ದರೋಡೆಯ ಮುನ್ನಿನ ದಿನಗಳು ಶುರುವಾಗೇ ಬಿಟ್ಟವು

0
70

ಮೊನ್ನೆ ಬೆಂಗಳೂರಿನ ಶಿವಾನಂದ ಸರ್ಕಲ್‌ ಸಮೀಪದ ಒಂದು ಹೋಟೆಲ್‌ಗೆ ಊಟಕ್ಕಾಗಿ ಹೋಗಿದ್ದೆ.
ಹೀಗೆ ಹೋದವನು ನನಗೆ ಬೇಕಾಗಿರುವುದನ್ನು ಆರ್ಡರ್‌ ಮಾಡಿದರೆ,ಅದನ್ನು ಲೆಕ್ಕಕ್ಕೇ ಇಟ್ಟುಕೊಳ್ಳದವನಂತೆ ವೇಯ್ಟರ್:ನಿಮಗೆ ಇದು ಬೇಕಾ?ಅದು ಬೇಕಾ?ಅಂತ ಹತ್ತನ್ನೆರಡು ಖಾದ್ಯಗಳ ಬಗ್ಗೆ ಕೇಳಿದ.
ಇಲ್ಲ,ಇದು ನನಗೆ ಇಷ್ಟದ ಹೋಟೆಲ್‌.ಅಪರೂಪಕ್ಕಾದರೂ ಒಮ್ಮೆ ಬರಬೇಕು ಎಂಬ ಕಾರಣಕ್ಕಾಗಿ ಬಂದಿದ್ದೇನೆ.ನಾನು ಹೇಳಿದ್ದಷ್ಟನ್ನು ಕೊಡಿ ಎಂದೆ.ಆದರೂ ಊಟದ ಮಧ್ಯೆ ಮಧ್ಯೆ ಆತನ ಉಪಟಳ,ಅದು ಬೇಕಾ?ಇದು ಬೇಕಾ?ಎಂದು ಕೇಳುವುದು ನಡೆದೇ ಇತ್ತು.
ಇದರ ಮಧ್ಯೆಯೇ ಊಟ ಮುಗಿಯಿತು.ಆತ ಬಿಲ್‌ ತಂದಿಟ್ಟ.ಅದನ್ನು ನೋಡಿ ನಾನು ಸುಸ್ತು.ಯಾಕೆಂದರೆ ತೆಗೆದುಕೊಂಡ ಖಾದ್ಯಕ್ಕೆ ಏನು ಖರ್ಚಾಗಿರಬಹುದೋ?ಅದರ ಆರು ಪಟ್ಟು ಬಿಲ್‌ ಮಾಡಲಾಗಿತ್ತು.
ಹಾಗಂತ ಇದು ಒಂದು ಹೋಟೆಲ್‌ನ ಕತೆ ಅಂತಲ್ಲ,ನೀವೇನಾದರೂ ನೆಮ್ಮದಿಯಾಗಿ ಕುಳಿತು ಊಟ,ತಿಂಡಿ ಮಾಡಬೇಕು ಎಂದು ಹೋದಿರೋ?ಬಹುತೇಕ ಹೋಟೆಲ್‌ಗಳಲ್ಲಿ ವಸ್ತುಶ: ನೀವು ದರೋಡೆಗೆ ಒಳಗಾಗುತ್ತೀರಿ.
ಹಾಗಂತ ಇದು ಹೋಟೆಲ್ಲನ್ನು ದೂರಲು ಹೇಳಿದ್ದಲ್ಲ,ಬದುಕು ಎಷ್ಟು ದುಬಾರಿಯಾಗುತ್ತಿದೆ?ಎಂಬುದರಿಂದ ಹಿಡಿದು,ಒಬ್ಬ ಗ್ರಾಹಕ ಬಂದರೆ ಅವನ ಬಳಿ ಎಷ್ಟು ದೋಚಲು ಸಾಧ್ಯವಿದೆಯೋ?ಅಷ್ಟನ್ನು ಸುಲಿಯುವ ಮನ:ಸ್ಥಿತಿ ಬದುಕಿನ ಎಲ್ಲ ರಂಗಗಳಲ್ಲಿ ಬಂದಿದೆ ಎಂಬ ಕಾರಣಕ್ಕಾಗಿ ಹೇಳಿದೆ.

ಇದೇ ರೀತಿ ಕೆಲ ದಿನಗಳ ಹಿಂದೆ ನನ್ನ ಸಂಬಂಧಿಕ ಹೆಣ್ಣು ಮಗಳೊಬ್ಬರು ಉದರದ ಸಮಸ್ಯೆ ಎಂದು ಖಾಸಗಿ ಆಸ್ಪತ್ರೆಯೊಂದಕ್ಕೆ ಹೋದರು.
ಪರೀಕ್ಷೆ ಮಾಡಿದ ವೈದ್ಯರು ಈ ಉದರ ಬೇನೆ ಯಾವ್ಯಾವ ಲೆವೆಲ್ಲಿಗೆ ತಲುಪಬಹುದು ಎಂಬ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾ ಹಲವು ಪರೀಕ್ಷೆಗಳನ್ನು ಮಾಡಿಸಲು ಹೇಳಿದರು.
ಕೊನೆಗೊಮ್ಮೆ:ದೇವರ ದಯೆ.ಬೇಗ ಬಂದಿರಿ,ಒಳ್ಳೆಯದಾಯಿತು.ಇಲ್ಲದೆ ಹೋಗಿದ್ದರೆ ಅದು ಬೇರೆ ರೋಗಕ್ಕೆ ತಿರುಗುತ್ತಿತ್ತು ಎಂದು ಇವರು ಸಮಾಧಾನ ಪಟ್ಟುಕೊಳ್ಳುವಷ್ಟರಲ್ಲಿ,ಒಂದು ಸಣ್ಣ ಆಪರೇಷನ್‌ ಇದೆ.ಅದನ್ನು ಮಾಡಿಬಿಡೋಣ ಎಂದರು.
ಕೊನೆಗೆ ಆಪರೇಷನ್‌ ಆಯಿತು.ಎರಡು ದಿನ ನಿಗಾದಲ್ಲಿರಿ ಎಂದು ವಾರ್ಡ್‌ ಒಳಗೆ ಮಲಗಿಸಿದವರು ಕ್ಯಾರೇ ಎನ್ನಲಿಲ್ಲ.ಎರಡು ದಿನ ಅಂತಿದ್ದುದು ಮೂರು ದಿನವಾಯಿತು.ಕೊನೆಗೆ ಒಂದು ಲಕ್ಷದ ನಲವತ್ತು ಸಾವಿರ ರೂಪಾಯಿಯ ಬಿಲ್‌ ಇಣುಕಿತು.
ನನ್ನ ಸಂಬಂಧಿಕರು,ಅಬ್ಬಾ,ವಿಮೆ ಇದ್ದಿದ್ದಕ್ಕೆ ಈ ದುಡ್ಡು ಭರ್ತಿ ಮಾಡಲು ಸಾಧ್ಯವಾಯಿತು.ಇಲ್ಲದೇ ಹೋಗಿದ್ದರೆ ಗತಿ ಏನಾಗಬೇಕಿತ್ತು ಅಂತ ಗೊಣಗಿದರು.ಇದೇ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಐದು ಸಾವಿರ ರೂಪಾಯಿ ಖರ್ಚಾಗುತ್ತಿರಲಿಲ್ಲ ಎಂದು ನಾನು ಹೇಳಿದೆ.
ಆದರೆ ಇಲ್ಲಿರುವ ಸರ್ಕಾರಿ ಆಸ್ಪತ್ರೆಗೆ ನುಗ್ಗಲು ಸಾಧ್ಯವೇ?ನುಗ್ಗಿ ಹೊರಬರಬೇಕೆಂದರೆ ಯಾರಾದರೂ ಕಾರ್ಪೊರೇಟರು,ಎಮ್ಮೆಲ್ಲೆ,ಮಿನಿಸ್ಟರುಗಳಿಂದ ಹೇಳಿಸಬೇಕು ಎಂದರು.

ಇದೇ ರೀತಿ ಇತ್ತೀಚಿನ ದಿನಗಳಲ್ಲಿ ಆಟೋ ಸಂಚಾರ ಮಾಡುವಾಗ ಈ ದೇಶದ ಸ್ಥಿತಿ-ಗತಿಯೇ ಅನಾವರಣವಾಗುತ್ತಿದೆ.
ಮೊನ್ನೆ ಆಟೋದಲ್ಲಿ ಬರುವಾಗ ಡ್ರೈವರ್‌ ಮಾತಿಗೆ ಇಳಿದವನು:ಸಾರ್‌,ಇನ್ನು ಹತ್ತು ಹದಿನೈದು ವರ್ಷ ಅಷ್ಟೇ ಸಾರ್‌,ಆಮೇಲೆ ಈ ದೇಶದಲ್ಲಿ ಬಡವರು,ಶ್ರಮ ಜೀವಿಗಳೇ ಇರುವುದಿಲ್ಲ ಎಂದ.
ನಾನು ಸುಮ್ಮನೆ ಅವನ ಮಾತು ಕೇಳಿದೆ.ಆತ ಮಾತು ಮುಂದುವರಿಸಿ:ಇವತ್ತು ನಾನು ಬಡವ,ಯಾರಾದರೂ ದಾನ ಕೊಟ್ಟರೆ ಸ್ವೀಕರಿಸುತ್ತೇನೆ.ಮುಂದೆ ದಾನ ಪಡೆಯಲೂ ಜನ ಇರುವುದಿಲ್ಲ ಎಂದ.
ಈಗ ನಾನು ಕುತೂಹಲದಿಂದ:ಯಾಕೆ?ಎಂದು ಕೇಳಿದೆ.ಸಾರ್‌,ಈಗಿನ ಬೆಲೆ ಏರಿಕೆ ಇದೆಯಲ್ಲ?ಇದು ಇನ್ನಷ್ಟು ಕಾಲ ಹೀಗೇ ಮುಂದುವರಿದರೆ ದುಡಿಯುವ ಕೈಗಳು ಸೋತು ಹೋಗುತ್ತವೆ.ಬದುಕಿರುವುದಕ್ಕಿಂತ ಸಾವೇ ಒಳ್ಳೆಯದು ಅನ್ನಿಸಿಬಿಡುತ್ತದೆ.
ಇಂತಹ ಮನಸ್ಸು ಕೆಲ ಕಾಲ ಇದ್ದರೆ ಹೇಗೋ ಸುಧಾರಿಸಿಕೊಳ್ಳಬಹುದು.ಆದರೆ ಅದೇ ಖಾಯಂ ಮನ:ಸ್ಥಿತಿಯಾದರೆ ಬದುಕಬೇಕು ಎಂಬ ಇಚ್ಚೆಯೇ ಈ ಸಮಾಜದ ಬಹುತೇಕರಲ್ಲಿ ಸತ್ತು ಹೋಗುತ್ತದೆ ಸಾರ್.‌
ಹೀಗಾಗಿ ಬಡವರು,ಶ್ರಮ ಜೀವಿಗಳು ಕ್ರಮೇಣ ಇಲ್ಲದಂತಾಗಿ,ಸುಮ್ಮನೆ ಕುಳಿತು ಟೆಕ್ನಿಕ್ಕಿನಿಂದ ದುಡಿಯುವವರು ಮಾತ್ರ ಬದುಕುತ್ತಾರೆ.ಅವರು ನಾಳೆ ಯಾರಿಗಾದರೂ ದಾನ ಕೊಡಬೇಕು ಎಂದುಕೊಂಡರು ಅನ್ನಿ.ಪಡೆಯಲು ಯಾರಿರುತ್ತಾರೆ?ಎಂದ.
ಆತನ ಮಾತುಗಳು ಆತಂಕದ ಗಡಿ ಮೀರಿವೆ ಎನ್ನಿಸಿದರೂ ಅದರಲ್ಲಿ ಹುರುಳಿದೆ ಅನ್ನಿಸಿತು.ಶ್ರಮ ಜೀವಿಗಳ ಬಾಯಲ್ಲಿ ಇಂತಹ ಮಾತುಗಳು ಬರತೊಡಗಿದರೆ ವ್ಯವಸ್ಥೆ ಆತಂಕದ ಮಡುವಿನಲ್ಲಿದೆ ಎಂದೇ ಅರ್ಥ.

ಇನ್ನು ದಿನ ನಿತ್ಯದ ಬದುಕಿಗಾಗಿ ಅಕ್ಕಿ,ಬೇಳೆ,ಬೆಲ್ಲ,ಅಡುಗೆ ಎಣ್ಣೆಯನ್ನು ಖರೀದಿಸಲು ಹೋದರೆ ಅಂಗಡಿಗಳಲ್ಲಿ ದಿನಕ್ಕೊಂದು ದರ ತೆರಬೇಕಾದ ಸ್ಥಿತಿ ಇದೆ.ದೇಶದ ಷೇರು ಮಾರುಕಟ್ಟೆ ಕೂಡಾ ಅಷ್ಟೊಂದು ವೇಗದಲ್ಲಿ ಏರುವುದಿಲ್ಲವೇನೋ?
ಕುಳಿತು ಪರಿಶೀಲಿಸಿದರೆ ಕಳೆದ ವರ್ಷ ಜೀವನಾವಶ್ಯಕ ವಸ್ತುಗಳ ಖರೀದಿಗೆ ಎಷ್ಟು ಖರ್ಚು ಮಾಡುತ್ತಿದ್ದೆವೋ?ಈಗ ಅದು ಕನಿಷ್ಟ ಪಕ್ಷ ಶೇಕಡಾ ಐವತ್ತರಷ್ಟು ಏರಿಕೆ ಕಂಡಿದೆ.
ಹಾಗಂತ ಆದಾಯ ಹೆಚ್ಚಿದೆಯೇ ಎಂದರೆ ಹಿಂದೆ ಇದ್ದುದಕ್ಕಿಂತ ಶೇಕಡಾ ಐವತ್ತರಷ್ಟು ಕುಸಿದು ಹೋಗಿದೆ.
ಅಡುಗೆ ಅನಿಲ,ಪೆಟ್ರೋಲು,ಡೀಸೆಲು ಹೀಗೆ ದರ ಏರಿಕೆಯ ಬಿಸಿಗೆ ತಗಲದಿರುವ ವಸ್ತುಗಳೇ ಇಲ್ಲ,ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ದುಬಾರಿ ದರಕ್ಕೆ ಕೈ ಸುಟ್ಟುಕೊಳ್ಳದ ವ್ಯಕ್ತಿಗಳೇ ಇಲ್ಲ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ.
ಇದು ಬದುಕನ್ನು ಎದುರಿಸಲು ಒಬ್ಬರು ಪಡುವ ಪಡಿಪಾಟಲು ಅಲ್ಲ,ಇದಕ್ಕೂ ದೊಡ್ಡ ಮಟ್ಟದಲ್ಲಿ ಪರದಾಡುವವರು ಹೆಜ್ಜೆ ಹೆಜ್ಜೆಗೂ ಸಿಗುತ್ತಾರೆ.
ಏಕೆ ಇಂತಹ ಪರಿಸ್ಥಿತಿ?ಎಂಬ ಬಗ್ಗೆ ಜನ ಈಗಲಾದರೂ ಅವಲೋಕನ ಮಾಡಿಕೊಳ್ಳದಿದ್ದರೆ ಭವಿಷ್ಯ ಬಹಳ ಕಷ್ಟವಿದೆ ಎಂಬುದಂತೂ ನಿಸ್ಸಂಶಯ.ಆಡಳಿತ ನಡೆಸುವವರಿಗೆ ಜನರ ಸುರಕ್ಷೆ ಮುಖ್ಯವಾಗಿರಬೇಕು.
ಆದರೆ ರಾಜ್ಯದಿಂದ ಹಿಡಿದು,ಕೇಂದ್ರದ ತನಕ ಎಲ್ಲ ಕಡೆಯೂ ಒಂದು ಧಾಡಸೀತನ ಬೇರೂರಿಬಿಟ್ಟಿದೆ.ರಾಜ್ಯ ಬಿಜೆಪಿಯ ಉಸ್ತುವಾರಿ ಹೊಣೆ ಹೊತ್ತ ಅರುಣ್‌ ಸಿಂಗ್‌ ಅವರ ಬಳಿ ಪತ್ರಕರ್ತರು ಪೆಟ್ರೋಲು,ಡೀಸೆಲು ಬೆಲೆ ಹೆಚ್ಚಿದೆ.ಇದರಿಂದಾಗಿ ಜನರ ಜೀವನ ದುಬಾರಿಯಾಗಿದೆ ಎಂದರೆ,ನೋ,ನೋ,ನೀವು ಪತ್ರಕರ್ತರು ಈ ಬಗ್ಗೆ ಪ್ರಶ್ನೆಯನ್ನೇ ಕೇಳಬಾರದು ಎನ್ನುತ್ತಾರೆ.
ಕೇಂದ್ರ ಸಚಿವ ನತೀನ್‌ ಗಡ್ಕರಿ ಅವರಂತೂ ಥೇಟು ವ್ಯಾಪಾರಿಯಂತೆ:ಒಳ್ಳೆ ರಸ್ತೆ ಬೇಕು ಎಂದರೆ ಜನ ದುಡ್ಡು ಕೊಡಬೇಕು ಎನ್ನುತ್ತಾರೆ.ಇದರರ್ಥ,ದುಡ್ಡು ಕೊಡುವ ಶಕ್ತಿ ಇರುವವರಿಗೆ ಮಾತ್ರ ರಸ್ತೆ,ಶಕ್ತಿ ಇಲ್ಲದವರಿಗಲ್ಲ ಅಂತಷ್ಟೇ.
ಇಂತಹ ಆಡಳಿತಗಾರು ಇರುವುದರಿಂದಲೇ ದೇಶದ ಬಹುತೇಕ ಸರ್ಕಾರಿ ಸಂಸ್ಥೆಗಳು ಖಾಸಗಿಯವರ ಕೈಗೆ ದಕ್ಕುತ್ತಿವೆ.ನಾಳೆ ವಿದ್ಯುತ್ತಿನಿಂದ ಹಿಡಿದು,ಓಡಾಡುವ ಬಸ್ಸಿನ ತನಕ ಪ್ರತಿಯೊಂದೂ ಬಂಡವಾಳಷಾಹಿಗಳ ತೆಕ್ಕೆಗೆ ಹೋಯಿತು ಎಂದುಕೊಳ್ಳಿ.
ಆಟೋರಿಕ್ಷಾ ಚಾಲಕ ಹೇಳಿದಂತೆ ಮುಂದಿನ ಕೆಲವೇ ವರ್ಷಗಳಲ್ಲಿ ಬಡವರು,ಶ್ರಮಿಕರು ಇಲ್ಲವಾಗುತ್ತಾರೆ.ಕೇವಲ ಶ್ರೀಮಂತರೇ ಈ ನೆಲದ ಮೇಲೆ ಸೆಟ್ಲಾಗುತ್ತಾರೆ.
ವಸ್ತುಸ್ಥಿತಿ ಎಂದರೆ ಜನ ದರೋಡೆಗೆ ಇಳಿಯಲು ಪ್ರೇರೇಪಣೆ ನೀಡುತ್ತಿರುವ ದಿನಗಳು ಇವು.
ಇಂತಹ ಸಂದರ್ಭದಲ್ಲಿ ಪ್ರತಿಪಕ್ಷ ಕಾಂಗ್ರೆಸ್‌ ಮತ್ತು ಜೆಡಿಎಸ್‌ ತಮ್ಮ ಮುಂದಿರುವ ಹೊಣೆಗಾರಿಕೆ ಏನು ಎಂಬುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು.ಕೇವಲ ನಾವಿರುವುದು ಜನರಿಗಾಗಿ ಎಂದು ಘೋಷಿಸುತ್ತಾ ಕೂರುವುದಲ್ಲ,
ಸಾಮಾಜಿಕ ನ್ಯಾಯವನ್ನು ಸಮಾಧಿ ಮಾಡಲು ಆಡಳಿತಗಾರರು ಗುಂಡಿ ತೋಡುತ್ತಿದ್ದರೆ, ಆಡಳಿತಾರೂಢ ಬಿಜೆಪಿಯವರೂ ಒಂದು ಬಗೆಯ ವಿಸ್ಮೃತಿಯಲ್ಲಿ, ಘೋಷಣೆಗಳಲ್ಲಿ ಮುಳುಗಿ ಹೋಗಿದ್ದಾರೆ.ಇದಕ್ಕಿಂತ ಅಚ್ಚೇ ದಿನ್‌ ಬರಲಿ ಎಂದು ಅವರು ಕಾಯುತ್ತಿದ್ದಾರೇನೋ?

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here