ವಿಶ್ವ ಎನ್ಸೆಫಾಲಿಟಿಸ್ ದಿನಾಚರಣೆ: ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸರಕಾರಿ ಕಚೇರಿಗಳಿಗೆ ಕೆಂಪು ದೀಪ ಅಳವಡಿಕೆ

0
111

ಬಳ್ಳಾರಿ,ಫೆ.23 ; ಮೆದುಳು ಜ್ವರವನ್ನು ತಡೆಗಟ್ಟಲು ಫೆ.22 ರನ್ನು ವಿಶ್ವ ಎನ್ಸೆಫಾಲಿಟಿಸ್ ದಿನವೆಂದು ಘೋಷಣೆ ಮಾಡಲಾಗಿದ್ದು, ಈ ದಿನದ ಪ್ರಯುಕ್ತ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸೋಮವಾರ ರಾತ್ರಿ ಜಿಲ್ಲೆಯ ಪ್ರಮುಖ ಸರಕಾರಿ ಕಚೇರಿಗಳಿಗೆ ಕೆಂಪು ದೀಪವನ್ನು ಅಳವಡಿಸಲಾಗಿತ್ತು.
ಸೊಳ್ಳೆಗಳ ಮೂಲಕ ಹರಡುವ ಎನ್ಸೆಫಾಲಿಟಿಸ್(ಮೆದುಳಿನ ಉರಿಯೂತ) ಕಾಯಿಲೆಯು ಮಕ್ಕಳಿಗೆ ಮಾರಣಾಂತಿಕವಾದ ಹಾನಿಯುಂಟು ಮಾಡುತ್ತಿದ್ದು, ಇದರ ಬಗ್ಗೆ ಜಾಗತಿಕವಾಗಿ ಜಾಗೃತಿ ಮೂಡಿಸಲು ಫೆ.22 ರನ್ನು ವಿಶ್ವ ಎನ್ಸೆಫಾಲಿಟಿಸ್ ದಿನವೆಂದು ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜನಾರ್ಧನ್ ತಿಳಿಸಿದರು.
ಸಾಮನ್ಯವಾಗಿ ಕನ್ನಡದಲ್ಲಿ ಮೆದಳಿನ ಉರಿಯೂತ ಎಂಬ ಹೆಸರಿನಿಂದ ಕರೆಯಲ್ಪಡುವ ಈ ಕಾಯಿಲೆಯು ಮೆದುಳು ಜ್ವರದ ವೈರಾಣುಗಳನ್ನು ಹೊಂದಿದ ಹಂದಿ/ಬೆಳ್ಳಕ್ಕಿಯನ್ನು ಕಚ್ಚಿದ ಕ್ಯುಲೆಕ್ಸ್ ಜಾತಿಯ ಸೊಳ್ಳೆಯ ಮೂಲಕ ರೋಗ ಹರಡುತ್ತಿದ್ದು, ಹೆಚ್ಚಾಗಿ ಮಕ್ಕಳು ಮತ್ತು ಹದಿ ಹರೆಯದವರ ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ ಎಂದರು.
ಒಮ್ಮೆ ರೋಗಕ್ಕೆ ತುತ್ತಾದಲ್ಲಿ ಮಾನಸಿಕ ಧಿಗ್ಭ್ರಮೆ ರೋಗಗ್ರಸ್ಥವಾಗುವುಕೆ, ಗೊಂದಲ ಇತ್ಯಾದಿ ಕಾರಣ ಉಂಟು ಮಾಡುವುದರ ಜೊತೆಗೆ ಮರಣವನ್ನು ಸಹ ತರುವ ಸಾಧ್ಯತೆ ಇದೆ. ಇದನ್ನು ತಡೆಗಟ್ಟಲು ಎಲ್ಲರು ತಪ್ಪದೆ ಮಗುವಿನ 9 ನೇ ತಿಂಗಳು ಮತ್ತು 18 ತಿಂಗಳ ವಯಸ್ಸಿನಲ್ಲಿ 2 ಬಾರಿ ಮೆದುಳು ಜ್ವರ ನಿರೋಧಕ ಲಸಿಕೆ(ಜೆ.ಇ) ಹಾಕಿಸಬೇಕು. ಹಂದಿಗಳನ್ನು ಜನರ ವಾಸಸ್ಥಳದಿಂದ 3 ಕಿ.ಮೀ. ದೂರಕ್ಕೆ ಸ್ಥಳಾಂತರಿಸಬೇಕು. ಹಂದಿಗೂಡುಗಳಿಗೆ ಕೀಟನಾಶಕ ಸಿಂಪರಣೆ ಮಾಡುವುದು ಮತ್ತು ಸೊಳ್ಳೆ ನಿರೋಧಕ ಜಾಲರಿ ಹಾಕುವುದು. ರೋಗ ಕಾಣಿಸಿಕೊಂಡ ಸ್ಥಳಗಳಲ್ಲಿ ಹೊರಾಂಗಣ ಕೀಟನಾಶಕ ಧೂಮೀಕರಣ ಮಾಡುವುದು ಹಾಗು ಸಾರ್ವಜನಿಕರು ತಪ್ಪದೆ ಸೊಳ್ಳೆ ಪರದೆ ಮತ್ತು ಸೊಳ್ಳೆ ನಿರೋಧಕವನ್ನು ಬಳಸುವುದು, ಸಂಜೆ ವೇಳೆ ಮೈತುಂಬ ಬಟ್ಟೆ ಧರಿಸುವುದು(ವಿಶೇಷವಾಗಿ ಮಕ್ಕಳು) ನೀರು ನಿಂತ ಸ್ಥಳಗಳಲ್ಲಿ ಲಾರ್ವಹಾರಿ ಮೀನು ಬಿಡುವುದು ಹಾಗು ಬೇವಿನ ಮಿಶ್ರಣದ ಗೊಬ್ಬರವನ್ನು ಗದ್ದೆಗಳಲ್ಲಿ ಉಪಯೋಗಿಸಬೇಕು ಈ ಎಲ್ಲಾ ಕ್ರಮಗಳನ್ನು ಪಾಲಿಸುವ ಮೂಲಕ ಮೆದುಳು ಜ್ವರವನ್ನು ತಡೆಗಟ್ಟಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here