“ವಿವೇಕ” ಯೋಜನೆಯಡಿ ಶಾಲಾ ಕೊಠಡಿ ನಿರ್ಮಾಣಕ್ಕೆಮುಖ್ಯಮಂತ್ರಿ ಚಾಲನೆ: ಪ್ರತಿ ವರ್ಷ 8,000 ಶಾಲಾ ಕೊಠಡಿ ನಿರ್ಮಾಣ -ಬಸವರಾಜ ಬೊಮ್ಮಾಯಿ

0
74

ಕಲಬುರಗಿ,ನ.14 : ರಾಜ್ಯದಲ್ಲಿ ಮುಂದಿನ 3 ವರ್ಷಗಳಲ್ಲಿ ಪ್ರತಿ ವರ್ಷ 8,000 ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಸೋಮವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಕಲಬುರಗಿ ತಾಲೂಕಿನ ಮಡಿಯಾಳ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ವಿವೇಕ” ಕಾರ್ಯಕ್ರಮದಡಿ ಶಾಲಾ ಕೊಠಡಿಗಳ ನಿರ್ಮಾಣ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಇದರ ಭಾಗವಾಗಿ ಪ್ರಸಕ್ತ ಸಾಲಿನ 8,000 ಕೊಠಡಿ ನಿರ್ಮಾಣ ಗುರಿ ಪೈಕಿ ಇಂದು ರಾಜ್ಯದಾದ್ಯಂತ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ 7,601 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು, ಇದೇ ವರ್ಷದಲ್ಲಿ ಕೊಠಡಿ ನಿರ್ಮಾಣವಾಗಲಿವೆ. ಇದರಲ್ಲಿ 2,000 ಕೊಠಡಿ ಕಲ್ಯಾಣ ಕರ್ನಾಟಕದಲ್ಲಿಯೇ ನಿರ್ಮಿಸಲಾಗುತ್ತಿದೆ. ಇದಲ್ಲದೆ ಮುಂದಿನ 2 ವರ್ಷದಲ್ಲಿ ಸಹ ತಲಾ 8,000 ಕೊಠಡಿ ನಿರ್ಮಿಸುವ ಮೂಲಕ ಶಾಲೆಗಳಲ್ಲಿನ ಮೂಲಸೌಕರ್ಯ ಬಲಪಡಿಸಲಾಗುವುದು ಎಂದು ತಿಳಿಸಿದರು.

ಈ ನಾಡು ಕಟ್ಟುವ ಬೇರು ಶಿಕ್ಷಣದಲ್ಲಿದೆ. ಸಂಪದ್ಭರಿತ ನಾಡು ನಿರ್ಮಾಣಕ್ಕೆ ಶಿಕ್ಷಣ ಮೂಲ ಕಾರಣವಾಗಿದೆ. ವಿಶೇಷವಾಗಿ ರೈತರ, ಮೀನುಗಾರರ, ದೀನ-ದಲಿತರ, ತಾಂಡಾ ನಿವಾಸಿಗಳ ಹೆಣ್ಣು ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ನಾಡಿನ ಕಟ್ಟ ಕಡೆಯ ಮಗುವಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಸಂಕಲ್ಪ ನಮ್ಮದಾಗಿದ್ದು, ಇದಕ್ಕಾಗಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದೇವೆ. ಅಧಿಕಾರ ವಹಿಸಿದ ದಿನದಂದತೆ ರೈತ ವಿದ್ಯಾ ನಿಧಿ ಯೋಜನೆ ಜಾರಿಗೊಳಿಸಿದ್ದೇನೆ. ಶಾಲಾ ದುರಸ್ತಿಗೆಂದೇ 200 ಕೋಟಿ ರೂ. ನೀಡಲಾಗಿದೆ. ಮಹಿಳೆಯರ ಸಬಲೀಕರಣಕ್ಕೆ 30 ಸಾವಿರ ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದರು.

ರಾಜ್ಯದಾದ್ಯಂತ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಮುಂದಿನ ಆಗಸ್ಟ್ 15ರೊಳಗೆ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಒಳಗೊಂಡಂತೆ ಶೌಚಾಲಯಗಳನ್ನು ನಿರ್ಮಿಸಲಾಗುವುದು. ಇದಕ್ಕಾಗಿ 250 ಕೋಟಿ ರೂ. ಮೀಸಲಿಟ್ಟಿದೆ. ಕಲಬುರಗಿ ವಿಭಾಗದಲ್ಲಿ ತಲಾ 100 ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜು ಹೊಸದಾಗಿ ಮಂಜೂರಾತಿ ನೀಡಲಾಗಿದೆ. 15,000 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಅಮತಿಮ ಹಂತದಲ್ಲಿದೆ. ಕಲ್ಯಾಣ ಕರ್ನಾಟಕವನ್ನು ನಿಜಾರ್ಥದಲ್ಲಿ ಕಲ್ಯಾಣ ಮಾಡಲು ನಾವು ಬದ್ಧರಾಗಿದ್ದೇವೆ. ಕೇವಲ ಮಾತಿನಿಂದ ಎಲ್ಲವನ್ನೂ ಮಾಡಲಾಗುವುದಿಲ್ಲ. ಟಾರ್ಗೆಟ್ ಮತ್ತು ಟೈಂಲೈನ್ ಇಲ್ಲದೆ ಏನನ್ನೂ ಮಾಡಲು ಆಗುವುದಿಲ್ಲ. ಹಾಗಾಗಿ ಬದ್ಧತೆಯಿಂದ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

4 ಸಾವಿರ ಅಂಗನವಾಡಿ ಕಟ್ಟಡ ನಿರ್ಮಾಣ:

ಶಿಕ್ಷಣದ ತಳಹದಿ ಅಂಗನವಾಡಿ ಕಲಿಕೆ. ಹೀಗಾಗಿ ರಾಜ್ಯದಾದ್ಯಂತ ಪ್ರತಿ ವರ್ಷ ಮಂಜೂರು ಮಾಡುವುದನ್ನು ಹೊರತುಪಡಿಸಿ ವಿಶೇಷವಾಗಿ 4,000 ಅಂಗನವಾಡಿ ಕಟ್ಟಡ ಘೋಷಿಸಲಾಗಿದೆ. ಪ್ರತಿ 15 ಲಕ್ಷ ರೂ. ಮೊತ್ತದಲ್ಲಿ ಸುಸಜ್ಜಿತ ಕಟ್ಟಡ ತಲೆ ಎತ್ತಲಿವೆ. ಇದರಲ್ಲಿ 1,500 ಕಟ್ಟಡ ಕಲ್ಯಾಣ ಕರ್ನಾಟಕ ಭಾಗಕ್ಕೆ ಸೇರಿವೆ. ಇದಲ್ಲದೆ ಈ ಭಾಗದಲ್ಲಿ 67 ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ, 24 ಉಪ ಆರೋಗ್ಯ ಕೇಂದ್ರವನ್ನು ಪ್ರಾಥಮಿಕ ಆರೋಗ್ಯ ಕೇಂದ್ರವನ್ನಾಗಿಸಿ ಮೇಲ್ದರ್ಜೆಗೇರಿಸಲಾಗುವುದು ಎಂದರು.

ಮುಂದಿನ ವರ್ಷದಿಂದ ಯೋಗ ಜಾರಿ:

ಜಾಗತೀಕರಣ ಫಲವಾಗಿ ವಿದೇಶದ ಮಕ್ಕಳೊಂದಿಗೆ ನಮ್ಮ ಮಕ್ಕಳು ಪೈಪೋಟಿ ನಡೆಸಬೇಕು. ಆ ನಿಟ್ಟಿನಲ್ಲಿ ಅವರ ಬುದ್ಧಿಶಕ್ತಿ ಹೆಚ್ಚಿಸಬೇಕಾಗಿದೆ. ಉತ್ತಮ ದೇಹ, ಮನಸ್ಥಿತಿ ಇದ್ದರೆ ಶಿಕ್ಷಣ ಪಡೆಯಲು ಸಾಧ್ಯ. ಇದಕ್ಕಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲೆಗಳಲ್ಲಿ ಯೋಗ ಮತ್ತು ಧ್ಯಾನ ಕಡ್ಡಾಯವಾಗಿ ಜಾರಿಗೊಳಿಸಲಾಗುವುದು ಎಂದು ಸಿ.ಎಂ. ಬಸವರಾಜ ಬೊಮ್ಮಾಯಿ ಹೇಳಿದರು.

ಮಕ್ಕಳಿಗೆ ಸಿಹಿ ತಿನ್ನಿಸಿದ ಸಿ.ಎಂ:

ನವೆಂಬರ್ 14 ಮಕ್ಕಳ ದಿನಾಚರಣೆಯಾಗಿದ್ದರಿಂದ ತಮ್ಮ ಭಾಷಣಕ್ಕೂ ಮುನ್ನ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಮಡಿಯಾಳ ತಾಂಡಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಸಿಹಿ ತಿನ್ನಿಸಿ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭ ಕೋರಿದರು.

ಮತ್ತೆ ಸರಳತೆ ಸಾರಿದ ಸಿ.ಎಂ.:

ಕಾಮನ್ ಮ್ಯಾನ್ ಖ್ಯಾತಿಯ ಮುಖ್ಯಮಂತಿ ಬಸವರಾಜ ಬೊಮ್ಮಾಯಿ ಅವರು ಇಂದಿನ ಕಾರ್ಯಕ್ರಮದಲ್ಲಿ ಹೂಮಾಲೆ, ಶಾಲು ಮೂಲಕ ಸ್ವಾಗತ ಕೋರುವ ಸಂಸ್ಕøತಿಯನ್ನು ಕೈಬಿಟ್ಟು ಸರಳತೆಯಿಂದ ಸ್ವಾಗತ ಕೋರಿದ್ದಕ್ಕಾಗಿ ಹರ್ಷ ವ್ಯಕ್ತಪಡಿಸಿದಲ್ಲದೆ ಇದನ್ನೇ ಎಲ್ಲೆಡೆ ಮುಂದುವರೆಸಬೇಕು. ಇದರಿಂದ ಸಮಯ ಉಳಿಯುತ್ತದೆ ಎಂದು ಹೇಳುವ ಮೂಲಕ ಮತ್ತೆ ಸರಳತೆ ಸಾರಿದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ್ ಖಾತೆ ಸಚಿವ ಬಿ.ಸಿ.ನಾಗೇಶ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜ್ಞಾನದ ಪ್ರತೀಕವಾಗಿರುವ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಈ ವರ್ಷ 7,601 ಶಾಲಾ ಕೊಠಡಿಗಳನ್ನು ಐತಿಹಾಸಿಕ ದಾಖಲೆ ರೂಪದಲ್ಲಿ ನಿರ್ಮಿಸಲಾಗುತ್ತಿದೆ. ಇದೂವರೆಗೆ ಒಂದೇ ವರ್ಷದಲ್ಲಿ ಇಷ್ಟು ಸಂಖ್ಯೆಯಲ್ಲಿ ಶಾಲಾ ಕೊಠಡಿ ನಿರ್ಮಿಸುವ ಉದಾಹರಣೆಯಿಲ್ಲ. 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಡಿಸೆಂಬರ್‍ನಲ್ಲಿ ಹೊಸದಾಗಿ ನೇಮಕವಾದ ಶಿಕ್ಷಕರು ಶಾಲೆಗೆ ಹಾಜರಾಗಲಿದ್ದಾರೆ. ಕ.ಕ. ಭಾಗಕ್ಕೆ ಮೀಸಲಾದ 5 ಸಾವಿರ ಶಿಕ್ಷಕರ ಹುದ್ದೆ ಪೈಕಿ ಭರ್ತಿಯಾಗದೆ ಉಳಿದಿದ್ದಲ್ಲಿ ಅವುಗಳನ್ನು ಮುಂದೆ ಜನವರಿಯಲ್ಲಿ ಸ್ಥಳೀಯರಿಂದಲೇ ಮತ್ತೆ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ಮಾತನಾಡಿ, ಮಹಾನ್ ಸಂತ ಸ್ವಾಮಿ ವಿವೇಕಾನಂದ ಹೆಸರಿನಲ್ಲಿ “ವಿವೇಕ” ಯೋಜನೆಯಡಿ ಶಾಲಾ ಕೊಠಡಿ ನಿರ್ಮಾಣ ಮಾಡುತ್ತಿರುವುದರಿಂದ ಮಕ್ಕಳಲ್ಲಿ ಸಂಸ್ಕಾರ ಬಿತ್ತುವ ಕೆಲಸಕ್ಕೆ ಅಣಿ ಇಟ್ಟಿದಂತಾಗಿದೆ. ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ 200 ಕೋಟಿ ರೂ. ಮೊತ್ತದಲ್ಲಿ ಪದವಿ ಪೂರ್ವ ಕಾಲೇಜುಗಳ ಕೊಠಡಿ ಭವನ ನಿರ್ಮಾಣ ಮಾಡಿದ್ದು, ಕ್ಷೇತ್ರದಲ್ಲಿ ಶಿಕ್ಷಣ ಕ್ರಾಂತಿಯಾಗುತ್ತಿದೆ ಎಂದರು.

ಬೃಹತ್ ಮತ್ತು ಮಾಧ್ಯಮ ಕೈಗಾರಿಕೆ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ಆರ್. ನಿರಾಣಿ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮತ್ತು ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಸಿ. ಪಾಟೀಲ ರೇವೂರ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ, ಕಲಬುರಗಿ ಸಂಸದ ಡಾ. ಉಮೇಶ ಜಿ. ಜಾಧವ, ವಿಧಾನಸಭೆ ಶಾಸಕರುಗಳಾದ ಸುಭಾಷ ಆರ್. ಗುತ್ತೇದಾರ, ಡಾ. ಅವಿನಾಶ ಉಮೇಶ ಜಾಧವ, ವಿಧಾನ ಪರಿಷತ್ ಶಾಸಕರುಗಳಾದ ಶಶೀಲ ಜಿ. ನಮೋಶಿ, ಡಾ. ಬಿ.ಜಿ.ಪಾಟೀಲ, ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ, ಕಲಬುರಗಿ ನೀರಾವರಿ ಯೋಜನೆಗಳ ವಲಯದ ಅಚ್ಚುಕಟ್ಟು ಪ್ರಾದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹರ್ಷವರ್ಧನ್ ಗುಂಡಪ್ಪ ಗುಗಳೆ, ಶ್ರೀನವಾಸ ಸರಡಗಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣಕುಮಾರ ಬಾಬುರಾವ ಆಡೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ ಸಿಂಗ್, ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್, ಎಸ್.ಪಿ. ಇಶಾ ಪಂತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಲಬುರಗಿ ವಿಭಾಗದ ಅಪರ ಆಯುಕ್ತೆ ಗರಿಮಾ ಪನ್ವಾರ, ಡಿ.ಡಿ.ಪಿ.ಐ. ಸಕ್ರೆಪ್ಪಗೌಡ ಬಿರಾದಾರ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು. ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಗಿರೀಶ್ ಡಿ. ಬದೋಲೆ ಸ್ವಾಗತಿಸಿದರು.

LEAVE A REPLY

Please enter your comment!
Please enter your name here