ಇಲಾಖೆಗಳು‌ ಆಡಳಿತದಲ್ಲಿ ಕನ್ನಡವನ್ನು
ಬಳಸಿ: ನಾಗಾಭರಣ ಟಿ.ಎಸ್

0
116

ರಾಮನಗರ, ಮಾ. 21: ಇಲಾಖೆಗಳು ಆಡಳಿತದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸಬೇಕು. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಅಧಿಕಾರಿಗಳು ತಮ್ಮ ವ್ಯಾಪ್ತಿಯ ಆಡಳಿತದಲ್ಲಿ ಆದ್ಯತೆ ಮೇಲೆ ಕನ್ನಡವನ್ನು ಬಳಸಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ ಟಿ.ಎಸ್ ಅವರು ತಿಳಿಸಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕನ್ನಡ ಅನುಷ್ಠಾನ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಲಾಖೆಗಳಲ್ಲಿ ಇ-ಕಚೇರಿ ಅನುಷ್ಠಾನವಾಗುತ್ತಿರುವ ಹಿನ್ನೆಲೆಯಲ್ಲಿ ಆಂಗ್ಲ‌ ಪದಗಳನ್ನು ಬಳಕೆ ಮಾಡುವುದನ್ನು ಕಡಿಮೆಗೊಳಿಸಲು ಕನ್ನಡದ 68 ನಿಘಂಟುಗಳನ್ನು ಪದ ಕಣಜ ಎಂಬ ವೆಬ್ ಸೈಟ್ ನ್ನು ರಚಿಸಲಾಗಿದೆ. ಆಡಳಿತದಲ್ಲಿ ಬಳಸುವ 66000 ಕ್ಲಿಷ್ಟಕರವಾದ ಆಂಗ್ಲ ಪದವನ್ನು ಕನ್ನಡಕ್ಕೆ ಅನುವಾದಿಸಲಾಗಿದೆ ಎಂದರು.

ಕೆಲವು ಸಂದರ್ಭದಲ್ಲಿ ಆಂಗ್ಲ ಪದವನ್ನು ಅನುವಾದಿಸದೇ ಕನ್ನಡದಲ್ಲಿ ಬರೆಯಲಾಗುವುದು. ಕನ್ನಡ ಪದವನ್ನು ಹೆಚ್ಚು ಬಳಸಲು ಅನುಕೂಲವಾಗುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅನುವಾದ ಕಮ್ಮಟಗಳನ್ನು ಆಯೋಜಿಸುತ್ತಿದೆ ಎಂದರು.

ನಮ್ಮ ಭಾಷೆ ಕನ್ನಡವನ್ನು ಪ್ರೀತಿಯಿಂದ ಗೌರವಿಸಬೇಕು. ಕನ್ನಡ ಬಳಕೆಯನ್ನು ಹೆಚ್ಚಿಸಲು ಪ್ರಯತ್ನಿಸಬೇಕು. ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಗಳು ಉದ್ದಿಮೆ ಪರವಾನಗಿ ನೀಡುವಾಗ ಉದ್ದಿಮೆಗಳು ಕನ್ನಡದಲ್ಲಿ ನಾಮಪಲಕ ಅನಾವರಣ ಗೊಳಿಸುವುದು ಕಡ್ಡಾಯ ಎಂಬ ನಿಬಂಧನೆ ವಿಧಿಸುವುದರ ಜೊತೆಗೆ ಪಾಲನೆಯಾಗುತ್ತಿರುವುದನ್ನು ಪರಿಶೀಲಿಸಬೇಕು ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದವರು ಹೊಸ ಬಡಾವಣೆಗಳಿಗೆ ಮಂಜೂರಾತಿ ನೀಡುವಾಗ ಹೊಸ ಬಡಾವಣೆಗಳಲ್ಲಿ ಕನ್ನಡಕ್ಕಾಗಿ ದುಡಿದ ಮಹಾನೀಯರ ಹೆಸರುಗಳನ್ನು ರಸ್ತೆ, ವೃತ್ತಗಳಿಗೆ ಇಡುವಂತೆ ಮನವಿ ಮಾಡಿ ಎಂದರು.

ಔಷಧಿಗಳ ಜೊತೆಯಲ್ಲಿ ಔಷಧಿಯಲ್ಲಿರುವ ವಸ್ತುಗಳ ವಿವರದ ಚೀಟಿಯನ್ನು ಪರಿಶೀಲಿಸಿದರೆ ಅದರಲ್ಲಿ ಆಂಗ್ಲ, ಹಿಂದಿ‌ ಭಾಷೆಯನ್ನು ಬಳಸಲಾಗುತ್ತದೆ. ಆರೋಗ್ಯ ಇಲಾಖೆಯಿಂದ ಜಿಲ್ಲೆಯಲ್ಲಿರುವ ಸಾರ್ವಜನಿಕರಿಗೆ ಈ ಮಾಹಿತಿಯನ್ನು ಕನ್ನಡದಲ್ಲಿ ನೀಡಿದರೆ ಹೆಚ್ಚು ಅನುಕೂಲಕರವಾಗುತ್ತದೆ ಎಂದು ಔಷಧ ನಿಯಂತ್ರಕರಿಗೆ ಪತ್ರ ಬರೆದರೆ ಕನ್ನಡದಲ್ಲಿ ಮಾಹಿತಿ ಪಡೆಯಲು ಒಂದು ಹೆಜ್ಜೆ ಇಟ್ಟಂತೆ ಹಾಗುತ್ತದೆ. ಬದಲಾವಣೆ ಸಹ ತರಬಹುದು ಎಂದರು.

ರಾಮನಗರ ಜಿಲ್ಲೆಯಲ್ಲಿ ಆಡಳಿತದಲ್ಲಿ ಕನ್ನಡ ಭಾಷೆಯ ಅನುಷ್ಠಾನ ಉತ್ತಮವಾಗಿದ್ದು, ದೂರುಗಳ ಸಂಖ್ಯೆ ಕಡಿಮೆ ಇದೆ. ಇದಕ್ಕಾಗಿ ಜಿಲ್ಲಾಡಳಿತವನ್ನು ಅಭಿನಂದಿಸುತ್ತೇನೆ ಎಂದರು.

ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ ಅವರು‌ ಮಾತನಾಡಿ ಕಂದಾಯ ಇಲಾಖೆಯಲ್ಲಿ ಪತ್ರ, ಕಡತ, ಟಿಪ್ಪಣಿಯನ್ನು ಕನ್ನಡದಲ್ಲೇ ನಿರ್ವಹಿಸಲಾಗುತ್ತಿದೆ. ಕೇಂದ್ರದ ಪತ್ರಗಳು ಹಾಗೂ ನ್ಯಾಯಾಲಯಕ್ಕೆ ಸಂಬಂಧಿಸಿದ ಪತ್ರಗಳನ್ನು ಮಾತ್ರ ಆಂಗ್ಲ ಭಾಷೆಯಲ್ಲಿ ನಿರ್ವಹಿಸಲಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಅಧ್ಯಕ್ಷರು ಕನ್ನಡ ಅಂಕಿಗಳಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಹೊರತಂದಿರುವ ಗಡಿಯಾರವನ್ನು ಜಿಲ್ಲಾಡಳಿತದ ಕಚೇರಿಯಲ್ಲಿ ಅನಾವರಣಗೊಳಿಸುವಂತೆ ತಿಳಿಸಿ ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಿದರು.

ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಧಿಕಾರದ ಕಾರ್ಯದರ್ಶಿ ಸಂತೋಷ್,ಅಪರ ಜಿಲ್ಲಾಧಿಕಾರಿ ಜವರೇಗೌಡ ಟಿ, ಉಪವಿಭಾಗಾಧಿಕಾರಿ ಮಂಜುನಾಥ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ರಮೇಶ್, ಆರೋಗ್ಯಾಧಿಕಾರಿ ಡಾ: ನಿರಂಜನ್, ಡಿ.ಡಿ.ಎಲ್ ಆರ್. ಸಂತೋಷ್ ಎಂ, ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here