ಮತದಾನ ಪವಿತ್ರವಾದ ಹಕ್ಕು ; ಶ್ರದ್ಧೆಯಿಂದ ಹಕ್ಕು ಚಲಾಯಿಸಿ, ಸದೃಢ ಭಾರತ ನಿರ್ಮಿಸಲು ಕೈಜೋಡಿಸಿ : ಪ್ರಧಾನ ಜಿಲ್ಲಾ ನ್ಯಾಯಾಧೀಶ ಉಮೇಶ ಅಡಿಗ

0
86

ಧಾರವಾಡ.ಜ.25: ಮತದಾನ ಎಂಬುದು ಭಾರತದ ಸಂವಿಧಾನವು ದೇಶದ ಅರ್ಹ ನಾಗರೀಕರಿಗೆ ನೀಡಿರುವ ಪವಿತ್ರವಾದ ಹಕ್ಕು. ಪ್ರತಿಯೊಬ್ಬರು ಶ್ರದ್ಧೆಯಿಂದ ತಮ್ಮ ಪವಿತ್ರವಾದ ಮತದಾನದ ಹಕ್ಕನ್ನು ಶ್ರದ್ಧೆಯಿಂದ ಚಲಾಯಿಸಿ, ಸಶಕ್ತ, ಸದೃಢ ಭಾರತ ನಿರ್ಮಿಸಲು ಕೈಜೋಡಿಸಬೇಕೆಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಉಮೇಶ ಅಡಿಗ ಹೇಳಿದರು.

ಅವರು ಇಂದು ಬೆಳಿಗ್ಗೆ ಕೆಸಿಡಿ ಆವರಣದಲ್ಲಿನ ಸೃಜನಾ ರಂಗಮಂದಿರಲ್ಲಿ ಭಾರತ ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತದಿಂದ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಭಾರತದ ಭವಿಷ್ಯ ಮತದಾರರ ಕೈಯಲ್ಲಿದೆ. ಪ್ರತಿ ಚುನಾವಣೆಗಳಲ್ಲಿ ತಪ್ಪದೇ ಮತದಾನ ಮಾಡುವ ಮೂಲಕ ಉತ್ತಮ ಮತ್ತು ಪ್ರಾಮಾಣಿಕ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ ದೇಶದ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡಬೇಕು ಎಂದು ಹೇಳಿದರು.

ಆಮಿಷಗಳಿಗೆ, ಪ್ರಭಾವಗಳಿಗೆ ಒಳಗಾಗಿ ಮತ್ತು ಮತದಾನ ಮಾಡಿದ ನಂತರ ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡಲಿಲ್ಲವೆಂದು ಹಿಂದಿನಿಂದ ಪರಿತಪಿಸುವ ಬದಲು ಚುನಾವಣೆಗಳಲ್ಲಿ ಜಾಗೃತಿಯಿಂದ ಮತದಾನ ಮಾಡಬೇಕು. ಪ್ರತಿಯೊಬ್ಬ ವಯಸ್ಕ ನಾಗರಿಕ ಮತದಾರ ಪಟ್ಟಿಯಲ್ಲಿ ಸೇರ್ಪಡೆಯಾಗುವಂತೆ ಮತ್ತು ಮತದಾರ ಚೀಟಿ ಹೊಂದಿರುವಂತೆ ನೋಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ಎಸ್. ಚಿಣ್ಣನ್ನವರ ಮಾತನಾಡಿ, ಭವ್ಯ ಭಾರತವನ್ನು ನಿರ್ಮಾಣ ಮಾಡುವ ಶಕ್ತಿ ಮತದಾರನಲ್ಲಿದೆ. ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು. ಹೊಸ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಉತ್ತಮ ಆಡಳಿತ ವ್ಯವಸ್ಥೆ ರೂಪಿಸಲು ಮತದಾನ ಕಾರ್ಯವನ್ನು ಸಮರ್ಪಕ ರೀತಿಯಲ್ಲಿ ಮಾಡಿ ಸಶಕ್ತ ದೇಶ ನಿರ್ಮಾಣಕ್ಕೆ ಯುವಕರು ದೃಢ ಸಂಕಲ್ಪ ಮಾಡಬೇಕೆಂದು ಅವರು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸುಶೀಲಾ ಮಾತನಾಡಿ, ಪ್ರಜಾಪ್ರಭುತ್ವದ ಜೀವಂತಿಕೆ ನಿಷ್ಪಕ್ಷಪಾತವಾಗಿ ಮತ್ತು ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳುವುದರಲ್ಲಿದೆ. ಧಾರವಾಡದಂತಹ ಸುಶಿಕ್ಷಿತರ ಜಿಲ್ಲೆಯಲ್ಲಿ ನೂರಕ್ಕೆ ನೂರರಷ್ಟು ಮತದಾನವಾಗಬೇಕು. ಜಿಲ್ಲೆಯ ಪ್ರತಿಯೊಬ್ಬ ವಯಸ್ಕರು ಮತದಾರರ ಪಟ್ಟಿಯಲ್ಲಿದ್ದು, ಗುರುತಿನ ಚೀಟಿ ಹೊಂದಿರಬೇಕು. ಜಿಲ್ಲೆಯ ಎಲ್ಲ ಶಾಲಾ, ಕಾಲೇಜುಗಳಲ್ಲಿ ಮತದಾರರ ಸಾಕ್ಷರತಾ ಕ್ಲಬ್‍ಗಳನ್ನು ಸ್ಥಾಪಿಸಲಾಗಿದ್ದು, ಆ ಮೂಲಕ ಎಲ್ಲ ವಯಸ್ಕ ನಾಗರಿಕರಲ್ಲಿ ಮತದಾನ ಜಾಗೃತಿ ಮೂಡಿಸಲು ಆದ್ಯತೆ ನೀಡಲಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಮಾತನಾಡಿ, ಭಾರತ ಚುನಾವಣಾ ಆಯೋಗ ಸ್ಥಾಪನೆಗೊಂಡ ದಿನವನ್ನು ರಾಷ್ಟ್ರೀಯ ಮತದಾರ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಮೂಲಕ ಚುನಾವಣೆ, ಮತದಾನ, ಮತದಾರರ ಹಕ್ಕು ಕುರಿತು ಎಲ್ಲರಲ್ಲೂ ಜಾಗೃತಿ ಮೂಡಿಸಲಾಗುತ್ತಿದೆ. ಧಾರವಾಡ ಜಿಲ್ಲೆಯ ಎಲ್ಲ ಹಂತದ ಚುನಾವಣೆಗಳು ಅತ್ಯಂತ ಯಶಸ್ವಿಯಾಗಿ, ನಿಷ್ಪಕ್ಷಪಾತವಾಗಿ ಜರುಗುತ್ತಿವೆ. ಮತದಾರರು ನಿರ್ಭಯವಾಗಿ ಮತ ಚಲಾಯಿಸುತ್ತಾರೆ. ಇತ್ತಿಚಿಗೆ ಜರುಗಿದ ಗ್ರಾಮಪಂಚಾಯತ್ ಚುನಾವಣೆಯಲ್ಲಿ ಶೇ.83 ಕ್ಕಿಂತ ಹೆಚ್ಚು ಮತದಾನವಾಗಿದೆ ಎಂದು ಅವರು ಹೇಳಿದರು.

ಜಿಲ್ಲೆಯ ಮತದಾರರಲ್ಲಿ ಮತದಾನ ಕುರಿತು ಮಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಸಮಿತಿಯಿಂದ ವಿವಿಧ ರೀತಿಯ ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಯುವಕರು ಮತ್ತು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಂಡು ಹೆಚ್ಚು ಪ್ರಚಾರ, ಮತದಾರರಲ್ಲಿ ಆಸಕ್ತಿ ಮೂಡಿಸಲಾಗುತ್ತಿದೆ. ನಾಗರಿಕರು ಮತದಾನದ ಹಕ್ಕನ್ನು ಸಮರ್ಥವಾಗಿ ಉಪಯೋಗಿಸಿಕೊಂಡು ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕೆಂದು ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯ ಕುಲಸಚಿವ ಕೆ.ಟಿ. ಹನುಮಂತಪ್ಪ ವೇದಿಕೆಯಲ್ಲಿದ್ದರು.

ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪವಿಭಾಗಾಧಿಕಾರಿ ಡಾ.ಗೋಪಾಲಕೃಷ್ಣ .ಬಿ. ಅವರು ಮತದಾರ ಪ್ರತಿಜ್ಞಾವಿಧಿ ಬೋಧಿಸಿದರು. ಸ್ನೇಹರಂಗ ಕಲಾತಂಡದ ಬಿ.ಎಫ್. ಕಣವಿ ಹಾಗೂ ತಂಡದವರು ಮತದಾನ ಜಾಗೃತಿ ಗೀತೆಗಳನ್ನು ಪ್ರಸ್ತುತ ಪಡಿಸಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮತದಾರ ದಿನಾಚರಣೆ ಅಂಗವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳೀಗೆ ಬಹುಮಾನ, ಪ್ರಮಾಣಪತ್ರ ನೀಡಲಾಯಿತು. ಮತ್ತು ಉತ್ತಮವಾಗಿ ಮತದಾರ ನೊಂದಣಿ ಕಾರ್ಯನಿರ್ವಹಿಸಿದ ಮತಗಟ್ಟೆ ಅಧಿಕಾರಿಗಳಿಗೆ ಮತ್ತು ವಿವಿಧ ಇಲಾಖೆ ಅಧಿಕಾರಿಗಳಿಗೆ ಸನ್ಮಾನಿಸಿ, ಗೌರವಿಸಲಾಯಿತು.

ಕೆ.ಎಂ. ಶೇಖ್ ಅವರು ಕಾರ್ಯಕ್ರಮ ನಿರೂಪಿಸಿದರು. ಧಾರವಾಡ ತಹಶೀಲ್ದಾರ ಸಂತೋಷ ಬಿರಾದಾರ ವಂದಿಸಿದರು.

LEAVE A REPLY

Please enter your comment!
Please enter your name here