ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಮೂಲಸೌಕರ್ಯಗಳ ಉನ್ನತಿಕರಣಕ್ಕೆ ಆದ್ಯತೆ ನೀಡಲಾಗುವುದು- ಗೃಹ ಸಚಿವ ಅರಗ ಜ್ಞಾನೇಂದ್ರ.

0
83

ಧಾರವಾಡ:ಸೆ.08:ಅಗ್ನಿಶಾಮಕ ಇಲಾಖೆ ಬರೀ ಬೆಂಕಿ ನಂದಿಸುವ ಕಾರ್ಯವಲ್ಲದೇ ಪ್ರವಾಹ, ಭೂಕುಸಿತ, ಕಟ್ಟಡ ಕುಸಿತ, ವಾಹನ ಅಪಘಾತ ಹಾಗೂ ಇನ್ನಿತರೆ ತುರ್ತು ಸಂದರ್ಭಗಳಲ್ಲಿ ತಕ್ಷಣ ಸ್ಪಂಧಿಸಿ ಕಾರ್ಯಪ್ರವೃತವಾಗುತ್ತದೆ. ಇಲಾಖೆಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಪೊರೈಸಲು ಆದ್ಯತೆ ನೀಡಲಾಗುತ್ತಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಹೇಳಿದರು.

ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಇಂದು (ಸೆ.8) ಸಂಜೆ ನೂತನ ಅಗ್ನಿಶಾಮಕ ಠಾಣೆ ಉದ್ಘಾಟಿಸಿದರು. ಮತ್ತು ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಧಾರವಾಡ ಜಿಲ್ಲೆಯ ಬೇಲೂರು ಆಗ್ನಿಶಾಮಕ ಠಾಣೆಯು ರಾಜ್ಯದ 216ನೇ ಅಗ್ನಿಶಾಮಕ ಠಾಣೆ ಹಾಗೂ ಹುಬ್ಬಳ್ಳಿ-ಧಾರವಾಡ ಜಿಲ್ಲೆಯ 8ನೇ ಅಗ್ನಿಶಾಮಕ ಠಾಣೆಯಾಗಿದೆ. ಎರಡು ಎಕರೆ ಪ್ರದೇಶದಲ್ಲಿ 223.75 ಲಕ್ಷ ರೂ. ಗಳ ಅನುದಾನದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಮೂಲಭೂತ ಸೌಲಭ್ಯ ಅಭಿವೃದ್ದಿ ನಿಗಮದಿಂದ ಸುಸಜ್ಜಿತ ಅಗ್ನಿಶಾಮಕ ಠಾಣೆ ನಿರ್ಮಾಣವಾಗಿದೆ.

ಧಾರವಾಡ ಜಿಲ್ಲೆಯ ಬೇಲೂರು ಕೈಗಾರಿಕಾ ಪ್ರದೇಶವು ಸುಮಾರು 2035 ಎಕರೆಯಷ್ಟಿದ್ದು, ಇಲ್ಲಿ ಸುಮಾರು 84,893 ಜನಸಂಖ್ಯೆಯನ್ನು ಹೊಂದಿದೆ. 592 ವಿವಿಧ ಸಣ್ಣ ಹಾಗೂ ಬೃಹತ್ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 18,000 ಜನ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಅಗ್ನಿಶಾಮಕ ಠಾಣೆಗೆ ಧಾರವಾಡ, ಹುಬ್ಬಳ್ಳಿ-ಅಮರಗೋಳ, ಹುಬ್ಬಳ್ಳಿ ನಗರ ಹಾಗು ಬೈಲಹೊಂಗಲ ಅಗ್ನಿಶಾಮಕ ಠಾಣೆಗಳು ಹತ್ತಿರದಲ್ಲಿರುತ್ತವೆ. ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಉಂಟಾಗಬಹುದಾದ ಯಾವುದೇ ಅಗ್ನಿಅವಘಡ, ಪ್ರಕೃತಿ ವಿಕೋಪ, ರಸ್ತೆ ಅಪಘಾತ ಇನ್ನಿತರೆ ತುರ್ತು ಸಂದರ್ಭಗಳಲ್ಲಿ ಈ ಠಾಣೆಯಿಂದ ಸಿಬ್ಬಂದಿ ಮತ್ತು ವಾಹನವನ್ನು ನಿಯೋಜಿಸಲು ಸಹಕಾರಿಯಾಗಿದೆ. ನೈಸರ್ಗಿಕ ವಿಕೋಪಗಳಿಂದ ಉಂಟಾಗುತ್ತಿದ್ದ ಅಪಾರ ಪ್ರಮಾಣದ ಆಸ್ತಿ, ಜೀವ ಹಾಗೂ ಪ್ರಾಣಿಗಳ ಜೀವಹಾನಿಯನ್ನು ತಡೆಯಲು ಸಹಕಾರಿಯಾಗಿದೆ ಎಂದು ಅವರು ಹೇಳಿದರು.

ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಗಳ ಭರ್ತಿಗೆ ಹಾಗೂ ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೆ ಎರಿಸುವ ಕಾರ್ಯ ನಡೆದಿದ್ದು, ಜನಸ್ನೇಹಿ ಪೊಲೀಸ್ ವ್ಯವಸ್ಥೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ವಿಧಾನ ಪರಿಷತ್ತ ಸಭಾಪತಿ ಬಸವರಾಜ ಹೊರಟ್ಟಿ, ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ, ಪೊಲೀಸ್ ಮಹಾ ನಿರ್ದೇಶಕ ಹಾಗೂ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಮಹಾನಿರ್ದೇಶಕರಾದ ಡಾ. ಅಮರ ಕುಮಾರ ಪಾಂಡೆ, ಆರಕ್ಷಕ ಉಪ ಮಹಾ ನೀರಿಕ್ಷಕ ಕೆ.ಟಿ.ಬಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ, ಡಿವೈಎಸ್‍ಪಿ ಮಲ್ಲಿಕಾರ್ಜುನ ಸಂಕದ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ, ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ನಿರ್ದೇಶಕ ಕೆ.ಶಿವಕುಮಾರ, ಬೇಲೂರ ಗ್ರಾಮ ಪಂಚಾಯತ ಅಧ್ಯಕ್ಷೆ ಅಕ್ಕಮಹಾದೇವಿ ಬಡವಣ್ಣವರ ಮತ್ತು ಮುಖ್ಯ ಅಗ್ನಿಶಾಮಕ ಅಧಿಕಾರ ಜಿ.ಈಶ್ವರ ನಾಯ್ಕ್, ಪ್ರಾಧೇಶಿಕ ಅಗ್ನಿಶಾಮಕ ಅಧಿಕಾರಿ ಶ್ರೀಕಾಂತ, ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳಾದ ವಿನಾಯಕ ಹಟ್ಟೆಕರ, ವಿನಾಯಕ ಕಲ್ಲಗುಟಕರ, ಚಂದ್ರಶೇಖರ ಬಂಡಾರಿ ಸೇರಿದಂತೆ ಪೊಲೀಸ್, ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು, ವಿವಿಧ ಕೈಗಾರಿಕೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here