ಒಂದು ದಿನದ ಮಟ್ಟಿಗೆ ವಿವಿಧ ಇಲಾಖೆಗಳ ಅಧಿಕಾರ ವಹಿಸಿದ ಹೆಣ್ಮಕ್ಕಳು, ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ವಿದ್ಯಾರ್ಥಿನಿ ಪುಷ್ಪಲತಾಗೆ ಜಿಪಂ ಸಿಇಒ, ಕವಲೇಶ್ವರಿಗೆ ಜಿಪಂ ಉಪಾಧ್ಯಕ್ಷೆ ಕುರ್ಚಿಯಲ್ಲಿ ಕುಳಿತುಕೊಳ್ಳುವ ಭಾಗ್ಯ!

0
258

ಬಳ್ಳಾರಿ,ಜ.30 : ರಾಷ್ಟೀಯ ಹೆಣ್ಣುಮಕ್ಕಳ ದಿನಾಚರಣೆ ಅಂಗವಾಗಿ ಸಿರಗುಪ್ಪದ ಆದರ್ಶ ಮಹಾವಿದ್ಯಾಲಯದ ವಿದ್ಯಾರ್ಥಿನಿ ಪುಷ್ಪಲತಾ ಎಂ ಅವರಿಗೆ ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ಒಂದು ದಿನ ತಮ್ಮ ಜಿಪಂ ಸಿಇಒ ಕುರ್ಚಿ ಬಿಟ್ಟುಕೊಟ್ಟು,ವಿದ್ಯಾರ್ಥಿನಿಯನ್ನು ತಮ್ಮ ಆಸನದಲ್ಲಿ ಕೂಡಿಸಿ ಗೌರವಿಸಿರುವುದು ವಿಶೇಷವಾಗಿದೆ.

ವಿದ್ಯಾರ್ಥಿನಿ ಪುಷ್ಪಲತಾ ಅವರು ಜಿಪಂ ಸಿಇಒ ಕುರ್ಚಿ ಮೇಲೆ ಕುಳಿತ ಸಂದರ್ಭದಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ವಿದ್ಯಾರ್ಥಿನಿಯರು ಪಕ್ಕದಲ್ಲಿ ನಿಂತು ಅಭಿನಂದಿಸಿದ್ದು ವಿಶೇಷವಾಗಿತ್ತು.
ಶನಿವಾರ ನಗರದ ಜಿಪಂ ಆವರಣದಲ್ಲಿ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ಸಿರಗುಪ್ಪದ ಆದರ್ಶ ಮಹಾವಿದ್ಯಾಲಯದ ವಿದ್ಯಾರ್ಥಿನಿ ಪುಷ್ಪಲತಾ ಎಂ ಅವರಿಗೆ ಒಂದು ದಿನದ ಮಟ್ಟಿಗೆ ಅತಿಥಿ ಮುಖ್ಯಕಾರ್ಯನಿರ್ವಾಹಕ ಹುದ್ದೆಯ ಪ್ರಭಾರ ನೀಡುವುದರ ಮೂಲಕ ವಿದ್ಯಾರ್ಥಿನಿಯರ ಐಎಎಸ್ ಕನಸಿಗೆ ಪ್ರೇರಣೆ ನೀಡಿದ್ದಾರೆ.
ಅತಿಥಿ ಜಿಪಂ ಸಿಇಒ ಸ್ಥಾನ ಅಲಂಕರಿಸಿದ ವಿದ್ಯಾರ್ಥಿನಿ ಪುಷ್ಪಲತಾ ಅವರು ಈ ಸ್ಥಾನ ಅಲಂಕರಿಸಿದ್ದು ತುಂಬಾ ಸಂತೋಷವಾಗಿದೆ. ಮುಖ್ಯವಾಗಿ ನನ್ನ ಮುಂದಿನ ಗುರಿ ತಲುಪುವುದಕ್ಕೆ ಪ್ರೇರಣೆ ನೀಡಿದೆ ಎಂದರು.

ನಾವು ಪರೀಕ್ಷೆಯಲ್ಲಿ ಪಾಸಾಗಿ ಈ ಹುದ್ದೆಗೆ ಬಂದಿದ್ದರೂ ಇಷ್ಟು ಖುಷಿಯಾಗುತ್ತಿರಲಿಲ್ಲ ಅಷ್ಟು ಸಂತೋಷ ಆಗುತ್ತಿದೆ ಎಂದು ಹೇಳಿದ ಸಿಇಒ ಪುಷ್ಪಲತಾ ಅವರು ಹಳ್ಳಿ ಪ್ರದೇಶದಲ್ಲಿ ಬಾಲ ಕಾರ್ಮಿಕ ಪದ್ದತಿ ಜಾಸ್ತಿಯಾಗುತ್ತಿದೆ. ಸರ್ಕಾರ ಎಷ್ಟೇ ಪ್ರಯತ್ನ ಪಟ್ಟರೂ ಇದು ಕಡಿಮೆ ಆಗುತ್ತಿಲ್ಲ. ಬಾಲ್ಯ ವಿವಾಹವೂ ಕೂಡ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ: ಈ ಕುರಿತು ಸಾರ್ವಜನಿಕರಲ್ಲಿ ,ಮಹಿಳೆಯರಲ್ಲಿ ,
ಮಕ್ಕಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕಾರ್ಯ ನಿರ್ವಸಲಾಗುವುದು. ಈ ಹಿಂದೆ ಹೆಣ್ಣು ಮಕ್ಕಳಿಗೆ ಶಿಕ್ಷಣ ಕಲಿಯುವುದು ತುಂಬಾ ಕಷ್ಟ ಆಗಿತ್ತು, ಇಂದಿನ ಯುಗದಲ್ಲಿ ಎಲ್ಲರಿಗೂ ಸಮಾನವಾದ ಶಿಕ್ಷಣ ದೊರೆಯುತ್ತಿದೆ. ಆದರೆ ಕೆಲವೊಂದು ಶಾಲೆಗಳಲ್ಲಿ ಕಟ್ಟಡಗಳು ಇಂದೋ ನಾಳೆಯೋ ಬೀಳುವ ಪರಿಸ್ಥಿತಿಯಲ್ಲಿವೆ. ಇಂದಿಗೂ ಅನೇಕ ಶಾಲೆಗಳಲ್ಲಿ ಸರಿಯಾದ ಶೌಚಾಲಯದ ವ್ಯವಸ್ಥೆ ಇಲ್ಲ. ಎಲ್ಲಾ ಶಾಲೆಗಳಿಗೆ ಶೌಚಾಲಯದ ಸಮಸ್ಯೆಯಾಗದಂತೆ ನೋಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ ಎಂದರು.

ಜಿಪಂ ಉಪಾಧ್ಯಕ್ಷೆಯಾಗಿ ಕವಲೇಶ್ವರಿ!:

ಬಳ್ಳಾರಿ ಜಿಪಂ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಪಿ.ದೀನಾ ಮಂಜುನಾಥ ಅವರ ಕೋಣೆಯಲ್ಲಿ ವಿದ್ಯಾರ್ಥಿನಿ ಕವಲೇಶ್ವರಿ ಕೂಡ್ಲಿಗಿ ಆಸೀನರಾಗಿದ್ದರು.ಒಂದು ದಿನದ ಮಟ್ಟಿಗೆ ಕವಲೇಶ್ವರಿ ಅವರಿಗೆ ಉಪಾಧ್ಯಕ್ಷೆ ದೀನಾ ಮಂಜುನಾಥ ಅವರು ಅಧಿಕಾರ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಪಂ ಉಪಾಧ್ಯಕ್ಷೆ ಕವಲೇಶ್ವರಿ ಅವರು ಗ್ರಾಮೀಣ ಪ್ರದೇಶದಲ್ಲಿ ಸರಿಯಾದ ಬಸ್‍ಗಳ ವ್ಯವಸ್ಥೆಯಿಲ್ಲ. ಆಟೋಗಳ ಸಂಖ್ಯೆಯೂ ತೀರಾ ವಿರಳ, ಯಾವುದಾದರು ಕೆಲಸಗಳ ನಿಮಿತ್ತ ನಗರಗಳ ಕಡೆ ಬರಲು ತುಂಬಾ ದೂರ ಕಾಲ್ನಡಿಗೆ ಮೂಲಕ ಬರಬೇಕಾಗಿದೆ ಇದನ್ನು ತಪ್ಪಿಸಲು ಸಮರ್ಪಕ ಬಸ್‍ಗಳ ವ್ಯವಸ್ಥೆ ಮಾಡಲಾಗುವುದು ಎಂದರು.

ಎಎಸ್ಪಿ ಲಾವಣ್ಯ ಬದಲಿಗೆ ದಿವ್ಯಾಶ್ರೀ!:

ಬಳ್ಳಾರಿ ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಿ.ಎನ್.ಲಾವಣ್ಯ ಅವರ ಸ್ಥಾನದಲ್ಲಿ ಬಳ್ಳಾರಿ ಆದರ್ಶ ವಿದ್ಯಾಲಯದ ವಿದ್ಯಾಶ್ರೀ ಕಾರ್ಯನಿರ್ವಹಿಸಿದರು.
ಎಎಸ್ಪಿ ಲಾವಣ್ಯ ಅವರು ಅತಿಥಿ ಎಎಸ್ಪಿ ವಿದ್ಯಾರ್ಥಿನಿ ದಿವ್ಯಾಶ್ರೀ ಅವರಿಗೆ ಪೊಲೀಸ್ ಇಲಾಖೆಯ ಕಾರ್ಯವೈಖರಿ ಬಗ್ಗೆ ತಿಳಿಸಿಕೊಟ್ಟಿದ್ದು ಕಂಡುಬಂದಿತು.
ಈ ಸಂದರ್ಭದಲ್ಲಿ ಮಾತನಾಡಿದ ಅತಿಥಿ ಎಎಸ್ಪಿ ದಿವ್ಯಾಶ್ರೀ ಗ್ರಾಮೀಣ ಪ್ರದೇಶದಲ್ಲಿ ತುಂಬಾ ಜನ ಹೆಣ್ಣು ಮಕ್ಕಳಿಗೆ ಕಾನೂನಿನ ತಿಳವಳಿಕೆ ಇಲ್ಲ; ಕಾನೂನಿನ, ಎಫ್.ಐ.ಆರ್ ,ಪೆÇಲೀಸ್ ವ್ಯವಸ್ಥೆಯ ಬಗ್ಗೆ ಮಹಿಳೆಯರಲ್ಲಿ ಅರಿವು ಮೂಡಿಸಲಾಗುವುದು ಎಂದರು.

ಜಿಪಂನಲ್ಲಿರುವ ಉಪಕಾರ್ಯದರ್ಶಿಗಳು, ಕೃಷಿ ಇಲಾಖೆ ಜಂಟಿ ನಿರ್ದೇಶಕರು,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆ, ಪಶುಸಂಗೋಪನೆ,ತೋಟಗಾರಿಕೆ,ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಅಂಗವಾಗಿ ಹೆಣ್ಮಕ್ಕಳಿಗೆ ಒಂದುದಿನದ ಮಟ್ಟಿಗೆ ಅಧಿಕಾರ ಹಸ್ತಾಂತರಿಸಿದರು.
ಜಿಪಂ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ ವಿದ್ಯಾರ್ಥಿನಿ ಪುಷ್ಪಲತಾ ಅವರು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಗಮನಸೆಳೆಯಿತು. ಅಧಿಕಾರ ವಹಿಸಿಕೊಂಡ ನಂತರ ಡಿಎಚ್‍ಒ ಜಿ.ಸ್ವಾತಿ ಅವರು ಜಿಲ್ಲೆಯಲ್ಲಿ ಆರೋಗ್ಯ ಸೇವೆಗಳ ಸ್ಥಿತಿಗತಿಗಳು,ಕೊರೊನಾ ನಿಯಂತ್ರಣ ಇನ್ನೀತರ ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ರಮೀಜಾ ಅವರು ನಗರದ ಜಿನ್ಸ್ ಉದ್ಯಮ ಘಟಕಕ್ಕೆ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕರಾಗಿ ಅಧಿಕಾರಿ ಮಾಣಿಕ್ಯ ಅವರು ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ಕಚೇರಿಯಲ್ಲಿ ವಿತರಿಸಿ ಗಮನಸೆಳೆದರು.
ಜಿಪಂ ಸಿಇಒ, ಎಎಸ್ಪಿ, ಜಿಪಂ ಉಪಾಧ್ಯಕ್ಷೆ ಸೇರಿದಂತೆ ಇನ್ನೀತರ ಜಿಲ್ಲಾಮಟ್ಟದ ಅಧಿಕಾರಿಗಳ ಹುದ್ದೆಗಳ ಸ್ಥಾನಗಳನ್ನು ಜಿಲ್ಲೆಯ ಪ್ರತಿಭಾವಂತ ಹೆಣ್ಣುಮಕ್ಕಳಿಗೆ ಬಿಟ್ಟು ಕೊಡುವ ಮೂಲಕ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತಿ ಆವರಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಅಲ್ಲಿ ನೆರೆದಿದ್ದ ಪ್ರತಿಯೊಬ್ಬರಲ್ಲಿ ಅದೇನೋ ಉತ್ಸಾಹ,ಉಲ್ಲಾಸ. ಅಧಿಕಾರ ಸ್ವೀಕರಿಸಿದ ಮಕ್ಕಳ ಮುಖದಲ್ಲಿ ಅದೇನೋ ಖುಷಿ, ಅಧಿಕಾರ ಹಸ್ತಾಂತರಿಸಿದ ಅಧಿಕಾರಿಗಳಿಗೆ ಒಂದು ಹೊಸ ಅನುಭವ.
ಒಬ್ಬೊಬ್ಬರದ್ದು ಒಂದೊಂದು ಕಥೆ, ಪ್ರತಿಯೊಬ್ಬರು ಪ್ರತಿಭಾವಂತರೆ, ಅವರು ಮಾತನಾಡುವ ಧ್ವನಿಯಲ್ಲಿ ಯಾವುದೇ ಅಳುಕಿಲ್ಲ,ಒಂದು ಧೈರ್ಯ, ವಿಶ್ವಾಸ ಅವರ ಮುಖದಲ್ಲಿ ನಿಚ್ಚಳವಾಗಿ ಕಾಣಿಸುತ್ತಿತ್ತು. ಅದರಲ್ಲೂ ಅಧಿಕಾರ ವಹಿಸಿಕೊಂಡವರಲ್ಲಿ ಅರ್ಧದಷ್ಟು ಜನ ಹಳ್ಳಿಯ ಪ್ರತಿಭೆಗಳೇ ಎನ್ನುವುದು ವಿಶೇಷ.
ನಾನು ಕೂಡ ಯಾವತ್ತಾದರೂ ಒಂದು ದಿನ ಉಪಾಧ್ಯಕ್ಷೆ ಆಗಬೇಕು ಅನ್ಕೊಂಡಿದ್ದೆ ಅದು ಈ ಮೂಲಕ ಸಾಧ್ಯವಾಯಿತು ಎಂದು ಹೇಳುವ ಮೂಲಕ ಅಲ್ಲಿದ್ದ ಎಲ್ಲರನ್ನು ತನ್ನತ್ತ ಸೆಳೆಯುವಂತೆ ಮಾಡಿದ್ದು ಕೂಡ್ಲಿಗಿಯ ಕವಲೇಶ್ವರಿ ಎಂಬ ಹೆಣ್ಣು ಮಗಳು, ನಮ್ಮೂರು ಸೇರೆದಂತೆ ಸುತ್ತ ಮುತ್ತಲಿನ ಊರುಗಳಿಗೆ ಸರಿಯಾದ ಬಸ್ ಸಂಚಾರದ ವ್ಯವಸ್ಥೆಯಿಲ್ಲ, ಆಟೋಗಳು ಕೂಡ ತೀರಾ ವಿರಳ ಈ ಸಮಸ್ಯೆಯನ್ನು ದೂರ ಮಾಡಿ ಆಯಾ ಹಳ್ಳಿಗಳಿಗೆ ಬಸ್ ವ್ಯವಸ್ಥೆ ಮಾಡಲಾಗುವುದು ಎಂದರು.
ಪ್ರತಿಯೊಬ್ಬರು ತಮ್ಮ ತಮ್ಮ ಹುದ್ದೆಗಳನ್ನು ಅಲಂಕರಿಸಿ ಆ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುತ್ತೇವೆ ಎನ್ನುವ ಭರವಸೆಯನ್ನು ಅಧಿಕಾರಿಗಳಿಗೆ ನೀಡಿದರು.
ಜಿಪಂ ಸಿಇಒ ಕೆ.ಆರ್.ನಂದಿನಿ ಅವರಂತು ಫುಲ್ ಖಷಿಯಾಗಿ ಬೆಳಗ್ಗೆಯಿಂದ ಸಂಜೆಯವರೆಗೆ ನಡೆದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ,ಡಿಎಚ್‍ಒ ಜನಾರ್ಧನ್,ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ್, ಜಿಪಂ ಉಪಕಾರ್ಯದರ್ಶಿ ಜಾನಕಿರಾಂ ಸೇರಿದಂತೆ ಇನ್ನೀತರ ಉಪ ಕಾರ್ಯದರ್ಶಿಗಳು, ಜಿಪಂ ಮುಖ್ಯ ಯೋಜನಾ ನಿರ್ದೇಶಕ ಚಂದ್ರಶೇಖರ ಗುಡಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here