ಸಂವಿಧಾನದ ಆಶಯಗಳನ್ನು ನ್ಯಾಯಾಂಗವು ಕಾನೂನು ಸೇವಾ ಪ್ರಾಧಿಕಾರದ ಮೂಲಕ ನಾಗರಿಕರಿಗೆ ತಲುಪಿಸುತ್ತಿದೆ – ಪ್ರಧಾನ ಜಿಲ್ಲಾ ನ್ಯಾಯಾಧೀಶ ಉಮೇಶ ಅಡಿಗ

0
136

ಧಾರವಾಡ : ಭಾರತದ ಸಂವಿಧಾನವು ದೇಶದ ಪ್ರಜೆಗಳಿಗೆ ನೀಡಿರುವ ಮೂಲಭೂತ ಹಕ್ಕುಗಳನ್ನು ಮತ್ತು ಆಶಯಗಳನ್ನು ನ್ಯಾಯಾಂಗವು ಕಾನೂನು ಸೇವಾ ಪ್ರಾಧಿಕಾರದ ಮೂಲಕ ತಲುಪಿಸುತ್ತಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಉಮೇಶ ಅಡಿಗ ಅವರು ಹೇಳಿದರು.

ಅವರು ಇಂದು (ಜೂ.21) ಸಂಜೆ ಜಿಲ್ಲಾ ನ್ಯಾಯಾಲಯದ ಎಡಿಆರ್ ಕಟ್ಟಡದ ಸಭಾಂಗಣದಲ್ಲಿ ಆಯೋಜಿಸಿದ್ದ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ಎಸ್. ಚಿಣ್ಣನ್ನವರ ಅವರು ಹುಬ್ಬಳ್ಳಿಯ 1ನೇ ಅಧಿಕ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾಗಿ ವರ್ಗವಾಗಿರುವ ನಿಮಿತ್ಯ ಆಯೋಜಿಸಿದ್ದ ಬೀಳ್ಕೋಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾನೂನು ಸೇವೆಗಳ ಪ್ರಾಧಿಕಾರದ ಕಾಯ್ದೆಯು ಸಂವಿಧಾನದ ಆಶಯಗಳನ್ನು ಸಾರ್ವಜನಿಕರಿಗೆ ತಲುಪಿಸುವ ಮೂಲಕ ನಿಜವಾದ ಸೇವೆಗೆ ಅವಕಾಶ ನೀಡುತ್ತದೆ. ನ್ಯಾಯಾಂಗದ ಸೇವೆಗಳು ದುರ್ಬಲರಿಗೆ, ಅಸಹಾಯಕರಿಗೆ ಮತ್ತು ವಿವಿಧ ವರ್ಗದ ಜನರಿಗೆ ಕಾನೂನು ಸೇವಾ ಪ್ರಾಧಿಕಾರವು ಮುಟ್ಟಿಸುತ್ತದೆ. ಉಚಿತ ಕಾನೂನು ಅರಿವು ಮತ್ತು ನೆರವು ನೀಡುವ ಮೂಲಕ ನ್ಯಾಯಾಂಗದ ಘನತೆಯನ್ನು ಪ್ರಾಧಿಕಾರವು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ಸಿಜೆಎಂ ಆಗಿರುವ ಸಂಜಯ್ ಗುಡಗುಡಿ ಮಾತನಾಡಿ, ಕಾನೂನು ಸೇವಾ ಪ್ರಾಧಿಕಾರದ ಮೂಲಕ ನ್ಯಾಯಾಲಯದ ಸೇವೆಗಳನ್ನು ಸಾರ್ವಜನಿಕರಿಗೆ ನೀಡುವಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಎಸ್. ಚಿಣ್ಣನ್ನವರ ಸಾರ್ಥಕತೆ ಸಾಧಿಸಿದ್ದಾರೆ. ಬಡವರ ಸೇವೆಗೆ ಇದೊಂದು ಉತ್ತಮ ಅವಕಾಶ. ಧಾರವಾಡ ಜಿಲ್ಲೆಯಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸೇವೆಗಳನ್ನು ಮನೆ ಮನೆಗೆ ತಲುಪಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿದ ಆರ್.ಎಸ್. ಚಿಣ್ಣನ್ನವರ ಮಾತನಾಡಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು ನನ್ನ ವೃತ್ತಿ ಜೀವನದ ಪ್ರಮುಖ ಘಟ್ಟ. ನ್ಯಾಯಾಧೀಶನಾಗಿ ನೇಮಕವಾದ ನಂತರ ಕಾನೂನೇತರ ಸೇವೆಯಾಗಿ ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸಿರುವುದು ನನ್ನಲ್ಲಿ ಇನ್ನಷ್ಟು ಸಹೃದಯತೆಯನ್ನು ಮೂಡಿಸಿದೆ. ಓರ್ವ ನ್ಯಾಯಾಧೀಶನಾಗಿ ಸಾರ್ವಜನಿಕರ ದಿನನಿತ್ಯದ ಒಡನಾಟದಿಂದ ಅನೇಕ ಅನುಭವಗಳನ್ನು ಪಡೆದಿದ್ದೇನೆ. ಅಸಹಾಯಕರಿಗೆ ಮತ್ತು ದುರ್ಬಲ ವರ್ಗದವರಿಗೆ ನ್ಯಾಯ ತಲುಪಿಸುವ ರೀತಿ ಮತ್ತು ಅವರ ಅಗತ್ಯತೆಗಳಿಗೆ ಸ್ಪಂಧಿಸುವ ಅನುಭವ ಪಡೆದಿದ್ದೇನೆ ಎಂದರು.

ಕಳೆದ ನಾಲ್ಕು ವರ್ಷಗಳ ಸೇವಾ ಅವಧಿಯಲ್ಲಿ ಧಾರವಾಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವನ್ನು ರಾಜ್ಯದ ಅತ್ಯುತ್ತಮ ಸೇವಾ ಪ್ರಾಧಿಕಾರವೆಂದು ಉಚ್ಛ ನ್ಯಾಯಾಲಯ ಗುರುತಿಸಿ ಗೌರವಿಸಿರುವುದು ನನಗೆ ಹೆಮ್ಮೆಯೆನಿಸಿದೆ. ಧಾರವಾಡದ ನ್ಯಾಯವಾದಿಗಳು, ನಾಗರಿಕರು ಸಹೃದಯಿಗಳು. ಅವರ ಪ್ರೀತಿ, ವಿಶ್ವಾಸಗಳೊಂದಿಗೆ ತೆರಳುತ್ತಿದ್ದೇನೆ ಎಂದು ಹೇಳಿದರು.

ವೇದಿಕೆಯಲ್ಲಿ ಧಾರವಾಡ ಖಾಯಂ ಜನತಾ ನ್ಯಾಯಾಲಯದ ಅಧ್ಯಕ್ಷೆ ವಿಜಯಲಕ್ಷ್ಮೀ ಉಪನಾಳ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕಾನೂನು ಸೇವಾ ಪ್ರಾಧಿಕಾರದ ಶಿರಸ್ತೇದಾರ ರೂಪಾ ಪುಕಾಳೆ ಅವರು ವರ್ಗಾವಣೆಗೊಂಡ ನಿಮಿತ್ಯ ಸನ್ಮಾನಿಸಿ ಬೀಳ್ಕೋಡಲಾಯಿತು.

ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಎಸ್. ಚಿಣ್ಣನ್ನವರ ಅವರ ಸೇವಾ ಅವಧಿಯ ಕುರಿತು ಪ್ಯಾನಲ್ ವಕೀಲರಾದ ನೂರಜಹಾನ್ ಕಿಲ್ಲೇದಾರ, ವಿವೇಕ ಜೈನ್ ಹಾಗೂ ಇತರರು ಮಾತನಾಡಿದರು. ಪ್ರಾಧಿಕಾರದ ಸಿಬ್ಬಂದಿ ಮಂಜುನಾಥ ಅಂಜುಟಗಿ ಸ್ವಾಗತಿಸಿದರು. ನ್ಯಾಯಾಲಯ ಸಿಬ್ಬಂದಿ ದೀಪಕ್ ವಾಳದ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿಗಳು ವೈ.ಪಿ. ಮುದ್ನೂರ, ಸೋಮಶೇಖರ ಜಾಡರ, ಶ್ರೀಮತಿ ಎಂ.ಆರ್. ದೇಸಾಯಿ, ಜೆ.ಎಲ್. ಗ್ರಾಮಪುರೋಹಿತ ಸೇರಿದಂತೆ ವಿವಿದ ಪ್ಯಾನಲ್ ವಕೀಲರು, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ರಾಜೇಶ್ವರಿ ಸಾಲಗಟ್ಟಿ, ಸದಸ್ಯರಾದ ರಾಧಾ ಕಲಾಲ, ಶುಭಾ ಪರೀಟ, ದೀಪಾ ದಂಡವತಿ ಹಾಗೂ ಇತರರು ಇದ್ದರು.

LEAVE A REPLY

Please enter your comment!
Please enter your name here