ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರ ಪ್ರವಾಸ ಬಳ್ಳಾರಿಯಲ್ಲಿ ಖಾದಿ ಪ್ಲಾಜಾ ನಿರ್ಮಾಣಕ್ಕೆ ಚಿಂತನೆ:ಕೃಷ್ಣಪ್ಪಗೌಡ

0
486

ಬಳ್ಳಾರಿ,ಮಾ.16: ನಗರದ ನಲ್ಲಚೆರವು ಪ್ರದೇಶದ ಆವರಣದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಅನುದಾನದಲ್ಲಿ 10 ಕೋಟಿ ರೂ.ವೆಚ್ಚದಲ್ಲಿ ಖಾದಿ ಪ್ಲಾಜಾ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಎನ್.ಆರ್.ಕೃಷ್ಣಪ್ಪಗೌಡ ಅವರು ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು ಖಾದಿ ಗ್ರಾಮೋದ್ಯೋಗ ಕ್ಷೇತ್ರದಲ್ಲಿ ದುಡಿಯುತ್ತಿರುವ ಜನರು ಸ್ವಾವಲಂಭಿಯಾಗಿ ಬದುಕಬೇಕು ಮತ್ತು ಖಾದಿಗೆ ಸೂಕ್ತ ಮಾರುಕಟ್ಟೆ ಒದಗಿಸಬೇಕು ಹಾಗೂ ಆಫ್ ಲೈನ್ ಮತ್ತು ಆನ್‍ಲೈನ್ ಟ್ರೇಡಿಂಗ್‍ಗೆ ಉತ್ತೇಜನ ನೀಡಬೇಕು ಎಂಬ ಸದುದ್ದೇಶದಿಂದ ಬಳ್ಳಾರಿಯಲ್ಲಿ ಖಾದಿಪ್ಲಾಜಾ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.
ಈಗಾಗಲೇ ದೆಹಲಿ, ಪಶ್ಷಿಮಬಂಗಾಳ, ಒರಿಸ್ಸಾದಲ್ಲಿ ಪ್ಲಾಜಾಗಳನ್ನು ನಿರ್ಮಾಣ ಮಾಡಲಾಗಿದ್ದು, ಕರ್ನಾಟಕದಲ್ಲಿ ಬೆಂಗಳೂರು ಹಾಗೂ ಮೈಸೂರಿನಲ್ಲಿ ಪ್ಲಾಜಾ ನಿರ್ಮಾಣ ಮಾಡಲು ಸೂಕ್ತ ಸ್ಥಳ ಸಿಗದಿದ್ದ ಕಾರಣ ಬಳ್ಳಾರಿಯ ನಲ್ಲಚೇರೆವು ಪ್ರದೇಶದಲ್ಲಿ 1 ಎಕರೆ ಜಮೀನನ್ನು ಈ ಹಿಂದೆ ಜಿಲ್ಲಾಧಿಕಾರಿ ಮಂಜೂರು ಮಾಡಿದ್ದಾರೆ, ಈ ಜಾಗದಲ್ಲಿ ಖಾದಿ ಪ್ಲಾಜಾ ನಿರ್ಮಿಸಲು ಸ್ಥಳ ಪರಿಶೀಲನೆ ಮಾಡಿದ್ದೇವೆ; ಈ ಸ್ಥಳದಲ್ಲಿ ಖಾದಿ ಪ್ಲಾಜಾ ಮಾಡುವ ಕುರಿತ ಕಾರ್ಯಸಾಧ್ಯತೆ ವರದಿಯನ್ನು ಶೀಘ್ರ ಸಲ್ಲಿಸಲಾಗುವುದು. ಎರಡು ತಿಂಗಳೊಳಗೆ ಕೇಂದ್ರ ಖಾದಿ ಆಯೋಗ ಬಂದು ಪರಿಶೀಲನೆ ನಡೆಸಿದ ನಂತರ ತೀರ್ಮಾನಕ್ಕೆ ಬರಲಾಗುವುದು ಎಂದರು.
ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ಉತ್ಪಾದನೆ ಆಗುವ ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳಿಗೆ ದೊಡ್ಡದಾಗಿ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಈ ಪ್ಲಾಜಾ ನಿರ್ಮಾಣ ಮಾಡಲಾಗುವುದು. ಒಂದು ತಿಂಗಳ ಅವಧಿಯಲ್ಲಿ ಪ್ಲಾಜಾ ನಿರ್ಮಾಣದ ಅಂತಿಮ ತೀರ್ಮಾನ ಆಗಲಿದೆ ಎಂದು ಅವರು ಹೇಳಿದರು.
ರಾಜ್ಯ ಖಾದಿ ಉತ್ಪನ್ನ ಸಂಸ್ಥೆಗಳಿಗೆ ನೀಡಬೇಕಾಗಿದ್ದ ಸಹಾಯಧನ ರೂ.76 ಕೋಟಿಗಳನ್ನು ಸರ್ಕಾರ ನೀಡಿದ್ದು, ಬಾಕಿ ಇರುವ ಖಾದಿ ಉತ್ಪನ್ನ ಸಂಸ್ಥೆಗಳಿಗೆ ಶೀಘ್ರ ಹಣ ಪಾವತಿಸಲಾಗುವುದು ಎಂದರು.
ಈ ವರ್ಷ ಬಳ್ಳಾರಿಯಲ್ಲಿ ಖಾದಿ ಉತ್ಸವವನ್ನು ಆಯೋಜಿಸಲಾಗುತ್ತಿದ್ದು, ಇದರ ಜೊತೆಗೆ ರಾಜ್ಯದ 12 ಕಡೆ ಖಾದಿಉತ್ಸವಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದು ವಿವರಿಸಿದ ಅವರು ಒಂದು ತಿಂಗಳೊಳಗೆ ಇದರ ವೇಳಾ ಪಟ್ಟಿ ಹಾಗೂ ರೂಪುರೇಷೆಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಬಳ್ಳಾರಿಯಲ್ಲಿ ಈ ಹಿಂದೆ ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ಮಾರಾಟ ಮೇಳ ಮಾಡಿದಾಗ ಉತ್ತಮ ಪ್ರತಿಕ್ರಿಯೆ ಬಂದಿದೆ. ಜಿಲ್ಲೆಯಲ್ಲಿ 7 ಖಾದಿ ಗ್ರಾಮೋದ್ಯೋಗ ಸಂಸ್ಥೆಗಳು ಲಾಭದಾಯಕವಾಗಿ ನಡೆಯುತ್ತಿವೆ ಎಂದು ಅವರು ವಿವರಿಸಿದರು.
ನಾನು ಅಧ್ಯಕ್ಷರಾಗಿ ನಾಲ್ಕು ತಿಂಗಳಾಗಿದ್ದು, ಈ ಅವಧಿಯಲ್ಲಿ 12 ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ರಾಜ್ಯದ 30 ಜಿಲ್ಲೆಗಳಲ್ಲಿಯೂ ನಮ್ಮ ಖಾದಿ ಮಂಡಳಿಯ ಆಸ್ತಿಗಳಿದ್ದು,ಅವುಗಳ ಸಂರಕ್ಷಣೆ ಮಾಡಲು ಆದ್ಯತೆ ನೀಡುವುದಾಗಿ ತಿಳಿಸಿದರು.
ರಾಜ್ಯದ ಪ್ರವಾಸ ಮಾಡಿದಾಗ ನನ್ನ ಗಮನಕ್ಕೆ ಬಂದಂತೆ ಗ್ರಾಮೋದ್ಯೋಗ ಕ್ಷೇತ್ರಗಳಲ್ಲಿ ಮಹಿಳೆಯರೇ ಹೆಚ್ಚು, ಹಿಗಾಗಿ ಮಹಿಳೆಯರಿಗೆ ಅಗತ್ಯ ಇರುವ ಕಡೆ ತರಬೇತಿ ಕೇಂದ್ರ ನಿರ್ಮಿಸಲು ಉದ್ದೇಶಿಸಲಾಗಿದ್ದು, ವಿಭಾಗೀಯ ಮಟ್ಟದಲ್ಲಿ ಒಂದೊಂದು ತರಬೇತಿ ಕೇಂದ್ರ ನಿರ್ಮಿಸುವ ಯೋಚನೆ ಇದೆ ಎಂದರು.
ಈ ಸಂದರ್ಭದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಕನ್ಸಲ್ಟಂಟ್‍ಗಳಾದ ಶಶಿಧರ, ಸುದರ್ಶನ್, ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಅಧಿಕಾರಿ ಗೋವಿಂದಪ್ಪ ಸೇರಿದಂತೆ ಇತರರು ಇದ್ದರು.

LEAVE A REPLY

Please enter your comment!
Please enter your name here