ಕೋವಿಡ್ ನಿರೋಧಕ ಔಷಧಿಗಳನ್ನು ಮನೆಮನೆಗೆ ಹಂಚುವುದರಿಂದ ಕೋವಿಡ್ ಸೋಂಕು ಹರಡದಂತೆ ತಡೆಯಬಹುದು; ಇದು ಜಿಲ್ಲಾಡಳಿತ ಕೈಗೊಂಡ ನೂತನ ಕ್ರಮ; ಶಾಸಕ ಅರವಿಂದ ಬೆಲ್ಲದ

0
59

ಧಾರವಾಡ.ಮೇ.09: ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹರಡುತ್ತಿರುವುದರಿಂದ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಧಾರವಾಡ ಜಿಲ್ಲಾಡಳಿತವು ಲಕ್ಷಣರಹಿತ ಕೋವಿಡ್ ಸೋಂಕು ಇರುವವರನ್ನು ಹಾಗೂ ಜ್ವರ, ನೆಗಡಿ, ಕೆಮ್ಮು, ಅಶಕ್ತತೆ, ಆಯಾಸ ಹೊಂದಿರುವವರ ಮನೆ ಮನೆಗೆ ತೆರಳಿ ಕೋವಿಡ್ ನಿರೋಧಕ ಔಷಧಗಳನ್ನು ನೀಡಲು ಕ್ರಮಕೈಗೊಂಡಿರುವುದು ಉತ್ತಮ ಮತ್ತು ನೂತನ ಕ್ರಮವಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

ಅವರು ಇಂದು ಸಂಜೆ ಧಾರವಾಡ ನಗರದ ಲಕ್ಷ್ಮೀಸಿಂಗನಕೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಮಹಾನಗರ ಪಾಲಿಕೆ ಹಮ್ಮಿಕೊಂಡಿರುವ ಮನೆ ಮನೆಗೆ ಕೋವಿಡ್ ನಿರೋಧಕ ಔಷಧಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು

ಕೋವಿಡ್ ಸೋಂಕಿತರು ಹೆಚ್ಚಳವಾಗುತ್ತಿರುವದರಿಂದ ಅನೇಕರಿಗೆ ಅಗತ್ಯವಿರುವ ಆಕ್ಸಿಜನ್, ಬೆಡ್ ಹೊಂದಿಸಲು ಕಷ್ಟವಾಗುತ್ತಿದೆ. ಅನೇಕರು ಲಕ್ಷಣರಹಿತ ಸೋಂಕಿತರಾಗಿದ್ದೂ ಕೋವಿಡ್ ಪರೀಕ್ಷೆಗೆ ಒಳಪಡದೆ ಹಾಗೇ ಸಂಚರಿಸುವದರಿಂದ, ಮನೆಯಲ್ಲಿ ಇರುವದರಿಂದ ಕುಟುಂಬದವರಿಗೆ, ನೆರೆಹೊರೆಯವರಿಗೆ ಹಾಗೂ ಓಣಿ ಜನರಿಗೆ ಹಬ್ಬಿಸುತ್ತಾರೆ. ಇಂತವರನ್ನು ಆರೋಗ್ಯ ಇಲಾಖೆಯ ಆಶಾ ಹಾಗೂ ಆರೋಗ್ಯ ಸಿಬ್ಬಂದಿ ಮನೆಮನೆ ಸಮೀಕ್ಷೆ ಮಾಡಿ, ಗುರುತಿಸಿ ಅವರಿಗೆ ಉಚಿತವಾಗಿ ಔಷಧಿಗಳನ್ನು ವಿತರಿಸುತ್ತಾರೆ.

ಹುಬ್ಬಳ್ಳಿ ಧಾರವಾಡದಲ್ಲಿ ಅದಾಂಜು 2,50,000 ಜನರಿದ್ದು, ಸುಮಾರು 50,000 ಸಾವಿರ ಜನರಿಗೆ ಜಿಲ್ಲಾಡಳಿತದಿಂದ ಉಚಿತವಾಗಿ ಕೋವಿಡ್ ನಿರೋಧಕ ಔಷಧಿಗಳನ್ನು ವಿತರಿಸುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು.

ಜಿಲ್ಕೆಯ ಗ್ರಾಮೀಣ ಭಾಗದಲ್ಲೂ ಈ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು. ಇದು ರಾಜ್ಯದಲ್ಲಿಯೇ ಮೊದಲ ಪ್ರಯತ್ನವಾಗಿದ್ದು, ಜಿಲ್ಲಾಡಳಿತದ ಕ್ರಮ ಹೆಚ್ಚು ಪರಿಣಾಮಕಾರಿಯಾಗಿ ಸೋಂಕು ನಿಯಂತ್ರಣಕ್ಕೆ ಸಹಕಾರಿಯಾಗಲಿದೆ ಎಂದು ಶಾಸಕ ಅರವಿಂದ ಬೆಲ್ಲದ ಅವರು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಶವಂತ ಮದೀನಕರ, ತಾಲೂಕಾ ಆರೋಗ್ಯ ಅಧಿಕಾರಿ ಡಾ.ತನುಜಾ.ಕೆ.ಎನ್, ಅಭಿಯಾನದ ನಗರ ಉಸ್ತುವಾರಿ ಹಾಗೂ ಪಾಲಿಕೆ ಪರಿಷತ್ ಕಾರ್ಯದರ್ಶಿ ಆಗಿರುವ ಅಜೀಜ್ ದೇಸಾಯಿ ಸೇರಿದಂತೆ ಇತರರು ಇದ್ದರು.

LEAVE A REPLY

Please enter your comment!
Please enter your name here