ದೇಶದ ಅತ್ಯಂತ ಸಹಜ ಕಲಾವಿದ, ಮೋಹನ್‍ಲಾಲ್

0
118

ಮಲಯಾಳಂ ನಟರಾದ ಮೋಹನ್‍ಲಾಲ್ ಒಬ್ಬ ಮಹಾನ್ ನಟ. ಗಾಂಭೀರ್ಯವೇ ಮೂರ್ತಿವೆತ್ತಂತೆ ಚಿತ್ರಗಳಲ್ಲಿ ಕಾಣುವ ಈತ ಪ್ರವೃತ್ತಿಯಲ್ಲೂ ಗಂಭೀರ. ಜೊತೆಗೆ ಈ ದೇಶದ ಅತ್ಯಂತ ಸಹಜ ಕಲಾವಿದರ ಸಾಲಿನಲ್ಲಿ ನಿಲ್ಲುವವರು.

ಮೋಹನ್‍ಲಾಲ್ 1960ರ ಮೇ 21ರಂದು ಜನಿಸಿದರು.

1978ರ ವರ್ಷದಲ್ಲಿ ಮೋಹನ್‍ಲಾಲರು ಚಿತ್ರರಂಗಕ್ಕೆ ಪಾದಾರ್ಪಣ ಮಾಡಿದ ‘ತೀರನೋಟ್ಟಂ’ ಸೆನ್ಸಾರ್ ಗೊಂದಲಗಳಿಂದ ಈಚೆ ಬರಲಿಲ್ಲ. ಹಾಗಾಗಿ ಅವರ ಮೊದಲ ತೆರೆಕಂಡ ಚಿತ್ರ ‘ಮಂಜಿಲ್ ವಿರಿಂಜ ಪೂಕ್ಕಳ್’. ತಮ್ಮ ಚಿತ್ರಜೀವನದಲ್ಲಿ ಹಾಸ್ಯ, ಡಿಶುಂಡಿಶುಂ, ಚಾರಿತ್ರಿಕ, ಸಾಮಾಜಿಕ, ಒಳ್ಳೆಯವ, ಕೆಟ್ಟವ, ಗಾಯಕ, ನೃತ್ಯ ಕಲಾವಿದ, ಕೂಲಿ ಹೀಗೆ ವಿವಿದ ಬಗೆಯ ಎಲ್ಲ ಪಾತ್ರಗಳಲ್ಲಿ ಮೋಹನ್‍ಲಾಲ್ ವಿಜ್ರಂಭಿಸಿದ್ದಾರೆ. ‘ಭರತಂ’ ಚಿತ್ರದಲ್ಲಿನ ಅವರ ಸಂಗೀತಗಾರನ ಪಾತ್ರ ಮತ್ತು ‘ವಾನಪ್ರಸ್ಥಂ’ನ ಕಥಕ್ಕಳಿ ನೃತ್ಯಗಾರನ ಪಾತ್ರ ನಿರ್ವಹಣೆಗಳು ಶ್ರೇಷ್ಠಮಟ್ಟದ್ದೆನಿಸಿದ್ದು ಅವರಿಗೆ ರಾಷ್ಟ್ರಪ್ರಶಸ್ತಿಯನ್ನೂ ತಂದುಕೊಟ್ಟಿವೆ.

1986ರಲ್ಲಿ ಮೂಡಿಬಂದ ‘ರಾಜವಿಂಟೆ ಮಗನ್’ ಚಿತ್ರದ ಯಶಸ್ಸಿನಿಂದ ಮೋಹನ್‍ಲಾಲ್ ಸೂಪರ್ ಸ್ಟಾರ್ ಪಟ್ಟವನ್ನು ಅಲಂಕರಿಸಿದರು. 1990ರಲ್ಲಿ ಅವರು ‘ಹಿಸ್ ಹೈನೆಸ್ ಅಬ್ದುಲ್ಲಾ’ ಎಂಬ ತಮ್ಮದೇ ಆದ ಯಶಸ್ವೀ ಚಿತ್ರವನ್ನು ನಿರ್ಮಿಸಿದರು. ಮಲಯಾಳಂ ಅಲ್ಲದೆ ಹಲವಾರು ತಮಿಳು, ತೆಲುಗು ಮತ್ತು ಹಿಂದೀ ಚಿತ್ರಗಳಲ್ಲೂ ಮೋಹನ್‍ಲಾಲ್ ನಟಿಸಿದ್ದಾರೆ. ಅವುಗಳಲ್ಲಿ ಪ್ರಮುಖವೆಂದರೆ ಮಣಿರತ್ನಂ ಅವರ ‘ಇರುವರ್’, ರಾಮ್ ಗೋಪಾಲ್ ವರ್ಮಾ ಅವರ ‘ಕಂಪನಿ’, ಪ್ರಿಯ ದರ್ಶನ್ ಅವರ ‘ಕಾಲಾಪಾನಿ’ ಮುಂತಾದವು ಸೇರಿವೆ. ಕನ್ನಡದಲ್ಲಿ ಸಹಾ ಲವ್ ಮತ್ತು ಮೈತ್ರಿ ಎಂಬ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

ಚಲನಚಿತ್ರ ನಿರ್ಮಾಣವೇ ಅಲ್ಲದೆ ಮೋಹನ್‍ಲಾಲ್ ತಮ್ಮದೇ ಆದ ಹಲವಾರು ಉದ್ಯಮಗಳನ್ನೂ ಹೊಂದಿದ್ದು ಚಲನಚಿತ್ರ ವಿತರಣೆ, ಹೋಟೆಲ್ಲುಗಳು, ಸಾಂಬಾರ ಪದಾರ್ಥಗಳ ವಹಿವಾಟು ಮುಂತಾದವು ಇವುಗಳಲ್ಲಿ ಪ್ರಮುಖವಾಗಿವೆ.

ಚಲನಚಿತ್ರರಂಗದ ಪ್ರತಿಭಾನ್ವಿತರ ಪಟ್ಟಿಯಲ್ಲಿ ನಿರಂತರ ರಾರಾಜಿತರಾದ ಮೋಹನ್‍ಲಾಲ್ ಐದು (ಎರಡು ಶ್ರೇಷ್ಠ ನಟ, ಒಂದು ಜ್ಯೂರಿ ಪ್ರಶಸ್ತಿ, ಒಂದು ಜ್ಯೂರಿ ವಿಶೇಷ ನಮೂದನೆ, ಒಂದು ನಿರ್ಮಾಣ ಪ್ರಶಸ್ತಿ) ರಾಷ್ಟ್ರಪ್ರಶಸ್ತಿಗಳೂ, ಒಂಬತ್ತು ಕೇರಳ ರಾಜ್ಯ ಪ್ರಶಸ್ತಿಗಳೂ ಸೇರಿದಂತೆ ಹಲವಾರು ಗೌರವಗಳನ್ನು ಸ್ವೀಕರಿಸಿದ್ದಾರೆ. 2001ರ ವರ್ಷದಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಗೌರವ ಸಂದಿದೆ. 2019 ರಲ್ಲಿ ಪದ್ಮಭೂಷಣ ಸಂದಿದೆ. 2006ರ ವರ್ಷದಲ್ಲಿ ಕೇರಳ ರಾಜ್ಯದ ಐವತ್ತನೇ ವರ್ಷದ ಸಂದರ್ಭದಲ್ಲಿ ಸಿ ಎನ್ ಎನ್ – ಐ ಬಿ ಎನ್ ನಡೆಸಿದ ಅಂತರ್ಜಾಲ ಸಮೀಕ್ಷೆಯಲ್ಲಿ ವಿಶ್ವದೆಲ್ಲೆಡೆ ವ್ಯಾಪಿಸಿರುವ ಮಲಯಾಳಿಗಳು ಮೋಹನ್‍ಲಾಲರನ್ನು ಅತ್ಯಂತ ಜನಪ್ರಿಯ ವ್ಯಕ್ತಿ ಎಂದು ಮತ ನೀಡಿದ್ದಾರೆ. 2009ರ ವರ್ಷದಲ್ಲಿ Terriotorial Army of India ವಿಭಾಗವು ಮೋಹನ್‍ಲಾಲರಿಗೆ ಲ್ಯೂಟಿನೆಂಟ್ ಕೊಲೋನೆಲ್ ಗೌರವ ಪ್ರಧಾನ ಮಾಡಿದೆ. ಕೇರಳದ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯ ಮತ್ತು ಕಲ್ಲಿಕೋಟೆ ವಿಶ್ವವಿದ್ಯಾಲಯಗಳು ಅವರಿಗೆ ಗೌರವ ಡಾಕ್ಟರೇಟ್ ಗೌರವ ನೀಡಿದೆ.

ಸನ್ಮನಸುಳ್ಳುಕ್ಕುಳ್ ಸಮಾಧಾನಂ, ನಾಡೋಡಿಕ್ಕಾಟ್ಟು, ಚಿತ್ರಂ, ಪಾದಮುದ್ರ, ಆರ್ಯನ್, ಕಿರೀಟಮ್, ವರವೆಲ್ಪು, ಹಿಸ್ ಹೈನೆಸ್ ಅಬ್ದುಲ್ಲಾ, ಮಿಥುನಂ, ಕಿಲುಕ್ಕುಂ, ಭರತಂ, ಕಮಲದಳಂ, ರಾಜಶಿಲ್ಪಿ, ಸದಯಂ, ಯೋಧ, ವಿಯೆಟ್ನಾಂ ಕಾಲೋನಿ, ದೇವಾಸುರಂ, ಮಣಿಚಿತ್ರತ್ತಾಯು, ಸ್ಪಟಿಕಂ, ಕಾಲಾಪಾನಿ, ಇರುವರ್, ವಾನಪ್ರಸ್ಥಂ, ದೃಶ್ಯಂ ಮುಂತಾದ ಪ್ರೇಕ್ಷಕ, ವೀಕ್ಷಕ, ಪ್ರಶಸ್ತಿ ಸಮಿತಿಗಳು, ಚಿತ್ರೋತ್ಸವಗಳು ಹೀಗೆ ಎಲ್ಲರ ಮನವನ್ನೂ ಗೆದ್ದ ಮಹಾನ್ ಚಿತ್ರಗಳಲ್ಲಿ ನಟಿಸಿ ಮೋಹನ್‍ಲಾಲ್ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿದ್ದಾರೆ. ಅವರು ನಟಿಸಿರುವ ಚಲನಚಿತ್ರಗಳ ಸಂಖ್ಯೆ ಸುಮಾರು 350.

ಓಶೋ, ಜೆ ಕೃಷ್ಣಮೂರ್ತಿ, ಅರಬಿಂದೂ, ರಮಣ ಮಹರ್ಷಿ ಮುಂತಾದವರ ಬೋಧನೆಗಳ ಬಗ್ಗೆ ತೀವ್ರ ಆಸಕ್ತರಾದ ಮೋಹನ್‍ಲಾಲ್ ತಮ್ಮ ಸಕಲ ಕಲೆ, ಚಟುವಟಿಕೆ, ಯಶಸ್ಸು, ಐಶ್ವರ್ಯಗಳ ನಡುವೆಯೂ ತಮ್ಮ ಸಹಜತೆ, ಸ್ವಾಸ್ಥ್ಯಗಳನ್ನು ಕಾಪಾಡಿಕೊಂಡು ಯಶಸ್ವಿಯಾಗಿ ಮುನ್ನಡೆದಿದ್ದಾರೆ.

LEAVE A REPLY

Please enter your comment!
Please enter your name here