ನ್ಯಾನೋ ಯೂರಿಯಾ ಗೊಬ್ಬರ ದ್ರಾವಣ ; ಬಳಕೆಗೆ ಮುಂಜಾಗೃತೆ ವಹಿಸಲು ರೈತರಿಗೆ ಸಲಹೆ

0
142

ಧಾರವಾಡ.ಜೂ.22: ವಿಶ್ವದಲ್ಲಿಯೇ ಪ್ರಥಮವಾಗಿ ನ್ಯಾನೋ ತಾಂತ್ರಿಕತೆಯ ರಸಗೊಬ್ಬರವನ್ನು ಭಾರತವು ಅಭಿವೃದ್ದಿ ಪಡಿಸಿ ಪರೀಕ್ಷೆಯನ್ನು ಮಾಡಿ ಅನುಮೋದಿಸಿದೆ. ಹಾಗೂ ರಸಗೊಬ್ಬರ ನಿಯಂತ್ರಣ ಕಾಯ್ದೆ 1985 ರಲ್ಲಿ ಸೇರ್ಪಡೆ ಮಾಡಲಾಗಿದೆ. ಇಪ್ಕೋ ಸಂಸ್ಥೆಯ ಎನ್‍ಬಿಆರ್‍ಸಿ, ಕಾಲೋಲ್ ಪ್ರಯೋಗಾಲಯದಿಂದ ಇದನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿನಿರ್ದೇಶಕ ರಾಜಶೇಖರ್ ಬಿಜಾಪೂರ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ನ್ಯಾನೋ ಯೂರಿಯಾ ದ್ರಾವಣವು ಪ್ರತಿಸತ 4 ರಷ್ಟು ನ್ಯಾನೋ ಸಾರಜನಕ ಕಣಗಳನ್ನು ಹೊಂದಿರುತ್ತದೆ. ಐಸಿಎಆರ್, ಎಸ್‍ಎಯು ಹಾಗೂ ಕೆವಿಕೆ (ICAR, SAU and KVK) ಒಳಗೊಂಡಂತೆ 20 ಕ್ಕೂ ಹೆಚ್ಚು ಸಂಸ್ಥೆಗಳ ಮೂಲಕ 11000 ಕ್ಕೂ ಹೆಚ್ಚು ಸ್ಥಳಗಳಲ್ಲಿ 94 ವಿವಿಧ ಬೆಳೆಗಳ ಮೇಲೆ ಪರೀಕ್ಷಿಸಲಾಗಿದೆ. ಒಂದು ಬಾಟಲ್ (500 ಮಿ.ಲೀ) ನ್ಯಾನೊ ಯೂರಿಯಾ ಒಂದು ಚೀಲ ಯೂರಿಯಾ ರಸಗೊಬ್ಬರಕ್ಕೆ ಸಮಾನವಾಗಿದೆ.

ಬೆಳೆಯ ಬೆಳವಣಿಗೆಯಲ್ಲಿ ಸಾರಜನಕವು ಪ್ರಮುಖ ಪಾತ್ರವಹಿಸುತ್ತದೆ. ಬೆಳೆಯ ಸಾರಜನಕ ಬೇಡಿಕೆಯನ್ನು ಪೂರೈಸಲು ರೈತರು 2 ರಿಂದ 3 ಹಂತದಲ್ಲಿ ಯೂರಿಯಾ ಗೊಬ್ಬರವನ್ನು ತಳ ಗೊಬ್ಬರ ಹಾಗೂ ಮೇಲೂ ಗೊಬ್ಬರವಾಗಿ ನೀಡುತ್ತಾರೆ. ಆದರೆ ಕಡಿಮೆ ಬಳಕೆ ಪರಿಣಾಮಕತ್ವ (Low use efficiency) ದಿಂದ ಶೇ.30 ರಿಂದ 50 ರಷ್ಟು ಮಾತ್ರ ಬೆಳೆಗಳಿಗೆ ದೊರೆಯುತ್ತದೆ. ಸಾರಜನಕವು ಅಮೋನಿಯಾ ಹಾಗೂ ನೈಟ್ರಸ್ ಆಕ್ಸೈಡ್ ರೂಪದಲ್ಲಿ ಮಣ್ಣು, ಗಾಳಿ ಮತ್ತು ನೀರನ್ನು ಮಲೀನಗೊಳಿಸುತ್ತದೆ. ಆದರೆ ನ್ಯಾನೊ ಯೂರಿಯಾದಿಂದ ಪರಿಸರ ಮಾಲಿನ್ಯವಾಗುವುದಿಲ್ಲ.

ಜಿಲ್ಲೆಯಲ್ಲಿ ಪ್ರಸ್ತುತವಾಗಿ 2040 ಲೀಟರ್‍ದಷ್ಟು ನ್ಯಾನೋ ಯೂರಿಯಾ ಗೊಬ್ಬರವನ್ನು ಎಲ್ಲ ತಾಲ್ಲೂಕುಗಳಿಗೆ ಇಪ್ಕೊ ಸಂಸ್ಥಯಿಂದ ಪೂರೈಸಲಾಗಿದ್ದು, ಹಂತಹಂತವಾಗಿ ಹೆಚ್ಚಿನ ಪ್ರಮಾಣದಲ್ಲಿ ನ್ಯಾನೋ ಯೂರಿಯಾ ಗೊಬ್ಬರ ಜಿಲ್ಲೆಗೆ ಆಗಮಿಸಲಿದೆ. ರೈತರು ಮುಂಜಾಗೃತಾ ಕ್ರಮಗಳನ್ನು ಪಾಲಿಸಿ ರಸಗೊಬ್ಬರದ ಸದುಪಯೋಗ ಪಡಿಸಿಕೊಳ್ಳಲು ಕೃಷಿ ಇಲಾಖೆಯ ಜಂಟಿನಿರ್ದೇಶಕರು ತಿಳಿಸಿದ್ದಾರೆ.

ನ್ಯಾನೊ ಯೂರಿಯಾ ಗೊಬ್ಬರದ ಉಪಯೋಗಗಳು : ನ್ಯಾನೋ ಕಣಗಳು ಅತೀ ಸೂಕ್ಷ್ಮವಾಗಿದ್ದು (20-50 nm) ಇವುಗಳನ್ನು ಸಸ್ಯವು ಪರಿಣಾಮಕಾರಿಯಾಗಿ ಹೀರಿಕೊಳ್ಳುತ್ತದೆ. ಇದರಿಂದ ಹೆಚಿನ ಬಳಕೆ ಧಕ್ಷತೆ ಅಂದರೆ ಪ್ರತಿಶತ 80 ರಷ್ಟು ಬೆಳೆಗಳಿಗೆ ದೊರೆಯಲಿದೆ. ನಿಧಾನವಾಗಿ ಸಸ್ಯಗಳಲ್ಲಿ ಬಿಡುಗಡೆ ಹೊಂದುತ್ತದೆ. ಸಸ್ಯಗಳಲ್ಲಿ ಪ್ಲೋಯಂ ಮುಖಾಂತರ ಪೂರ್ತಿ ಸಸ್ಯಕ್ಕೆ ಸರಬರಾಜು ಆಗುತ್ತದೆ. ನ್ಯಾನೋ ಯೂರಿಯಾ ಬಳಸುವುದರಿಂದ ಶೇ.50 ರಷ್ಟು ಸಾಂಪ್ರದಾಯಿಕ ಯೂರಿಯಾ ಕಡಿಮೆ ಮಾಡಲು ಸಾಧ್ಯವಿದೆ. ನ್ಯಾನೋ ಯೂರಿಯಾವನ್ನು ಎಲ್ಲ ಬೆಳೆಗಳಿಗೆ ಉತ್ತಮ ಇಳುವರಿ ಪಡೆಯುವುದಕ್ಕಗಿ ಬಳಸಬಹುದಾಗಿದೆ. ಆಹಾರ ಮತ್ತು ಪರಿಸರಕ್ಕೆ ಸುರಕ್ಷಿತವಾಗಿದೆ. ರೈತರಿಗೆ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭವಾಗಲಿದೆ. ಸುಲಭವಾಗಿ ಸಂಗ್ರಹಣೆ ಮತ್ತು ಸಾಗಾಣಿಕೆ ಮಾಡಬಹುದಾಗಿದೆ. ಸಸ್ಯ ಮತ್ತು ಪ್ರಾಣಿ ಸಂಕುಲಕ್ಕೆ ವಿಷಕಾರಿಯಲ್ಲ. ನ್ಯಾನೋ ಯೂರಿಯಾ ಬಳಕೆಯು ಶೇ.8 ರಷ್ಟು ಬೆಳೆ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ.

ಬಳಕೆಯ ವಿಧಾನಗಳು: ಒಂದು ಲೀಟರ್ ನೀರಿನಲ್ಲಿ 2 ರಿಂದ 4 ಮಿ.ಲೀ ನ್ಯಾನೋ ಯೂರಿಯಾ ದ್ರಾವಣವನ್ನು ಬೆರೆಸಿ ಬೆಳೆಗಳ ಬೆಳವಣಿಗೆ ಹಂತದಲ್ಲಿ ಎಲೆಗಳ ಮೇಲೆ ಸಿಂಪಡಿಸಿ. ಒಂದನೇ ಸಿಂಪಡಣೆ- ಬೀಜ ಮೊಳಕೆಯೊಡೆದ 30 ದಿನಗಳ ನಂತರ. ಎರಡನೇ ಸಿಂಪಡಣೆ- 2-3 ವಾರಗಳ ನಂತರ ಅಥವಾ ಹೂ ಬಿಡುವ ಮೊದಲು ಒಂದು ವಾರ ನ್ಯಾನೋ ಯೂರಿಯಾ ರಸಗೊಬ್ಬರವನ್ನು ಮೇಲೂ ಗೊಬ್ಬರವಾಗಿ ಸಿಂಪಡಣೆ ಮಾಡಬೇಕು. ಬೆಳೆಯ ಅಗತ್ಯಕ್ಕೆ ಅನುಗುಣವಾಗಿ ಸಿಂಪರಣೆಗಳ ಸಂಖ್ಯೆಯನ್ನು ಹೆಚ್ಚು ಅಥವಾ ಕಡಿಮೆ ಮಾಡಬಹುದು.

ಗೊಬ್ಬರ ಬಳಕೆಗೆ ಸೂಚನೆಗಳು: ಬಳಕೆಗೆ ಮುನ್ನ ಬಾಟಲ್‍ನ್ನು ಚೆನ್ನಾಗಿ ಅಲುಗಾಡಿಸಿ. ಸಿಂಪರಣೆಗೆ ಪ್ಲ್ಯಾಟ್ ಕೋನ್ ನಾಜಲ್ ಅಥವಾ ಕಟ್ ನಾಜಲ್ ಬಳಕೆ ಮಾಡಿ. ಬೆಳಿಗ್ಗೆ ಅಥವಾ ಸಾಯಂಕಾಲದ ಸಮಯದಲ್ಲಿ ಸಿಂಪಡಿಸಬೇಕು. (ಮಂಜು ಮತ್ತು ಅಧಿಕ ಗಾಳಿ ಇರುವಾಗ ಸಿಂಪಡಿಸಬಾರದು.) ಸಿಂಪರಣೆ ಮಾಡಿದ 12 ಗಂಟೆಗಳಲ್ಲಿ ಮಳೆಯಾದರೆ ಮರು ಸಿಂಪರಣೆ ಮಾಡಬೇಕು. ನ್ಯಾನೋ ಯೂರಿಯಾವನ್ನು ಬಯೋ ಸ್ಟಿಮ್ಯುಲಂಟ್, ಪ್ರತಿಶತ 100 ರಷ್ಟು ನೀರಿನಲ್ಲಿ ಕರಗುವ ರಸಗೊಬ್ಬರ ಹಾಗೂ ಕೀಟ ನಾಶಕಗಳ ಜೊತೆ ಮಿಶ್ರಣ ಮಾಡಿ ಸಿಂಪಡಿಸಬಹುದಾಗಿದೆ. (ಸಿಂಪರಣೆಗೂ ಮುನ್ನ ಜಾರ್ ನಲ್ಲಿ ಮಿಶ್ರಣದ ಹೊಂದಾಣಿಕೆಯನ್ನು ಪರೀಕ್ಷಿಸಲು ಸೂಚಿಸಿದೆ) ಉತ್ತಮ ಫಲಿತಾಂಶಕ್ಕಾಗಿ ಉತ್ಪಾದನೆಯಾದ ಎರಡು ವರ್ಷಗಳೊಳಗೆ ಬಳಸಲು ಸೂಚಿಸಿದೆ.

ಮುಂಜಾಗ್ರತಾ ಕ್ರಮಗಳು: ನ್ಯಾನೋ ಯೂರಿಯಾವು ಬಳಕೆದಾರನಿಗೆ ಸುರಕ್ಷಿತವಾಗಿದೆ ಆದರೂ ಸಹಿತ ಬಳಕೆ ಸಮಯದಲ್ಲಿ ಕೈ ಮತ್ತು ಮುಖ ಗವಸಗಳನ್ನು ಧರಿಸಲು ಸೂಚಿಸಿದೆ. ಒಣ ಪ್ರದೇಶದಲ್ಲಿ ಶೇಖರಣೆ ಮಾಡಬೇಕು ಹಾಗೂ ಹೆಚ್ಚು ಉಷ್ಣಾಂಶವಿರುವ ಪ್ರದೇಶದಿಂದ ದೂರವಿಡಬೇಕು. ಮಕ್ಕಳು ಮತ್ತು ಸಾಕು ಪ್ರಾಣಿಗಳಿಂದ ದೂರವಿಡಬೇಕೆಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಾಜಶೇಖರ್ ಬಿಜಾಪೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here