ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ದಾಖಲೆ ಮುರಿದ ಪಾಕ್ ನಾಯಕ ಬಾಬರ್ ಅಜಂ

0
88

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಸೋಲಿನ ನಡುವೆಯೂ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಫಾರ್ಮ್​ಗೆ ಬಂದಿದ್ದು ಆಕರ್ಷಕ ಶತಕ ಸಿಡಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್​ನಲ್ಲಿ 14ನೇ ಸೆಂಚುರಿ ಬಾರಿಸುವ ಮೂಲಕ ವಿಶ್ವ ಕ್ರಿಕೆಟ್​ನಲ್ಲಿ ಅತಿ ವೇಗವಾಗಿ ಶತಕ ಬಾರಿಸಿದ ಮೊದಲ ಬ್ಯಾಟ್ಸ್​ಮನ್​ ಎಂದ ಸಾಧನೆ ಮಾಡಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಶೀಂ ಆಮ್ಲಾ ಅವರ ಸಾಧನೆಯನ್ನು ಮುರಿದು ಹಾಕಿದ್ದಾರೆ.

ಮಂಗಳವಾರ ಬರ್ಮಿಂಗ್ ಹ್ಯಾಮ್​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಅಂತಿಮ ಮೂರನೇ ಏಕದಿನ ಪಂದ್ಯದಲ್ಲಿ ಬಾಬರ್ ಈ ಸಾಧನೆ ಮಾಡಿದರು. 81ನೇ ಇನ್ನಿಂಗ್ಸ್​ನಲ್ಲಿ ಈ 14ನೇ ಶತಕ ಮೂಡಿಬಂದಿದೆ. ಇದಕ್ಕೂ ಮುನ್ನ ಈ ದಾಖಲೆ ದಕ್ಷಿಣ ಆಫ್ರಿಕಾದ ಬ್ಯಾಟ್ಸ್​ಮನ್ ಹಶೀಂ ಆಮ್ಲಾ ಹೆಸರಲ್ಲಿತ್ತು. ಇವರು 84 ಇನ್ನಿಂಗ್ಸ್​ನಲ್ಲಿ ಈ ಸಾಧನೆ ಮಾಡಿದ್ದರು. ಬಳಿಕ 98ನೇ ಇನ್ನಿಂಗ್ಸ್​ನಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ 14ನೇ ಶತಕ ಬಾರಿಸಿದ್ದರು. ವಿರಾಟ್ ಕೊಹ್ಲಿ 103 ಇನ್ನಿಂಗ್ಸ್ ತೆಗೆದುಕೊಂಡಿದ್ದರು.

ಅತಿ ವೇಗವಾಗಿ 14 ಏಕದಿನ ಶತಕ ಬಾರಿಸಿದವರು:

ಬಾಬರ್ ಅಜಂ – 81 ಇನ್ನಿಂಗ್ಸ್

ಹಶೀಂ ಆಮ್ಲಾ – 84 ಇನ್ನಿಂಗ್ಸ್

ಡೇವಿಡ್ ವಾರ್ನರ್ – 98 ಇನ್ನಿಂಗ್ಸ್

ವಿರಾಟ್ ಕೊಹ್ಲಿ – 103 ಇನ್ನಿಂಗ್ಸ್

ಇಂಗ್ಲೆಂಡ್ ಪ್ರವಾಸವನ್ನು ಕಳಪೆಯಾಗಿ ಪ್ರಾರಂಭಿಸಿರುವ ಪಾಕಿಸ್ತಾನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೂರರಲ್ಲೂ ಸೋಲುಂಡಿದೆ. ನಿನ್ನೆ ನಡೆದ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 50 ಓವರ್​ನಲ್ಲಿ 9 ವಿಕೆಟ್ ನಷ್ಟಕ್ಕೆ 331 ರನ್ ಬಾರಿಸಿತು. ಬಾಬರ್ 139 ಎಸೆತಗಳಲ್ಲಿ 14 ಬೌಂಡರಿ 4 ಸಿಕ್ಸರ್ ಸಿಡಿಸಿ 158 ರನ್ ಬಾರಿಸಿದರು. ರಿಜ್ವಾನ್ 74 ಹಾಗೂ ಇಮಾಮ್ ಉಲ್ ಹಖ್ 56 ರನ್ ಗಳಿಸಿದರು.

ಕಠಿಣ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ಪರ ಜೇಮ್ಸ್ ವಿನ್ಸ್ ಕೇವಲ 95 ಎಸೆತಗಳಲ್ಲಿ 102 ರನ್ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಲೆವಿಸ್ ಗ್ರೆಗೊರಿ 69 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಬಾರಿಸಿ 77 ರನ್ ಚಚ್ಚಿದರು. ಇಂಗ್ಲೆಂಡ್ 48 ಓವರ್​ನಲ್ಲೇ 7 ವಿಕೆಟ್ ಕಳೆದುಕೊಂಡು 332 ರನ್ ಬಾರಿಸುವ ಮೂಲಕ 3 ವಿಕೆಟ್​ಗಳ ಜಯ ಸಾಧಿಸಿತು.

LEAVE A REPLY

Please enter your comment!
Please enter your name here