ಕೋವಿಡ್ 3ನೇ ಅಲೆ ತಡೆಗೆ ಹೆಚ್ಚಿನ ಅನುದಾನ ನೀಡಲು ಸಿದ್ದ, ಕೋವಿಡ್ ನಿರ್ವಹಣೆಗೆ 102 ಕೋಟಿ ನೀಡಿಕೆ,ಕೆಕೆಆರ್‍ಡಿಬಿಯಿಂದ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು: ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ

0
100

ಬಳ್ಳಾರಿ,ಮೇ 31 : ಆರೋಗ್ಯವಂತ ಕಲ್ಯಾಣ ಕರ್ನಾಟಕ ನಮ್ಮ ಮಂಡಳಿಯ ಧ್ಯೇಯವಾಗಿದ್ದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಲಾಗಿದೆ. ಈ ಹಿನ್ನಲೆಯಲ್ಲಿ ಈಗಾಗಲೇ ಕೆಕೆಆರ್‍ಡಿಬಿ ವ್ಯಾಪ್ತಿಯ 7 ಜಿಲ್ಲೆಗಳಿಗೆ 102 ಕೋಟಿ ರೂ.ಗಳನ್ನು ಕೋವಿಡ್ ನಿರ್ವಹಣೆಗೆ ಜಿಲ್ಲಾಡಳಿತಗಳಿಗೆ ನೀಡಲಾಗಿದೆ ಎಂದು ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ಸಿ.ರೇವೂರ್ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಕೋವಿಡ್-19ರ ನಿರ್ವಹಣೆ ಹಾಗೂ ಕೆ.ಕೆ.ಆರ್.ಡಿ.ಬಿ. ಮಂಡಳಿಯ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಳ್ಳಾರಿ ಜಿಲ್ಲೆಗೆ 15 ಕೋಟಿ ರೂ.ಅನುದಾನವನ್ನು ಕೋವಿಡ್ ನಿರ್ವಹಣೆಗೆ ನೀಡಲಾಗಿದೆ. ಈ ಜಿಲ್ಲಾಡಳಿತದಿಂದ ಬಂದ ಕ್ರಿಯಾಯೋಜನೆಯನ್ನು ತಕ್ಷಣ ಅನುಮೋದನೆ ಮಾಡಿ ಹಣ ಒದಗಿಸಲಾಗಿದೆ ಎಂದರು.
ಕೆಕೆಆರ್‍ಡಿಬಿ ವತಿಯಿಂದ ಒದಗಿಸಲಾಗಿರುವ ಅನುದಾನದಲ್ಲಿ ಕೋವಿಡ್ ನಿರ್ವಹಣೆಗೆ ಸಂಬಂಧಿಸಿದ ವೆಂಟಿಲೇಟರ್ ಖರೀದಿ,ಆಕ್ಸಿಜನ್ ಪ್ಲಾಂಟ್‍ಗಳ ಪ್ರಾರಂಭ ಹಾಗೂ ಆ್ಯಂಬುಲೆನ್ಸ್ ಸೇವೆ ಒಳಗೊಂಡಂತೆ ತುರ್ತು ಅವಶ್ಯಕತೆಗಳಿಗೆ ಮಂಡಳಿಯ ಅನುದಾನವನ್ನು ಬಳಕೆ ಮಾಡಲಾಗುತ್ತದೆ. ಅತೀ ಅವಶ್ಯಕವಾದ ಕಾರ್ಯಗಳಿಗೆ ಶಾಸಕರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಿ; ಬಾಕಿ ಉಳಿದ ಕೆಲಸ ಕಾಮಗಾರಿಗಳನ್ನು ಆದಷ್ಟು ಬೇಗ ಮುಗಿಸಿಕೊಂಡು ಕೋವಿಡ್ ನಿಯಂತ್ರಿಸುವಲ್ಲಿ ಕಾರ್ಯಪ್ರವೃತ್ತರಾಗಿ ಎಂದು ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಮಾತನಾಡಿ ಕೆಕೆಆರ್‍ಡಿಬಿ ಅನುದಾನದಲ್ಲಿ ಈಗಾಗಲೇ 10 ಆ್ಯಂಬುಲೆನ್ಸ್ ಖರೀದಿ ಮಾಡಲಾಗುತ್ತಿದೆ. ತಾಲೂಕುವಾರು ಆಕ್ಸಿಜನ್ ಪ್ಲಾಂಟ್ ಪ್ರಾರಂಭಿಸಲು ಕ್ರಮಕೈಗೊಳ್ಳಲಾಗುತ್ತದೆ. ಇದರ ಜೊತೆಗೆ ಈಗಾಗಲೇ 25ವೆಂಟಿಲೇಟರ್ ಖರೀದಿಸಲಾಗಿದೆ. ಬಳ್ಳಾರಿ ವಿಮ್ಸ್‍ಗೆ 10,ಜಿಲ್ಲಾಸ್ಪತ್ರೆಗೆ 10,ಹಾಗೂ 5 ಸಂಜೀವಿನಿ ಆಸ್ಪತ್ರಗೆ ನೀಡಲಾಗಿದೆ ಎಂದು ಅವರು ವಿವರಿಸದರು.
ಈ ಮುಂಚೆ ಅನುಮೋದಿಸಲಾಗಿರುವ ಜಿಲ್ಲೆಯ ಕ್ರಿಯಾಯೋಜನೆಯಲ್ಲಿ ಅಲ್ಪಸ್ವಲ್ಪ ಬದಲಾವಣೆಗಳಿದ್ದು,ಪರಿಷ್ಕøತ ಕ್ರಿಯಾಯೋಜನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಾಲಪಾಟಿ ಅವರು ತಿಳಿಸಿದರು. ತಕ್ಷಣ ಕಳುಹಿಸಿಕೊಡಿ ಅದಕ್ಕೆ ಅನುಮೋದನೆ ಕೊಡಿಸಲಾಗುವುದು ಎಂದರು.
*ಕೆಕೆಆರ್‍ಡಿಬಿ ಅಡಿ ದೀರ್ಘ ಮತ್ತು ಶಾಶ್ವತವಾದ ಕೆಲಸಗಳನ್ನು ಕೈಗೆತ್ತಿಕೊಳ್ಳಿ: ಬಳ್ಳಾರಿ ಜಿಲ್ಲಾಡಳಿತಕ್ಕೆ ಜಿಲ್ಲಾ ಖನಿಜ ನಿಧಿ,ಸಿಎಸ್‍ಆರ್,ಶಾಸಕರು,ಸಂಸದರ ನಿಧಿಗಳಡಿ ಕೋವಿಡ್ ನಿರ್ವಹಣೆಗೆ ಸಂಬಂಧಿಸಿದ ತುರ್ತು ಕಾರ್ಯಗಳಿಗೆ ಈ ಅನುದಾನ ಬಳಸಿಕೊಳ್ಳಿ; ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ದೀರ್ಘ ಮತ್ತು ಶಾಶ್ವತವಾದ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನ ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮಂಡಳಿ ಅಧ್ಯಕ್ಷ ರೇವೂರ ಅವರು ಸೂಚನೆ ನೀಡಿದರು.
ನಮ್ಮಲ್ಲಿ ಹಣದ ಕೊರತೆ ಇಲ್ಲ;ಆರೋಗ್ಯ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಅನುದಾನ ಬಳ್ಳಾರಿ ಜಿಲ್ಲೆಗೆ ಬೇಕಿದ್ದಲ್ಲಿ ಒದಗಿಸಲು ಬದ್ಧ;ತಾವು ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಸೇರಿ ಚರ್ಚಿಸಿ ಕ್ರಿಯಾಯೋಜನೆ ಕಳುಹಿಸಿಕೊಟ್ಟಲ್ಲಿ ಅನುದಾನ ಒದಗಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಕೋವಿಡ್ ಮೂರನೇ ಅಲೆಗೆ ಈಗಿನಿಂದಲೇ ಪೂರ್ವ ಸಿದ್ಧತೆ ಕೈಗೊಳ್ಳಿ ಎಂದು ಅಧಿಕಾರಿಗೆ ಸೂಚಿಸಿದ ರೇವೂರ ಅವರು ಕೆಕೆಆರ್‍ಡಿಬಿ ಅಡಿ ಬಾಕಿ ಇರುವ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
*ಅಧ್ಯಯನಕ್ಕೆ ಸಮಿತಿ ರಚನೆ: ಕೆಕೆಆರ್‍ಡಿಬಿ ವ್ಯಾಪ್ತಿಯ ಜಿಲ್ಲೆಗಳಲ್ಲಿರುವ ತಾಲೂಕುಗಳ ಹಿಂದಿನ ಸ್ಥಿತಿಗತಿ,ಸದ್ಯ ಇರುವ ಸ್ಥಿತಿಗತಿ ಕುರಿತು ಅಧ್ಯಯನ ಮಾಡಿ ವರದಿ ಸಲ್ಲಿಸಲು ಮಂಡಳಿಯಿಂದ ಸಮಿತಿಯೊಂದನ್ನು ರಚಿಸಲಾಗಿದೆ. ಆ ಸಮಿತಿ ಶೀಘ್ರ ವರದಿ ಸಲ್ಲಿಸಲಿದೆ ಎಂದು ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ತಿಳಿಸಿದರು.
ಈ ವರದಿ ಆಧರಿಸಿ ಮುಂದಿನ ಕ್ರಮಗಳನ್ನು ಮಂಡಳಿ ಕೈಗೊಳ್ಳಲಿದೆ ಎಂದರು.
*3ನೇ ಅಲೆ ಎದುರಿಸಲು ಸಕಲ ಸಿದ್ಧತೆ;ಶಾಸಕರ ಸಭೆ ಶೀಘ್ರ: 3ನೇ ಅಲೆಯನ್ನು ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತಾ ಕ್ರಮಗಳನ್ನು ಕೈಗೆತ್ತಿಕೊಂಡಿದ್ದು,ಶೀಘ್ರ ಶಾಸಕರ ಸಭೆ ಕರೆದು ತೀರ್ಮಾನಗಳನ್ನು ಕೈಗೊಳ್ಳಲಾಗುವುದು ಎಂದು ಮೂಲಸೌಕರ್ಯ ಅಭಿವೃದ್ಧಿ,ಹಜ್ ಮತ್ತು ವಕ್ಫ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ತಿಳಿಸಿದರು.
ಈಗಾಗಲೇ ಮಕ್ಕಳಿಗೆ 50 ವೆಂಟಿಲೇಟರ್ ಸೌಕರ್ಯ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ;ಇನ್ನೂ ಹೆಚ್ಚುವರಿಯಾಗಿ 50 ವೆಂಟಿಲೇಟರ್ ಸೌಕರ್ಯ ಕೂಡ ಮಾಡಿಕೊಳ್ಳಲಾಗುವುದು. ಇದರ ಜೊತೆಗೆ ಮಕ್ಕಳಿಗೆ 3ನೇ ಅಲೆ ಬಾದಿಸದಂತೆ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತ ವಿಶೇಷ ಯೋಜನೆ ರೂಪಿಸಿದ್ದು,ಅದನ್ನು ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ, ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ,ಎಸ್ಪಿ ಸೈದುಲು ಅಡಾವತ್, ಜಿಪಂ ಸಿಇಒ ಕೆ.ಆರ್.ನಂದಿನಿ, ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್, ಕಲ್ಯಾಣ ಕರ್ನಾಟಕ ಹೋರಾಟಗಾರ ಸಿರಿಗೇರೆ ಪೊನ್ನರಾಜ್, ಎಡಿಸಿ ಪಿ.ಎಸ್.ಮಂಜುನಾಥ,ವಿಮ್ಸ್ ನಿರ್ದೇಶಕ ಗಂಗಾಧರಗೌಡ,ಡಿಎಚ್‍ಒ ಡಾ.ಜನಾರ್ಧನ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ ಸೇರಿದಂತೆ ವಿವಿಧ ಅನುಷ್ಠಾನ ಏಜೆನ್ಸಿಗಳ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here