ತಂಬಾಕು ಸೇವನೆ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈ ಜೊಡಿಸಿ; ಸಚಿವ ಜಗದೀಶ ಶೆಟ್ಟರ್

0
94

ಧಾರವಾಡ : ತಂಬಾಕು ಸೇವನೆ ಅಪಾಯಕಾರಿಯಾಗಿದ್ದು, ಕೋವಿಡ್ ಸೋಂಕು ಹರಡುತ್ತಿರುವ ಈ ಸಂದರ್ಭದಲ್ಲಿ ತಂಬಾಕು ಹಾಗು ತಂಬಾಕು ಉತ್ಪನ್ನಗಳನ್ನು ಜಗಿಯುವುದು, ಸೇವಿಸುವುದರಿಂದ ಮತ್ತಷ್ಟು ಅನಾರೋಗ್ಯ ಉಂಟಾಗಿ, ಜೀವಕ್ಕೆ ಅಪಾಯವಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಎಲ್ಲರೂ ಸೇರಿ ತಂಬಾಕು ಸೇವನೆ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸೋಣ ಎಂದು ಬೃಹತ, ಮದ್ಯಮ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ ಹೇಳಿದರು.
ಅವರು ಇಂದು ಬೆಳಿಗ್ಗೆ ನಗರದ ಅಂಜುಮನ್ ಕಾಲೇಜ್ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಸಂಯುಕ್ತವಾಗಿ ಆಯೋಜಿಸಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಲ್ಲಿ 13 ರಿಂದ 15 ವಯಸ್ಸಿನ ಶೇ.14.6ರಷ್ಟು ಮಕ್ಕಳು ತಂಬಾಕು ಉತ್ಪನಗಳನ್ನು ಸೇವನೆ ಮಾಡುತ್ತಾರೆ. ಕರ್ನಾಟಕದಲ್ಲಿ ಒಟ್ಟು ಜನಸಂಖ್ಯೆ ಶೇ.22.8 ರಷ್ಟು ಜನ ತಂಬಾಕು ಉತ್ಪನಗಳ ಸೇವನೆ ಮಾಡುತ್ತಾರೆ. ಧೂಮಪಾನದಿಂದ ಶ್ವಾಸಕೋಶ ಮತ್ತು ಇತರೆ ಅಂಗಗಳ ಹಾನಿಗೊಳಿಸಿ ಕೋವಿಡ್-19ರ ಸೋಂಕು ಹೆಚ್ಚಾಗುತ್ತದೆ ಆದ್ದರಿಂದ ತಂಬಾಕು ಉತ್ಪನ್ನಗಳ ಸೇವನೆಯನ್ನು ನಿಯಂತ್ರಿಸಬೇಕೆಂದು ಸಚಿವರು ಹೇಳಿದರು.
ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಧಾರವಾಡ ಜಿಲ್ಲೆಯಲ್ಲಿ ಪ್ರತಿ ವರ್ಷ 100 ಶಾಲೆಗಳಲ್ಲಿ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳು ಮತ್ತು ಕೋಟ್ಪಾ -2003 ರ ಕಾಯ್ದೆಯ ಕುರಿತು ಶಾಲಾ, ಕಾಲೇಜು ಮಕ್ಕಳಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮ ನಡೆಸಿ ಮಕ್ಕಳಿಗೆ ಅರಿವು ಮೂಡಿಸಲಾಗುತ್ತಿದೆ. 2020-21 ನೇ ಸಾಲಿನಲ್ಲಿ ಒಟ್ಟು 100 ಶಾಲಾ ಕಾಲೇಜುಗಳನ್ನು ತಂಬಾಕು ಮುಕ್ತ ಶಾಲೆ, ಕಾಲೇಜು ಎಂದು ಘೋಷಣೆ ಮಾಡಲಾಗಿದೆ.
ಧಾರವಾಡ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ತಂಬಾಕು ವ್ಯಸನ ಮುಕ್ತ ಕೇಂದ್ರವು ತಂಬಾಕು ವ್ಯಸನಿಗಳಿಗೆ ಗುಂಪು ಚರ್ಚಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಮತ್ತು ಜಿಲ್ಲಾ ತಂಬಾಕು ವ್ಯಸನ ಮುಕ್ತ ಕೇಂದ್ರದಲ್ಲಿ ಉಚಿತವಾಗಿ ಆಪ್ತ ಸಮಾಲೋಚನೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ.
2020-21ನೇ ಸಾಲಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ಕೋಟ್ಪಾ-2003ರ ಕಾಯ್ದೆಯನ್ನು ಉಲ್ಲಂಘಿಸಿದವರ ವಿರುದ್ಧ ಸೆಕ್ಷನ್ 4 ರ ಅಡಿಯಲ್ಲಿ 736 ಪ್ರಕರಣ ದಾಖಲಿಸಿ ಒಟ್ಟು 83,540 ರೂ.ಗಳನ್ನು ಸೆಕ್ಷನ್ 6ಎ ರ ಅಡಿಯಲ್ಲಿ 310 ಪ್ರಕರಣ ದಾಖಲಿಸಿ ಒಟ್ಟು 33,540 ರೂ.ಗಳನ್ನು ಮತ್ತು ಸೆಕ್ಷನ್ 6ಬಿ ರ ಅಡಿಯಲ್ಲಿ 103 ಪ್ರಕರಣ ದಾಖಲಿಸಿ ಒಟ್ಟು 12,400 ರೂ.ಗಳ ದಂಡ ವಸೂಲು ಮಾಡಲಾಗಿದೆ. ಒಟ್ಟು ಜಿಲ್ಲೆಯಾದ್ಯಂತ 1149 ಪ್ರಕರಣ ದಾಖಲಿಸಿ 1,29,480 ರೂ.ಗಳ ದಂಡ ಸಂಗ್ರಹಿಸಲಾಗಿದೆ ಎಂದು ಹೇಳಿದರು.
ಕೋಟ್ಪಾ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಧಾರವಾಡ ಜಿಲ್ಲೆಯನ್ನು ಕೋಟ್ಪಾ ಕಾಯ್ದೆಯ ಉನ್ನತ ಅನುಷ್ಠಾನ ಜಿಲ್ಲೆ ಎಂದು ಘೋಷಿಸಿ ಸಚಿವರು ಜಿಲ್ಲಾ ತಂಬಾಕು ನಿಯಂತ್ರ ಕೋಶದ ಅಧಿಕಾರಿ ಡಾ. ಸುಜಾತಾ ಹಸವಿಮಠ ಅವರಿಗೆ ಪ್ರಮಣ ಪತ್ರ, ಸ್ಮರಣಿಕೆ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಸಚಿವರು ತಂಬಾಕು ನಿಯಂತ್ರಣಕೋಶದಿಂದ ಜನ ಜಾಗೃತಿಗಾಗಿ ರೂಪಿಸಿರುವ ಕರಪತ್ರ ಪೋಸ್ಟರ್, ಮಾಸ್ಕ್ ಮತ್ತು ಟಿ ಶರ್ಟ್‍ಗಳನ್ನು ಬಿಡುಗಡೆ ಮಾಡಿದರು. ಮತ್ತು ತಂಬಾಕು ಸೇವಿಸದಿರುವ ಕುರಿತು ಸಾರ್ವಜನಿಕರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರಾದ ಅರವಿಂದ ಬೆಲ್ಲದ. ಅಮೃತ ದೇಸಾಯಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುಶೀಲಾ.ಬಿ., ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯಶವಂತ ಮದೀನಕರ, ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ.ಶಶಿ ಪಾಟೀಲ, ತಹಶೀಲ್ದಾರ ಸಂತೋಷ ಬಿರಾದಾರ, ಸೇರಿದಂತೆ ವಿವಿಧ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ತಂಬಾಕು ಸೇವಿಸದಿರುವ ಕುರಿತು ಸಾರ್ವಜನಿಕರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಜಿಲ್ಲಾ ತಂಬಾಕು ನಿಯಂತ್ರಣಾಕೋಶದ ಅಧಿಕಾರಿ ಡಾ. ಸುಜಾತಾ ಹಸವಿಮಠ ವಂದಿಸಿದರು.

LEAVE A REPLY

Please enter your comment!
Please enter your name here