ಹುಟ್ಟಿನ ಹಿಂದಿನ ಕತೆ

0
172

1965ರಲ್ಲಿ ಅಮೆರಿಕದ ಪ್ರಸಿದ್ಧ ’ಲೈಫ್’ ಪತ್ರಿಕೆ ’ಜನನದ ಮುಂಚಿನ ಜೀವನ ನಾಟಕ’ ಎಂಬ ಈ ಕೆಳಗಿನ ಚಿತ್ರವನ್ನು ಪ್ರಕಟಿಸಿತು. ಇದೆಷ್ಟು ಪ್ರಸಿದ್ಧವಾಯ್ತೆಂದರೆ ಕೆಲವೇ ದಿನಗಳಲ್ಲಿಯೇ ಪತ್ರಿಕೆಗಳೆಲ್ಲವೂ ಮಾರಾಟಗೊಂಡುಬಿಟ್ಟವು. ಈ ಚಿತ್ರ ಎಷ್ಟೊಂದು ಚರ್ಚೆಗೆ ಒಳಗಾಯಿತೆಂದರೆ ಭ್ರೂಣದ ಇಷ್ಟೊಂದು ಸ್ಪಷ್ಟವಾದ ಚಿತ್ರ ಅದುವರೆಗೂ ಪ್ರಕಟವಾಗಿರಲಿಲ್ಲ. ಅಲ್ಲದೆ ಜನನದ ಮುಂಚಿನ ಈ ಚಿತ್ರವನ್ನು ಕುರಿತು ಹಲವಾರು ಪ್ರಶ್ನೆಗಳೂ ಉದ್ಭವಿಸಲು ಸಹ ಕಾರಣವಾಯಿತು. ಈ ಚಿತ್ರವನ್ನು ಹೇಗೆ ಸೆರೆಹಿಡಿಯಲಾಯಿತು ? ಭ್ರೂಣಾವಸ್ಥೆಯಲ್ಲಿಯೇ ಚಿತ್ರ ತೆಗೆದಿದ್ದರೆ ಅದು ಹೇಗೆ ? ಅಥವಾ ಬೇರೆ ಯಾವುದಾದರೂ ರೀತಿಯಲ್ಲಿ ಗರ್ಭಿಣಿಗೆ ತೊಂದರೆಯಾಗುವ ಹಾಗೆ ಆಗಿದೆಯಾ ? ಹೀಗೇ ಪ್ರಶ್ನೆಗಳ ಸುರಿಮಳೆ ಆರಂಭಗೊಂಡಾಗ, ಕೊನೆಗೆ ಲೈಫ್ ಪತ್ರಿಕೆ ಅದಕ್ಕೆ ಸಮಜಾಯಿಶಿಯನ್ನೂ ನೀಡಬೇಕಾಯಿತು. ’ಚಿತ್ರವನ್ನು ಗರ್ಭಕೋಶದ ಹೊರಗೇ ಕ್ಲಿಕ್ಕಿಸಲಾಗಿದೆ, ಅಲ್ಲದೆ ಅದು ’ಹಲವಾರು ವೈದ್ಯಕೀಯ ಕಾರಣಗಳಿಂದಾಗಿ’ ಭ್ರೂಣವನ್ನು ಹೊರ ತೆಗೆದಾಗ ಅಥವಾ ಗರ್ಭಪಾತವಾದಾಗ ಕ್ಲಿಕ್ಕಿಸಿದ್ದು’ ಎಂಬ ಹೇಳಿಕೆ ನೀಡಿತು.

ನಿಮಗೆಲ್ಲ ಕುತೂಹಲ ಮೂಡಿರಬಹುದು ಈ ಚಿತ್ರವನ್ನು ಭ್ರೂಣಾವಸ್ಥೆಯಲ್ಲಿಯೇ ಕ್ಲಿಕ್ಕಿಸಲಾಗಿದೆಯಾ ? ಅಂತ. ಈಗ ಈ ಚಿತ್ರ ಹೇಗೆ ಕ್ಲಿಕ್ಕಿಸಲಾಯಿತು ಎಂಬುದಕ್ಕೆ ವಿವರ ಹೀಗಿದೆ ನೋಡಿ.
ಛಾಯಾಗ್ರಾಹಕ ಆಸ್ಪತ್ರೆಯೊಂದರ ವೈದ್ಯರ ಜೊತೆ ಮೊದಲೇ ಮಾತುಕತೆಯಾಡಿದ್ದ. ಈ ರೀತಿಯಲ್ಲಿ ಭ್ರೂಣವೇನಾದರೂ ಆಕಸ್ಮಾತ್ ಆಗಿ ದೊರೆತರೆ ತನಗೆ ತಿಳಿಸಬೇಕೆಂದು ಹೇಳಿದ್ದ. ಅದೇ ರೀತಿಯಲ್ಲಿಯೇ ಈ ರೀತಿಯಲ್ಲಿ ಗರ್ಭಕೋಶದಲ್ಲಿರುವ ಭ್ರೂಣವು ಸಿಕ್ಕೊಡನೆ ವೈದ್ಯರು ಛಾಯಾಗ್ರಾಹಕನಿಗೆ ತಿಳಿಸಿದ್ದಾರೆ, ಛಾಯಾಗ್ರಾಹಕನು ತಕ್ಷಣವೇ ಇಂಥ ಚಿತ್ರಕ್ಕಾಗಿಯೇ ಮೀಸಲಾದ ಕೋಣೆಯೊಂದರಲ್ಲಿ ಬೆಳಕು, ಇತರೆ ಸಾಮಗ್ರಿ, ಹಾಗೂ ಅದಕ್ಕೆ ತಕ್ಕುದಾದ ಕೆಮರಾ ಲೆನ್ಸ್ ಸಿದ್ಧಪಡಿಸಿಕೊಂಡು ಕ್ಲಿಕ್ಕಿಸಿದ್ದಕ್ಕಾಗಿ ಇಂಥ ಅದ್ಭುತವಾದ ಚಿತ್ರ ಸೆರೆಸಿಕ್ಕಿತು. ವಿಶೆಷವೇನೆಂದರೆ ಇಲ್ಲಿ ಗರ್ಭಕೋಶದಲ್ಲಿರುವ ಭ್ರೂಣಾವಸ್ಥೆಯಲ್ಲಿ ಮಗು ಹೇಗೆ ಕಾಣುತ್ತದೆ ಎಂಬುದು. ಈ ರೀತಿಯ ಚಿತ್ರ ಸಿಕ್ಕಿರಲಿಲ್ಲ ಎಂಬುದನ್ನೂ ನಾವು ಗಮನಿಸಬೇಕು.

ಕೆಲವು ವರ್ಷಗಳ ನಂತರ ಛಾಯಾಗ್ರಾಹಕ ತನ್ನ ಪ್ರಬಂಧದೊಂದಿಗೆ ಈ ಚಿತ್ರವನ್ನು ಪ್ರಕಟಿಸಿದಾಗ, ಈ ಚಿತ್ರವು ಆತನ ಅನುಮತಿಯಿಲ್ಲದೆ ಎಲ್ಲೆಡೆ ಪ್ರಸಾರಗೊಂಡುಬಿಟ್ಟಿತು. ಇದೇ ಅವಕಾಶವನ್ನು ಕಾಯುತ್ತಿದ್ದವರ ರೀತಿಯಲ್ಲಿ ಗರ್ಭಪಾತ ವಿರೋಧಿ ಕಾರ್ಯಕರ್ತರು ಈ ಚಿತ್ರವನ್ನೇ ಬಳಸಿಕೊಂಡರು. (ಹಾಗೆ ನೋಡಿದರೆ ಈ ಛಾಯಾಗ್ರಾಹ ಗರ್ಭಪಾತದ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಸ್ಪಷ್ಟ ನಿಲುವನ್ನು ಹೊಂದಿರಲಿಲ್ಲ). ಆದರೂ ಈ ಚಿತ್ರ ಜನನದ ಮುಂಚಿನ ವಿವರಗಳನ್ನು ಸ್ಪಷ್ಟವಾಗಿ ನಿರೂಪಿಸುವ ಚಿತ್ರವೆಂದೇ ಪ್ರಸಿದ್ಧವಾಯಿತು.

ಅಂದಹಾಗೆ ಈ ಚಿತ್ರವನ್ನು ಕ್ಲಿಕ್ಕಿಸಿದ ಪ್ರಸಿದ್ಧ ಛಾಯಾಗ್ರಾಹಕ ಸ್ವೀಡಿಷ್ ನ ಲೆನ್ನಾರ್ಟ್ ನಿಲ್ಸನ್ (1922-2017). ವೈದ್ಯಕೀಯ ವಿಷಯಗಳ ಬಗ್ಗೆ ಅತ್ಯದ್ಭುತ ಚಿತ್ರಗಳನ್ನು ಕ್ಲಿಕ್ಕಿಸಿದ ಹಿರಿಮೆ ಈ ಛಾಯಾಗ್ರಾಹಕನದ್ದು.

-ಸಿದ್ಧರಾಮ ಕೂಡ್ಲಿಗಿ
ಚಿತ್ರ ಹಾಗೂ ಮಾಹಿತಿ : ಅಂತರ್ಜಾಲದಿಂದ

LEAVE A REPLY

Please enter your comment!
Please enter your name here