ರಾಜ್ಯಸಭಾ ಚುನಾವಣೆ; ಜೆಡಿಎಸ್ ಮೇಲೆ ಸಿದ್ದು ವೈರತ್ವ, ಹೆಚ್ಚುವರಿ ಸ್ಥಾನ ಗಿಟ್ಟಿಸಲು ಬಿಜೆಪಿ ಹಾದಿ ಸುಗಮವಾಯ್ತೆ?

0
171

ಮಾಜಿ ಪ್ರಧಾನಿ ದೇವೆಗೌಡ್ರು, ಅವರ ಮಗ ಮಾಜಿ ಸಿಎಂ ಕುಮಾರಸ್ವಾಮಿ ಮೇಲೆ ಇನ್ನೋರ್ವ ಮಾಜಿ ಸಿಎಂ ಕಾಂಗ್ರೆಸಿನ ಸಿದ್ದರಾಮಯ್ಯಗೆ ಕಡು ವೈರತ್ವ ಇದೆ ಎನ್ನುವುದು ಜಗತ್ತಿಗೆ ಪುಕ್ಕಟೆ ಜಾಹೀರಾತು. ಈ ವೈರತ್ವವೇ ಪ್ರಸ್ತುತ ಕರ್ನಾಟಕದಲ್ಲಿ ಜರುಗುತ್ತಿರುವ ರಾಜ್ಯಸಭಾ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ಹೆಚ್ಚುವರಿಯಾಗಿ ಒಂದು ಸ್ಥಾನವನ್ನು ಗಿಟ್ಟಿಸಿಕೊಳ್ಳುವ ಹಾದಿಯನ್ನು ಸುಗಮವಾಗಿಸಿದೆನ್ನುವುದು ವರ್ತಮಾನದ ವಿಶ್ಲೇಷಣೆಯು ಹೌದಾಗಿದೆ.

ಮಾಜಿ ಪ್ರಧಾನಿ ದೇವೆಗೌಡರ ನೇತೃತ್ವದ ಜೆಡಿಎಸ್ ಪಕ್ಷ ಕರ್ನಾಟಕದಲ್ಲಿ ಆಡಳಿತರೂಢ ಬಿಜೆಪಿ ಪಕ್ಷದ “ಬಿ ಟೀಂ” ಎಂದು ಮಾಜಿ ಸಿಎಂ ಸಿದ್ದರಾಮಯ್ಯ, ಮೇಲಿಂದ, ಮೇಲೆ ಜರಿಯುತ್ತಲೇ ಇರುತ್ತಾರೆ. ಅದರಲ್ಲೂ ಅವಕಾಶ ಸಿಗಲಿ, ಸಿಗದೇ ಇರಲಿ. ಬೈಯಲು ಅವಕಾಶ ನಿರ್ಮಿಸಿಕೊಂಡಾಗಲೀ ಮಾಜಿ ಪ್ರಧಾನಿಗಳ ಕುಟುಂಬದ ವಿರುದ್ಧವಾಗಿ ಅಬ್ಬರಿಸಲು ಮರೆಯುವುದಿಲ್ಲ. ಹಲವು ಸಂದರ್ಭಗಳಲ್ಲಿ ಜೆಡಿಎಸ್ ವರ್ತನೆಗಳನ್ನು ನೋಡಿದಾಗ ಸಿದ್ದರಾಮಯ್ಯ ಮಾಡುತ್ತಿರುವ ಬಿ ಟೀಂ ಆರೋಪ ಹತ್ತಿರ ಎನಿಸದಿರದು.

ಪ್ರಸ್ತುತ ಕರ್ನಾಟಕದಲ್ಲಿ ಜರುಗುತ್ತಿರುವ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಅವಕಾಶ ತಪ್ಪಿಸುವ ಭರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರು ಹೈಕಮಾಂಡ್ ಮೇಲೆ ಒತ್ತಡ ಹೇರಿ ಕಾಂಗ್ರೆಸ್ ಪಕ್ಷ ದಿಂದ ಎರಡನೇ ಅಭ್ಯರ್ಥಿಯನ್ನು ಕಣಕ್ಕೀಳಿಸಿದ್ದಾರೆ. ಗೆಲ್ಲುವ ಅವಕಾಶ ಇದಿದ್ದರೇ ಯಾರು ಕೂಡ ಇದನ್ನು ಇನ್ನೊಂದು ಕೋನಾದಲ್ಲಿ ನೋಡಲು ಸಮಯ ವ್ಯಯಿಸುತ್ತಿರಲಿಲ್ಲ. ವಾಸ್ತವ ಹೇಗಿದೇ ಎಂದ್ರೇ
ಕೈ ಪಕ್ಷದ ಎರಡನೇ ಅಭ್ಯರ್ಥಿ ಗೆಲ್ಲುವಂತಹ ಯಾವುದೇ ಸಣ್ಣ ಸಾಧ್ಯತೆಗಳಿಲ್ಲ. ಏಕೆಂದರೆ ಎರಡನೇಯ ಅಭ್ಯರ್ಥಿ ಗೆಲ್ಲಲ್ಲು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಇಪ್ಪತ್ತಕ್ಕೂ ಅಧಿಕ ಶಾಸಕರು ಕೈ ಅಭ್ಯರ್ಥಿ ಮನ್ಸೂರ್ ಖಾನ್ ಪರವಾಗಿ ಅಡ್ಡಮತದಾನ ಮಾಡಿದಾಗ ಮಾತ್ರವೇ ಸಿದ್ದರಾಮಯ್ಯ ಸೂತ್ರ ಕಟ್ಟಿದ ಗಾಳಿಪಟ ಹಾರಾಟ ಮಾಡಲು ಸಾಧ್ಯ! ರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ವರ್ಚಸ್ಸು ಕುಂದಿರುವ ಕಾಂಗ್ರೆಸ್ ಪಕ್ಷವನ್ನು ನಂಬಿ ಬರಲು ಸಿದ್ದರಾಮಯ್ಯ ಏನು ಸಿಎಂ ಹುದ್ದೆಯಲ್ಲಿದ್ದಾರಾ? ಗೆಲ್ಲುವುದು ಕಷ್ಟ ಅಂತಾ ಗೊತ್ತಿದ್ರೂ , ಜೆಡಿಎಸ್ ಮೇಲಿರುವ ತಮ್ಮ ವೈರತ್ವ ಬಿಟ್ಟು ಕೊಡಬಾರದೆನ್ನುವುದು ಮಾಜಿ ಸಿಎಂರ ಹಠ ಎದ್ದು ಕಾಣ್ತಾಯಿದೆ.

ಜೆಡಿಎಸ್ ಗೆ ಅವಕಾಶ ತಪ್ಪಿಸಲೇಬೇಕೆನ್ನುವ ಅವರ ಹಠ, ಹೆಚ್ಚುವರಿಯಾಗಿ ಇನ್ನೊಂದು ಸ್ಥಾನವನ್ನು ಆಡಳಿತರೂಢ ಬಿಜೆಪಿಗೆ ಹರಿವಾಣದಲ್ಲಿಟ್ಟು ಕೊಡುವಂತಿದೆ. ಏಕೆಂದರೆ, ರಾಜ್ಯದಲ್ಲಿ ಸರ್ಕಾರವಿದ್ರೂ ಮೂರನೇಯ ಸ್ಥಾನ ಗೆಲ್ಲುವ ಮನಸ್ಸು ಮಾಡದೇ ಎರಡು ಸ್ಥಾನಗಳಿಗಷ್ಟೇ ತನ್ನ ಅಭ್ಯರ್ಥಿಗಳನ್ನು ಅಖೈರುಗೊಳಿಸಿ, ರಾಜ್ಯದಲ್ಲಿ ಸುಗಮ ಚುನಾವಣೆ ಜರುಗಲು ವೇದಿಕೆಯನ್ನು ಬಿಜೆಪಿ ವರಿಷ್ಠರು ನಿರ್ಮಾಣ ಮಾಡಿಕೊಟ್ಟಿದ್ರು. ಯಾವಾಗ ಬಿಜೆಪಿ ನಾಲ್ಕನೇಯ ಸ್ಥಾನಕ್ಕೆ ಆಸೆ ಪಡಲಿಲ್ಲವೋ, ಇತ್ತ ಕಾಂಗ್ರೆಸ್ ಹೈಕಮಾಂಡ್ ಕೂಡ ತನಗೆ ಸುಲಭವಾಗಿ ಬರುವ ಒಂದು ಸ್ಥಾನಕ್ಕೆ ಜೈರಾಂ ರಮೇಶ ಹಾಕಿ ಕೈ ತೊಳೆದುಕೊಂಡಿತು.‌ ಉಳಿದಂತೆ ಇನ್ನೊಂದು ಸ್ಥಾನವನ್ನು ಜೆಡಿಎಸ್ ಪಡೆಯುವ ಹಾದಿ ಸುಗಮವಾಯ್ತು.

ಆದರೇ ನನ್ನದೊಂದು ಕಣ್ಣು ಹೊದ್ರು ಸರಿ ಎದುರಾಳಿಯ ಎರಡು ಕಣ್ಣು ಕಳೆಯಬೇಕೆನ್ನುವ ರೀತಿಯಲ್ಲಿಯೇ ಮಾಜಿ ಪ್ರಧಾನಿ ದೇವೆಗೌಡರ ಕುಟುಂಬದ ವಿರುದ್ದವಾಗಿ ಕಡು ವೈರತ್ವದ ರಾಜಕಾರಣ ಮಾಡುತ್ತಲೇ ಬರುತ್ತಿರುವ ಸಿದ್ದರಾಮಯ್ಯ ಇದ್ದಕ್ಕಿದಂತೆಯೇ ಆಕ್ಟಿವ್ ಆದ್ರು. ರಾತ್ರೋ,ರಾತ್ರಿ ತಮ್ಮ ಅನುಗಾಲದ ಗೆಳೆಯನಂತಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ.ವೇಣುಗೋಪಾಲರನ್ನು ಸಂಪರ್ಕಿಸಿ, ಒತ್ತಡ ಹಾಕಿ ಎರಡನೇ ಅಭ್ಯರ್ಥಿಗೆ ಬಿಫಾರಂಗೆ ಸೈ ಎನಿಸಿಕೊಂಡೇ ಬಿಟ್ರು. ಓವರ್ ನೈಟ್ ನಲ್ಲಾದ ಈ ಬೆಳವಣಿಗೆಯ ಒಂದಿಂಚು ಸುಳಿವು ಕೂಡ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ ಕಿವಿಗೆ ಕೇಳಿಸದಂತೆ ಕಾರ್ಯಚರಣೆ ಮಾಡಿದ್ದು ಬಲು ಇಂಟರೆಸ್ಟಿಂಗ್ ಆಗಿದೆ.

ತಡರಾತ್ರಿ ಕೈ ಪಾಳೆಯದಲ್ಲಿ ಸಿದ್ದರಾಮಯ್ಯ ಮೂಲಕ ಆಗಿರುವಂತಹ ಈ ಬದಲಾವಣೆಯಿಂದಾಗಿ ಮೂರನೇಯ ಸ್ಥಾನದ ಆಸೆಯನ್ನೆ ಮಾಡದ ಕಮಲಪಕ್ಷಕ್ಕೆ ಈಗ ಹೆಚ್ಚುವರಿಯಾಗಿ ಇನ್ನೊಂದು ಸ್ಥಾನವನ್ನು ಗಿಟ್ಟಿಸಿಕೊಳ್ಳುವ ಹಾದಿಯನ್ನು ಸುಗಮವಾಗಿಸಿದೆ. ಸಿದ್ದರಾಮಯ್ಯರ ಜೆಡಿಎಸ್ ಮೇಲಿನ ಕಡು ವೈರತ್ವದ ಕಾರಣಕ್ಕೇನೆ ನಾಲ್ಕನೇಯ ಸ್ಥಾನ ಬಳುವಳಿಯ ರೂಪದಲ್ಲಿ ಪಡೆದುಕೊಳ್ಳುವಂತಹ ಸುಲಭವಾದ ಅವಕಾಶ ಕಮಲ ಪಕ್ಷಕ್ಕೆ ಬಂದೊದಗಿದೆ.

ಬಿಜೆಪಿ ವಿರುದ್ಧವಾಗಿ ನನ್ನದು ಕಡು ಹೋರಾಟ ಎನ್ನುತ್ತಾರೆ ಸಿದ್ದರಾಮಯ್ಯನವರು. ಆದರೇ ಎರಡನೇಯ ಸ್ಥಾನ ಗೆಲ್ಲಲ್ಲು ಸಂಖ್ಯಾ ಬಲ ಇಲ್ಲದಿದ್ರೂ ಅಭ್ಯರ್ಥಿ ಕಣಕ್ಕೀಳಿಸುವ ಮೂಲಕ ತಾವು ವಿರೋಧಿಸುವ ಬಿಜೆಪಿಗೆ ಗೆಲುವಿನ ಹಾದಿಯನ್ನು ಸುಲಭವಾಗಿಸಿದ್ದು ನೋಡಿದಾಗ ಅವರದ್ದು ಹುಸಿ ಜಾತ್ಯಾತೀತ ನಡೆ ಎನ್ನಲಾಗದೆ ಇರದು.

ಏಕೆಂದರೆ ಈಗ ಬಂದಿರುವ ರಾಜ್ಯಸಭಾ ಚುನಾವಣೆಯಲ್ಲಿ ಎರಡು ಸ್ಥಾನ ಗೆಲ್ಲಲ್ಲು ಕಾಂಗ್ರೆಸ್ ಪಕ್ಷಕ್ಕೆ 90 ಶಾಸಕರ ಬಲ ಬೇಕು. 2018ರಲ್ಲಿ ಆ ಪಕ್ಷ ಗೆದಿದ್ದು 80. ಬಾಂಬೇ ಗೆಳೆಯ ಬಳಗದ ಯಾತ್ರೆ ಪಾಲಾದವರು ಹದಿಮೂರು. ಆ ಪೈಕಿ ಗೆದ್ದವರು ಇಬ್ಬರು ಮಾತ್ರ. ಇತ್ತ ಹಾನಗಲ್ ಗೆದ್ರು. ಹೀಗಾಗಿ ಕಾಂಗ್ರೆಸಿನ ಬಲ 69ರ ಆಸುಪಾಸಿನಲ್ಲಿದೆ. ಈ ಮಧ್ಯೆ ಉತ್ತರ ಪ್ರದೇಶ ಸಹಿತ ನಾಲ್ಕು ರಾಜ್ಯಗಳನ್ನು ಬಿಜೆಪಿ ಗೆದ್ದಕೊಂಡ ಬಳಿಕ ಕರ್ನಾಟಕದಲ್ಲಿ ಕಮಲ ಮೂಡಿಯಲು ಹಲವು ಕೈ ಶಾಸಕರು ಸರದಿಯಲ್ಲಿ ನಿಂತುಕೊಂಡಿದ್ದಾರೆ. ಈಗಿನ ವಾರಾವರಣ ನೋಡಿದರೇ ರಾಜ್ಯಸಭಾ ಚುನಾವಣೆ ರೋಚಕ ಹಂತ ತಲುಪುವಂತಹ ಸಾಧ್ಯತೆಗಳು ಹೆಚ್ಚಾಗಿ ಕಾಣ್ತಾಯಿವೆ.

ಕಾಂಗ್ರೆಸಿಗೆ ಎರಡನೇಯ ಅಭ್ಯರ್ಥಿ ಗೆಲ್ಲಲ್ಲು ಸಾಕಷ್ಟು ಶಾಸಕರ ಸಂಖ್ಯೆ ಇಲ್ಲದಿದ್ರೂ ಮನ್ಸೂರು ಖಾನ್ ಕಣಕ್ಕೀಳಿಸಿದ್ದು ಅಧಿಕೃತವಾಗುತ್ತಿದ್ದಂತೆಯೇ ಆಡಳಿತರೂಢ ಬಿಜೆಪಿ ರಂಗ ಪ್ರವೇಶಿಸಿದೆ. ಬಿಜೆಪಿ ಪ್ರವೇಶದೊಂದಿಗೆ ಏನೊಂದು ಖರ್ಚಿಲ್ಲದೆ ಟೀ,ಕಾಫಿ, ಬಿಸ್ಕತ್ ಮೂಲಕವೇ ಬಗೆಹರಿಯುತ್ತಿದ್ದ ಚುನಾವಣೆ ರೆರ್ಸಾಟ್ ಯಾತ್ರೆ, ಕುದುರೆ ವ್ಯಾಪರದ ಖದರ್ ಪಡೆದುಕೊಂಡು ಬಿಟ್ಟಿದೆ. ಬೇಲಿ ಹಾರುವ ಶಾಸಕರಿಗೆ ಹೇಳಿ ಮಾಡಿಸಿದೆ. ಚುನಾವಣೆ ರೋಚಕ ಘಟ್ಟ ತಲುಪುವ ಎಲ್ಲ ಲಕ್ಷಣಗಳು ಕ್ರೂಢಿಕರಣಗೊಳ್ಳುತ್ತಿವೆ

ಪ್ರಸ್ತುತ ವಿಧಾನಸಭೆಯಲ್ಲಿನ
ಈಗಿನ ಬಲಾಬಲದ ಮೇರೆಗೆ ಬಿಜೆಪಿ ಎರಡು ಸ್ಥಾನಗಳನ್ನು ಸುಲಭವಾಗಿ ಗೆದ್ದುಕೊಂಡ ಬಳಿಕ ಅದರ ಕೈಯಲ್ಲಿ ಇನ್ನೂ 32 ಮತಗಳು ಉಳಿಯುತ್ತವೆ. ಮೂರನೇಯ ಅಭ್ಯರ್ಥಿ ಗೆಲ್ಲಿಸಿ ಕೊಳ್ಳಲು ಆ ಪಕ್ಷಕ್ಕೆ ಇನ್ನೂ 13 ಶಾಸಕರ ಕೊರತೆ ಇದೆ. ಒಂದು ಪಕ್ಷ ಮೂರನೇಯ ಸ್ಥಾನ ಬಯಸಿದರೇ ಪುನಃ ಆಪರೇಷನ್ ಕಮಲಕ್ಕೆ ಮೊರೆಹೋಗಬೇಕು. ರಾಜ್ಯದಲ್ಲಿ ಅಸೆಂಬ್ಲಿ ಎಲೇಕ್ಷನ್ ಗೆ ಹಲವು ತಿಂಗಳ ಅವಧಿ ಬಾಕಿ ಇದೆ. ಇಂತಹ ಕಾಲದ ಪರಿಸ್ಥಿತಿಯಲ್ಲಿ ಪ್ರಜಾತಂತ್ರ ಬುಡಮೇಲು ಮಾಡುವ ಆಪರೇಷನ್ ಕಮಲ ಕಾರ್ಯ ಸಾಧುವಲ್ಲ. ಇದಕ್ಕೆ ಕೈಹಾಕಿ ರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟ ಹೆಸರು ತಂದು ಕೊಳ್ಳಬೇಕು. ಹೆಚ್ಚುವರಿ ಒಂದು ಸ್ಥಾನಕ್ಕಾಗಿ ಹೆಸರು ಕೆಡಿಸಿಕೊಂಡು ವಿರೋಧಿಗಳ ಬಾಯಿಗೆ ಆಹಾರವಾಗುವ ಬದಲು ಅರತಿಗೊಂದು, ಕೀರ್ತಿಗೊಂದೆನ್ನುವಂತೆ ಮೂರನೇಯದಕ್ಕೆ ಪ್ರಯತ್ನಿಸದೇ ಎರಡಕ್ಕೆ ತೃಪ್ತಿ ಆಗಿದ್ರು ಬಿಜೆಪಿ ವರಿಷ್ಠರು.

ಆದರೇ, ಬಿಜೆಪಿ ಮೂರನೇಯ ಅಭ್ಯರ್ಥಿ ಹಾಕಿ, ರಂಗ ಪ್ರವೇಶಿಸಲು ಮುಂದಾಗಲು ಮೂಲ ಕಾರಣ ಕಾಂಗ್ರೆಸ್. ತನ್ನ ಎರಡನೇಯ ಅಭ್ಯರ್ಥಿಯನ್ನು ಕೈ ಪಕ್ಷ ಕಣಕ್ಕೀಳಿಸದಿದ್ದರೇ ಬಿಜೆಪಿ ಕೂಡ ಮೂರನೇಯ ಸ್ಥಾನದ ಉಸಾಬರಿಗೆ ಹೋಗುತ್ತಿರಲಿಲ್ಲ. ಮೂರನೇಯ ಸ್ಥಾನ ಬಿಜೆಪಿಗೆ ಬೇಕಾದರೇ ಸಿಗಲಿ, ಆದರೇ ತನ್ನ ಕಡು ವಿರೋಧಿ ಜೆಡಿಎಸ್ ಗೆ ಸಿಗಲೇ ಬಾರದೆನ್ನುವ ಕಾರಣಕ್ಕೆ ಹೈಕಮಾಂಡಿಗೆ ಇಷ್ಟ ಇಲ್ಲದಿದ್ರೂ ಮಾಜಿ ರಾಜ್ಯಸಭಾ ಸದಸ್ಯ ರೆಹಮಾನ್ ಖಾನ್ ಪುತ್ರನನ್ನು ಕಣಕ್ಕೀಳಿಸುವ ಮೂಲಕ ದೇವೆಗೌಡರ ಕುಟುಂಬದ ವಿರುದ್ಧದ ಸೇಡಿನ ರಾಜಕಾರಣಕ್ಕೆ ರಾಜ್ಯಸಭಾ ಚುನಾವಣೆಯನ್ನು ಅಖಾಡವಾಗಿಸಿಕೊಂಡಿದ್ದಾರೆ ಸಿದ್ದರಾಮಯ್ಯ . ಕೈ ಪಕ್ಷ ಹಾಕಿರುವ ಎರಡನೇಯ ಅಭ್ಯರ್ಥಿಯಿಂದ ಹೆಚ್ಚಿನ ಲಾಭ ಕಮಲ ಪಕ್ಷಕ್ಕೇನೆ. ಮೆಚ್ಚಲೇಬೇಕಲ್ವೇ ಮಾಜಿ ಸಿಎಂ ಸಿದ್ದರಾಮಯ್ಯ ನವರ ಜಾತ್ಯಾತೀತ ಕಾಳಜಿಯನ್ನು.

ಎರಡನೇಯ ಅಭ್ಯರ್ಥಿಯನ್ನು ಕಾಂಗ್ರೆಸ್ ಕಣಕ್ಕೀಳಿಸಿದೆ. ಇದು ಪಕ್ಷದ ನಿರ್ಧಾರ ಎನ್ನುವುದ ಕ್ಕಿಂತಲೂ ಮಾಜಿ ಸಿಎಂ ಸಿದ್ದರಾಮಯ್ಯ ನವರ ವೈಯಕ್ತಿಕ ಹಿತಾಸಕ್ತಿ, ಒತ್ತಡಗಳ ಮೇರೆಗೆ ಒಪ್ಪಿತವಿಲ್ಲದಿದ್ರು ಹೈಕಮಾಂಡ್ ಎರಡನೇಯ ಅಭ್ಯರ್ಥಿಗೆ ಗ್ರೀನ್ ಸಿಗ್ನಲ್ ತೊರಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರಗೂ ಎರಡನೇಯ ಅಭ್ಯರ್ಥಿ ಹಾಕುವ ಸಣ್ಣ ಸುಳಿವು ಕೂಡ ಇರಲಿಲ್ಲ ಎನ್ನುವುದು ಕೇಳಿದರೇ ಇಡೀ ಪಕ್ಷವನ್ನು ಅಪೋಷನ್ ತೆಗೆದುಕೊಳ್ಳಲು ಮಾಜಿ ಸಿಎಂ ಬಿರುಸುಗೊಂಡಿದ್ದಾರೆನ್ನುವುದು ಅರ್ಥವಾಗುತ್ತೆ. ನಿಗಾ ತಪ್ಪಿದರೇ ಡೈನಮೇಟ್ ಇಟ್ಟು ಬಂಡೇ ಸಿಡಿಸುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.

–ಹುಳ್ಳಿಪ್ರಕಾಶ

LEAVE A REPLY

Please enter your comment!
Please enter your name here