ಕ್ರಿಕೆಟ್ಟಿನಲ್ಲಿ ವಿವಿಧ ಹಿನ್ನೆಲೆಗಳಲ್ಲಿ ಅಪಾರ ಯಶಸ್ಸು ಕಂಡ ಅಪರೂಪದ ವ್ಯಕ್ತಿ ರವಿಶಾಸ್ತ್ರಿ.

0
102

ರವಿಶಾಸ್ತ್ರಿ 1962ರ ಮೇ 27ರಂದು ಜನಿಸಿದವರು. ರವಿ ಶಾಸ್ತ್ರಿ ಅವರ ಕುಟುಂಬದವರು ಮೂಲತಃ ಮಂಗಳೂರಿನವರಾಗಿದ್ದು ಮುಂದಿನ ದಿನಗಳಲ್ಲಿ ಮುಂಬೈನಲ್ಲಿ ನೆಲೆ ನಿಂತವರು.

ಒಬ್ಬ ಬೌಲರ್ ಎಂದು ತಂಡಕ್ಕೆ ಬಂದ ರವಿಶಾಸ್ತ್ರಿ ಮುಂದಿನ ದಿನಗಳಲ್ಲಿ ಬ್ಯಾಟಿಂಗಿನಲ್ಲೂ ಉಪಯುಕ್ತರೆನಿಸಿ ಆಲ್‍ರೌಂಡರ್ ಎನಿಸಿದರು. ಎಡಗೈನಲ್ಲಿ ಸ್ಪಿನ್ ಬೌಲಿಂಗ್ ಮಾಡುತ್ತಿದ್ದ ಶಾಸ್ತ್ರಿ ಬಲಗೈನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಬೌಲರ್ ಆಗಿ ಬಂದು ಆಲ್‍ರೌಂಡರ್ ಅನಿಸಿದವರು ಕೊನೆ ಕೊನೆಗೆ ಬೌಲಿಂಗಿಗಿಂತ ಬ್ಯಾಟಿಂಗಿನಲ್ಲೇ ಯಶಸ್ಸು ಕಂಡರು. ಗಾವಸ್ಕರ್ ಅವರಿಗೆ ಕುಟ್ಟುವುದರಲ್ಲಿ ಸರಿಸಮಾನನಾಗಿ ಡ್ರಾ ಪಂದ್ಯಗಳಿಗೆ ಅಗತ್ಯವೋ ಎಂಬಂತೆ ಕುಟು ಕುಟು ಕುಟ್ಟುತ್ತಾ ಚಪಾತಿ ಶಾಟುಗಳಲ್ಲಿ ಪ್ರಖ್ಯಾತರಿದ್ದ ರವಿ ಶಾಸ್ತ್ರಿ, ತಂಡದ ಅಗತ್ಯಕ್ಕೆ ತಕ್ಕಂತೆ ಬ್ಯಾಟಿಂಗಿನಲ್ಲಿ ಆಗಿನ ಕಾಲದಲ್ಲಿ ಬೇಕಿದ್ದ ಹೆಚ್ಚೂ ಕಡಿಮೆ ವೇಗದ ರನ್ ಗತಿಗೂ ಒಗ್ಗಿಕೊಳ್ಳುತ್ತಿದ್ದರು. ಹೆಚ್ಚು ಉದ್ದ ಇದ್ದು ಬ್ಯಾಟಿಂಗಿನಲ್ಲಿ ಕೆಲವೇ ರೀತಿಯ ಸೀಮಿತವಾದ ಹೊಡೆತಗಳ ಸಾಮರ್ಥ್ಯ ಮಾತ್ರ ಹೊಂದಿದ್ದರೂ, ಬಹಳಷ್ಟು ವೇಳೆ ಅವರು ಉಪಯುಕ್ತ ಬ್ಯಾಟಿಂಗ್ ನೀಡಿದರು.

1985ರ ವರ್ಷದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ವರ್ಲ್ಡ್ ಕ್ರಿಕೆಟ್ ಟೂರ್ನಮೆಂಟಿನಲ್ಲಿ ಅಂತಹ ಆಕ್ರಾಮಕ ಎನ್ನುವ ಆಟ ಆಡದಿದ್ದರೂ ಬಹಳಷ್ಟು ಪಂದ್ಯಗಳಲ್ಲಿ ಇವರ ಬ್ಯಾಟಿಂಗ್ ಕೊಡುಗೆ ಮತ್ತು ಅಲ್ಲಲ್ಲಿ ಬೌಲಿಂಗಿನಲ್ಲಿ ನೀಡಿದ ಕೊಡುಗೆ ಮಹತ್ವದ್ದೆನಿಸಿ ಇವರು ‘ಚಾಂಪಿಯನ್ ಆಫ್ ಚಾಂಪಿಯನ್’ ಎನಿಸಿ ದೊಡ್ಡ ಮೊತ್ತದ ಬಹುಮಾನ, ನಾವು ಕಂಡ ಪ್ರಪ್ರಥಮ ಆಡಿ ಕಾರು ಮುಂತಾದ ಬಹುಮಾನ ಪಡೆದು ಪ್ರಖ್ಯಾತಿ ಪಡೆದರು.

ತನ್ನ ಹದಿನೆಂಟನೆಯ ವಯಸ್ಸಿನಲ್ಲಿ ಕ್ರಿಕೆಟ್ಟಿಗೆ ಬಂದ ರವಿಶಾಸ್ತ್ರಿ ಒಂದಷ್ಟು ಕ್ರೀಡಾಂಗಣದ ಹೊರಗಿನ ಗಾಸಿಫ್ ಸುದ್ಧಿಗಳಿಗೆ ಮತ್ತು ಪದೇ ಪದೇ ಕಾಲು ನೋವಿನಂತಹ ತೊಂದರೆಗಳಿಗೆ ಸಿಲುಕಿ ತಮ್ಮ ಕ್ರಿಕೆಟ್ ಜೀವನಕ್ಕೆ ತಮ್ಮ 30ರ ಆಸುಪಾಸಿನಲ್ಲೇ ವಿದಾಯ ಹೇಳಿದರು. ಹಲವು ಅವಧಿಗಳಿಗೆ ಅವರು ಇಂಗ್ಲೆಂಡಿನ ಗ್ಲಾಮರ್ಗಾನ್ ತಂಡಕ್ಕೆ ಸಹಾ ಆಡಿದ್ದರು. ಮೊದಲ ದರ್ಜೆ ಪಂದ್ಯವೊಂದರಲ್ಲಿ ಆರು ಚೆಂಡುಗಳಿಗೆ ಆರೂ ಸಿಕ್ಸರ್ ಬಾರಿಸಿ ಗ್ಯಾರಿ ಸೋಬರ್ಸ್ ಅವರ ದಾಖಲೆಯನ್ನು ಸರಿಗಟ್ಟಿದ್ದರು.

ಟೆಸ್ಟ್ ಕ್ರಿಕೆಟ್ಟಿನಲ್ಲಿ 80 ಪಂದ್ಯಗಳಲ್ಲಿ 3830ರನ್ನುಗಳ ಜೊತೆಗೆ 151 ವಿಕೆಟ್ಟುಗಳನ್ನೂ ಸಂಪಾದಿಸಿದ ರವಿ ಶಾಸ್ತ್ರಿ ಒಂದು ದಿನದ ಪಂದ್ಯಗಳಲ್ಲಿ 150 ಪಂದ್ಯಗಳಲ್ಲಿ 3108ರನ್ನುಗಳನ್ನೂ 129 ವಿಕೆಟ್ಟುಗಳನ್ನೂ ಸಂಪಾದಿಸಿದರು.

ಇವೆಲ್ಲಕ್ಕೂ ಮಿಗಿಲಾದ ರವಿಶಾಸ್ತ್ರಿ ಸಾಧನೆ ಎಂದರೆ ಕ್ರಿಕೆಟ್ ವೀಕ್ಷಕ ವಿವರಣೆಗಾರ, ತಜ್ಞ ವಿಶ್ಲೇಷಕರಾಗಿ ಕಂಡ ಅತ್ಯಭೂತ ಪೂರ್ವ ಯಶಸ್ಸು. ಬಹುಶಃ ರವಿ ಶಾಸ್ತ್ರಿ ಈ ಕ್ಷೇತ್ರಕ್ಕೆ ಬಂದ ಸಮಯದಲ್ಲಿ ದೂರದರ್ಶನದಲ್ಲಿ ಕ್ರಿಕೆಟ್ ಪಂದ್ಯಗಳ ಪ್ರಸಾರ ವಿಶ್ವದೆಲ್ಲೆಡೆಯಲ್ಲಿ ಉತ್ತಮ ತಂತ್ರಜ್ಞಾನ ಪಡೆದುದರ ಜೊತೆಗೆ, ಭಾರತದ ಕ್ರಿಕೆಟ್ಟಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಲು ಪ್ರಾರಂಭಿಸಿತ್ತು. ಜೊತೆಗೆ ಪಂದ್ಯಗಳ ಸಂಖ್ಯೆ ತೀವ್ರ ಮಟ್ಟಕ್ಕೆ ಏರಿತು. ಇವೆಲ್ಲವುಗಳನ್ನು ವಿಶ್ವದೆಲ್ಲೆಡೆಯಲ್ಲಿ ಅತ್ಯಂತ ಸಮರ್ಥವಾಗಿ, ಚಾಕಚಕ್ಯತೆಯಿಂದ ಮತ್ತು ಉತ್ತಮ ಮಾತುಗಾರಿಕೆಯಿಂದ ಸ್ವಯಂ ಅಭಿವೃದ್ಧಿಗೆ ಬಳಸಿಕೊಂಡವರಲ್ಲಿ ರವಿ ಶಾಸ್ತ್ರಿ ಪ್ರಮುಖನಾಗಿ ಕಾಣುತ್ತಾರೆ.

ಭಾರತದ ಕ್ರಿಕೆಟ್ ತಂಡ ಒಂದು ಕ್ಷಣ ಯಶಸ್ಸು ಕಂಡರೆ ಮತ್ತೊಮ್ಮೆ ಸೋಲುಗಳ ಪ್ರಪಾತಕ್ಕಿಳಿದಿರುತ್ತದೆ. ಇಂತಹ ಕ್ಷಣಗಳಲ್ಲಿ ಯಾವ ನಾಯಕ ಸರಿ ಯಾವ ಕೋಚ್ ಸರಿ ಇತ್ಯಾದಿಗಳ ಗೊಂದಲಗಳ ಮಧ್ಯೆ ರವಿಶಾಸ್ತ್ರಿ ಭಾರತೀಯ ಕ್ರಿಕೆಟ್ ತಂಡದ ನಿರ್ದೇಶಕರಾಗಿ ಹಲವಾರು ಅವಧಿಗಳಿಂದ ಪ್ರಸಕ್ತದಲ್ಲೂ ಮುಂದುವರೆದಿದ್ದಾರೆ.

ಒಂದಿಷ್ಟು ಪ್ರತಿಭೆ, ಸಾಕಷ್ಟು ಸೋಗು, ಬಹಳಷ್ಟು ಅದೃಷ್ಟ ಮತ್ತು ಉತ್ತಮ ಹೊಂದಾಣಿಕೆಯ ಮನೋಭಾವಗಳಿರುವ ವ್ಯಕ್ತಿ ಯಾವ ರೀತಿಯಲ್ಲಿ ಸಾಧನೆ ಮಾಡಬಹುದೆಂಬುದಕ್ಕೆ ರವಿಶಾಸ್ತ್ರಿ ಉತ್ತಮ ಉದಾಹರಣೆ. ಯಾರು ಗೆಲ್ಲಲಿ, ಸೋಲಲಿ ಅಲ್ಲಿ ಮಿಂಚುವ ಈ ಯಶಸ್ವೀ ವ್ಯಕ್ತಿ ವಯಸ್ಸಿನಲ್ಲಿ ಈಗ 59 ತುಂಬಿ ಮುನ್ನಡೆದಿದ್ದಾರೆ. ಅವರಿಗೆ ಒಳಿತಾಗಲಿ.

LEAVE A REPLY

Please enter your comment!
Please enter your name here