ರೆಮ್ಡಿಸಿವರ್ ಸಮಸ್ಯೆ ಇನ್ನೆರಡು ದಿನಗಳಲ್ಲಿ ಬಗೆಹರಿಯುವ ವಿಶ್ವಾಸ ಹಾಸ್ಟೆಲ್‍ಗಳನ್ನು ಕೋವಿಡ್ ಕೇರ್ ಸೆಂಟರ್‍ಗಳಾಗಿ ಪರಿವರ್ತಿಸಲು ಸಮಾಜ ಕಲ್ಯಾಣ ಸಚಿವ ರಾಮುಲು ಸೂಚನೆ

0
64

ಬಳ್ಳಾರಿ, ಮೇ 10 : ಜಿಲ್ಲೆಯಲ್ಲಿ ಸಮಾಜಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧೀನದಲ್ಲಿರುವ ವಸತಿನಿಲಯಗಳನ್ನು ಕೋವಿಡ್ ಕೇರ್ ಸೆಂಟರ್‍ಗಳನ್ನಾಗಿ ಪರವರ್ತಿಸಿ ಅಲ್ಲಿ ದಾಖಲಿಸಲಾಗುವ ರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡಬೇಕು ಎಂದು ಸಮಾಜಕಲ್ಯಾಣ ಸಚಿವ ಬಿ.ಶ್ರೀರಾಮುಲು ಸೂಚಿಸಿದರು.
ನಗರದ ಬಿಡಿಎಎ ಫುಟ್ಬಾಲ್ ಮೈದಾನದ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಸೊಂಕಿತರು ಹೋಂ ಐಸೋಲೇಶನ್ ಇರುವುದರಿಂದ ನಾನಾ ಸಮಸ್ಯೆಗಳಾಗುತ್ತಿವೆ. ಹೋಂ ಐಸೋಲೇಶನ್ ರದ್ದುಪಡಿಸಿ;ಅದರ ಬದಲಿಗೆ ಹಾಸ್ಟೆಲ್ ಗಳನ್ನು ಕೋವಿಡ್ ಕೇರ್ ಕೇಂದ್ರಗಳನ್ನಾಗಿ ಪರಿವರ್ತಿಸಿ ದಾಖಲಿಸಿ ಎಂದರು.
ರಾಜ್ಯದಲ್ಲಿ ರೆಮಡಿಸಿವಿರ್ ಸಮಸ್ಯೆ ಇನ್ನೂ ಎರಡು ದಿನಗಳಲ್ಲಿ ಬಗೆಹರಿಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಸಚಿವ ರಾಮುಲು ಅವರು ಕೋವಿಡ್ ಸರಪಳಿಯನ್ನು ತುಂಡರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಲಾಕ್ ಡೌನ್ ಘೋಷಿಸಿದ್ದಾರೆ ಎಂದರು.
ಡಿಎಂಎಫ್ ಅಡಿ ವೆಂಟಿಲೇಟರ್ ಗಳ ಖರೀದಿಗೆ ಕ್ರಮವಹಿಸಿ,ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್‍ಗಳನ್ನು ಅಳವಡಿಸಿ, ಸಿಲಿಂಡರ್‍ಗಳನ್ನು ಖರೀದಿಸಿ ಎಂದು ಸೂಚನೆ ನೀಡಿದ ಸಚಿವ ರಾಮುಲು ಅವರು ಜಿಲ್ಲೆಯಲ್ಲಿ ಯಾವ್ಯಾವ ಆಸ್ಪತ್ರೆಯಲ್ಲಿ ಬೆಡ್ ಗಳು ಖಾಲಿಯಿವೆ ಎಂಬುದರ ಮಾಹಿತಿ ಪ್ರತಿನಿತ್ಯ ಬಹಿರಂಗಪಡಿಸಿ;ಇದರಿಂದ ಸೊಂಕಿತರು ಆಸ್ಪತ್ರೆಗಳಿಗೆ ದಾಖಲಾಗಲು ಅನುಕೂಲವಾಗಲಿದೆ ಎಂದರು.
ಮಹಾನಗರಗಳಿಂದ ಗ್ರಾಮೀಣ ಪ್ರದೇಶಗಳಿಗೆ ಬರುವ ಜನರಿಗೆ ತಪಾಸಣೆ ಮಾಡಿ ಸೊಂಕು ಇದ್ದಲ್ಲಿ ಚಿಕಿತ್ಸೆ ಕೊಡಿಸುವ ಕೆಲಸವಾಗಬೇಕು ಮತ್ತು ಹಳ್ಳಿಗಳಲ್ಲಿರುವ ಕೋವಿಡ್ ಪಡೆಯನ್ನು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್, ಸಂಸದರು,ಶಾಸಕರು,ಜಿಲ್ಲಾಧಿಕಾರಿಗಳು,ಜಿಪಂ ಸಿಇಒ,ಎಸ್ಪಿ ಇತರರು ಇದ್ದರು.

LEAVE A REPLY

Please enter your comment!
Please enter your name here