ಸಿಎಂ ಬೊಮ್ಮಾಯಿ ವಿರುದ್ಧ ಧಿಡೀರ್ ಕ್ರಾಂತಿಯ ಕನಸು

0
309

ಕೆಲ ದಿನಗಳ ಹಿಂದೆ ವಸತಿ ಸಚಿವ ವಿ.ಸೋಮಣ್ಣ ಅವರು ಮುಖ್ಯಮಂತ್ರಿಗಳ ಗೃಹ ಕಛೇರಿ ಕೃಷ್ಣಾಗೆ ಹೋದರು.
ತಮ್ಮ ಇಲಾಖೆಗೆ ಸಂಬಂಧಿಸಿದ ಮುಖ್ಯ ವಿಷಯವೊಂದರ ಬಗ್ಗೆ ಮುಖ್ಯಮಂತ್ರಿಗಳ ಜತೆ ತುರ್ತಾಗಿ ಚರ್ಚಿಸುವುದು ಅವರ ಉದ್ದೇಶ.ಆದರೆ ಹೀಗೆ ಕೃಷ್ಣಾಗೆ ಬಂದವರು ಮಹಡಿಯ ಮೇಲಿದ್ದ ಮುಖ್ಯಮಂತ್ರಿಗಳ ಆ್ಯಂಟಿ ಚೇಂಬರ್ ಬಳಿ ಹೋದರೆ ಬಾಗಿಲಿನಲ್ಲೇ ಹಿರಿಯ ಅಧಿಕಾರಿಯೊಬ್ಬರು ನಿಂತಿದ್ದರು.
ಅವರನ್ನು ಗಮನಿಸುತ್ತಲೇ ಒಳಗೆ ಹೋಗಲು ಸಚಿವ ಸೋಮಣ್ಣ ಹೊರಟರಾದರೂ ಆ ಅಧಿಕಾರಿ ಮೆಲ್ಲಗೆ ಅಡ್ಡ ಬಂದು:ಸಾಹೇಬರು ಬಹುಮುಖ್ಯ ವಿಷಯವೊಂದರ ಬಗ್ಗೆ ಇಂಡಸ್ಟ್ರಿಯಲಿಸ್ಟ್ ಒಬ್ಬರ ಜತೆ ಚರ್ಚಿಸುತ್ತಿದ್ದಾರೆ.ಸ್ವಲ್ಪ ಕಾಲ ವೇಯ್ಟ್ ಮಾಡಿ ಪ್ಲೀಸ್ ಎಂದರು.
ಸೋಮಣ್ಣ ಅವರಿಗೆ ರೇಗಿ ಹೋಯಿತು.ಮುಖ್ಯಮಂತ್ರಿಗಳನ್ನು ನೋಡಲು ಸಚಿವರಾದವರು ಬಂದರೆ ಅವರನ್ನು ಬಾಗಿಲಲ್ಲಿ ಯಾರೂ ತಡೆಯುವುದಿಲ್ಲ.ಸಚಿವರು ಅಂತಲ್ಲ,ಶಾಸಕರಾದವರನ್ನೂ ಮುಖ್ಯಮಂತ್ರಿಗಳು ಕಾಯಿಸುವುದು ಕಡಿಮೆ.
ಆದರೆ ಯಾವಾಗ ತಮ್ಮನ್ನು ಬಾಗಿಲಲ್ಲಿ ತಡೆಯುವ ಕೆಲಸವಾಯಿತೋ?ಇದರಿಂದ ಸಚಿವ ಸೋಮಣ್ಣ ಸಿಟ್ಟಿಗೆದ್ದರು.ಅಂದ ಹಾಗೆ ಅವತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿರ್ದಿಷ್ಟ ಸಭೆ ಅಂತೇನೂ ಮಾಡುತ್ತಿರಲಿಲ್ಲ.ಬದಲಿಗೆ ತಮ್ಮನ್ನು ನೋಡಲು ಬಂದ ಕೈಗಾರಿಕೋದ್ಯಮಿ ಒಬ್ಬರ ಬಳಿ ಮಾತನಾಡುತ್ತಿದ್ದರು.
ಹೀಗಿದ್ದಾಗ ಸಚಿವನಾಗಿ ನಾನು ಬಾಗಿಲಲ್ಲಿ ನಿಂತು ಕಾಯುವ ಪರಿಸ್ಥಿತಿ ಸೃಷ್ಟಿಸುವುದೇ?ಎಂದು ಸೋಮಣ್ಣ ಸಿಟ್ಟಿಗೆದ್ದರು.ಅಷ್ಟೇ ಅಲ್ಲ,ತಮ್ಮನ್ನು ತಡೆದ ಅಧಿಕಾರಿಯ ವಿರುದ್ಧ ಗುರುಗುಟ್ಟಿ ಅಲ್ಲಿಂದ ಹೊರನಡೆದರು.
ಈ ಬೆಳವಣಿಗೆ ನಡೆದು ಹದಿನೈದು ದಿನಗಳ ಮೇಲಾಗಿದೆ.ಅವತ್ತಿನಿಂದ ಇವತ್ತಿನ ತನಕ ಸಚಿವ ಸೋಮಣ್ಣ ಅವರು ಮುಖ್ಯಮಂತ್ರಿಗಳ ಗೃಹ ಕಛೇರಿ ಕೃಷ್ಣಾ ಕಡೆ ತಲೆ ಹಾಕಿಲ್ಲ.


ಮತ್ತೊಂದು ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿರುವ ಸಚಿವರೊಬ್ಬರಿಗೆ ಫೋನಾಯಿಸಿದರು.
ಆದರೆ ಒಂದಲ್ಲ,ನಾಲ್ಕು ಬಾರಿ ಫೋನು ಮಾಡಿದರೂ ಆ ಸಚಿವರು ಸಿಗಲಿಲ್ಲ.ಬದಲಿಗೆ ಅವರ ಆಪ್ತ ಸಹಾಯಕರು:ಸಾಹೇಬರು ಇಲ್ಲಿಲ್ಲ,ಅಲ್ಲಿಲ್ಲ ಎನ್ನುತ್ತಲೇ ಬಂದರು.
ಅಂದ ಹಾಗೆ ಎಂ.ಪಿ.ರೇಣುಕಾಚಾರ್ಯ ಅವರಿಂದ ಹಿಡಿದು ಹಲವರ ಆಕ್ರೋಶಕ್ಕೆ ಗುರಿಯಾಗಿರುವ,ಶಾಸಕರನ್ನು ಕಂಡರೆ ದಿವ್ಯ ನಿರ್ಲಕ್ಷ್ಯ ವಹಿಸುತ್ತಾರೆ ಎಂಬ ಆಪಾದನೆಗೆ ಗುರಿಯಾಗಿರುವ ಈ ಸಚಿವರು ಕಾಂಗ್ರೆಸ್ ನಿಂದ ವಲಸೆ ಬಂದವರು.
ಅವರು ಮಂತ್ರಿಯಾಗಲು ಕಾರಣರಾದವರೇ ತಾವು.ಮೊದಲೆಲ್ಲ ನಾನು ಕರೆಯದೇ ಇದ್ದರೂ ಹಿಂದೆ ಮುಂದೆ ಸುಳಿದಾಡುತ್ತಾ ಸಾರ್,ಸಾರ್ ಎಂದು ಗೋಚಾಡುತ್ತಿದ್ದವರು ಈಗ ತಮ್ಮ ಫೋನ್ ಕರೆಯನ್ನೂ ಸ್ವೀಕರಿಸದ ಮಟ್ಟಕ್ಕೆ ಹೋದರಾ?ಅಂತ ಯಡಿಯೂರಪ್ಪ ಸಿಟ್ಟಿಗೆದ್ದರು.ಅಂದ ಹಾಗೆ ಯಡಿಯೂರಪ್ಪ ಅವರ ಈ ಸಿಟ್ಟು ಇನ್ನೂ ಮಾಯವಾಗಿಲ್ಲ.
ಕುತೂಹಲದ ಸಂಗತಿ ಎಂದರೆ ಯಡಿಯೂರಪ್ಪ ಅವರನ್ನೂ ನಿರ್ಲಕ್ಷ್ಯ ಮಾಡುವ ಮಟ್ಟಕ್ಕೆ ಬೆಳೆದಿರುವ ಈ ಸಚಿವರು ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪರಮಾಪ್ತರು.ಈಗಲೂ ಬೊಮ್ಮಾಯಿಯವರ ಖಾಸಗಿ ಕ್ಷಣಗಳಲ್ಲಿ ಈ ಸಚಿವರು ಖಾಯಂ ಅತಿಥಿ.


ಹಾಲಿ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿರುವ ಅಶ್ವಥ್ಥನಾರಾಯಣ್ ಅವರು ಮೊನ್ನೆ ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಭೇಟಿ ಮಾಡಿದರು.
ರಾಮನಗರ ಜಿಲ್ಲೆ ವ್ಯಾಪ್ತಿಯ ತಹಸೀಲ್ದಾರ್ ಒಬ್ಬರ ವರ್ಗಾವಣೆ ಮಾಡಲು ಹೇಳಿದರೂ ನೀವೇಕೆ ಅವರನ್ನು ವರ್ಗಾವಣೆ ಮಾಡುತ್ತಿಲ್ಲ?ಆ ಮನುಷ್ಯನ ಕೈ-ಬಾಯಿ ಸ್ವಚ್ಚವಾಗಿಲ್ಲ.ಅವರನ್ನು ಅಲ್ಲಿಂದ ತೆಗೆದು ಯಾರನ್ನು ಹಾಕಬೇಕು ಅಂತೇನೂ ನಾನು ಹೇಳುತ್ತಿಲ್ಲ.ಆದರೆ ಈ ಭ್ರಷ್ಟನನ್ನು ಮೊದಲು ಎತ್ತಂಗಡಿ ಮಾಡಿ ಎಂಬುದು ಸಚಿವ ಅಶ್ವಥ್ಥನಾರಾಯಣ ಅವರ ಒತ್ತಾಯ.
ಆದರೆ ಸಚಿವ ಅಶ್ವಥ್ಥನಾರಾಯಣ ಅವರ ಮಾತನ್ನು ಲೆಕ್ಕಿಸದ ಕಂದಾಯ ಸಚಿವ ಆರ್.ಅಶೋಕ್;ಆ ತಹಸೀಲ್ದಾರ್ ಅಲ್ಲಿ ಬಂದು ಕೂರಲು ನಮ್ಮ ಪಕ್ಷದ ಸ್ಥಳೀಯ ನಾಯಕರೊಬ್ಬರ ಶಿಫಾರಸು ಕಾರಣ.ಹೀಗಾಗಿ ಆ ಅಧಿಕಾರಿಯನ್ನು ನಾನು ಅಲ್ಲಿಂದ ಎತ್ತಂಗಡಿ ಮಾಡುವುದಿಲ್ಲ ಎಂದು ಉತ್ತರ ಕೊಟ್ಟರು.
ಅಶೋಕ್ ನೀಡಿದ ಉತ್ತರ ಸಚಿವ ಅಶ್ವಥ್ಥನಾರಾಯಣ ಅವರನ್ನು ಕೆರಳಿಸಿತು.ಹೀಗಾಗಿ:ರಾಮನಗರ ಜಿಲ್ಲೆಗೆ ನಾನು ಉಸ್ತುವಾರಿ ಸಚಿವ.ಹೀಗೆ ಉಸ್ತುವಾರಿ ಸಚಿವನಾಗಿ ಕೆಲಸ ಮಾಡುವಾಗ ನನ್ನ ಮಾತಿಗೆ ಆದ್ಯತೆ ನೀಡಬೇಕಾಗುತ್ತದೆ.ನೀವು ಅದನ್ನು ಮಾಡುತ್ತಿಲ್ಲ.ಇದು ಸರಿಯಲ್ಲ ಎಂದು ರೇಗಿಬಿಟ್ಟರು.


ಮಾಜಿ ಅರಣ್ಯ ಸಚಿವ,ಶಾಸಕ ಅರವಿಂದ ಲಿಂಬಾವಳಿ ಅವರು ರೆವಿನ್ಯೂ ಇನ್ಸ್ ಪೆಕ್ಟರ್ ಒಬ್ಬರ ವರ್ಗಾವಣೆ ಮಾಡುವಂತೆ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಪತ್ರ ಕೊಟ್ಟರು.
ಆದರೆ ಈ ಪತ್ರ ನೋಡುತ್ತಲೇ ಕಂದಾಯ ಸಚಿವ ಅಶೋಕ್ ಅವರು:ಈ ವರ್ಗಾವಣೆ ಆಗಬೇಕು ಅಂದರೆ ನೀವು ಮುಖ್ಯಮಂತ್ರಿಗಳನ್ನು ಕಾಣಬೇಕು ಎಂದರು.
ಸರಿ,ಅರವಿಂದ ಲಿಂಬಾವಳಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ವಿಷಯ ತಿಳಿಸಿದರು.
ಆದರೆ ವಿಷಯ ಕೇಳಿದ ಬಸವರಾಜ ಬೊಮ್ಮಾಯಿ:ಇದನ್ನು ನನ್ನ ಬಳಿಗೇಕೆ ತರುತ್ತೀರಿ?ಸೀದಾ ಕಂದಾಯ ಸಚಿವರ ಬಳಿ ಹೋಗಿ ಹೇಳಿ ಎಂದರು.
ಅರೇ,ಕಂದಾಯ ಸಚಿವರ ಬಳಿ ಹೋದರೆ ಅವರು ನಿಮ್ಮನ್ನು ನೋಡಲು ಹೇಳಿ ಕಳಿಸುತ್ತಾರೆ,ನಿಮ್ಮ ಬಳಿ ಬಂದರೆ ವಾಪಸ್ಸು ಅವರ ಬಳಿ ಹೋಗಿ ಎನ್ನುತ್ತೀರಿ?ಇದೇನು ಹೊಂದಾಣಿಕೆ ಅಂತ ನನಗೆ ಅರ್ಥವಾಗುತ್ತಿಲ್ಲ ಅಂತ ಅರವಿಂದ ಲಿಂಬಾವಳಿ ಮುಖ್ಯಮಂತ್ರಿಗಳ ಎದುರೇ ಕೂಗಾಡಿ ಬಂದರು.


ಇದೇ ರೀತಿ ರಾಜಧಾನಿಯ ಹಿರಿಯ ಶಾಸಕರೊಬ್ಬರು ತಮ್ಮ ಕ್ಷೇತ್ರದ ಹಿರಿಯ ಅಧಿಕಾರಿಯೊಬ್ಬರ ವರ್ಗಾವಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳಿಗೆ ಮನವಿ ಕೊಟ್ಟರು.
ಆದರೆ ತಿಂಗಳಲ್ಲ,ಎರಡು ತಿಂಗಳು ಕಳೆದರೂ ಆ ವರ್ಗಾವಣೆ ಆಗಲಿಲ್ಲ.ಯಾಕೆಂದು ನೋಡಲು ಹೋದರೆ ಅಷ್ಟೊತ್ತಿಗಾಗಲೇ ಅವರು ಹೇಳಿದ ಜಾಗಕ್ಕೆ ಬೇರೊಬ್ಬರನ್ನು ತಂದು ಕೂರಿಸುವ ಕೆಲಸಕ್ಕೆ ಚಾಲನೆ ಸಿಕ್ಕಿತ್ತು.
ಇದೇಕೆ ಹೀಗೆ ಎಂದು ವಿಚಾರಿಸಿ ನೋಡಿದರೆ ಮುಖ್ಯಮಂತ್ರಿಗಳ ಕುಟುಂಬದ ಸದಸ್ಯರೊಬ್ಬರು ಈ ಕೆಲಸಕ್ಕೆ ಚಾಲನೆ ನೀಡಿದ್ದಾರೆ ಎಂಬ ಮಾಹಿತಿ ಸಿಕ್ಕಿತು.
ಇದರಿಂದ ಕೋಪಗೊಂಡ ಆ ಶಾಸಕರು:ನಮ್ಮ ಕ್ಷೇತ್ರದ ವರ್ಗಾವಣೆಗಳನ್ನೂ ಬೇರೆಯವರೇ ಮಾಡುವುದಾದರೆ ನಾವು ಏಕೆ ಶಾಸಕರಾಗಿರಬೇಕು?ಎಂದು ಕೋಪದಿಂದ ಕೂಗಾಡಿದರು.
ಆಗ ಅಲ್ಲಿದ್ದ ಮತ್ತೊಬ್ಬ ಅಧಿಕಾರಿ:ಸಾರ್,ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿರುವ ಕಚೇರಿಯೊಂದರಿಂದ ಇಂತಹ ಹಲವು ನಿರ್ದೇಶನಗಳು ಬರುತ್ತವೆ.ಅವುಗಳನ್ನು ಪಾಲಿಸುವುದು ನಮಗೆ ಅನಿವಾರ್ಯ ಎಂದು ಹೇಳಿದರಂತೆ.
ಅಂದ ಹಾಗೆ ಲ್ಯಾವೆಲ್ಲೆ ರಸ್ತೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸೇರಿದ ಕಚೇರಿಯೊಂದಿದೆ.ಆ ಕಚೇರಿಯನ್ನು ಬೊಮ್ಮಾಯಿಯವರ ನೂತನ ಸಂಬಂಧಿಯೊಬ್ಬರು ನೋಡಿಕೊಳ್ಳುತ್ತಿದ್ದಾರೆ.ಅವರು ಈಗ ಕಾಲ ಕಾಲಕ್ಕೆ ಡೈರೆಕ್ಷನ್ನು ಕೊಡುವ ಕೆಲಸ ಮಾಡುತ್ತಾರೆ ಅಂತ ಆ ಅಧಿಕಾರಿ ಹೇಳಿದಾಗ ಶಾಸಕರು ತಬ್ಬಿಬ್ಬಾದರಂತೆ.


ಹೀಗೆ ನೋಡುತ್ತಾ ಹೋದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ಒಂದಲ್ಲ,ಎರಡಲ್ಲ,ನೂರಾರು ಚೆದುರಿದ ಚಿತ್ರಗಳು ಕಣ್ಣಿಗೆ ಕಾಣುತ್ತವೆ.
ಅಷ್ಟೇ ಅಲ್ಲ,ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ನಂತರ ಸರ್ಕಾರದ ಮಟ್ಟದಲ್ಲಿ ಕೆಲಸಗಳಾಗುತ್ತಿಲ್ಲ ಎಂದು ಬಹುತೇಕ ಶಾಸಕರು ದೂರತೊಡಗಿದ್ದಾರೆ.ಅಷ್ಟೇ ಅಲ್ಲ,ಇಂತಹ ದೂರುಗಳನ್ನು ಹೊತ್ತು ಮಾಜಿ ಸಿಎಂ ಯಡಿಯೂರಪ್ಪ ಅವರ ಬಳಿ ಹೋಗುತ್ತಿದ್ದಾರೆ.
ಅವರ ಪ್ರಕಾರ,ಮುಖ್ಯಮಂತ್ರಿಗಳ ಕಾರ್ಯಾಲಯದಲ್ಲಿ ಐದು ಸಾವಿರ ಕಡತಗಳು ಇತ್ಯರ್ಥವಾಗದೆ ಉಳಿದಿವೆ.ಕೇವಲ ಸರ್ಕಾರದ ಪ್ರಧಾನ ಕಾರ್ಯದರ್ಶಿಯೊಬ್ಬರ ಬಳಿಯೇ ಏಳು ನೂರರಷ್ಟು ಫೈಲುಗಳು ಉಳಿದುಕೊಂಡಿವೆ.
ಈ ಹಿಂದೆ ಶಾಸಕರಾದವರು ಏನಾದರೂ ಕೆಲಸ ಹೇಳಿದರೆ ಮುಖ್ಯಮಂತ್ರಿಗಳಾದವರು ತಕ್ಷಣ ಅದರ ಮೇಲೆ ಇಂತಹ ಕ್ರಮವಾಗಬೇಕು ಎಂದು ಸೂಚಿಸಿ ಬರೆದುಕೊಟ್ಟು ಬಿಡುತ್ತಿದ್ದರು.ಹೀಗೆ ಅವರು ಬರೆದುಕೊಟ್ಟಿದ್ದನ್ನು ಶಾಸಕರೇ ಇಲಾಖೆಯ ಉನ್ನತ ಅಧಿಕಾರಿಗಳ ಬಳಿ ತೆಗೆದುಕೊಂಡು ಹೋಗುವುದೂ ಇತ್ತು.
ಆದರೆ ಬಸವರಾಜ ಬೊಮ್ಮಾಯಿ ಅಂತಹ ಸಂಪ್ರದಾಯಕ್ಕೆ ತಿಲಾಂಜಲಿ ಹಾಡಿದ್ದಾರೆ.ತಮ್ಮ ಬಳಿ ಯಾರೇ ಅರ್ಜಿ ತಂದರೂ ಅದರ ಮೇಲೆ ಕ್ರಮ ಕೈಗೊಳ್ಳಲು ಸೂಚಿಸಿ:ಇದನ್ನು ಇಲಾಖೆಯ ಮುಖ್ಯಸ್ಥರಿಗೆ ನಾವೇ ಕಳಿಸುತ್ತೇವೆ ಎನ್ನುತ್ತಾರೆ.
ಆದರೆ ಬರುವ ಹತ್ತು ಅರ್ಜಿಗಳ ಪೈಕಿ ಎಂಟು ಅರ್ಜಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪುದೇ ಇಲ್ಲ.ಹೀಗಾಗಿ ಬಹುತೇಕ ಶಾಸಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂಬುದು ಯಡಿಯೂರಪ್ಪ ಅವರಿಗೆ ತಲುಪಿರುವ ಲೇಟೆಸ್ಟ್ ದೂರು.
ಹೀಗೆ ಶಾಸಕರಿಂದ ಹಿಡಿದು ಸಂಪುಟದಲ್ಲಿರುವ ಬಹುತೇಕ ಸಚಿವರಿಗೆ ಬಸವರಾಜ ಬೊಮ್ಮಾಯಿ ಅವರನ್ನು ಕಂಡರೆ ಆಗುತ್ತಿಲ್ಲ.ಹೀಗಾಗಿ ಬಹುತೇಕರು ಸರ್ಕಾರದ ಮಟ್ಟದಲ್ಲಿ ಒಂದು ಧಿಡೀರ್ ಕ್ರಾಂತಿಯಾಗಲಿ ಎಂದು ಕಾಯುತ್ತಿದ್ದಾರೆ.
ಈ ರೀತಿ ಕಾಯುತ್ತಿರುವ ಬಹುತೇಕರ ಹಿಂದೆ ಯಡಿಯೂರಪ್ಪ ಅವರ ಪುತ್ರ ಬಿ.ವೈವಿಜಯೇಂದ್ರ ಕಾಣುತ್ತಿದ್ದಾರೆ ಎಂಬುದೇ ಲೇಟೆಸ್ಟು ಮಾಹಿತಿ.

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here