ಕನ್ನಡ ಚಲನಚಿತ್ರರಂಗದ ಕ್ರೇಜಿಸ್ಟಾರ್ ರವಿಚಂದ್ರನ್ ಎಂಬ ಕನಸುಗಾರ

0
75

ರವಿಚಂದ್ರನ್ ಹಲವು ರೀತಿಯ ಉತ್ಸಾಹಗಳನ್ನು ತುಂಬಿಕೊಂಡು ಬೆಳೆದ ಅದ್ಭುತ ಕನಸುಗಾರ.

ವಿ. ರವಿಚಂದ್ರನ್ ಹುಟ್ಟಿದ್ದು 1961ರ ಮೇ 30ರಂದು. ಹೆಸರಾಂತ ಚಲನಚಿತ್ರಗಳ ನಿರ್ಮಾಪಕ, ವಿತರಕರಾದ ಎನ್. ವೀರಸ್ವಾಮಿ ಅವರ ಪುತ್ರ ರವಿಚಂದ್ರನ್. ಪ್ರಾರಂಭದಲ್ಲಿ ಅಲ್ಲೊಂದು ಇಲ್ಲೊಂದು ಪಾತ್ರಗಳನ್ನು ಮಾಡುತ್ತಾ ತಾನು ಭಾಗವಹಿಸಿದ್ದ ಒಂದೊಂದು ಚಿತ್ರದಲ್ಲೂ ಇನಿತಿನಿತು ಕಲಿಯುತ್ತ ಬಂದ ಈ ಹುಡುಗ ‘ಗ್ರೀಸ್ 2’ ಎಂಬಂತಹ ಚಿತ್ರವನ್ನು ನೆನಪಿಸುವ ‘ಪ್ರೇಮಲೋಕ’ ಎಂಬ ಚಿತ್ರವನ್ನು ಮಾಡಿ ಮನೆಮಾತಾಗಿ ಬಿಟ್ಟರು. ಆತನ ಯಶಸ್ಸಿನ ಹಾದಿ ‘ಅಂಜದ ಗಂಡು’, ‘ರಣಧೀರ’ ಮುಂತಾದ ಯಶಸ್ವೀ ಚಿತ್ರಗಳನ್ನು ತಂದಿತು.

ರವಿಚಂದ್ರನ್ ಚಿತ್ರಗಳನ್ನು ನೋಡಿದಾಗಲೆಲ್ಲಾ ಏನೋ ಒಂದು ಅಪೂರ್ಣತೆಯಿದೆ ಎಂದು ಅನಿಸುವುದರ ಜೊತೆಗೆ, ಇಲ್ಲೂ ಏನೋ ಹೊಸತು ಕಾಣುತ್ತಿದೆ, ಒಂದಷ್ಟು ವೈಭವೀಕರಣ ಇದೆ, ಅರ್ಥ ತಾತ್ಪರ್ಯಗಳ ಗೋಜಿಗೆ ಹೋಗದಿದ್ದರೆ ಒಂದಷ್ಟು ಗುನುಗೋಣ ಎನಿಸುವ ಹಾಡುಗಳಿವೆ, ನಮ್ಮ ಸೆನ್ಸಾರ್ ಮಂಡಳಿಯವರು ಕಾರ್ಯ ನಿರ್ವಹಿಸುತ್ತಿದ್ದಾರೆಯೇ ಎಂದು ಕೆಲವೊಮ್ಮೆ ಸಂದೇಹ ಉಕ್ಕಿಸುವ ಸನ್ನಿವೇಶಗಳಿವೆ ಎಂಬುದೆಲ್ಲಾ ನೆನಪಾಗುತ್ತೆ. ಹಾಗಾಗಿ ಅವರಿಗೆ ಸಂದಿರುವ ಬಿರುದು ‘ಕ್ರೇಜಿ’ ಎಂಬುದಕ್ಕೆ ಅವರು ಅನುರೂಪ ಎನ್ನಲಡ್ಡಿಯಿಲ್ಲ. ಇವರು ಪೆದ್ದು ಪೆದ್ದಾಗಿ ನಟಿಸಿದ ‘ರಾಮಾಚಾರಿ’, ಒಂದಷ್ಟು ತಾಳ್ಮೆ ಗಾಂಭೀರ್ಯತೆಯಿಂದ ನಟಿಸಿದ್ದ ‘ಕನಸುಗಾರ’, ‘ಯಾರೇ ನೀನು ಚೆಲುವೆ’, ‘ದೃಶ್ಯ’ ಅಂತಹ ಚಿತ್ರಗಳು, ‘ಪ್ರೇಮ ಲೋಕ’ದಲ್ಲಿ ಆತ ಕೆಲವೊಂದು ಪ್ರಮುಖ ನಟ ನಟಿಯರನ್ನು ಬೆರೆಸಿ ಸೃಷ್ಟಿಸಿದ ಕೆಲವು ಹಾಡುಗಳು ಇತ್ಯಾದಿಗಳು ಆತನನ್ನು ಮೆಚ್ಚುವಂತೆ ಮಾಡುತ್ತೆ.

ರವಿಚಂದ್ರನ್ ಎಷ್ಟು ಸಿನಿಮಾದಲ್ಲಿ ಗೆದ್ದಿದ್ದಾರೋ ಅದಕ್ಕೆ ಮಿಗಿಲಾಗಿ ಅವರ ಚಿತ್ರಗಳು ಸೋತಿವೆ ಎಂಬುದು ಕೂಡಾ ನಿಜ. ಆತ ನಿರ್ಮಿಸಿದ ಪರಭಾಷಾ ಸರಕುಗಳು ಜಯಗಳಿಸುವ ಹಾಗೆ ಆತನ ‘ಏಕಾಂಗಿ’ಯಂತಹ ಹೊಸ ಪ್ರಯತ್ನಗಳು ಮನಸೆಳೆಯಲಿಲ್ಲ. ಇಷ್ಟಾದರೂ ಕಳೆದ ಸುಮಾರು 40 ವರ್ಷಗಳ ಅವಧಿಯಲ್ಲಿ ಚಿತ್ರರಂಗದಲ್ಲಿದ್ದು ಇಂದೂ ಕೂಡಾ ಆತ ಸೋಲು ಗೆಲುವುಗಳ ಪರಿಧಿಯಾಚೆಗೆ ಚಿತ್ರರಂಗದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಸಾಮಾನ್ಯವಾದ ಮಾತಲ್ಲ.

ಹಂಸಲೇಖ ಅಂತಹ ಮಹಾನ್ ಪ್ರತಿಭೆಯನ್ನು ಕನ್ನಡ ಚಿತ್ರರಂಗಕ್ಕೆ ದೊರಕಿಸಿಕೊಟ್ಟದ್ದು, ಜ್ಯೂಲಿ ಚಾವ್ಲಾಳನ್ನು ಮೊದಲು ಪ್ರಸಿದ್ಧಿ ಪಡಿಸಿದ್ದು, ಖುಷ್ಬೂಗೆ ಅಮೋಘ ಪ್ರಸಿದ್ಧಿ ತಂದಿದ್ದು, ಶಿಲ್ಪಾ ಶೆಟ್ಟಿ ಕೂಡಾ ಸುಂದರವಾಗಿ ಚಿತ್ರಗಳಲ್ಲಿ ಕಾಣಬಲ್ಲಳು ಎಂದು ತೋರಿದ್ದು ಇವೆಲ್ಲಾ ರವಿಯ ಗರಿಮೆಗಳೇ. ಇಷ್ಟಾಗಿಯೂ ಈತ ತನ್ನ ಚಿತ್ರಗಳಲ್ಲಿ ಯಾವುದೋ ವೈಭವೀಕರಣ ತುರುಕಿ ಯಶಸ್ಸನ್ನು ಹುಡುಕುತ್ತಿರುವುದರ ಜೊತೆ ಜೊತೆಗೆ ಸೃಜನಶೀಲತೆಯಲ್ಲಿ ಮತ್ತಷ್ಟು ಪ್ರಯತ್ನಿಸಬಹುದಿತ್ತು ಎಂದು ಅನಿಸದಿರದು.

ಕಾಲಕ್ರಮೇಣದಲ್ಲಿ ರವಿಚಂದ್ರನ್ ಹಲವಾರು ದೂರದರ್ಶನದ ಲೈವ್ ಷೋ ತೀರ್ಪುಗಾರರಾಗಿ ಸಹಾ ಕಂಡುಬಂದಿದ್ದಾರೆ. ಅವರ ಪುತ್ರ ಮನೋರಂಜನ್ ಚಿತ್ರರಂಗಕ್ಕೆ ಬಂದಿದ್ದಾರೆ. ತಮ್ಮ ಮಕ್ಕಳನ್ನು ಮುಂದೆ ತಂದು ತಾವು ಮುಂಬರುವ ದಿನಗಳಲ್ಲಿ ಹಿಂದೆ ಸರಿಯುವ ಮಾತನ್ನು ಕೂಡಾ ಅವರು ಆಗಾಗ ಹೇಳಿದ್ದಿದೆ. ‘ಅಪೂರ್ವ’ ಚಿತ್ರದಲ್ಲಿ ತಮ್ಮನ್ನು ವೃದ್ಧ ಸಾಮೀಪ್ಯದ ಪಾತ್ರದಲ್ಲಿರಿಸಿಕೊಂಡು ಯುವತಿಯೊಂದಿಗೆ ಪ್ರೇಮಿಸುವ ಚಿತ್ರವನ್ನು ಮೂಡಿಸಿದ್ದಾರೆ. ನಿಜ ಜೀವನದಲ್ಲಿ ಇತ್ತೀಚಿನ ವರ್ಷ ತಮ್ಮ ಮಗಳ ಮದುವೆಯನ್ನು ಅದ್ಧೂರಿಯಾಗಿ ನೆರವೇರಿಸಿದ್ದಾರೆ. ಸಂಗೀತವೇ ಎಲ್ಲಾ ಆಗುವ ಒಂದು ಮಹತ್ವದ ಚಿತ್ರವನ್ನು ಕನಸು ಕಂಡಿದ್ದನ್ನು ಕೂಡಾ ಹೇಳಿದ್ದಾರೆ.

ಈ ಉತ್ಸಾಹೀ ರವಿಚಂದ್ರನ್ ಅವರಿಗೆ ಹುಟ್ಟು ಹಬ್ಬದ ಶುಭ ಕೋರಿ ಅವರಿಂದ ಉತ್ತಮ ಚಿತ್ರಗಳು ಮೂಡಲಿ ಎಂದು ಹಾರೈಸೋಣ.

LEAVE A REPLY

Please enter your comment!
Please enter your name here