ಕ್ರಿಕೆಟ್ ಗೆ ಅಮೋಘ ಮಿಂಚಿನ ಕ್ಷಣಗಳ ಬದಲಾವಣೆ ತಂದ ಕೃಷ್ಣಮಾಚಾರಿ ಶ್ರೀಕಾಂತ್..

0
174

ಕ್ರಿಕೆಟ್ ಹುಚ್ಚಿನ ಭಾರತೀಯರಾದ ನಮಗೆ ಭಾರತೀಯ ಕ್ರಿಕೆಟ್ ಹೊಸ ಪರಂಪರೆಯಲ್ಲಿ ನೆನಪಾಗುವ ಹೆಸರುಗಳಲ್ಲಿ ಕೃಷ್ಣಮಾಚಾರಿ ಶ್ರೀಕಾಂತ್ ಪ್ರಮುಖರು. ಇಂದು ಅವರ ಹುಟ್ಟಿದ ಹಬ್ಬ. ಅವರು ಹುಟ್ಟಿದ್ದು ಡಿಸೆಂಬರ್ 21, 1959ರಲ್ಲಿ

ಸುನಿಲ್ ಗಾವಾಸ್ಕರ್ ಯುಗದ ನಿಧಾನಗತಿಯ ದೃಢ ಬ್ಯಾಟಿಂಗ್, ಗುಂಡಪ್ಪ ವಿಶ್ವನಾಥ್ ಅವರ ಆಕರ್ಷಕ ಬ್ಯಾಟಿಂಗ್ ದಿನಗಳಲ್ಲಿ ಅಪೂರ್ವ ರೀತಿಯಲ್ಲಿ ರೂಪುಗೊಂಡು ಭಾರತೀಯ ಕ್ರಿಕೆಟ್ಟಿಗೆ ಒಂದು ರೀತಿಯ ವಿಶೇಷ ಮೆರುಗು ತಂದವರು ಶ್ರೀಕಾಂತ್. ಒಂದು ಕಡೆ ಗಾವಾಸ್ಕರ್ ಅವರು, ಬ್ಯಾಟ್ ಮಾಡುವಾಗ ಅವರ ಸುತ್ತಲು ಇರುವ ಒಂದೊಂದು ಕಲ್ಲನ್ನೂ ನೆಲಕ್ಕೆ ಅದುಮಿ ನಿಧಾನವಾಗಿ ಹೇಗೆ ಒಂದೊಂದೂ ಚೆಂಡನ್ನು ಆಡಲಿ ಎಂದು ನಿರ್ಧರಿಸುವಷ್ಟರಲ್ಲಿ ಶ್ರೀಕಾಂತ್ ಒಂದಷ್ಟು ಬೌಂಡರಿ, ಸಿಕ್ಸರ್ ಬಾರಿಸಿಯೋ ಇಲ್ಲ ಔಟ್ ಆಗಿಯೋ ಪಾದರಸದಂತೆ ಚಲಿಸುತ್ತಿದ್ದವರು.

ಭಾರತ 1983ರಲ್ಲಿ ವಿಶ್ವಕಪ್ ಗೆದ್ದಾಗ ಮತ್ತು ನಂತರದಲ್ಲಿ ಬೆನ್ಸನ್ ಅಂಡ್ ಹೆಡ್ಜಸ್ ಅನ್ನು ಆಸ್ಟ್ರೇಲಿಯಾದಲ್ಲಿ ಗೆದ್ದಾಗಿನ ದಿನಗಳ ಆಸುಪಾಸಿನಲ್ಲಿ ಭಾರತದ ಆಸೆ ಆಕಾಂಕ್ಷೆಗಳು ಮತ್ತು ಆಟದ ಮನಮೊಹತೆಗಳೆಲ್ಲಾ ಶ್ರೀಕಾಂತ್ ಸುತ್ತ ಸುತ್ತುತ್ತಿದ್ದವು. ಆತ ಬಹಳಷ್ಟು ವೇಳೆ ತನ್ನ ವಿಕೆಟ್ ಅನ್ನು ಬೇಜವಾಬ್ದಾರಿಯಿಂದ ಕಳೆದು ಕೊಳ್ಳುತ್ತಿದ್ದಾನೆ ಎಂದು ನೋವಾಗುವುದಿತ್ತಾದರೂ ಆತ ಭಾರತೀಯ ಕ್ರಿಕೆಟ್ಟಿಗೆ ಅಮೋಘ ಮಿಂಚಿನ ಕ್ಷಣಗಳನ್ನೂ ಬದಲಾವಣೆಯನ್ನು ತಂದ ಕ್ರಿಕೆಟ್ಟಿಗರಲ್ಲಿ ಪ್ರಮುಖರು.

1983ರ ವಿಶ್ವ ಕಪ್ ಫೈನಲ್ ಪಂದ್ಯ ವೀಕ್ಷಿಸಿದ್ದವರಿಗೆ ಶ್ರೀಕಾಂತ್ ಆಂಡಿ ರಾಬರ್ಟ್ಸ್ ಅಂತಹ ಬಿರುಸಿನ ಬೌಲರಿಗೆ ಕುಳಿತು ಬಾರಿಸಿದ ಮನಮೋಹಕ ಹೊಡೆತ ಜೀವನ ಪರ್ಯಂತ ನೆನಪಿನಲ್ಲಿರುತ್ತದೆ. ಯಾರಿಗೂ, ಯಾವ ಬಿರುಸಿಗೂ, ಯಾವ ಬೌಲರಿಗೂ, ಗಾವಾಸ್ಕರ್ ಅಂತಹ ಎದುರಿನಲ್ಲಿದ್ದವ ತಾಳ್ಮೆ ತಾಳ್ಮೆ ಎಂದು ಹೇಳುತ್ತಿದ್ದ ಮಾತು ಯಾವುದಕ್ಕೂ ಕೇರ್ ಮಾಡದೆ ತನ್ನ ಸಾಮರ್ಥ್ಯದಲ್ಲಿ ಅಪಾರ ಆತ್ಮ ವಿಶ್ವಾಸ ಇಟ್ಟು ಆಡುತ್ತಿದ್ದ ಆಟಗಾರ ಶ್ರೀಕಾಂತ್.

ಒಂದು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಗೆಲ್ಲಲು 260 ರನ್ ಗಳಿಸಬೇಕಿತ್ತು. ಭಾರತ ಬೇಗ ಎರಡು ವಿಕೆಟ್ ಕಳೆದುಕೊಂಡು ದುಸ್ತಿತಿಯಲ್ಲಿತ್ತು. ಆ ಸಮಯದಲ್ಲಿ ಚೇತನ್ ಶರ್ಮನನ್ನು ನಾಲ್ಕನೇ ಆಟಗಾರನನ್ನಾಗಿ ಕಳುಹಿಸಿದ ನಾಯಕ ಶ್ರೀಕಾಂತ್. ಆ ಆಟದಲ್ಲಿ ಚೇತನ್ ಶರ್ಮ ಶತಕದ ಮೂಲಕ ಭಾರತ ಗೆದ್ದಿತು. ಇದು ಶ್ರೀಕಾಂತ್ ಹೇಗೆ ರಿಸ್ಕ್ ತೆಗೆದುಕೊಳ್ಳುವುದಕ್ಕೆ ಹೆದರದವ ಎಂಬುದಕ್ಕೆ ನಿದರ್ಶನ. ಒಂದು ದಿನದ ಪಂದ್ಯವೊಂದರಲ್ಲಿ 50 ರನ್ ಮತ್ತು 5 ವಿಕೆಟ್ ಪಡೆದ ಏಕೈಕ ಆಟಗಾರ ಆತ. ಟೆಸ್ಟ್ನಲ್ಲಿ 2000 ಮತ್ತು ಒಂದು ದಿನದ ಪಂದ್ಯದಲ್ಲಿ 4000 ರನ್ ಗಡಿ ದಾಟಿದ ಆಟಗಾರನಾತ.

ಹಲವು ವರ್ಷಗಳ ಕಾಲ ಶ್ರೀಕಾಂತ್ ಅವರು ಭಾರತ ಕ್ರಿಕೆಟ್ಟಿನ ಆಯ್ಕೆ ಸಮಿತಿಯ ಅಧ್ಯಕ್ಷರೂ ಆಗಿದ್ದರು.

LEAVE A REPLY

Please enter your comment!
Please enter your name here