಪಿಇ ಪೈಪುಗಳು, ಇಲೆಕ್ಟ್ರಿಕಲ್ ಕಾಲರ್, ಮೀಟರ್ ಬಾಕ್ಸ್, ಹರಿಯುವಿಕೆಯ ನಿಯಂತ್ರಕಗಳು, ಕಾಲರ್ ಬ್ಯಾಂಡಗಳು, ವಾಲ್ವಗಳು, ಹೀಗೆ ವಿವಿಧ ಬಗೆಯ ಯಂತ್ರೋಪಕರಣಳ ಬಳಕೆಯನ್ನು ವಿವರಿಸಲಾಗುತ್ತಿದೆ.

LEAVE A REPLY

Please enter your comment!
Please enter your name here