ಭಾರತದ ಕ್ರಿಕೆಟ್ ಆಟದಲ್ಲಿ ಬಿರುಸಿನ ಬೌಲಿಂಗ್ ಎಂಬ ಹೊಸ ಅಧ್ಯಾಯ ಬರೆದವರು ಜಾವಗಲ್ ಶ್ರೀನಾಥ್

0
108

ನಮ್ಮ ಜಾವಗಲ್ ಶ್ರೀನಾಥ್ ಭಾರತದ ಕ್ರಿಕೆಟ್ ಆಟದಲ್ಲಿ, ಬಿರುಸಿನ ಬೌಲಿಂಗ್ ಎಂಬ ಹೊಸ ಅಧ್ಯಾಯ ಬರೆದವರು.

ಮೈಸೂರು ಎಕ್ಸ್ಪ್ರೆಸ್, ಜಾವಗಲ್ ಎಕ್ಸ್ಪ್ರೆಸ್ ಎಂದು ಪ್ರಖ್ಯಾತರಾದ ಜಾವಗಲ್ ಶ್ರೀನಾಥ್ 1969ರ ಆಗಸ್ಟ್ 31ರಂದು ಜನಿಸಿದರು. ಮೈಸೂರಿನಲ್ಲಿ ಜನಿಸಿದ ಶ್ರೀನಾಥ್, ಮೂಲತಃ ಹಾಸನ ಜಿಲ್ಲೆಯ ಜಾವಗಲ್‌ನವರು. ಅವರು ಎಂಜಿನಿಯರಿಂಗ್ ಪದವೀಧರರೂ ಹೌದು.

ಭಾರತದ ಕ್ರಿಕೆಟ್ಟಿನಲ್ಲಿ ಕಪಿಲ್ ದೇವ್ ಮಧ್ಯಮ ವೇಗದ ಬೌಲಿಂಗ್ನಲ್ಲಿ ಪ್ರಖ್ಯಾತಿ ಗಳಿಸುವವರೆಗೆ ವೇಗದ ಬೌಲರುಗಳ ಉಪಸ್ಥಿತಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಮಾದರಿಯಲ್ಲಿತ್ತು. ಅಬಿದ್ ಆಲಿ, ಏಕನಾಥ ಸೋಲ್ಕರ್ ಅಂತಹವರು ಪ್ರಾರಂಭಿಕ ಬೌಲಿಂಗ್ ಮಾಡುವ ದಿನಗಳಲ್ಲಿ ಮೂರು ನಾಲ್ಕು ಓವರುಗಳ ನಂತರದಲ್ಲಿ ಚಂದ್ರಶೇಖರ್, ಪ್ರಸನ್ನ ಅಂತಹ ಸ್ಪಿನ್ನರುಗಳ ಬಳಿ ಚೆಂಡು ಸೇರುತ್ತಿತ್ತು. ಅಂದಿನ ದಿನದಲ್ಲಿ ಪ್ರಾರಂಭಿಕ ಬೌಲರ್ ಆದ ಅಬಿದ್ ಆಲಿ ಅವರಿಗಿಂತ ಸ್ಪಿನ್ನರ್ ಚಂದ್ರು ಹೆಚ್ಚು ವೇಗವಾಗಿ ಬೌಲ್ ಮಾಡುತ್ತಿದ್ದರು ಎಂದರೆ ಅತಿಶಯೋಕ್ತಿಯಲ್ಲ.

ಜಾವಗಲ್ ಶ್ರೀನಾಥರು 1991ರಲ್ಲಿ ಪ್ರಥಮ ಟೆಸ್ಟ್ ಪಂದ್ಯ ಮತ್ತು ಏಕದಿನ ಪಂದ್ಯಗಳನ್ನು ಆಡುವುದರೊಂದಿಗೆ ಭಾರತಕ್ಕೆ ದೊರೆತ ಅತ್ಯಂತ ವೇಗದ ಬೌಲರ್ ಎನಿಸಿದರು.

ಭಾರತದಲ್ಲಿ ವೇಗದ ಬೌಲಿಂಗ್ ಮಾಡುವುದೆಂದರೆ ಅದೊಂದು ದಿಟ್ಟ ಸಾಹಸವೇ ಸರಿ. ವೇಗದ ಬೌಲರುಗಳಿಗೆ ಅಗತ್ಯವಾದ ಸ್ವಿಂಗ್ ಎಂಬುದು ಇಲ್ಲಿ ಕಾಣುವುದಕ್ಕೆ ಹೆಣಗಾಡಬೇಕಾದದ್ದು ಅಷ್ಟಿಷ್ಟಲ್ಲ. ಹಾಗಾಗಿ ನಮ್ಮ ವೇಗದ ಬೌಲರುಗಳಾದ ಶ್ರೀನಾಥ್, ವೆಂಕಿ, ಜಹೀರ್ ಇವರೆಲ್ಲಾ ವಿದೇಶೀ ನೆಲದಲ್ಲಿ ಆಡಿದಾಗಲೇ ಉತ್ತಮ ಬೌಲರುಗಳಾಗಿ ನಮಗೆ ಕಂಡಿದ್ದಾರೆ. ಈ ಮಾತನ್ನು ಯಾಕೆ ಹೇಳಬೇಕಾಗಿದೆ ಎಂದರೆ ಇಲ್ಲಿನ ಪಿಚ್ಚುಗಳನ್ನು ಬ್ಯಾಟುದಾರನಿಗೆ ಅಥವಾ ಹೆಚ್ಚೆಂದರೆ ಸ್ಪಿನ್ ಬೌಲರನಿಗೆ ಅನುಕೂಲವಾಗುವಂತೆ ರೂಪಿಸಲಾಗುತ್ತದೆ. ವೇಗದ ಬೌಲರನ್ನು ದೂಷಿಸಲಾಗುತ್ತದೆ. ಒಮ್ಮೆ ಶ್ರೀನಾಥರೇ ಇರಬೇಕು ಹೀಗೆ ಹೇಳಿದ್ದು “ಭಾರತದ ಪಿಚ್ಚುಗಳನ್ನು ನೋಡಿದರೆ ಅಳು ಬರುತ್ತದೆ!”. ಇಲ್ಲಿನ ಹವಾಮಾನ ಕೂಡಾ ಗಾಳಿಯಲ್ಲಿ ಸ್ವಿಂಗ್ ಮೂಡುವುದನ್ನು ಬೆಂಬಲಿಸುವುದಿಲ್ಲ ಎಂಬುದು ಕೂಡಾ ನಿಜ.

ಶ್ರೀನಾಥರದು ಅಸಾಮಾನ್ಯ ಸಾಮರ್ಥ್ಯ. 1996ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಅವರು ಮಾಡಿದ ಬೌಲಿಂಗಿನ ವೇಗ ಗಂಟೆಗೆ 156 ಕಿ.ಮೀಟರಿನದ್ದು ಎಂದು ದಾಖಾಲಾತಿ ಇದೆ. ವಿಶ್ವಕಪ್ ಪಂದ್ಯದಲ್ಲಿ ಕೂಡಾ ಅವರು 154.5 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರ ದಾಖಲಾತಿ ಇದೆ. ಆದರೆ ಅವರ ಈ ಸಾಮರ್ಥ್ಯ ನಿರಂತರವಾಗಿ ಅವರಿಂದ ಹೊರಹೊಮ್ಮುತ್ತಿರಲಿಲ್ಲ ಎಂಬುದು ಕೂಡಾ ಅಷ್ಟೇ ನಿಜ. ಶ್ರೀನಾಥರಿಗೆ ಸೀಮಿತತೆ ಇದ್ದದ್ದು ಬಹುಶಃ ಅವರ ದೈಹಿಕ ಬಲದಲ್ಲಿ. ಸಾಮಾನ್ಯವಾಗಿ ನಾವು ವೇಗದ ಬೌಲರುಗಳಲ್ಲಿ ಕಾಣುವ ಮೈಕಟ್ಟು ಅವರದ್ದಾಗಿರಲಿಲ್ಲ.

ಭಾರತದಲ್ಲಿನ ಪಿಚ್ಚುಗಳು ಮತ್ತು ವಾತಾವರಣಗಳು ವೇಗದ ಬೌಲಿಂಗಿಗೆ ನೀಡುವ ಸೀಮಿತ ಅವಕಾಶಗಳ ದೆಸೆಯಿಂದಾಗಿ, ಗಾಳಿಯಲ್ಲಿನ ಬೆಂಬಲವನ್ನು ಹೆಚ್ಚು ಅವಲಂಬಿಸದೆ, ಹಳೆಯ ಚೆಂಡನ್ನು ವೇಗ ವೈವಿಧ್ಯಗಳ ಮೂಲಕ ಉತ್ತಮವಾಗಿ ಬಳಸುವುದನ್ನು ಸಮರ್ಥವಾಗಿ ತೋರಿಸಿಕೊಟ್ಟವರು ಜಾವಗಲ್ ಶ್ರೀನಾಥ್. 1996-97ರ ವರ್ಷದಲ್ಲಿ ಅಹಮದಾಬಾದಿನಲ್ಲಿ ನಡೆದ ಟೆಸ್ಟ್ ಪಂದ್ಯದ ನಾಲ್ಕನೆಯ ಇನ್ನಿಂಗ್ಸ್ ನಲ್ಲಿ ಶ್ರೀನಾಥ್ ಅವರು ದಕ್ಷಿಣ ಆಫ್ರಿಕಾ ತಂಡದ 6 ವಿಕೆಟ್ಟುಗಳನ್ನು ಉರುಳಿಸಿದ್ದು ಇಂಥಹ ಶ್ರೇಷ್ಠ ಬೌಲಿಂಗಿಗೊಂದು ನಿದರ್ಶನವಾಗಿದೆ.

ತಮ್ಮ ಕ್ರಿಕೆಟ್ ಜೀವನದ ಕೊನೆಯ ವರ್ಷಗಳಲ್ಲಿ ರಿವರ್ಸ್ ಸ್ವಿಂಗ್, ಲೆಗ್ ಕಟರ್ ಮೊದಲಾದ ಬೌಲಿಂಗ್ ಶೈಲಿಗಳನ್ನು ಅಳವಡಿಸಿಕೊಂಡ ಶ್ರೀನಾಥ್, ಟೆಸ್ಟ್ ಪಂದ್ಯಗಳಲ್ಲಿ 236 ಮತ್ತು ಏಕದಿನ ಪಂದ್ಯಗಳಲ್ಲಿ 315 ವಿಕೆಟ್ಗಳನ್ನು ಪಡೆದಿದ್ದಾರೆ. ಮೊದಲ ದರ್ಜೆ ಮಟ್ಟದಲ್ಲಿ 500 ಕ್ಕೂ ಹೆಚ್ಚು ವಿಕೆಟ್ಗಳನ್ನು ಪಡೆದಿದ್ದಾರೆ. ಭಾರತದ ವೇಗದ ಬೌಲರುಗಳಲ್ಲಿ ಕಪಿಲ್ ದೇವ್ ಅವರನ್ನು ಹೊರತು ಪಡಿಸಿದರೆ ಅತೀ ಹೆಚ್ಚು ವಿಕೆಟ್ ಗಳಿಸಿರುವವರು ಶ್ರೀನಾಥ್. ಭಾರತದಲ್ಲಿ ಮುಂದೆ ಬಂದ ವೇಗದ ಬೌಲಿಂಗ್ ಪೀಳಿಗೆಗೆ ಮಾರ್ಗದರ್ಶಕರಾಗಿ ಮತ್ತು ಸ್ಫೂರ್ತಿ ತಂದವರಾಗಿ ಸಹಾ ಶ್ರೀನಾಥರು ನೀಡಿದ ಕೊಡುಗೆಯನ್ನು ನಾವು ಮರೆಯುವಂತಿಲ್ಲ.

ಭಾರತದ ರಾಷ್ಟ್ರೀಯ ತಂಡದಲ್ಲಿ ಆಡಿರುವುದಲ್ಲದೆ, ಕರ್ನಾಟಕದಿಂದ ರಣಜಿ ಕ್ರಿಕೆಟ್ ಮತ್ತು ಇಂಗ್ಲೆಂಡಿನ ಕೌಂಟಿ ಕ್ರಿಕೆಟ್ ನಲ್ಲಿ ಗ್ಲೌಸೆಸ್ಟರ್ಷೈರ್ ಮತ್ತು ಲೀಸೆಸ್ಟರ್ಷೈರ್ ತಂಡಗಳ ಪರವಾಗಿ ಸಹಾ ಶ್ರೀನಾಥ್ ಆಡಿದ್ದಾರೆ.

ಕೆಲವೊಮ್ಮೆ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನೂ ನೀಡುತ್ತಿದ್ದ ಶ್ರೀನಾಥ್ ಏಕದಿನ ಪಂದ್ಯಗಳಲ್ಲಿ “ಪಿಂಚ್ ಹಿಟರ್” ಕೆಲಸವನ್ನು ನಿರ್ವಹಿಸಿರುವುದೂ ಉಂಟು!

ಇತ್ತೀಚಿನ ಹಲವು ವರ್ಷಗಳಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ರೆಫರಿ ಉದ್ಯೋಗದಿಂದ ವಿಶ್ವದೆಲ್ಲೆಡೆ ಸಂಚಾರ ಮಾಡಿರುವ ಶ್ರೀನಾಥ್ ತಾವು ಮೂಡಿದ ಕ್ಷೇತ್ರಗಳಲ್ಲೆಲ್ಲಾ ಭಾರತಕ್ಕೆ ಗೌರವ ತಂದವರು. ಅವರು ನಮ್ಮ ಕರ್ನಾಟಕ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿಯಾಗಿಯೂ ಕೆಲಸ ನಿರ್ವಹಿಸಿದ್ದಾರೆ.

ಶ್ರೀನಾಥರನ್ನು ಅರ್ಥೈಸಬೇಕಾದರೆ, ವಿದೇಶದ ವೇಗದ ಬೌಲರುಗಳನ್ನು ಒಂದು ಕ್ಷಣ ಹೋಲಿಸಿ ನೋಡಬೇಕಾಗುತ್ತದೆ. ಆ ವೇಗದ ಬೌಲರುಗಳು ಅವಾಚ್ಯ ಶಬ್ದಗಳಿಂದ ಬ್ಯಾಟುದಾರನನ್ನು ನಿಂದಿಸುವುದು, ಕೆಟ್ಟ ಕೆಟ್ಟ ರೀತಿಯಲ್ಲಿ ಮೈದಾನದಲ್ಲಿ ಮತ್ತು ಹೊರವಲಯಗಳಲ್ಲಿ ವರ್ತಿಸುವುದು ಇವೆಲ್ಲಾ ನೋಡಿದರೆ ನಮ್ಮ ಮೈಸೂರಿನ ಶ್ರೀನಾಥರು ತಮ್ಮ ಶ್ರೇಷ್ಠತೆಯನ್ನೆಲ್ಲಾ ತಮ್ಮ ಬೌಲಿಂಗಿನ ಬಿರುಸಿನಲ್ಲಿ ಮಾತ್ರ ತೋರ್ಪಡಿಸಿದ್ದು ನಮಗೆಲ್ಲಾ ಹೆಮ್ಮೆಯ ವಿಷಯ..

ಜಾವಗಲ್ ಶ್ರೀನಾಥರೆ, ನಿಮ್ಮನ್ನು ನಾವು ಇಷ್ಟಪಡುತ್ತೇವೆ. ನಿಮ್ಮನ್ನು ಗೌರವಿಸುತ್ತೇವೆ. ನಿಮ್ಮ ಹೆಸರಲ್ಲಿ ಮೈಸೂರಿನಲ್ಲಿ ಒಂದು ವೃತ್ತವನ್ನೂ ಸ್ಥಾಪಿಸಿದ್ದೇವೆ. ಇವೆಲ್ಲಕ್ಕೂ ಮಿಗಿಲಾಗಿ ನಿಮಗೆ ನಿರಂತರ ಶುಭ ಹಾರೈಸುತ್ತೇವೆ. ನಿಮ್ಮ ಬದುಕು ಸುಂದರವಾಗಿರಲಿ. ನಿಮ್ಮ ಉತ್ತಮ ಬೌಲಿಂಗ್, ಉತ್ತಮ ಮಾರ್ಗದರ್ಶನ, ಉತ್ತಮ ನಡತೆ ಮುಂದಿನ ಕ್ರೀಡಾ ತಲೆಮಾರಿಗೆ ಮಾದರಿಯಾಗಿರಲಿ.

ಜಾವಗಲ್ ಶ್ರೀನಾಥರಿಗೆ ಹುಟ್ಟು ಹಬ್ಬದ ಶುಭ ಹಾರೈಕೆಗಳು.

ಕೃಪೆ:- ‘ಕನ್ನಡ ಸಂಪದ’

LEAVE A REPLY

Please enter your comment!
Please enter your name here