ದುರ್ಬಲವಾಯಿತು ಮೋದಿ ಅಲೆ ಮೇಲೆದ್ದಿದೆ ತೃತೀಯ ರಂಗದ ತಲೆ

0
160

ವಿವಿಧ ರಾಜ್ಯಗಳಲ್ಲಿ ನಡೆದ ಚುನಾವಣೆಯ ಫಲಿತಾಂಶ ಪ್ರಧಾನಿ ನರೇಂದ್ರಮೋದಿ ಅವರ ಅಲೆ ದುರ್ಬಲವಾಗಿದೆ ಎಂಬುದನ್ನು ಎತ್ತಿ ತೋರಿಸಿದೆಯಷ್ಟೇ ಅಲ್ಲ, ರಾಷ್ಟ್ರ ರಾಜಕಾರಣದಲ್ಲಿ ತೃತೀಯ ಶಕ್ತಿಗಳು ಪುನ: ಮೇಲೆದ್ದು ನಿಲ್ಲಲಿವೆ ಎಂಬ ಖಚಿತ ಸೂಚನೆ ನೀಡಿದೆ.
ಅದೇ ರೀತಿ ಉಪಚುನಾವಣೆಗಳಲ್ಲಿ ಬಿಜೆಪಿ ಎರಡು ಕಡೆ ಗೆದ್ದರೂ ಜನಬೆಂಬಲ ಕ್ಷೀಣಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಖುರ್ಚಿ ಮೆಲ್ಲಗೆ ಅಲುಗಾಡತೊಡಗಿದೆ.
ಅಂದ ಹಾಗೆ ಐದು ರಾಜ್ಯಗಳಿಗೆ ಚುನಾವಣೆ ನಡೆದರೂ ಅಂತಿಮವಾಗಿ ದೇಶದ ಗಮನ ಇದ್ದುದು ಪಶ್ಚಿಮ ಬಂಗಾಳ ಹಾಗೂ ತಮಿಳ್ನಾಡು ವಿಧಾನಸಭಾ ಚುನಾವಣೆಗಳ ಮೇಲೆ ಎಂಬುದು ನಿಸ್ಸಂಶಯ.
ಆದರೆ ಅಲ್ಲಿ ಅನುಕ್ರಮವಾಗಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಮತ್ತು ಸ್ಪಾಲಿನ್ ನೇತೃತ್ವದ ಡಿಎಂಕೆ ಗೆಲುವು ಗಳಿಸಿ ಅಧಿಕಾರ ಹಿಡಿದಿವೆ.ಈ ಮಧ್ಯೆ ಕೇರಳದಲ್ಲಿ ಬಿಜೆಪಿ ತಲೆ ಎತ್ತಲು ಸಾಧ್ಯವೇ ಆಗಿಲ್ಲ.ಹೀಗಾಗಿ ಏಳು ವರ್ಷಗಳ ನಂತರ ಇದೇ ಮೊದಲ ಬಾರಿ ಬಿಜೆಪಿ ಸಂಕಷ್ಟದ ದಿನಗಳತ್ತ ಮುಖ ಮಾಡಿದಂತಾಗಿದೆ.
ಅಂದ ಹಾಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಅಪೂರ್ವ ಗೆಲುವು ಗಳಿಸಿದ್ದೇನೋ ನಿಜ.ಆದರೆ ಅದರ ಗೆಲುವಿಗೆ ಸಹಕಾರಿಯಾದ ರಾಜ್ಯಗಳಲ್ಲಿ ಮುಂದಿನ ಚುನಾವಣೆ ವೇಳೆಗೆ ಪಕ್ಷದ ಶಕ್ತಿ ಕುಸಿದಿರುತ್ತದೆ ಎಂಬುದು ಕಮಲ ಪಾಳೆಯದ ವರಿಷ್ಟರಿಗೆ ಗೊತ್ತಿತ್ತು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದಿಲ್ಲಿಯನ್ನು ವಶಪಡಿಸಿಕೊಳ್ಳಲು ಕಾರಣವಾದ ಉತ್ತರ ಪ್ರದೇಶ,ಮಹಾರಾಷ್ಟ್ರ,ಕರ್ನಾಟಕದಂತಹ ರಾಜ್ಯಗಳು ಮುಂದಿನ ಚುನಾವಣೆಯಲ್ಲಿ ದೊಡ್ಡ ಮಟ್ಟದ ಲಾಭ ತರುವುದಿಲ್ಲ ಎಂಬುದು ಅವರ ಲೆಕ್ಕಾಚಾರ.
ಉತ್ತರ ಪ್ರದೇಶ,ಕರ್ನಾಟಕ,ಮಹಾರಾಷ್ಟ್ರದಲ್ಲಿ ಗೆದ್ದ ಸೀಟುಗಳ ಸಂಖ್ಯೆ ಮುಂದಿನ ಚುನಾವಣೆಯಲ್ಲಿ ಕಡಿಮೆಯಾಗಲಿವೆ.ಹೀಗಾಗಿ ಆಗುವ ಕೊರತೆಯನ್ನು ನೀಗಿಕೊಳ್ಳಲು ಪಶ್ಚಿಮ ಬಂಗಾಳ,ತಮಿಳ್ನಾಡಿನಂತಹ ರಾಜ್ಯಗಳಲ್ಲಿ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎಂಬುದು ಅವರ ಇರಾದೆ ಆಗಿತ್ತು.
ಪಶ್ಚಿಮ ಬಂಗಾಳದಲ್ಲಿ ಕಳೆದ ಲೋಕಸಭಾ ಚುನಾವಣೆಯ ವೇಳೆಗೆ ಮಮತಾ ಬ್ಯಾನರ್ಜಿ ಶಕ್ತಿಯನ್ನು ಕುಗ್ಗಿಸಲು ಕಮ್ಯೂನಿಸ್ಟರು ಪರೋಕ್ಷವಾಗಿ ಬಿಜೆಪಿಯ ಜತೆ ಕೈ ಜೋಡಿಸಿದ್ದರ ಪರಿಣಾಮವಾಗಿ ಕಮಲ ಪಾಳೆಯ ಅಲ್ಲಿ ಝಗಮಗಿಸಿತ್ತು.
ಕಳೆದ ಲೋಕಸಭಾ ಚುನಾವಣೆಯಲ್ಲಿ ನಡೆದ ಕಮ್ಯೂನಿಸ್ಟರ ವಲಸೆ ಈ ಬಾರಿಯೂ ತಮಗೆ ಶಕ್ತಿ ತುಂಬಲಿದೆ ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿತ್ತು.ಆದರೆ ಪಶ್ಚಿಮ ಬಂಗಾಳದ ಮತದಾರರು ನಿರ್ಣಾಯಕವಾಗಿ ಆ ಪಕ್ಷದ ಪಕ್ಕೆಲುಬು ಅದುರಿ ಹೋಗುವಂತೆ ಹೊಡೆತ ನೀಡಿದ್ದಾರಲ್ಲದೆ ಕಮ್ಯೂನಿಸ್ಟರ ಬಲಿದಾನ ವ್ಯರ್ಥವಾಗುವಂತೆ ಮಾಡಿದ್ದಾರೆ.
ಈ ಮಧ್ಯೆ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಅನುಸರಿಸಿದ ತಂತ್ರದಿಂದ ರೊಚ್ಚಿಗೆದ್ದ ಮಮತಾ ಬ್ಯಾನರ್ಜಿ:ಇಲ್ಲಿ ಗೆದ್ದು ದಿಲ್ಲಿಗೆ ಲಗ್ಗೆ ಇಡುತ್ತೇನೆ.ಪಶ್ಚಿಮ ಬಂಗಾಳದ ಆಡಳಿತವನ್ನು ಹೊರಗಿನವರು ನಡೆಸಲು ಬಿಡುವುದಿಲ್ಲ ಎಂದು ಅಬ್ಬರಿಸಿದ್ದರು.
ಈಗ ಅವರ ಅಬ್ಬರಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಿದೆಯಲ್ಲದೆ ಏಕಕಾಲಕ್ಕೆ ಹಿಂದೆ ತಮ್ಮ ಗೆಲುವಿಗೆ ಪೂರಕವಾಗಿದ್ದ ರಾಜ್ಯಗಳಲ್ಲಿ ಕುಸಿಯುತ್ತಿರುವ ಬಿಜೆಪಿ ಅಲೆ ಮತ್ತು ಹೊಸ ಚುನಾವಣೆಗಳಲ್ಲಿ ಅನುಭವಿಸಿದ ಸೋಲು ಮೊದಲ ಬಾರಿ ಬಿಜೆಪಿಯ ರಾಷ್ಟ್ರೀಯ ನಾಯಕರು ಕಂಗಾಲಾಗುವಂತೆ ಮಾಡಿದೆ.
ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರದಲ್ಲಿರಲಿಲ್ಲ ಎಂಬುದು ನಿಜ.ಆದರೆ ಜಯಲಲಿತಾ ಸಾವಿನ ನಂತರ ಅಲ್ಲಿ ಅಧಿಕಾರ ನಡೆಸುತ್ತಿದ್ದ ಎಐಎಡಿಎಂಕೆ ಪಕ್ಷವನ್ನು ಬಿಜೆಪಿ ವರಿಷ್ಟರನ್ನು ತಮ್ಮ ಮುಷ್ಟಿಯಲ್ಲಿ ಹಿಡಿದುಕೊಂಡಿದ್ದರು ಎಂಬುದು ನಿರ್ವಿವಾದ.
ಅಲ್ಲಿನ ಮುಖ್ಯಮಂತ್ರಿ ಯಳಪ್ಪಾಡಿ ಪಳನಿಸ್ವಾಮಿ ಅವರು ದಿಲ್ಲಿಗೆ ಹೋದರೆ ಪ್ರಧಾನಿಯ ಕಾಲಿಗೆ ಬಿದ್ದು ಬರುತ್ತಾರೆ.ಇದಕ್ಕೆ ಅವರು ಮಾಡಿಕೊಂಡಿರುವು ಹಗರಣ ಕಾರಣ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿದ್ದ ಆರೋಪವನ್ನು ಗಮನಿಸಿದರೆ ತಮಿಳ್ನಾಡಿನ ರಾಜಕಾರಣದ ಮೇಲೆ ಬಿಜೆಪಿ ಯಾವ ರೀತಿಯ ಪ್ರಭಾವ ಬೀರಲು ಹೊರಟಿತ್ತು ಎಂಬುದು ಸ್ಪಷ್ಟವಾಗುತ್ತದೆ.
ಆದರೆ ಅಲ್ಲೀಗ ಕರುಣಾನಿಧಿ ಪುತ್ರ ಸ್ಟಾಲಿನ್ ನೇತೃತ್ವದ ಡಿಎಂಕೆ ಜಯಭೇರಿ ಬಾರಿಸಿದೆ.ಅಂದ ಹಾಗೆ ದೇಶದಲ್ಲಿ ತೃತೀಯ ಶಕ್ತಿ ಅಧಿಕಾರ ಹಿಡಿಯುವುದರ ಹಿಂದೆ ಬಹುಮುಖ್ಯ ಪಾತ್ರ ವಹಿಸಿದ್ದ ಶಕ್ತಿಗಳಲ್ಲಿ ಡಿಎಂಕೆ ಕೂಡಾ ಒಂದು ಎಂಬುದನ್ನು ಮರೆಯಬಾರದು.
ಹೀಗೆ ಪಶ್ಚಿಮ ಬಂಗಾಳ ಹಾಗೂ ತಮಿಳ್ನಾಡುಗಳಲ್ಲಿ ಟಿಎಂಸಿ ಹಾಗೂ ಡಿಎಂಕೆ ಗಳಿಸಿದ ಗೆಲುವು ದೇಶದ ಬಹುತೇಕ ರಾಜ್ಯಗಳಲ್ಲಿ ನೆಲೆಸಿರುವ ಪರಿಸ್ಥಿತಿಗೆ ಉತ್ತೇಜನ ನೀಡುವಂತಿದೆ.
ಉದಾಹರಣೆಗೆ ಆಂಧ್ರಪ್ರದೇಶ,ತೆಲಂಗಾಣ,ಮಹಾರಾಷ್ಟ್ರ,ಕೇರಳ,ಕರ್ನಾಟಕದಂತಹ ರಾಜ್ಯಗಳನ್ನೇ ತೆಗೆದುಕೊಳ್ಳಿ.ಈ ಪೈಕಿ ಆಂಧ್ರಪ್ರದೇಶ ತೃತೀಯ ಶಕ್ತಿಗೆ ಟಾನಿಕ್ ನೀಡಿದಾಗಲೆಲ್ಲ ತನ್ನ ರಾಜ್ಯಕ್ಕೆ ಬಂಪರ್ ಯೋಜನೆಗಳನ್ನು ಪಡೆದುಕೊಂಡಿದೆ.ಮತ್ತು ಕೇಂದ್ರದ ಅಧಿಕಾರದಲ್ಲಿ ಪಾಲು ಪಡೆದಿದೆ.
ಆದರೆ ಆಂಧ್ರಪ್ರದೇಶವೇ ಇರಲಿ,ತೆಲಂಗಾಣವೇ ಇರಲಿ ಅವು ಮೋದಿ ಯುಗದಲ್ಲಿ ಸಂಪೂರ್ಣ ಬಳಲಿ ಹೋಗಿವೆ.ಅವಕ್ಕೀಗ ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಮೋದಿ ಯುಗದಲ್ಲಿ ಸಾಧ್ಯವಾಗುತ್ತಿಲ್ಲ.ಇದೇ ಪರಿಸ್ಥಿತಿ ಒರಿಸ್ಸಾ,ತಮಿಳ್ನಾಡು,ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲೂ ಇದೆ.
ನರೇಂದ್ರಮೋದಿ ಕಾಲದಲ್ಲಿ ಈ ರಾಜ್ಯಗಳು ಸಂಪೂರ್ಣ ಶಕ್ತಿ ಕಳೆದುಕೊಂಡಿವೆಯಷ್ಟೇ ಅಲ್ಲದೆ ತಮ್ಮ ರಾಜ್ಯಗಳ ಹಿತ ಕಾಪಾಡಿಕೊಳ್ಳುವ ವಿಷಯದಲ್ಲಿ ಮೋದಿ ಬಳಗದ ವಿರುದ್ಧ ನಿಲ್ಲಲಾಗದ ಸ್ಥಿತಿಯಲ್ಲಿದ್ದವು.ಜಿ.ಎಸ್.ಟಿ ತೆರಿಗೆಯಲ್ಲೂ ತಮ್ಮ ಪಾಲಿನ ಹಣ ಕೊಡದ ಮೋದಿ ಸರ್ಕಾರದ ವಿರುದ್ಧ ಈ ಎಲ್ಲ ರಾಜ್ಯಗಳೂ ಕಡು ಕೋಪ ಹೊಂದಿದ್ದವು ಎಂಬುದೂ ನಿಜ.
ಇನ್ನು ಕೊರೋನಾ ಕಾಲಘಟ್ಟವನ್ನು ನಿಭಾಯಿಸಲು ನರೇಂದ್ರಮೋದಿ ಸರ್ಕಾರ ವಿಫಲರಾಗಿದ್ದು ಕೂಡಾ ಬಹುತೇಕ ರಾಜ್ಯಗಳಿಗೆ ಆಕ್ರೋಶ ತಂದಿರುವುದು ಸ್ಪಷ್ಟ.
ಹೀಗಾಗಿ ಈ ಎಲ್ಲ ರಾಜ್ಯಗಳು ಕೇಂದ್ರದಲ್ಲಿ ಮರಳಿ ತೃತೀಯ ಶಕ್ತಿಗಳ ಯುಗ ಆರಂಭವಾಗಲಿ ಎಂದು ಬಯಸುತ್ತಿವೆ.ತೃತೀಯ ರಂಗ ಎಂದರೆ ಸ್ಥೂಲ ಅರ್ಥದಲ್ಲಿ ಯುಪಿಎ ರೂಪವನ್ನೂ ಪಡೆಯಬಹುದು.ಆದರೆ ಯುಪಿಎ ರೂಪ ಕಾಣಿಸಿಕೊಳ್ಳಲೂ ತೃತೀಯ ಶಕ್ತಿಗಳೇ ಮುಂದೆ ನಿಲ್ಲಬೇಕು.
ಕರ್ನಾಟಕದಲ್ಲಿ ಒಂದು ಲೋಕಸಭೆ ಮತ್ತು ಎರಡು ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಿತು.ಈ ಪೈಕಿ ಒಂದು ಲೋಕಸಭೆ ಮತ್ತು ಒಂದು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಗಳಿಸಿದರೂ,ಬೆಳಗಾವಿಯ ಗೆಲುವು ಬಿಜೆಪಿಗೆ ನಿರಾಸೆ ತಂದಿರುವುದು ನಿಜ.
ಯಾಕೆಂದರೆ ಈ ಹಿಂದೆ ಸಂಸದರಾಗಿದ್ದ ಸುರೇಶ್ ಅಂಗಡಿ ಈ ಕ್ಷೇತ್ರದಲ್ಲಿ ಸುಮಾರು ನಾಲ್ಕು ಲಕ್ಷ ಮತಗಳ ಲೀಡ್ ಪಡೆದು ಗೆಲುವು ಗಳಿಸಿದ್ದರು.ಆದರೆ ಈಗ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿಯ ಮುಂದೆ ಬಿಜೆಪಿ ಕ್ಯಾಂಡಿಡೇಟ್ ಬಳಲಿ ಹೋಗಿದ್ದಾರೆ.
ಬಸವಕಲ್ಯಾಣ ಕ್ಷೇತ್ರದಲ್ಲಿ ಜೆಡಿಎಸ್ ನೀಡಿದ ಪರೋಕ್ಷ ಸಹಕಾರ ಬಿಜೆಪಿ ತಲೆ ಮೇಲೆತ್ತುವಂತೆ ಮಾಡಿದ್ದರೆ,ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿನ ಸೋಲು ಸ್ವತ: ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನೇ ಕಂಗೆಡಿಸಿದೆ.
ಯಾಕೆಂದರೆ ಅಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದವರು ಪ್ರತಾಪ್ ಗೌಡ ಪಾಟೀಲ್.ಅವರು ಆಪರೇಷನ್ ಕಮಲ ಕಾರ್ಯಾಚರಣೆಗೆ ಬಲಿಯಾಗಿ ಬಿಜೆಪಿ ಸೇರಿದವರು.ಆದರೆ ಬಿಜೆಪಿ ಸೇರಿ ಚುನಾವಣೆಯಲ್ಲಿ ಸ್ಪರ್ಧಿಸಿದರೂ ಅವರು ಗೆಲುವು ಗಳಿಸಿಲ್ಲ.
ಇತ್ತೀಚೆಗಷ್ಟೇ ರಾಜ್ಯದ ಹತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿತ್ತು.ಅದರ ಬೆನ್ನಲ್ಲಿಯೇ ಈ ಫಲಿತಾಂಶಗಳು ಬಿಜೆಪಿ ಪಾಳೆಯದ ಮೇಲೆ ನಿರಾಸೆಯ ಕಾರ್ಮೋಡ ಕವಿಯುವಂತೆ ಮಾಡಿದೆ.
ಅಷ್ಟೇ ಅಲ್ಲ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಖುರ್ಚಿ ನಡುಗುತ್ತಿದೆ ಎಂಬುದನ್ನೂ ಸ್ಪಷ್ಟ ಪಡಿಸಿದೆ.
ಒಟ್ಟಿನಲ್ಲಿ ಇಲ್ಲಿ ಯಡಿಯೂರಪ್ಪ ಶಕ್ತಿ ಕುಂದಿದ್ದರೆ, ದೇಶದಲ್ಲಿ ಮತ್ತೊಮ್ಮೆ ಮಮತಾ ಬ್ಯಾನರ್ಜಿ,ಸ್ಟಾಲಿನ್,ಜಗನ್ ಮೋಹನ್ ರೆಡ್ಡಿ,ಚಂದ್ರಶೇಖರರಾವ್,ನವೀನ್ ಪಾಟ್ನಾಯಕ್,ಶರದ್ ಪವಾರ್,ದೇವೇಗೌಡರಂತವರೆಲ್ಲ ಸೇರಿ ತೃತೀಯ ಶಕ್ತಿಯನ್ನು ಮೇಲಕ್ಕೆತ್ತಲು ಬಯಸುವುದು,ಆ ಮೂಲಕ ಕಾಂಗ್ರೆಸ್ ಒಳಗೊಂಡ ಯುಪಿಎ ಮೈತ್ರಿ ಕೂಟ ತಲೆ ಎತ್ತುವ ಸಾಧ್ಯತೆಗಳು ನಿಚ್ಚಳವಾಗಿ ಕಾಣಿಸತೊಡಗಿವೆ.
ಇಂತಹ ಪರಿಸ್ಥಿತಿ ಉದ್ಭವವಾಗುವುದಿಲ್ಲವೇನೋ?ಎಂದು ರಾಜಕೀಯ ವಲಯಗಳು ಭಾವಿಸಿದ್ದವು.ಆದರೆ ಇತಿಹಾಸದ ಚಕ್ರ ತಿರುಗುತ್ತಲೇ ಇರುತ್ತದೆ ಎಂಬುದನ್ನು ಚುನಾವಣೆಯ ಫಲಿತಾಂಶಗಳು ಸಾಬೀತುಪಡಿಸಿವೆ.

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here