ನಡೆದಾಡುವ ದೇವರ ಮನೆಯ ಜೀರ್ಣೋದ್ಧಾರ ಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವರಿಂದ ಭೂಮಿ ಪೂಜೆ‌.

0
121

ರಾಮನಗರ, ಜೂನ್ 17- ನಡೆದಾಡುವ ದೇವರು ಎಂದೇ ಖ್ಯಾತರಾಗಿರುವ ಸಿದ್ದಗಂಗಾ ಮಠದ ಶ್ರೀಶ್ರೀಶ್ರೀ ಶಿವಕುಮಾರ ಸ್ವಾಮೀಜಿ ಅವರ ಹುಟ್ಟಿದ ಮನೆಯ ಜೀರ್ಣೋದ್ಧಾರ ಕಾಮಗಾರಿಗೆ ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅವರು ಇಂದು ವೀರಾಪುರದಲ್ಲಿ ಭೂಮಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿ ಇದೊಂದು ಪುಣ್ಯದ ಕೆಲಸವಾಗಿದ್ದು ವೀರಾಪುರದಲ್ಲಿ ರಸ್ತೆ, ಶಾಲೆ ಹಾಗೂ ದೇವಸ್ಥಾವನ್ನು ಸಹ ಅಭಿವೃದ್ಧಿ ಪಡಿಸಲಾಗುವುದು‌. ಮನೆಯನ್ನು ಅಭಿವೃದ್ಧಿ ಪಡಿಸಿ ಶ್ರೀ ಗಳು ಉಪಯೋಗಿಸುತ್ತಿದ್ದ ವಸ್ತುಗಳನ್ನು ಇಡಲಾಗುವುದು ಎಂದರು.

ವೀರಾಪುರ ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ನಡೆದಾಡುವ ದೇವರು ಎಂದೇ ಖ್ಯಾತರಾಗಿರುವ ಸಿದ್ದಗಂಗಾ ಮಠದ ಶ್ರೀಶ್ರೀಶ್ರೀ ಶಿವಕುಮಾರ ಸ್ವಾಮೀಜಿ ಅವರ 111 ಅಡಿ ಪುತ್ಥಳಿ ನಿರ್ಮಾಣ ಸಾಂಸ್ಕೃತಿಕ ಹಾಗೂ ಪಾರಂಪರಿಕ ಪಾರ್ಕ್ ಗೆ ಸರ್ಕಾರ 25 ಕೋಟಿ ಅನುದಾನ ನೀಡಿದ್ದು, ಕೆ.ಆರ್.ಐ.ಡಿ.ಎಲ್ ಅವರು ಯಾವುದೇ ಸೇವಾ ಶುಲ್ಕ ಪಡೆಯದೆ ಪೂರ್ಣ ಹಣವನ್ನು ಕಾಮಗಾರಿಗೆ ವಿನಿಯೋಗಿಸಲಿದ್ದಾರೆ. ಕಾಮಗಾರಿಯು ನಿಧಾನಗತಿಯಲ್ಲಿ ಸಾಗುತ್ತಿದ್ದು, ಶೀಘ್ರವಾಗಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದರು.

111ಅಡಿ ಪುತ್ಥಳಿ ಶಿವಗಂಗೆ ಹಾಗೂ ಸಿದ್ದಗಂಗೆ ನೋಡುವ ರೀತಿ ನಿರ್ಮಾಣ ಮಾಡಲಾಗುವುದು. ಪುತ್ಥಳಿಯ ಕೆಳಭಾಗದಲ್ಲಿ ಶ್ರೀ ಗಳ ಜೀವನ ಚರಿತ್ರೆಯ ಮ್ಯೂಸಿಯಂ ನಿರ್ಮಾಣ ಹಾಗೂ ಜೀವನ ಚರಿತ್ರೆಯ ಕಿರುಚಿತ್ರ ವೀಕ್ಷಿಸಲು ಆಡಿಟೋರಿಯಂ ಸಹ ನಿರ್ಮಿಸಲಾಗುವುದು. ಶ್ರೀಶ್ರೀಶ್ರೀ ಶಿವಕುಮಾರ ಸ್ವಾಮೀಜಿ ಅವರ ಹುಟ್ಟೂರಿನಿಂದ ಸಿದ್ದಗಂಗೆ ಕರ್ಮಭೂಮಿಗೆ 22 ಕಿ.ಮೀ ಇದ್ದು, ಜನರು ಪಾದಯಾತ್ರೆ ಮಾಡುವಂತೆ ರಸ್ತೆ ಅಭಿವೃದ್ಧಿಯಾಗಬೇಕು. ಅದಿರಂಗ, ಮಧ್ಯರಂಗ, ಅಂತ್ಯರಂಗ ದರ್ಶನ ಪಡೆದರೆ ಪುಣ್ಯ ಬರುತ್ತದೆ ಎಂಬ ನಂಬಿಕೆ ಇದೆ. ಅದೇ ರೀತಿ ಶ್ರೀಗಳ ಹುಟ್ಟೂರು ವೀರಾಪುರ, ಸಿದ್ದಗಂಗಾ ಹಾಗೂ ಶಿವಗಂಗಾ ಸ್ಥಳಗಳ ದರ್ಶನ ಪಡೆದರೆ ಪುಣ್ಯ ಸಿಗುತ್ತದೆ ಎಂದರು.

ಇದಕ್ಕೂ ಮುನ್ನ ಸಚಿವರು ಪುತ್ಥಳಿ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಗಿಡಗಳನ್ನು ನೆಟ್ಟಿ ನೀರೆರದು, ಅವುಗಳನ್ನು ಪೋಷಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಕೆ.ಆರ್.ಐ.ಡಿ.ಎಲ್ ಅಧ್ಯಕ್ಷ ರುದ್ರೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಂಗಪ್ಪ, ರಾಮನಗರ ಉಪವಿಭಾಗಾಧಿಕಾರಿ ಮಂಜುನಾಥ್, ಮಾಗಡಿ ತಹಶೀಲ್ದಾರ್ ಶ್ರೀನಿವಾಸ್ ಪ್ರಸಾದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವಿನಯ್ ಕುಮಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here