ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಪಡೆಯುವ ಕನಸು ಕಾಣಬೇಕು : ಮಹಾಂತೇಶ ಬೀಳಗಿ.

0
105

ದಾವಣಗೆರೆ ಮಾ.23: ವಿದ್ಯಾರ್ಥಿಗಳು ದೊಡ್ಡ ದೊಡ್ಡ ಕನಸುಗಳನ್ನು ಕಾಣಬೇಕು, ಕನಸು ಕಾಣುವುದಕ್ಕೆ ಹಣ ಕೊಡಬೇಕಾಗಿಲ್ಲ. ಪ್ರಸ್ತುತ ನಾವು ಕಾಣುವ ಕನಸುಗಳು ಭವಿಷ್ಯದಲ್ಲಿ ನಿಜವಾಗುವ ಸಾಧ್ಯತೆಗಳಿರುತ್ತವೆ, ಹಾಗಾಗಿ ಉನ್ನತ ಹುದ್ದೆಗಳನ್ನು ಪಡೆಯುವ ಕನಸುಗಳನ್ನು ಕಾಣಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ಬುಧವಾರ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಇವರ ವತಿಯಿಂದ ಆಯೋಜಿಸಲಾಗಿದ್ದ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಮತ್ತು ಮೊರಾರ್ಜಿ ದೇಸಾಯಿ ವಸತಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ಯಾವುದೇ ಒಂದು ಇಲಾಖೆಯಲ್ಲಿ ವಿವಿಧ ಉದ್ಯೋಗಗಳಿಗೆ ಅರ್ಜಿ ಆಹ್ವಾನಿಸಿ, ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ನಿಗದಿತ ಪರೀಕ್ಷೆಗಳನ್ನು ಏರ್ಪಡಿಸಿ ಅರ್ಹ ಅಭ್ಯರ್ಥಿಗಳನ್ನು ನಿಗದಿಪಡಿಸಿದ ಹುದ್ದೆಗೆ ಆಯ್ಕೆ ಮಾಡುವ ಪ್ರಕ್ರಿಯೆಯೇ ಸ್ಪರ್ಧಾತ್ಮಕ ಪರೀಕ್ಷೆಯಾಗಿದೆ. ಹಿಂದಿನ ದಿನಗಳಲ್ಲಿ ಸರ್ಕಾರಿ ಉದ್ಯೋಗಗಳನ್ನು ಪ್ರಭಾವ ಅಥವಾ ಒತ್ತಡದ ಮೂಲಕ ಪಡೆಯಲಾಗುತ್ತಿತ್ತು, ಆದರೆ ಆಧುನಿಕ ದಿನಗಳಲ್ಲಿ ಎಲ್ಲಾ ವರ್ಗದ ಉದ್ಯೋಗಗಳನ್ನು ಕೂಡ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕವೇ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಹಾಗಾಗಿ ಪ್ರಸ್ತುತ ಕಾಲಮಾನದಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲೇಬೇಕಿದೆ. ಸ್ಪರ್ಧೆಯಿಂದ ಮಾತ್ರ ಹುದ್ದೆ ಪಡೆಯಬಹುದಾಗಿದ್ದು, ಯಾವುದೇ ಪ್ರಭಾವಗಳಿಂದಲೂ ಕೂಡ ಸರ್ಕಾರಿ ಹುದ್ದೆಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಉನ್ನತ ಸಾಧನೆಗಳನ್ನು ಮಾಡಿದ ಎಲ್ಲರೂ ಕೂಡ ಬಡತನದ ಹಿನ್ನೆಲೆಯಿಂದಲೇ ಬಂದಿರುವವರು. ದೇಶ ಕಂಡ ಅದ್ಭುತ ರಾಷ್ಟ್ರಪತಿ ಮಿಸೈಲ್ ಮ್ಯಾನ್ ಎಂದೇ ಪ್ರಖ್ಯಾತಿ ಪಡೆದಿದ್ದ ಎಪಿಜೆ ಅಬ್ದುಲ್ ಕಲಾಂ ಅವರು ಕೂಡ ಬಡ ಕುಟುಂಬದ ಹಿನ್ನೆಲೆ ಉಳ್ಳವರಾಗಿದ್ದರು, ಬಹುದೊಡ್ಡ ಕನಸನ್ನು ಕಂಡು ನನಸಾಗಿಸಿಕೊಂಡರು. ವಿದ್ಯಾರ್ಥಿಗಳೂ ಕೂಡ ಆ ರೀತಿ ಗುರಿ ಹೊಂದಬೇಕು. 16-22 ವಯಸ್ಸಿನ ಶೈಕ್ಷಣಿಕ ಜೀವನದಲ್ಲಿ ಐಎಎಸ್, ಐಪಿಎಸ್, ಶಿಕ್ಷಕ, ಪೆÇ್ರಫೆಸರ್, ಬ್ಯಾಂಕಿಂಗ್ ಇನ್ನಿತರ ನೌಕರರಾಗುವ ನಿರ್ದಿಷ್ಟ ಗುರಿ ಹೊಂದಿ ಅಭ್ಯಾಸ ಮಾಡಬೇಕು. ಸತತ ಪರಿಶ್ರಮಪಟ್ಟು ಓದಿದರೆ ಮುಂದಿನ ಹತ್ತು ವರ್ಷಗಳ ನಂತರ ನಿಮ್ಮ ಕನಸು ನನಸಾಗುತ್ತದೆ. ಕೆಲವರಿಗೆ ಓದಿದ್ದು ನೆನಪಿಗೆ ಇರುವುದಿಲ್ಲ, ಏಕೆಂದರೆ ಯಾವುದು ಬಹಳ ಇಷ್ಟವಿರುತ್ತದೆಯೋ ಅಂತಹದ್ದು ಮಾತ್ರ ನೆನಪಿರುತ್ತದೆ. ದೇಶ, ರಾಜ್ಯ, ಸಮಾಜ, ವ್ಯವಸ್ಥೆ ಎಲ್ಲವನ್ನೂ ಕೂಡ ಇಷ್ಟಪಟ್ಟು ಪ್ರೀತಿಸುವುದನ್ನು ಕಲಿಯಿರಿ ಆಗ ಎಲ್ಲವೂ ನೆನಪಿಗೆ ಬರುತ್ತದೆ. ಕಠಿಣ ಪರಿಶ್ರಮದಿಂದ ಮಾತ್ರ ಉನ್ನತ ಹುದ್ದೆ ಪಡೆಯಲು ಸಾಧ್ಯ. ಕಾರ್ಯಾಗಾರದ ಸದುಪಯೋಗ ಪಡೆದು ಇಂದಿನಿಂದಲೇ ಅಭ್ಯಾಸ ಮಾಡುವುದನ್ನು ಪ್ರಾರಂಭಿಸಿ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಚನ್ನಪ್ಪ ಮಾತನಾಡಿ, ನಮ್ಮ ಶಿಕ್ಷಣ ವ್ಯವಸ್ಥೆ ಬೌದ್ಧಿಕ ಆಲೋಚನೆಯ ಮಟ್ಟವನ್ನು ಹೆಚ್ಚಿಸಿ, ಸ್ವತಂತ್ರ ಜೀವನ ಕಟ್ಟಿಕೊಳ್ಳಲು ವ್ಯವಸ್ಥೆ ರೂಪಿಸುತ್ತದೆ. ಹತ್ತನೆ ತರಗತಿಯ ನಂತರ ಕಲಾ, ವಿಜ್ಞಾನ, ವಾಣಿಜ್ಯ ಕ್ಷೇತ್ರಗಳಿಗೆ ದಾಖಲಾಗುವಂತೆ ಪೋಷಕರು ಮಕ್ಕಳಿಗೆ ಮಾರ್ಗದರ್ಶನ ಮಾಡುತ್ತಾರೆ. ವಾಸ್ತವದಲ್ಲಿ ಪದವಿ, ಸ್ನಾತ್ತಕೋತ್ತರ ಪದವಿ ಓದಿದರೂ ಉದ್ಯೋಗ ಸಿಗದೆ ಬದುಕು ಕಷ್ಟಕರವಾಗುವ ಸಂದರ್ಭ ಹೆಚ್ಚು ಸೃಷ್ಠಿಯಾಗುತ್ತಿವೆ. ಹಳೆಯ ಕಾಲದಲ್ಲಿ ವಂಶಪಾರಂಪರ್ಯವಾಗಿ ವೃತ್ತಿಗಳನ್ನು ಮಾಡುತ್ತಿದ್ದರು, ಆಗ ಉದ್ಯೋಗದ ಸಮಸ್ಯೆ ಇರಲಿಲ್ಲ. ಆಧುನಿಕ ಕಾಲದಲ್ಲಿ ಎಲ್ಲರಿಗೂ ಉತ್ತಮ ಜೀವನ ನಡೆಸುವ ಕನಸಿದೆ. ಆದ್ದರಿಂದ ವಿದ್ಯಾರ್ಥಿಗಳು ಮುಂದೆ ಗುರಿ ಇಟ್ಟುಕೊಂಡು ಹಾಗೂ ಹಿಂದೆ ಗುರುವಿನ ಮಾರ್ಗದರ್ಶನ ಪಡೆಯುತ್ತಾ ಸಾಗಿದರೆ ಮಾತ್ರ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗರಾಜ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳೆಂದರೆ ಅದರ ಭಾವನೆಗಳು ಬೇರೆಯಾಗಿರುತ್ತದೆ. ಪ್ರಸ್ತುತ ಬದುಕಿನಲ್ಲಿ ಎಲ್ಲಾ ಕಡೆಯೂ ಸ್ಪರ್ಧೆ ಇದೆ. ಆದ್ದರಿಂದ ವಿದ್ಯಾರ್ಥಿಗಳ ಕನಸುಗಳು ಬೇರೆ ಬೇರೆಯಾಗಿರುತ್ತದೆ, ಅವರಿಗೆ ಯಾವ ವಿಷಯದಲ್ಲಿ ಆಸಕ್ತಿ ಇರುತ್ತದೆಯೋ ಅದರಲ್ಲಿ ಭಾಗವಹಿಸಿ ತಮ್ಮ ಆಸಕ್ತಿಗನುಗುಣವಾಗಿ ತೊಡಗಿಸಿಕೊಳ್ಳಬೇಕು. ಎಲ್ಲಾ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಮುಗಿದ ನಂತರ ಏನು ಮಾಡಬೇಕು ಮತ್ತು ಹೇಗೆ ತಯಾರಾಗಬೇಕು ಎಂಬುದು ಯೋಚನೆಗೆ ಬರುತ್ತದೆ. ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಹೊಂದಿ ಸತತ ಪ್ರಯತ್ನ ಇದ್ದರೆ ಮಾತ್ರ ಯಶಸ್ಸು ಸಿಗುತ್ತದೆ. ಈಗಿನ ವಿದ್ಯಾರ್ಥಿಗಳು ಕೆಎಎಸ್, ಐಎಎಸ್, ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಪೂರ್ವ ತಯಾರಿ ಮಾಡಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಗಾರದ ಸದುಪಯೋಗ ಪಡೆದು ಎಲ್ಲಾ ವಿದ್ಯಾರ್ಥಿಗಳು ಅಭ್ಯಾಸ ರೂಡಿಸಿಕೊಂಡು ಯಶಸ್ವಿಯಾಗಬೇಕೆಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಪಶು ಸಂಗೊಪನಾ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ್ ಸುಂಕದ, ಮಹಿಳಾ ಮತ್ತು ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯ್‍ಕುಮಾರ್, ಪರಿಶಿಷ್ಟ ವರ್ಗಗಳ ಇಲಾಖೆಯ ಅಧಿಕಾರಿ ಮಂಜನಾಯ್ಕ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗಂಗಪ್ಪ, ಅಂಬೇಡ್ಕರ್ ಅಭಿವೃದ್ದಿ ನಿಗಮದ ರಮೇಶ್, ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಅಮಿತ್ ಬಿದರಿ, ರವಿಕುಮಾರ್, ನಾಗರಾಜ್, ಸಂಪನ್ಮೂಲ ವ್ಯಕ್ತಿಗಳಾದ ಮಲ್ಲಿಕಾರ್ಜುನ್ ಎ.ಹೆಚ್ ಮತ್ತು ಮೋಹನ್‍ಕುಮಾರ್ ಹಾಗೂ ಮೊರಾರ್ಜಿ ದೇಸಾಯಿ ಶಾಲೆ ಕಾಲೇಜುಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here