ಬಳ್ಳಾರಿಯಲ್ಲಿ ರಾಷ್ಟ್ರೀಯ ಗ್ರಾಹಕರ ದಿನ ಆಚರಣೆ, ಗ್ರಾಹಕರೇ ತಮ್ಮ ಹಕ್ಕುಗಳ ಚಲಾಯಿಸುವಿಕೆಯಲ್ಲಿ ಹಿಂಜರಿಕೆ ಬೇಡ:ನ್ಯಾ.ಎಂ.ಡಿ.ಪವಿತ್ರಾ

0
67

ಬಳ್ಳಾರಿ,ಡಿ.31: ಗ್ರಾಹಕರು ತಮ್ಮ ಹಕ್ಕುಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ಹಣ ನೀಡಿ ಸರಕು/ಸೇವೆಯ ಪಡೆದಂತ ಸಂದರ್ಭದಲ್ಲಿ ಏನಾದರೂ ಲೋಪದೋಷಗಳು ಕಂಡುಬಂದಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಮೂಲಕ ಗ್ರಾಹಕರು ಪರಿಹಾರ ಪಡೆಯಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಡಿ.ಪವಿತ್ರಾ ಅವರು ಹೇಳಿದರು.
ಜಿಲ್ಲಾಡಳಿತ,ಜಿಪಂ,ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ,ಕಾನೂನು ಮಾಪನಶಾಸ್ತ್ರ ಇಲಾಖೆ ಹಾಗೂ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಂಯುಕ್ತ ಆಶ್ರಯದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಹಕರು ಹಕ್ಕುಗಳು ಮತ್ತು ಅವರಿಗಿರುವ ಕಾನೂನು ರಕ್ಷಣೆ ಮತ್ತು ಪರಿಹಾರಾತ್ಮಕ ಅಂಶಗಳು ಸೇರಿದಂತೆ ಅವರ ರಕ್ಷಣೆಗೆ
ಸಂಬಂಧಿಸಿದ ಅನೇಕ ಅಂಶಗಳನ್ನು ಗ್ರಾಹಕ ಸಂರಕ್ಷಣಾ ಕಾಯ್ದೆ-2019 ಒಳಗೊಂಡಿದೆ ಎಂದು ಹೇಳಿದ ನ್ಯಾ.ಪವಿತ್ರಾ ಅವರು ಗ್ರಾಹಕರು ಸರಕು/ಸೇವೆ ಖರೀದಿಸಿದ ಸಂದರ್ಭದಲ್ಲಿ ಏನಾದರೂ ಲೋಪದೋಷ ಕಂಡುಬಂದಲ್ಲಿ ಯಾವುದೇ ರೀತಿಯ ಭಯವಿಲ್ಲದೇ ನೇರವಾಗಿ ಗ್ರಾಹಕರ ಆಯೋಗದ ಮುಂದೆ ಹೋಗಬಹುದಾಗಿದೆ. ಗ್ರಾಹಕರಿಗೆ ಯಾವುದೇ ರೀತಿಯ ಕಾನೂನು ನೆರವು ಬೇಕಾದಲ್ಲಿ ಕಾನೂನು ಸೇವಾ ಪ್ರಾಧಿಕಾರದಿಂದ ಒದಗಿಸಲಾಗುವುದು ಮತ್ತು ತಮ್ಮ ಹಕ್ಕುಗಳ ಚಲಾಯಿಸುವಲ್ಲಿ ಯಾವ ಹಿಂಜರಿಕೆ ಬೇಡ ಎಂದರು.
ವಿಶೇಷ ಉಪನ್ಯಾಸ ನೀಡಿದ ಹಿರಿಯ ವಕೀಲರಾದ ಅಂಕಲಯ್ಯ ಅವರು ಮಾತನಾಡಿ,ಗ್ರಾಹಕರು ತಮ್ಮ ಸರಕು/ಸೇವೆಯಲ್ಲಿನ ಗುಣಮಟ್ಟದ ನ್ಯೂನ್ಯತೆ ಕುರಿತು ನ್ಯಾಯಪಡೆಯಲು ಪಡುತ್ತಿರುವ ತೊಂದರೆಯನ್ನು ಮನಗಂಡ ಸರಕಾರ ಗ್ರಾಹಕರ ಸಂರಕ್ಷಣಾ ಕಾಯ್ದೆ ಜಾರಿಗೆ ತಂದಿದ್ದು, ಖರೀದಿಸಿದ ಸರಕು/ಸೇವೆಯಲ್ಲಿ ಏನೇ ನ್ಯೂನ್ಯತೆಗಳಾದರೂ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮುಂದೆ ಹೋಗಿ ಪರಿಹಾರ ಪಡೆದುಕೊಳ್ಳಬಹುದು ಎಂದರು.
ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ನೊಂದ ಗ್ರಾಹಕರೇ ನೇರವಾಗಿ ದೂರುಅರ್ಜಿ ಸಲ್ಲಿಸಬಹುದಾಗಿದೆ;ಯವುದೇ ವಕೀಲರ ಸಹಾಯ ಅಗತ್ಯವಿಲ್ಲ. 5ಲಕ್ಷದವರೆಗೆ ಪರಿಹಾರ ಪಡೆಯಲು ಯಾವುದೇ ರೀತಿಯ ಶುಲ್ಕವಿಲ್ಲ ಎಂದರು.
ಹೆಚ್ಚಿನ ಪರಿಶ್ರಮವಿಲ್ಲದೇ ತಮಗಾಗಿರುವ ತೊಂದರೆಗೆ ಪರಿಹಾರ ಪಡೆದುಕೊಳ್ಳಬಹುದಾಗಿದ್ದು, ಪರಿಹಾರದ ಸಂದರ್ಭದಲ್ಲಿ ಸರಕು/ಸೇವೆಯ ಖರೀದಿಯ ಹಣದ ಜೊತೆಗೆ ಅದರ ಬಡ್ಡಿ,ಮಾನಸಿಕ ವೇದನೆ ಮತ್ತು ದೂರಿಗೆ ಸಂಬಂಧಿಸಿದ ಇನ್ನೀತರ ಖರ್ಚುಗಳು ಸೇರಿ ಪರಿಹಾರ ಪಡೆದುಕೊಳ್ಳಬಹುದಾಗಿದೆ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ಎರ್ರಿಗೌಡ ಅವರು ಮಾತನಾಡಿ, ಹಣ ನೀಡಿ ಸರಕು/ಸೇವೆಗಳನ್ನು ಪಡೆದ ಗ್ರಾಹಕರಿಗೆ ಅವರ ಸರಕು ಮತ್ತು ಸೇವೆಗಳಲ್ಲಿ ನ್ಯೂನ್ಯತೆ ಕಂಡುಬಂದಲ್ಲಿ ತಕ್ಷಣ ಸ್ಪಂದಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಮತ್ತು ಗ್ರಾಹಕರಿಗೆ ಅವರ ಹಕ್ಕುಗಳ ಕುರಿತು ಹೆಚ್ಚಿನ ಅರಿವು ಮೂಡಿಸುವ ಕೆಲಸವಾಗಬೇಕು ಎಂದರು.
ಗ್ರಾಹಕರಿಗೆ ತಾವು ಪಡೆದಂತ ಸರಕು ಮತ್ತು ಸೇವೆಗಳು ಗುಣಮಟ್ಟದಲ್ಲ ಮತ್ತು ನ್ಯೂನ್ಯತೆಗಳಿವೆ ಎಂದರಿತಲ್ಲಿ ಗ್ರಾಹಕರ ಸಂರಕ್ಷಣಾ ಕಾಯ್ದೆ-2019ರ ಅನುಸಾರ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ತೆರಳಿ ದೂರು ದಾಖಲಿಸಿ ಪರಿಹಾರ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದ ಅವರು ಸರಕು/ಸೇವೆಗಳಲ್ಲಿ ಸಮಸ್ಯೆಗಳಾದಲ್ಲಿ ಗ್ರಾಹಕರ ವೇದಿಕೆ ಮೆಟ್ಟಿಲು ಹತ್ತಿ ನ್ಯಾಯ ಪಡೆದವರು ಸಂಖ್ಯೆ ಬಹಳ ಕಡಿಮೆ ಎಂದರು.
ಗ್ರಾಹಕರ ಸರಕು-ಸೇವೆಗಳ ಸಂಬಂಧಿತ ಇಲಾಖೆಗಳು ಜನರಿಗೆ ಹತ್ತಿರವಾಗಬೇಕು ಮತ್ತು ಬೇಕು-ಬೇಡಗಳಿಗೆ ಸ್ಪಂದಿಸಬೇಕು ಎಂದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ಎಚ್.ವೀರೇಶ ಅವರು ಮಾತನಾಡಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕರ್ತವ್ಯಗಳನ್ನು ವಿವರಿಸಿದರು ಮತ್ತು 04 ತಿಂಗಳೊಳಗೆ ಆಯೋಗದಲ್ಲಿ ಪ್ರಕರಣಗಳನ್ನ ಇತ್ಯರ್ಥಪಡಿಸಿ ನೊಂದ ಗ್ರಾಹಕರಿಗೆ ಪರಿಹಾರ ಒದಗಿಸಲಾಗುತ್ತದೆ ಎಂದರು.
ಗ್ರಾಹಕರ ವ್ಯವಹಾರಗಳ ಇಲಾಖೆ,ಕಾನೂನು ಮಾಪನಶಾಸ್ತ್ರ ಇಲಾಖೆಗಳು ಹಳ್ಳಿಮಟ್ಟಕ್ಕೆ ಹೋಗಿ ಗ್ರಾಹಕರ ಹಕ್ಕುಗಳ ಕುರಿತು ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.
ಆಹಾರ,ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಸಿ.ಶ್ರೀಧರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ಮಾರ್ಲಾ ಶಶಿಕಲಾ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಮೃತಾ ಚವ್ಹಾಣ, ಆಹಾರ,ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಹಾಯಕ ನಿರ್ದೇಶಕರಾದ ಹಲೀಮಾ,ಸಣ್ಣ ಉಳಿತಾಯ ಮತ್ತು ಪಿಂಚಣಿ ಇಲಾಖೆಯ ಸಹಾಯಕ ನಿರ್ದೇಶಕ ಹೊನ್ನೂರಪ್ಪ ಮತ್ತಿತರರು ಇದ್ದರು.
ಆಹಾರ,ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಶಿರಸ್ತೇದಾರ ಶರಣಬಸಯ್ಯ ಅವರು ವಂದಿಸಿದರು.

LEAVE A REPLY

Please enter your comment!
Please enter your name here