ಶಿಕ್ಷಣಕ್ಕೆ ಮೀಸಲಾದ ಅನುದಾನದಲ್ಲಿ ಉನ್ನತ ಶಿಕ್ಷಣಕ್ಕೆ ಶೇ.50ರಷ್ಟು ಖರ್ಚು ಮಾಡಿ
-ಡಾ.ಅಶ್ವಥನಾರಾಯಣ ಸಿ.ಎನ್.

0
134

ಕಲಬುರಗಿ,ಫೆ.12- ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಯಿಂದ ಶಿಕ್ಷಣಕ್ಕೆ ಮೀಸಲಿಡುವ ಒಟ್ಟು ಅನುದಾನದಲ್ಲಿ ಶೇ.50 ರಷ್ಟು ಅನುದಾನವನ್ನು ಉನ್ನತ ಶಿಕ್ಷಣಕ್ಕೆ ಬಳಸಬೇಕೆಂದು ಎಂದು ರಾಜ್ಯದ ಉನ್ನತ ಶಿಕ್ಷಣ, ಐ.ಟಿ.-ಬಿ.ಟಿ., ವಿದುನ್ಮಾನ ಮತ್ತು ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ಉದ್ಯಮಶೀಲತೆ ಖಾತೆ ಸಚಿವ ಡಾ. ಅಶ್ವಥನಾರಾಯಣ ಸಿ.ಎನ್. ಅವರು ತಿಳಿಸಿದರು.

ಶನಿವಾರ ಇಲ್ಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಸಭಾಂಗಣದಲ್ಲಿ ಕಾಲೇಜು ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಮಂಡಳಿಯ ಅಧ್ಯಕ್ಷರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
ಸಾಮಾಜಿಕ ವಲಯಕ್ಕೆ ಮೀಸಲಿಡಲಾಗುವ ಅನುದಾನದಲ್ಲಿ ಪ್ರೌಢ ಶಿಕ್ಷಣ ಮತ್ತು ಉನ್ನತ ಶಿಕ್ಷಣವೆಂದು ವಿಭಜಿಸಿ ಕ್ರಿಯಾ ಯೋಜನೆ ರೂಪಿಸಬೇಕು. ಸರ್ಕಾರ ನೀಡುವ ಅನುದಾನದ ಹೊರತಾಗಿ ಮಂಡಳಿಯಿಂದ ಉನ್ನತ ಶಿಕ್ಷಣದ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದರು.
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ ಪಿ. ಅವರು ಮಾತನಾಡಿ ಕಲ್ಯಾಣ ಕರ್ನಾಟಕ ಪ್ರದೇಶದ 7 ಜಿಲ್ಲೆಗಳ ಪದವಿ ಮತ್ತು ತಾಂತ್ರಿಕ ಕಾಲೇಜುಗಳ ಮೂಲಸೌಕರ್ಯಕ್ಕೆ 372.53 ಕೋಟಿ ರೂ. ಗಳನ್ನು ಮಂಡಳಿಯಿಂದ ಒದಗಿಸುವಂತೆ ಮನವಿ ಮಾಡಿಕೊಂಡರು.
ಪ್ರದೇಶದ ಏಳು ಜಿಲ್ಲೆಗಳಿಗೆ 2013-14ನೇ ಸಾಲಿನಿಂದ ಇಲ್ಲಿಯವರೆಗೆ 52.60 ಕೋಟಿ ರೂ. ಹಂಚಿಕೆ ಮಾಡಿ 35.74 ಕೋಟಿ ಖರ್ಚು ಮಾಡಲಾಗಿದೆ. ಇದರಲ್ಲಿ 119 ಕಾಮಗಾರಿಗಳನ್ನು ಕೈಗೆತ್ತಿಕೊಂಡು 82 ಪೂರ್ಣಗೊಳಿಸಲಾಗಿದೆ ಎಂದು ಕೆ.ಕೆ.ಆರ್.ಡಿ.ಬಿ. ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಉನ್ನತ ಶಿಕ್ಷಣ ಗುಣಮಟ್ಟ ಕಾಪಾಡಲು ಉನ್ನತ ಶಿಕ್ಷಣ ಇಲಾಖೆ ಮತ್ತು ಮಂಡಳಿ ಜಂಟಿ ಕ್ರಿಯಾ ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕೆಂದು ಸಚಿವ ಡಾ.ಅಶ್ವಥನಾರಾಯಣ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ಸಿ. ರೇವೂರ ಮಾತನಾಡಿ ಸರ್ಕಾರವು ಪ್ರತಿ ಜಿಲ್ಲೆಗೆ ನೀಡುವಂತೆ ಪ್ರದೇಶದ ಜಿಲ್ಲೆಗಳಿಗೆ ಅನುದಾನ ಬಿಡುಗಡೆ ಮಾಡಬೇಕು. ಹೆಚ್ಚುವರಿ ಅನುದಾನ ಬೇಕಾದಾಗ ಮಂಡಳಿ ನೆರವಿಗೆ ಬರುತ್ತದೆ ಎಂದರು.

ಸಭೆಯಲ್ಲಿ ವಿಧಾನ ಪರಿಷತ್ ಶಾಸಕ ಶಶಿಲ್ ಜಿ. ನಮೋಶಿ, ಜಿಲ್ಲಾಧಿಕಾರಿ ಯಶ್ವಂತ ವಿ. ಗುರುಕರ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಷ್ ಸಸಿ, ಕೆ.ಕೆ.ಆರ್.ಡಿ.ಬಿ. ಉಪ ಕಾರ್ಯದರ್ಶಿ ರಾಚಪ್ಪಾ, ಜಂಟಿ ನಿರ್ದೇಶಕಿ ಪ್ರವೀಣ ಪ್ರಿಯಾ ಡೇವಿಡ್, ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ದಯಾನಂದ ಅಗಸರ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಪ್ರೊ. ಬಸವರಾಜ ಡೋಣೂರ, ಗುಲಬರ್ಗಾ ವಿ.ವಿ. ವಿಶೇಷಾಧಿಕಾರಿ ಚಂದ್ರಕಾಂತ ಕೆಳಮನಿ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ ಅವರು ಇದ್ದರು.

LEAVE A REPLY

Please enter your comment!
Please enter your name here