ಕರ್ನಾಟಕದ ‘ಪಿಚ್’ ನಲ್ಲಿ ಅಪಾಯಕಾರಿ ಹೊಡೆತ ಬಾರಿಸಿದ ಪ್ರಧಾನಿಗಳು

0
126

ಇದು 1972 ರಲ್ಲಿ ನಡೆದ ಘಟನೆ.
ಆ ಹೊತ್ತಿಗಾಗಲೇ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ವಿಭಜನೆಯಾಗಿತ್ತು.
ವಿಭಜನೆಯ ಪರಿಣಾಮವಾಗಿ ರಾಜ್ಯದಲ್ಲೂ ಕಾಂಗ್ರೆಸ್ ಎರಡು ಹೋಳಾಗಿ ಆರ್ ಮತ್ತು ಓ ಎಂಬ ಸಬ್ ಟೈಟಲ್ಲುಗಳನ್ನು ಅಂಟಿಸಿಕೊಂಡಿದ್ದವು.
1972 ರಲ್ಲಿ ಚುನಾವಣೆ ನಡೆದು ಇಂದಿರಾಗಾಂಧಿ ಅವರ ಕಾಂಗ್ರೆಸ್ (ಆರ್) ಗೆಲುವು ಗಳಿಸಿದ ನಂತರ ಮುಖ್ಯಮಂತ್ರಿ ಹುದ್ದೆಗೆ ಯಾರನ್ನು ತರಬೇಕು ಎಂಬ ಕಸರತ್ತು ಆರಂಭವಾಯಿತು.
ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ದೇವರಾಜ ಅರಸರೇ ಆ ಹುದ್ದೆಗೆ ಸಹಜ ಆಯ್ಕೆಯೂ ಆಗಿದ್ದರು.
ಆದರೆ ಈ ಸಂದರ್ಭದಲ್ಲಿ ದೆಹಲಿಗೆ ಹೋದ ನಾಯಕರೊಬ್ಬರು ಇಂದಿರಾಗಾಂಧಿ ಅವರನ್ನು ಭೇಟಿ ಮಾಡಿದರು.ಮುಖ್ಯಮಂತ್ರಿ ಹುದ್ದೆಗೆ ಲಿಂಗಾಯತ ನಾಯಕ ಸಿದ್ಧವೀರಪ್ಪ ಅವರನ್ನು ತಂದರೆ ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಶಕ್ತಿ ಬರಲಿದೆ ಎಂದರು.
ಅವರು ಹೀಗೆ ಹೇಳಲು ಕೆಲ ಕಾರಣಗಳಿದ್ದವು.ಮೊದಲನೆಯದಾಗಿ ಕಾಂಗ್ರೆಸ್ (ಓ) ಹೆಸರಿನಲ್ಲಿ ದೂರವಾಗಿದ್ದ ಬಣದ ಬಹುತೇಕರನ್ನು ಮರಳಿ ಕಾಂಗ್ರೆಸ್ (ಆರ್) ತೆಕ್ಕೆಗೆ ಎಳೆಯಬಹುದು ಎಂಬುದು.
ಎರಡನೆಯದಾಗಿ 1956 ರ ನಂತರ ರಾಜ್ಯದಲ್ಲಿ ಮುಖ್ಯಮಂತ್ರಿಗಳಾದ ನಿಜಲಿಂಗಪ್ಪ,ಬಿ.ಡಿ.ಜತ್ತಿ,ಎಸ್.ಆರ್.ಕಂಠಿ ಮತ್ತು ವೀರೇಂದ್ರ ಪಾಟೀಲ್ ಲಿಂಗಾಯತ ಸಮುದಾಯಕ್ಕೆ ಸೇರಿದವರು.
ಹೀಗಾಗಿ ಅದೇ ಸಮುದಾಯದ ಸಿದ್ಧವೀರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ತಂದು ಕೂರಿಸಿದರೆ ಅಸ್ತಿತ್ವದಲ್ಲಿರುವ ಕಾಂಗ್ರೆಸ್ (ಓ) ಪಕ್ಷವನ್ನು ದುರ್ಬಲಗೊಳಿಸಬಹುದು ಎಂಬುದು ಈ ನಾಯಕರ ವಾದವಾಗಿತ್ತು.
ಆದರೆ ಕಾಂಗ್ರೆಸ್ ವಿಭಜನೆಗೆ ಮೂಲವಾದ ಸಿಂಡಿಕೇಟ್ ವರ್ಸಸ್ ಇಂಡಿಕೇಟ್ ರಾಜಕಾರಣದಿಂದ ಇಂದಿರಾ ಕನಲಿದ್ದರು.ಹೀಗಾಗಿ ರಾಜ್ಯದಲ್ಲಿ ಸಿಂಡಿಕೇಟ್ ನ ಪ್ರತೀಕವಾಗಿದ್ದ ಕಾಂಗ್ರೆಸ್(ಆರ್) ಪಕ್ಷದ ಮೂಲಶಕ್ತಿ ಎನ್ನಿಸಿಕೊಂಡ ಸಮುದಾಯವನ್ನು ಮೆಚ್ಚಿಸುವ ಆಸಕ್ತಿ ಅವರಲ್ಲಿರಲಿಲ್ಲ.
ಹೀಗಾಗಿ ತಮ್ಮ ಬಳಿ ಬಂದ ಆ ನಾಯಕರಿಗೆ,ನೀವು ಹೇಳುತ್ತಿರುವ ಅಂಶದ ಬಗ್ಗೆ ನಾನು ಯೋಚಿಸಿದ್ದೇನೆ.ಆದರೆ ರಾಜಕಾರಣದಲ್ಲಿ ಕೆಲವು ರಿಸ್ಕ್ ಗಳನ್ನು ತೆಗೆದುಕೊಳ್ಳಲು ನಾವು ತಯಾರಿರಬೇಕಾಗುತ್ತದೆ.ಹೀಗಾಗಿ ಅರಸರೇ ನನ್ನ ಆಯ್ಕೆ ಎಂದು ಹೇಳಿ ಕಳಿಸಿದರು.
ಅಂದ ಹಾಗೆ ಈ ಘಟನೆಯನ್ನು ಗಮನಿಸಲು ಕಾರಣವಿದೆ.ಅದೆಂದರೆ,ಭಾರತದ ರಾಜಕಾರಣದಲ್ಲಿ ಪರಿಣಾಮಗಳನ್ನು ನೋಡದೆ ರಿಸ್ಕಿ ಶಾಟ್ ಬಾರಿಸಿದ ಕೆಲ ನಾಯಕರಿದ್ದಾರೆ.ಅವರಲ್ಲಿ ಇಂದಿರಾಗಾಂಧಿ,ರಾಜೀವ್ ಗಾಂಧಿ ಮತ್ತು ಪಿ.ವಿ.ನರಸಿಂಹರಾವ್ ಮುಖ್ಯರಾದವರು.

ಹೀಗೆ ಪ್ರಬಲ ಲಿಂಗಾಯತ ಸಮುದಾಯದ ಕಾಂಕ್ಷೆಯನ್ನು ಲೆಕ್ಕಿಸದೆ ಅರಸರನ್ನು ಮುಖ್ಯಮಂತ್ರಿ ಹುದ್ದೆಗೆ ತಂದ ಇಂದಿರಾಗಾಂಧಿ,ಮುಂದೆ 1980 ರಲ್ಲಿ ಇದೇ ಅರಸರನ್ನು ಮುಲಾಜೇ ಇಲ್ಲದೆ ಕೆಳಗಿಳಿಸುವ ಮೂಲಕ ರಿಸ್ಕಿ ಶಾಟ್ ಬಾರಿಸಿದರು.
ಯಾಕೆಂದರೆ ಆ ವೇಳೆಗಾಗಲೇ ಅರಸರು ಜನಪ್ರಿಯ ನಾಯಕರಾಗಿ ಬೆಳೆದು ನಿಂತಿದ್ದರು.ಪ್ರಬಲ ಸಮುದಾಯಗಳ ವಿರುದ್ಧ ಅಹಿಂದ ಸೈನ್ಯವನ್ನು ನಿಲ್ಲಿಸಿ ಕಾಂಗ್ರೆಸ್ ಶಕ್ತಿ ಕುಗ್ಗದಂತೆ ನೋಡಿಕೊಂಡಿದ್ದರು.
ಅಂತಹ ಅರಸರನ್ನು ಬದಲಿಸಿದರೆ ರಾಜ್ಯದಲ್ಲಿ ಪಕ್ಷದ ಶಕ್ತಿ ಕುಸಿಯುತ್ತದೆ ಅಂತ ಇಂದಿರಾಗಾಂಧಿ ಅವರಿಗೆ ಗೊತ್ತಿತ್ತು.
ಅರಸರ ನಂತರ ಸಿಎಂ ಹುದ್ದೆಗೆ ಬಂದು ಕೂತ ಗುಂಡೂರಾಯರು ಅನುಮಾನಕ್ಕೆಡೆ ಇಲ್ಲದಂತೆ ಅದನ್ನು ಸಾಬೀತು ಮಾಡಿದರು.1983 ರಲ್ಲಿ ಮೊಟ್ಟ ಮೊದಲ ಬಾರಿ ಕಾಂಗ್ರೆಸ್ ಅಧಿಕಾರದ ಗದ್ದುಗೆಯಿಂದ ಉರುಳುವಂತೆ ಮಾಡಿದರು.ಆದರೆ ಇಂದಿರಾಗಾಂಧಿ ಅವರಿಗೆ ಪರಿಣಾಮಕ್ಕಿಂತ ಸ್ವಪ್ರತಿಷ್ಟೆ ಮುಖ್ಯವಾಗಿತ್ತು.

ಇದೇ ರೀತಿ ಕರ್ನಾಟಕದ ರಾಜಕಾರಣದಲ್ಲಿ ರಿಸ್ಕಿ ಶಾಟ್ ಬಾರಿಸಿದ ನಾಯಕರಲ್ಲಿ ರಾಜೀವ್ ಗಾಂಧಿ ಕೂಡಾ ಒಬ್ಬರು.
1989 ರಲ್ಲಿ ಅಭೂತಪೂರ್ವ ಜಯ ಗಳಿಸಿದ ಕಾಂಗ್ರೆಸ್ ಪಕ್ಷ ಕರ್ನಾಟಕದ ಅಧಿಕಾರ ಸೂತ್ರ ಹಿಡಿಯಿತು.
ಸಹಜವಾಗಿ ಅವತ್ತು ಮುಖ್ಯಮಂತ್ರಿಯಾದವರು ವೀರೇಂದ್ರ ಪಾಟೀಲ್.
ಸುಮಾರು ಎರಡು ದಶಕಗಳ ಕಾಲ ಕಾಂಗ್ರೆಸ್ ಪಕ್ಷದಿಂದ ದೂರ ಉಳಿದಿದ್ದ ಲಿಂಗಾಯತ ಸಮುದಾಯ ಕೈ ಹಿಡಿಯುವಂತೆ ನೋಡಿಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದರು.
ಮುಂದೆ ಮಧ್ಯದ ದೊರೆಗಳನ್ನು ಅವರು ಹಣಿದ ರೀತಿ,ಹೈಕಮಾಂಡ್ ನಾಯಕರ ಡಿಮಾಂಡುಗಳಿಗೆ ಬೆನ್ನು ತಿರುವಿದ ರೀತಿ ರಾಜೀವ್ ಗಾಂಧಿ ಅವರ ಅಸಮಾಧಾನಕ್ಕೆ ಕಾರಣವಾಯಿತು.
ಹೀಗಾಗಿ ವೀರೇಂದ್ರ ಪಾಟೀಲರಿಗೆ ಅನಾರೋಗ್ಯವಾಗಿದ್ದನ್ನೇ ಮುಂದಿಟ್ಟುಕೊಂಡು ಅವರು ನಾಯಕತ್ವ ಬದಲಾವಣೆಯ ನಿರ್ಧಾರವನ್ನು ಘೋಷಿಸಿದರು.
ತಾಯಿಯ ಕಾಲದಲ್ಲಿ ದೂರವಾದ ಪ್ರಬಲ ಲಿಂಗಾಯತ ಸಮುದಾಯ ಮಗನ ಕಾಲದಲ್ಲಿ ಹತ್ತಿರವಾಯಿತು ಎಂಬ ಮಾತುಗಳನ್ನು ಕೇಳಿಸಿಕೊಂಡಿದ್ದರೂ ತಮ್ಮ ಹಟಕ್ಕಾಗಿ ವೀರೇಂದ್ರ ಪಾಟೀಲರನ್ನು ಮುಖ್ಯಮಂತ್ರಿ ಹುದ್ದೆಯಿಂದ ಇಳಿಸಿದರು.
ಇದರಿಂದ ಕೆರಳಿ ದೂರವಾದ ಲಿಂಗಾಯತ ಸಮುದಾಯ ಇದುವರೆಗೂ ಕಾಂಗ್ರೆಸ್ ಕೈ ಹಿಡಿದಿಲ್ಲ.

ಇನ್ನು ಪರಿಣಾಮಗಳನ್ನು ಲೆಕ್ಕಿಸದೆ ರಿಸ್ಕಿ ಶಾಟ್ ಬಾರಿಸಿದವರೆಂದರೆ ಪಿ.ವಿ.ನರಸಿಂಹರಾವ್.
ರಾಜೀವ್ ಗಾಂಧಿ ಅವರ ಕಾಲದಲ್ಲಿ ಗದ್ದುಗೆ ಏರಿದ ಹಿಂದುಳಿದ ವರ್ಗಗಳ ನಾಯಕ ಬಂಗಾರಪ್ಪ ಬಹಳ ಧಾಡಸಿ ವ್ಯಕ್ತಿತ್ವದವರು ಎಂಬುದೇ ನರಸಿಂಹರಾಯರ ಅಸಮಾಧಾನಕ್ಕೆ ಕಾರಣವಾಯಿತು.
ಅವರಲ್ಲಿದ್ದ ಈ ಅಸಮಾಧಾನದ ಕಿಡಿ, ಜ್ವಾಲೆಯಾಗಿ ಪರಿವರ್ತನೆಯಾಗುವಂತೆ ಮಾಡಿದವರು ಕೇರಳದ ನಾಯಕ ಕರುಣಾಕರನ್. ಕರ್ನಾಟಕದಲ್ಲಿ ತಮಗೆ ಆಪ್ತರಾದ ವೀರಪ್ಪ ಮೊಯ್ಲಿ ಮೇಲೇಳುವುದು ಅವರಿಗೆ ಬೇಕಿತ್ತು.ಹೀಗಾಗಿ ಅವರು ಬಂಗಾರಪ್ಪ ಅವರ ವಿರುದ್ಧ ಖೆಡ್ಡಾ ತೋಡುತ್ತಾ ಹೋದರು.
ಹೀಗೆ ಖೆಡ್ಡಾ ತೋಡುವ ಅವರ ಕಾರ್ಯಕ್ಕೆ ಇಲ್ಲಿದ್ದ ಅವರ ಆಪ್ತರ ಪಡೆ ಹತಾರುಗಳನ್ನು ಒದಗಿಸುತ್ತಾ ಹೋಯಿತು.
ಕೊನೆಗೊಮ್ಮೆ ಸಂದರ್ಶನವೊಂದರಲ್ಲಿ ಪಿವಿಎನ್ ಅವರನ್ನು ಚೇಳು ಎಂದು ಬಂಗಾರಪ್ಪ ದೂಷಿಸಿದಾಗ ಅದನ್ನೇ ಕರುಣಾಕರನ್ ಅವರು ನಿರ್ಣಾಯಕ ಹೊಡೆತಕ್ಕೆ ಬಳಸಿದರು.
ನರಸಿಂಹರಾವ್ ಕ್ರುದ್ಧರಾಗಿ ಬಂಗಾರಪ್ಪ ಅವರನ್ನು ದೆಹಲಿಗೆ ಕರೆಸಿ,ಸಿಎಂ ಹುದ್ದೆಗೆ ರಾಜೀನಾಮೆ ಕೊಡುವಂತೆ ಸೂಚಿಸಿದರು.
ಬಂಗಾರಪ್ಪ ತಿರುಗಿ ಬಿದ್ದರು.ನನ್ನನ್ನು ಇಳಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುತ್ತದೆ ಎಂದು ಎಚ್ಚರಿಸಿದರು.
ಹೌದಾ?ಒಂದು ವೇಳೆ ನಾವು ಕರ್ನಾಟಕದಲ್ಲಿ ಅಧಿಕಾರ ಕಳೆದುಕೊಂಡರೆ ಮತ್ತೆ ಗಳಿಸಲು ಎಷ್ಟು ವರ್ಷವಾಗಬಹುದು?ಐದು ವರ್ಷ?ಹತ್ತು ವರ್ಷ?ಓಕೆ..ಅಷ್ಟಾದರೂ ಚಿಂತೆಯಿಲ್ಲ.ನೀವು ಮಾತ್ರ ಮೊದಲು ರಾಜೀನಾಮೆ ಕೊಟ್ಟು ಹೋಗಿ ಎಂದರು ನರಸಿಂಹರಾವ್.
ಹೀಗೆ ರಾಜೀನಾಮೆ ಕೊಟ್ಟ ಬಂಗಾರಪ್ಪ ಮುಂದೆ ಕೆಸಿಪಿ ಎಂಬ ಪಕ್ಷ ಕಟ್ಟಿದರು.1994 ರ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲುವಂತೆ ಮಾಡಿದರು.
ಇಂತಹ ಸಾಧ್ಯತೆಗಳ ಬಗ್ಗೆ ನರಸಿಂಹರಾಯರಿಗೆ ಅರಿವಿತ್ತು.ಆದರೆ ತಮ್ಮ ಪ್ರತಿಷ್ಟೆಗಾಗಿ ಅವರು ಯಾವ ಮಟ್ಟದ ಬೆಲೆ ತೆರಲೂ ಸಿದ್ಧರಾಗಿದ್ದರು.

ಹಾಗಂತ ರಾಜಕಾರಣದಲ್ಲಿ ಎಲ್ಲ ನಾಯಕರೂ ರಿಸ್ಕಿ ಶಾಟ್ ಬಾರಿಸಲಾರರು.ಆದರೆ ಸರ್ವಾಧಿಕಾರಿ ಮನೋವೃತ್ತಿಯ ನಾಯಕರು ಮಾತ್ರ ಇದಕ್ಕೆ ಹಿಂಜರಿಯಲಾರರು.
ಅದು ಇಂದಿರಾಗಾಂಧಿ,ರಾಜೀವ್ ಗಾಂಧಿ,ನರಸಿಂಹರಾವ್ ಮಾತ್ರವಲ್ಲ,ಈಗ ಪ್ರಧಾನಿಯಾಗಿರುವ ನರೇಂದ್ರ ಮೋದಿ ಕೂಡಾ ಅಂತವರಲ್ಲೊಬ್ಬರು.

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here