ಲೋಕೋಪಯೋಗಿ ಇಲಾಖೆಯ ಪ್ರಗತಿ ಪರೀಶೀಲನಾ ಸಭೆ,ನಿಗಧಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ.

0
269

ಗದಗ ಜ.11 : ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿ ಇರುವ ಇಂಜನೀಯರಗಳ ಖಾಯಂ ನೇಮಕಾತಿ ಮಾಡಿಕೊಳ್ಳುವವರೆಗೆ ತರಬೇತಿ (ಟ್ರೇನಿ) ಇಂಜನಿಯರಗಳನ್ನು 10 ತಿಂಗಳವರೆಗೆ ತೆಗೆದು ಕೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಹೇಳಿದರು.

ಗದಗ ನಗರದ ಪ್ರವಾಸಿ ಮಂದಿರದಲ್ಲಿ ಜರುಗಿದ ಜರುಗಿದ ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಇಲಾಖೆಯ ತಾಂತ್ರಿಕ ಸಿಬ್ಬಂದಿಗಳ ಕೊರತೆ ನೀಗಿಸಲು ತಾತ್ಕಾಲಿಕವಾಗಿ ಟ್ರೇನಿ ಇಂಜನಿಯರಗಳನ್ನು ತೆಗೆದುಕೊಂಡು ಕಾರ್ಯ ನಿರ್ವಹಿಸಲು ತಿಳಿಸಲಾಗಿದೆ ಎಂದರು.

ಲೋಕೊಪಯೋಗಿ ಇಲಾಖೆಯಿಂದ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳನ್ನು ನಿಗಧಿ ಪಡಿಸಲಾದ ಅವಧಿಯೊಳಗೆ ಪೂರ್ಣಗೊಳಿಸಬೇಕು. ಹಾಗೂ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳದ್ದು ಎಂದು ಸೂಚನೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರು ಮಾತನಾಡಿ, ಕಳೆದ 2 ವರ್ಷದಿಂದ ಪ್ರವಾಹದಿಂದ ಜಿಲ್ಲೆಯ ಹಲವಾರು ಕಟ್ಟಡ ಹಾಗೂ ರಸ್ತೆಗಳು ಹಾಳಾಗಿವೆ. ಇಲಾಖೆಯ ಅಧಿಕಾರಿಗಳು ಸೂಕ್ತವಾದ ಪ್ರಸ್ತಾವಣೆಗಳನ್ನು ಸರ್ಕಾರಕ್ಕೆ ಸಲ್ಲಿಸಿ ಅನುದಾನ ಪಡೆಯುವಲ್ಲಿ ನಿಧಾನಗತಿ ಮಾಡುತ್ತಿದ್ದಾರೆ ಎಂದು ಅಸಮದಾನ ವ್ಯಕ್ತಪಡಿಸಿದರು. ಇದಕ್ಕೆ ರೋಣ ಶಾಸಕ ಕಳಕಪ್ಪ ಬಂಡಿ ಅವರು ಧÀ್ವನಿಗೂಡಿಸಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸೂಚನೆ ನೀಡಬೇಕು ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು, ಅಧಿಕಾರಿಗಳ ಕಾರ್ಯವೈಖರಿ ಜನಪ್ರತಿನಿಧಿಗಳಿಗೆ ತೃಪ್ತಿ ತರಬೇಕು, ಈ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ನಿರ್ವಹಿಸಲು ತಿಳಸಿದರು. ಜಿಲ್ಲೆಯ ಸಚಿವರು ಹಾಗೂ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಮಾರ್ಗದರ್ಶನದಲ್ಲಿ ಸೂಕ್ತ ಕಾಮಗಾರಿ ಕೈಗೆತ್ತಿಕೊಂಡು ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ಸೂಚನೆ ನೀಡಿದರು.

ಪ್ರಸಕ್ತ ವರ್ಷದ ಆರ್ಥಿಕ ಹಾಗೂ ಭೌತಿಕ ಪ್ರಗತಿ ವರ್ಷಾಂತ್ಯದಲ್ಲಿ ಸಾಧಿಸಬೇಕು. ಇಲ್ಲವಾದಲ್ಲಿ ಅಧಿಕಾರಿಗಳು ಶಿಸ್ತುಕ್ರಮಕ್ಕೆ ಸೂಚಿಸಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಅಧಿಕಾರಿಗಳಿಗೆ ಎಚ್ಚರಿಸಿದರು.

ಲೋಕೋಪಯೋಗಿ ಇಲಾಖೆಯ ಧಾರವಾಡ ವೃತ್ತದ ಅಧೀಕ್ಷಕ ಅಭಿಯಂತರ ಶಿವಾನಂದ ನಾಯಕ ಅವರು ಸಭೆಗೆ ಮಾಹಿತಿ ನೀಡುತ್ತಾ, ಜಿಲ್ಲಾ ಮಟ್ಟದ ರಸ್ತೆ ಸುಧಾರಣೆಗೆ ಸಂಭಂಧ ಪಟ್ಟಂತೆ ಗದಗ ಜಿಲ್ಲೆಯಲ್ಲಿ 144.65 ಕೋಟಿ ರೂಪಾಯಿ ವೆಚ್ಚದಲ್ಲಿ 73 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. 72 ಕಾಮಗಾರಿಗಳಿಗೆ ಈಗಾಗಲೇ ಏಜೆನ್ಸಿ ನಿಯೋಜಿಸಲಾಗಿದೆ. ಹಾಗೂ ವಿಶೇಷ ಅಭಿವೃದ್ಧಿ ಯೋಜನೆಯಡಿ 5.19 ಕೋಟಿಯಲ್ಲಿ 5 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ.

ಎಸ್.ಡಿ.ಪಿ.ಯಲ್ಲಿನ ಎಸ್.ಸಿ.ಪಿ ಯೋಜನೆಯಡಿ 27.4 ಕೋಟಿ ರೂಪಾಯಿ ಅನುದಾನದಲ್ಲಿ 8 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. 5054 ರಲ್ಲಿ 11.87 ಕೋಟಿ ರೂಪಾಯಿ ಅನುದಾನದಲ್ಲಿ 21 ಕಾಮಗಾರಿಗಳಲ್ಲಿ 16 ಕಾಮಗಾರಿಗಳಿಗೆ ಈಗಾಗಲೇ ಏಜೆನ್ಸಿಗಳನ್ನು ನಿಗಧಿ ಪಡಿಸಲಾಗಿದೆ ಎಂದರು.

ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ರಾಮಚಂದ್ರ ರಾಠೋಡ ಮಾತನಾಡಿ, ಟಿ.ಎಸ್.ಪಿ ಯಲ್ಲಿ 12.59 ಕೋಟಿ ವೆಚ್ಚದಲ್ಲಿ 13 ಕಾಮಗಾರಿಗಳನ್ನು ತೆಗೆದುಕೊಂಡು 10 ಕಾಮಗಾರಿಗಳಿಗೆ ಏಜೆನ್ಸಿ ನಿಗದಿ ಮಾಡಲಾಗಿದೆ. ಜಿಲ್ಲೆಯ 132 ಶಾಲಾ ಕಟ್ಟಡ ಕಾಮಗಾರಿಗಳನ್ನು 38.22 ಕೋಟಿ ವೆಚ್ಚದಲ್ಲಿ ತೆಗೆದುಕೊಳ್ಳಲಾಗಿದೆ. ನರಗುಂದ ತಾಲ್ಲೂಕಿನಲ್ಲಿ 85 ಲಕ್ಷ ರೂಪಾಯಿ ವೆಚ್ಚದಲ್ಲಿ 5 ಅಂಗನವಾಡಿ ನಿರ್ಮಾಣ ಮಾಡಲಾಗುತ್ತಿದೆ.

2019-20 ಸಾಲಿನ ಪ್ರವಾಹ ಹಾನಿಯಲ್ಲಿ ಕೈಗೊಂಡ ಕಾಮಗಾರಿಗಳು ಮುಕ್ತಾಯವಾಗಿವೆ. 2020-21 ನೇ ಸಾಲಿನಲ್ಲಿ 19 ಕೋಟಿ ರೂಪಾಯಿ ವೆಚ್ಚದಲ್ಲಿ 12 ಕಾಮಗಾರಿ ತೆಗೆದುಕೊಂಡಿದ್ದು ನಿಗದಿತ ಅವಧಿಯಲ್ಲಿ ಮುಕ್ತಾಯ ಮಾಡಲಾಗುವುದು. ಜಿಲ್ಲೆಯಲ್ಲಿ ರಸ್ತೆಗಳ ಪಾಟ್ ಹೋಲ್ ಗಳನ್ನು ಸರಿಪಡಿಸಲು ಒಟ್ಟು 683 ಕಿಮೀ ರಸ್ತೆ ದುರಸ್ತಿಗೆ ತೆಗೆದುಕೊಳ್ಳಲಾಗಿದೆ. ಈವರೆಗೆ ಒಟ್ಟಾರೆ ಶೇ.85 ರಷ್ಟು ಸಾಧನೆಯಾಗಿದೆ. ರಾಷ್ಟ್ರಿಯ ಹೆದ್ದಾರಿ ದುರಸ್ತಿಯಲ್ಲಿ ಕೊಣ್ಣೂರಿನ ಬ್ರಿಡ್ಜ್ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದ್ದು, ಕಾಮಗಾರಿ ಆರಂಭ ಆಗಲಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ, ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಕಳಕಪ್ಪ ಬಂಡಿ, ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಜಿ.ಪಂ ಸಿಇಓ ಡಾ.ಆನಂದ ಕೆ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here