ಶಿವಮೊಗ್ಗ ಜಿಲ್ಲೆ – ನಮ್ಮ ಹೆಮ್ಮೆ ಜಯದೇವಪ್ಪ ಹಾಲಪ್ಪಾ ಪಟೇಲ್

0
98

ಜಯದೇವಪ್ಪ ಹಾಲಪ್ಪಾ ಪಟೇಲ್ ಕರ್ನಾಟಕದ 15 ನೇ ಮುಖ್ಯಮಂತ್ರಿಯಾಗಿದ್ದು, 31 ಮೇ 1996 ರಿಂದ 07 ಅಕ್ಟೋಬರ್ 1999 ರವರೆಗೆ ಕರ್ನಾಟಕದ ಮುಖ್ಯಮಮತ್ರಿಯಾಗಿ ಆಳ್ವಿಕೆ ನಡೆಸಿದರು.

ಜೆ. ಎಚ್. ಪಟೇಲ್ ಅಕ್ಟೋಬರ್ 01, 1930 ರಂದು ಅವಿಭಜಿತ ಶಿವಮೊಗ್ಗ ಜಿಲ್ಲೆಯ ಚೆನ್ನಗಿರಿ ತಾಲ್ಲೂಕಿನ ಕರಿಗನೂರಿನಲ್ಲಿ ಜನಿಸಿದರು. ಸರ್ವಮಂಗಲ ಅವರನ್ನು ವಿವಾಹವಾದ ಇವರಿಗೆ ತ್ರಿಶೂಲ್, ಸತೀಶ್ ಮತ್ತು ಮಹಿಮಾ ಎಂಬ ಮೂವರು ಮಕ್ಕಳು.

ಕಾನೂನು ಪದವೀಧರರಾಗಿದ್ದ ಪಟೇಲ್ ಕಟ್ಟಾ ಸಮಾಜವಾದಿಯಾಗಿದ್ದು ರಾಮ್ ಮನೋಹರ್ ಲೋಹಿಯಾ ಅವರ ಅನುಯಾಯಿ. ಯುವಕರಾಗಿದ್ದಾಗ ಅವರು ಶಾಂತವೇರಿ ಗೋಪಾಲಗೌಡರಿಂದ ಪ್ರೇರಿತರಾಗಿದ್ದರು. ಪಟೇಲ್ ಅವರ ಭಾಷಣ ಕೌಶಲ್ಯವು ಅನೇಕರ ಮೇಲೆ ತನ್ನ ಪ್ರಭಾವ ಬೀರಿತು. ಅವರು ತಮ್ಮ ಜೀವನದುದ್ದಕ್ಕೂ ಕಾಂಗ್ರೆಸ್ ಸೇರದ ನಾಯಕರಾಗಿ ಉಳಿದಿದ್ದರು ಮತ್ತು ಕರ್ನಾಟಕದ ಜನತಾದಳದ ಆಧಾರ ಸ್ತಂಭಗಳಲ್ಲಿ ಒಬ್ಬರಾಗಿದ್ದರು.

1967 ರಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದ ಇವರು, ಕನ್ನಡದಲ್ಲಿ ತಮ್ಮ ಚರ್ಚೆಯನ್ನು ಮಂಡಿಸಿದ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪಟೇಲ್ ಅವರು 1967 ರಲ್ಲಿ ಲೋಕಸಭೆಯಲ್ಲಿ ತಮ್ಮ ಮಾತೃಭಾಷೆ ಕನ್ನಡದಲ್ಲಿ ಮಾತನಾಡುತ್ತಾ ಇತಿಹಾಸ ರಚಿಸಿದರು. ಆಗಿನ ಲೋಕಸಭೆಯ ಸ್ಪೀಕರ್ ನೀಲಂ ಸಂಜೀವ ರೆಡ್ಡಿ ಅವರು ತಮ್ಮ ಭಾಷಣದೊಂದಿಗೆ ಮುಂದುವರಿಯಲು ಪಟೇಲರಿಗೆ ಅವಕಾಶ ನೀಡಿದರು ಮತ್ತು ಪ್ರೋತ್ಸಾಹಿಸಿದರು. ಸಭೆಯಲ್ಲಿದ್ದ ಎಲ್ಲರೂ ಇವರ ಭಾಷಣವನ್ನು ತೀವ್ರ ಗಮನದಿಂದ ಕೇಳಿದರು. ಭಾರತೀಯ ಸಂಸತ್ತು ಆರಂಭಗೊಂಡ 17 ವರ್ಷಗಳಲ್ಲಿ ಭಾರತೀಯ ಪ್ರಾದೇಶಿಕ ಭಾಷೆಯಲ್ಲಿ ಮಾತನಾಡಿದ ಮೊದಲ ಸದಸ್ಯರಾದರು.

1975 ರಿಂದ 1977 ರವರೆಗೆ ತುರ್ತು ಪರಿಸ್ಥಿತಿಯಲ್ಲಿ ಪಟೇಲ್ ಜೈಲಿನಲ್ಲಿದ್ದರು. ನಂತರ, ಅವರು 1978 ರಲ್ಲಿ ಚನ್ನಗಿರಿ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದರು. 1983ರಲ್ಲಿ ಎರಡನೇ ಬಾರಿಗೆ ಆಯ್ಕೆಯಾದರು ಮತ್ತು 1983ರಲ್ಲಿ ಜನತಾ ಪಕ್ಷ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಸೇವೆ ಸಲ್ಲಿಸಿದರು.

ರಾಮಕೃಷ್ಣ ಹೆಗಡೆ, ಎಸ್ ಆರ್ ಬೊಮ್ಮಾಯಿ ಅವರ ಸರ್ಕಾರದಲ್ಲಿ ಸಚಿವರಾಗಿಯೂ ಪಟೇಲ್ ಸೇವೆ ಸಲ್ಲಿಸಿದರು ಮತ್ತು 1994 ರಲ್ಲಿ ಹೆಚ್. ಡಿ. ದೇವೇಗೌಡರ ನೇತೃತ್ವದಲ್ಲಿ ಜನತಾದಳ ಅಧಿಕಾರಕ್ಕೆ ಮರಳಿದಾಗ ಉಪಮುಖ್ಯಮಂತ್ರಿಯಾದರು. ಅವರು 1996ರಲ್ಲಿ ದೇವೇಗೌಡರು ಪ್ರಧಾನ ಮಂತ್ರಿ ಸ್ಥಾನಕ್ಕೆ ಏರಿದ ನಂತರ ಉತ್ತರಾಧಿಕಾರಿಯಾದರು.

ಪಟೇಲ್ ಅವರ ಸರ್ಕಾರದ ಅವಧಿಯಲ್ಲಿಯೇ ರಾಜ್ಯದಲ್ಲಿ ಏಳು ಹೊಸ ಜಿಲ್ಲೆಗಳ ರಚನೆಯಾಯಿತು. 12 ಡಿಸೆಂಬರ್ 2000 ರಂದು ಪಟೇಲ್ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಅವರ ಸ್ಥಳೀಯ ಹಳ್ಳಿಯಾದ ಕರಿಗನೂರಿನಲ್ಲಿ ರಾಜ್ಯ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು.

ಅದ್ಭುತ ವಾಗ್ಮಿ, ಚುರುಕಾದ ನಾಯಕ, ನಿಷ್ಟುರವಾದಿ ರಾಜಕಾರಣಿ ಎಂದು ಹೆಸರು ಮಾಡಿದ್ದ ಜೆ.ಎಚ್.ಪಟೇಲ್ ಅವರು ಅವಿಭಜಿತ ಶಿವಮೊಗ್ಗ ಜಿಲ್ಲೆಯವರು ಎಂಬುವುದು ನಮ್ಮ ಹೆಮ್ಮೆ.

LEAVE A REPLY

Please enter your comment!
Please enter your name here