ಕೊರೋನ ನಿಯಂತ್ರಣ ಕಾರ್ಯದಲ್ಲಿ ವಾಣಿಜ್ಯೋದ್ಯಮಿಗಳು ಸಹಕರಿಸಲು ಮನವಿ

0
75

ಶಿವಮೊಗ್ಗ : ವಿಶ್ವವ್ಯಾಪಿಯಾಗಿ ಜನಜೀವನ ಅಸ್ತವ್ಯಸ್ಥಗೊಳಿಸಿರುವ ಹಾಗೂ ಅತೀ ವೇಗದಲ್ಲಿ ಹರಡುತ್ತಿರುವ ಮಾರಣಾಂತಿಕ ಕೊರೋನ ಸೋಂಕು ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ಕೈಗೊಳ್ಳುವ ನಿರ್ಧಾರಗಳಿಗೆ ಜಿಲ್ಲೆಯ ವಾಣಿಜ್ಯೋದ್ಯಮಿಗಳು, ಕೈಗಾರಿಕೋದ್ಯಮಿಗಳು, ವ್ಯವಹಾರಸ್ಥರು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಮನವಿ ಮಾಡಿದರು.
ಅವರು ಇಂದು ಜಿಲ್ಲಾಡಳಿತ ಸಭಾಂಗಣದಲ್ಲಿ ವಾಣಿಜ್ಯೋದ್ಯಮಿಗಳೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಯಲ್ಲಿ ಸೋಂಕು ಹರಡುವಿಕೆಯು ಶೇ.10ರಷ್ಟಿರುವುದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ನಿನ್ನೆಯಿಂದ ಆರಂಭಗೊಂಡು ವಾರದ ದಿನಗಳಲ್ಲಿ ಮೇ 04ರವರೆಗೆ ಜಿಲ್ಲೆಯಾಧ್ಯಂತ ಕೆಲವು ನಿರ್ಬಂಧಗಳನ್ನು ಹೊರಡಿಸಲಾಗಿದೆ. ಇದರಿಂದಾಗಿ ಜನಸಾಮಾನ್ಯರ ಜೀವನ ನಿರ್ವಹಣೆಗೆ ಅಲ್ಪಮಟ್ಟಿನ ಅಡಚಣೆ ಆಗಬಹುದಾದರೂ ನಿಯಂತ್ರಣ ಕ್ರಮ ಅನಿವಾರ್ಯವಾಗಿದೆ. ಆದ್ದರಿಂದ ಸಾರ್ವಜನಿಕರು ಜಿಲ್ಲಾಡಳಿತದ ಈ ಕ್ರಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅವರು ಸೂಚಿಸಿದರು.
ಈ ಅವಧಿಯಲ್ಲಿ ಬೆಳಿಗ್ಗೆ 6ರಿಂದ ರಾತ್ರಿ 9ರವರೆಗೆ ಕಟ್ಟಡ ಕಾಮಗಾರಿಗಳು, ಕಟ್ಟಡ ಸಾಮಗ್ರಿಗಳ ವಹಿವಾಟು, ದಿನಸಿ, ಆಹಾರ ಸಾವiಗ್ರಿಗಳ ಪೂರೈಸುವ ಅಂಗಡಿ, ಪಶು ಆಹಾರ ಪೂರೈಕೆ ಘಟಕಗಳು, ತರಕಾರಿ, ಹಾಲು ಹಣ್ಣು ವ್ಯಾಪಾರಗಳಿಗೆ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ. ಉಳಿದಂತೆ ಹೋಲ್‍ಸೇಲ್ ವ್ಯವಹಾರಸ್ಥರು ತಮ್ಮ ಕ್ಷೇತ್ರದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಸೂಚಿಸಿದ ಅವರು, ಜಿಲ್ಲೆಯ ಕೆಲವು ಕಡೆಗಳಲ್ಲಿ ಸಂಕೀರ್ಣ ಸ್ಥಳದಲ್ಲಿ ಮಾರುಕಟ್ಟೆಗಳಿರುವುದನ್ನು ಗಮನಿಸಲಾಗಿದೆ. ಅಂತಹ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹಾಗೂ ಸುರಕ್ಷತಾ ಕ್ರಮಗಳನ್ನು ಅನುಸರಿಸಿ, ಯಾವುದೇ ವ್ಯಕ್ತಿಗೆ ಅಡಚಣೆಯಾಗದಂತೆ ವ್ಯವಹರಿಸಲು ಸೂಚಿಸಿದರು.
ವೈನ್ಸ್, ಹೋಟೆಲ್, ರೆಸ್ಟೋರೆಂಟ್‍ಗಳಲ್ಲಿ ಸ್ಥಳೀಯವಾಗಿ ಸೇವೆ ಒದಗಿಸಲು ಇದ್ದ ಅವಕಾಶವನ್ನು ನಿರ್ಬಂಧಿಸಲಾಗಿದೆ. ಆದರೆ ಪಾರ್ಸಲ್ ಸರ್ವೀಸ್‍ಗೆ ಅವಕಾಶ ನೀಡಲಾಗಿದೆ. ಕೃಷಿ ಮತ್ತು ಕೃಷಿ ಸಂಬಂಧಿತ ವಹಿವಾಟು, ಸಾಗಾಣಿಕೆ, ಪೆಟ್ರೋಲ್ ಬಂಕ್, ಸೆಲೂನ್, ಬ್ಯೂಟಿಪಾರ್ಲರ್‍ಗಳಿಗೆ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ. ವಿಶೇಷವಾಗಿ ಜನಸಂದಣಿಯ ಬಟ್ಟೆ ಅಂಗಡಿಗಳು, ಚಿನ್ನ-ಬೆಳ್ಳಿ ಆಭರಣ ಮಳಿಗೆಗಳು ತೆರೆಯದಂತೆ ಸೂಚಿಸಲಾಗಿದೆ ಎಂದರು.
ಪೂರ್ವಯೋಜಿತ ಮದುವೆ, ಸಭೆ-ಸಮಾರಂಭಗಳಿಗೆ ಸ್ಥಳೀಯ ಸಂಸ್ಥೆಗಳ ಅನುಮತಿ ಪಡೆದು 50ಜನ ಮೀರದಂತೆ, ಅಂತ್ಯ ಸಂಸ್ಕಾರಗಳಿಗೆ 20ಜನಕ್ಕೆ ಮೀರದಂತೆ ಪಾಲ್ಗೊಳ್ಳಲು ಅವಕಾಶ ನೀಡಿದೆ. ಬಸ್‍ನಲ್ಲಿ ಶೇ.50ರಷ್ಟು ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ ಎಂದರು.
ನೈಟ್ ಕರ್ಫ್ಯೂ : ಪ್ರತಿದಿನ ರಾತ್ರಿ 9ರಿಂದ ಬೆಳಿಗ್ಗೆ 6ರವರೆಗೆ ಸಾರ್ವಜನಿಕ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಈಗಾಗಲೇ ರಾತ್ರಿ ಪ್ರಯಾಣಕ್ಕೆ ಟಿಕೇಟ್ ಕಾಯ್ದಿರಿಸಿದ್ದಲ್ಲಿ, ರೋಗಿಗಳಿಗೆ, ಅಂಬುಲೆನ್ಸ್ ಓಡಾಟಕ್ಕೆ, ಔಷಧಗಳ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಮಾರ್ಗಸೂಚಿಗಳನ್ನು ಅನುಸರಿಸಿ ನಡೆಸುವ ಕೈಗಾರಿಕೆಗಳಿಗೆ ಅನುಮತಿ ನೀಡಲಾಗಿದೆ. ಕೈಗಾರಿಕೆಗಳ ಸಂಸ್ಥೆಯ ಮುಖ್ಯಸ್ಥರು ತಮ್ಮ ಸಿಬ್ಭಂದಿಗಳಿಗೆ ಗುರುತಿನ ಚೀಟಿ ನೀಡುವುದು ಕಡ್ಡಾಯ ಎಂದವರು ನುಡಿದರು.
ವಾರಾಂತ್ಯದ ದಿನಗಳಲ್ಲಿ ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂಧಿಗಳಿಗೆ ಕೈಗಾರಿಕಾ ಸಂಸ್ಥೆಯ ಮುಖ್ಯಸ್ಥರು ಅವಕಾಶವಿದ್ದಲ್ಲಿ ಮನೆಯಿಂದ ಕಾರ್ಯನಿರ್ವಹಿಸುವ ಅವಕಾಶ ನೀಡುವಂತೆ ಸೂಚಿಸಿದ ಅವರು ಅನಗತ್ಯವಾಗಿ ಪ್ರಯಾಣಿಸುವವರನ್ನು ನಿರ್ಬಂಧಿಸಿದೆ. ಅಂತೆಯೇ ಬೆಳಿಗ್ಗೆ 6ರಿಂದ 10ವರೆಗೆದೈನಂದಿನ ಸರಕು ಸಾಮಾಗ್ರಿಗಳು ಮಾರಾಟ ಮತ್ತು ಖರೀದಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ನಗರದ ಸಕ್ರ್ಯೂಟ್‍ಹೌಸ್‍ನಿಂದ ಬಸ್‍ಸ್ಟ್ಯಾಂಡ್‍ವರೆಗೆ ರಸ್ತೆಗಳ ಇಕ್ಕೆಲಗಳಲ್ಲಿ ರಸ್ತೆ ಬದಿ ಅಂಗಡಿಗಳನ್ನು ತೆರೆವುಗೊಳಿಸುವಂತೆ ಸೂಚಿಸಲಾಗಿದೆ. ಕೈಗಾರಿಕೋದ್ಯಮಿಗಳು ತಮ್ಮ ಘಟಕದ ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಚವಾಗಿಟ್ಟುಕೊಳ್ಳುವಂತೆ ಸೂಚಿಸಿದೆ.
ಸಭೆಯಲ್ಲಿ ಉಪಸ್ಥಿತರಿದ್ದ ಮಹಾನಗರಪಾಲಿಕೆ ಆಯುಕ್ತ ಚಿದಾನಂದ ವಟಾರೆ ಅವರು ಮಾತನಾಡಿ, ಮುಂದಿನ ಆದೇಶದವರೆಗೆ ಗಾಂಧಿಬಜಾರ್‍ನಲ್ಲಿ ನಡೆಸಲಾಗುತ್ತಿದ್ದ ಸಂತೆಯನ್ನು ರದ್ದುಪಡಿಸಿ ಆದೇಶ ಹೊರಡಿಸಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮೀಪ್ರಸಾದ್, ಅಪರ ಜಿಲ್ಲಾಧಿಕಾರಿ ಶ್ರೀಮತಿ ಅನುರಾಧ ಜಿ., ಆರ್ಯ ವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here