ವಾರ್ಡ್ ವಾರು ನೋಡಲ್ ಅಧಿಕಾರಿಗಳ ನೇತೃತ್ವದಲ್ಲಿ ತಂಡಗಳ ನೇಮಕ;ಸಮೀಕ್ಷೆ ಆರಂಭ, ಬಳ್ಳಾರಿ ನಗರದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಹೆಚ್ಚಳ:ಮನೆಮನೆ ಸಮೀಕ್ಷೆಗೆ ನಿರ್ಧಾರ:ಡಿಸಿ ಮಾಲಪಾಟಿ

0
113

ಬಳ್ಳಾರಿ,ಮೇ 04 : ಬಳ್ಳಾರಿ ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದ್ದು,ತೀವ್ರ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಆರಂಭದಲ್ಲಿಯೇ ಸೊಂಕಿನ ಲಕ್ಷಣಗಳನ್ನು ಹೊಂದಿರುವವರನ್ನು ಪತ್ತೆಹಚ್ಚುವ,ಇಎಲ್‍ಐ ಮತ್ತು ತೀವ್ರ ಉಸಿರಾಟ ಹಾಗೂ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಪತ್ತೆಹಚ್ಚಿ ತಪಾಸಣೆ ನಡೆಸಿ ಚಿಕಿತ್ಸೆ ನೀಡುವ ಹಾಗೂ ಕೊರೊನಾ ಪ್ರಸರಣ ಸರಪಳಿ ತುಂಡರಿಸುವ ನಿಟ್ಟಿನಲ್ಲಿ ಮನೆ ಮನೆ ಸಮೀಕ್ಷೆ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ.
ಇದಕ್ಕಾಗಿ ನಗರದ 39 ವಾರ್ಡ್‍ಗಳಿಗೆ ತಲಾ ಓರ್ವ ನೋಡಲ್ ಅಧಿಕಾರಿಗಳ ನೇತೃತ್ವದಲ್ಲಿ ತಂಡಗಳನ್ನು ರಚನೆ ಮಾಡಲಾಗಿದೆ. ಪ್ರತಿ ತಂಡದಲ್ಲಿ ನೋಡಲ್ ಅಧಿಕಾರಿ,ವೈದ್ಯರು, ನರ್ಸ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಈ ತಂಡದಲ್ಲಿರಲಿದ್ದಾರೆ. ಇವರು39 ವಾರ್ಡ್‍ಗಳಲ್ಲಿರುವ ಪ್ರತಿ ಮನೆಮನೆಗೆ ತೆರಳಿ ಸಮೀಕ್ಷೆ ನಡೆಸಲಿದ್ದಾರೆ. ಈಗಾಗಲೇ ಈ ಕಾರ್ಯ ಎರಡು ದಿನಗಳಿಂದ ನಗರದಲ್ಲಿ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ತಿಳಿಸಿದ್ದಾರೆ.
ಕೊರೊನಾ ಸೊಂಕಿನ ಲಕ್ಷಣಗಳಿದ್ದರೂ ತಪಾಸಣೆ ಮಾಡಿಸದೇ ನಿರ್ಲಕ್ಷ್ಯ ತೋರುತ್ತಿರುವುದು ಮತ್ತು ಸೊಂಕು ತೀವ್ರತರದಲ್ಲಿ ಉಲ್ಭಣಿಸಿದಾಗ ಆಸ್ಪತ್ರೆಗೆ ಬರುತ್ತಿರುವುದರಿಂದ ಮರಣಗಳು ಸಂಭವಿಸುತ್ತಿರುವುದು ಸೇರಿದಂತೆ ವಿವಿಧ ಸಮಸ್ಯೆಗಳು ಉಂಟಾಗುತ್ತಿವೆ; ಈ ಹಿನ್ನೆಲೆಯಲ್ಲಿ ಇದಕ್ಕೆ ಕಡಿವಾಣ ಹಾಕುವುದಕ್ಕೆ ಮನೆ-ಮನೆ ಸಮೀಕ್ಷೆಯೇ ಮದ್ದು ಎಂದು ನಿರ್ಧರಿಸಿರುವ ಜಿಲ್ಲಾಡಳಿತ ಸಮೀಕ್ಷೆ ಆರಂಭಿಸಿದೆ. ಪ್ರತಿ ಮನೆಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿರುವ ಈ ತಂಡಗಳು ಮನೆಯಲ್ಲಿರುವ ಪ್ರತಿಯೊಬ್ಬರನ್ನು ತಪಾಸಣೆ ಮಾಡಲಿವೆ;ಅವರಲ್ಲಿ ಯಾರಾದರೂ ಸೊಂಕಿತರೆಂದು ಕಂಡುಬಂದಲ್ಲಿ ಅವರ ರೋಗಲಕ್ಷಣಗಳ ಆಧಾರದ ಮೇರೆಗೆ ಹೋಂ ಐಸೋಲೇಶನ್ ಅಥವಾ ಆಸ್ಪತ್ರೆಗೆ ದಾಖಲಿಸಬೇಕೆ ಎಂಬುದನ್ನು ಶಿಫಾರಸ್ಸು ಮಾಡಲಿವೆ. ಹೋಂ ಐಸೋಲೇಶನ್ ಇದ್ದಲ್ಲಿ ಪ್ರತಿನಿತ್ಯ ನಿಗಾವಹಿಸಲು ಆರ್‍ಆರ್‍ಟಿ ತಂಡಗಳಿಗೆ ತಿಳಿಸುವುದರ ಜತೆಗೆ ಸೊಂಕಿತರಿಗೆ ಔಷಧಿ ಕಿಟ್‍ಗಳನ್ನು ವಿತರಿಸಲಾಗುತ್ತದೆ. ಇಎಲ್‍ಐ ಮತ್ತು ತೀವ್ರ ಉಸಿರಾಟ ಹಾಗೂ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಪತ್ತೆಹಚ್ಚಿ ಅವರಿಗೂ ಕೊರೊನಾ ಪರೀಕ್ಷೆ ನಡೆಸಲಾಗುತ್ತದೆ. ಅವರಲ್ಲಿ ಪಾಸಿಟಿವ್ ಕಂಡುಬಂದಲ್ಲಿ ರೋಗಲಕ್ಷಣಗಳ ಆಧಾರದ ಮೇಲೆ ಹೋಂ ಐಸೋಲೇಶನ್ ಅಥವಾ ಆಸ್ಪತ್ರೆಗೆ ದಾಖಲಿಸಬೇಕೆ ಎಂಬುದನ್ನು ಶಿಫಾರಸ್ಸು ಮಾಡಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ತಪಾಸಣೆ ನಡೆಸುವುದರ ಜೊತೆಗೆ ಆ ಮನೆಯಲ್ಲಿ ಈಗಾಗಲೇ ಕೋವಿಡ್ ಲಸಿಕೆ ಪಡೆದಿದ್ದರೇ ಅವರ ವಿವರವನ್ನು ಪಡೆದುಕೊಳ್ಳಲಿವೆ. ಎರಡು ಬಾರಿ ಲಸಿಕೆ ಪಡೆದಿದ್ದರೇ ಸಮಸ್ಯೆ ಇಲ್ಲ; ಒಂದು ಬಾರಿ ಲಸಿಕೆ ಪಡೆದು ಎರಡನೇ ಡೋಸ್‍ಗಾಗಿ ಕಾಯುತ್ತಿರುವವರನ್ನು ಆದ್ಯತೆ ಮೇರೆಗೆ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಿಸಲು ಕ್ರಮವಹಿಸಲಾಗುತ್ತದೆ ಎಂದು ವಿವರಿಸಿದ ಜಿಲ್ಲಾಧಿಕಾರಿ ಮಾಲಪಾಟಿ ಅವರು ಸದರಿ ಮನೆಗಳಲ್ಲಿ 18ರಿಂದ 45 ವರ್ಷದೊಳಗಿನವರಿದ್ದಲ್ಲಿ ಕೋವಿಡ್ ಲಸಿಕೆ ಪಡೆದುಕೊಳ್ಳುವುದಕ್ಕೆ ಯಾವ ರೀತಿ ಆನ್‍ಲೈನ್‍ನಲ್ಲಿ ತಮ್ಮ ಮಾಹಿತಿ ಭರ್ತಿ ಮಾಡಬೇಕು ಎಂಬುದನ್ನು ತಿಳಿಸಿಕೊಡಲಾಗುತ್ತದೆ ಮತ್ತು ಅಂತವರ ಮಾಹಿತಿಯನ್ನು ಸಂಗ್ರಹಿಸಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ತಿಳಿಸಿದ್ದಾರೆ.
ನಗರದ ಪ್ರತಿಯೊಬ್ಬ ಸಾರ್ವಜನಿಕರು ಈ ಮನೆ-ಮನೆ ಸಮೀಕ್ಷಾ ಕಾರ್ಯಕ್ಕೆ ಸಹಕರಿಸುವುದರ ಮೂಲಕ ಕೊರೊನಾ ಪ್ರಸರಣ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

LEAVE A REPLY

Please enter your comment!
Please enter your name here