ನೆರೆಹಾವಳಿ ನಿವಾರಣೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ: ಅಪರ ಜಿಲ್ಲಾಧಿಕಾರಿ

0
85

ಮಂಡ್ಯ -ಮುಂಗಾರುಮಳೆ ಮಾನ್ಸೂನ್ ಆರಂಭವಾಗಿದ್ದು, ಕಾವೇರಿ ನದಿಯ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಹರಿಸುವ ಕಾರಣದಿಂದ ಕಾವೇರಿ ನದಿಯು ತನ್ನ ಇಕ್ಕೆಲಗಳಲ್ಲಿ ತುಂಬಿ ಹರಿಯುವ ಸಾಧ್ಯತೆ ಇದೆ ಆದ್ದರಿಂದ ಮುಂಜಾಗ್ರತ ಕ್ರಮವಾಗಿ ಜಿಲ್ಲೆಯಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಿ ಎಂದು ಅಪರ ಜಿಲ್ಲಾಧಿಕಾರಿ ಶೈಲಜಾರವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಅತಿವೃಷ್ಟಿ ಹಾಗೂ ನೆರೆಹಾವಳಿ ಸಮಸ್ಯೆಗಳ ನಿರ್ವಹಣೆಯ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಉತ್ತರ ಕರ್ನಾಟಕದಲ್ಲಿ ಇರುವಂತೆ ನಮ್ಮ ಜಿಲ್ಲೆಯಲ್ಲಿ ಪ್ರವಾಹಕ್ಕೆ ಹಾಗೂ ನೆರೆಹಾವಳಿಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಪ್ರಾಕೃತಿಕ ವಿಕೋಪಗಳು ಹೆಚ್ಚಾಗಿ ಕಂಡುಬರುವುದಿಲ್ಲ, ಮಂಡ್ಯ ಜಿಲ್ಲೆಯು ಪ್ರಕೃತಿ ವಿಕೋಪ ಮತ್ತು ನೆರೆಹಾವಳಿ ಸಮಸ್ಯೆಗಳಿಂದ ಮುಕ್ತವಾಗಿದೆ ಎಂದರು.
ಮಂಡ್ಯ, ಮದ್ದೂರು ಮತ್ತು ನಾಗಮಂಗಲ ತಾಲೂಕುಗಳಲ್ಲಿ ಪ್ರವಾಹ-ನೆರೆಹಾವಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಕಂಡುಬರುವುದಿಲ್ಲ.
ಮಳವಳ್ಳಿ ತಾಲೂಕಿನ 4 ಗ್ರಾಮ ಪಂಚಾಯಿತಿಗಳಲ್ಲಿ ಮುತ್ತತ್ತಿ ಮತ್ತು ತಾಳವಾಡಿ ಸುತ್ತಮುತ್ತಲಿನ 9 ಗ್ರಾಮಗಳು, ಪಾಂಡವಪುರ ತಾಲೂಕಿನ 2 ಗ್ರಾಮಪಂಚಾಯಿತಿಗಳ ಎಣ್ಣೆಹೊಳೆ ಕೊಪ್ಪಲು ಮತ್ತು ಅದರ ಸುತ್ತಮುತ್ತಲಿನ 6 ಗ್ರಾಮಗಳು ಹಾಗೂ ಕೆ.ಆರ್ ಪೇಟೆ ತಾಲೂಕಿನ 2 ಗ್ರಾಮಗಳು, ಶ್ರೀರಂಗಪಟ್ಟಣ ತಾಲೂಕಿನ 7 ಗ್ರಾಮ ಪಂಚಾಯಿತಿಗಳ 19 ಗ್ರಾಮಗಳು, ಜಿಲ್ಲೆಯಲ್ಲಿ ಒಟ್ಟು 14 ಗ್ರಾಮಪಂಚಾಯಿತಿಗಳ 36 ಗ್ರಾಮಗಳು ಪ್ರವಾಹ, ನೆರೆ ಹಾವಳಿ ಮತ್ತು ಪ್ರಕೃತಿ ವಿಕೋಪಗಳಿಗೆ ಒಳಗಾಗುವ ಸಂಭವವಿರುತ್ತದೆ. ಆದ್ದರಿಂದ ಆಯಾ ತಾಲ್ಲೂಕುಗಳ ತಹಶೀಲ್ದಾರರು ಇದಕ್ಕೆ ಸಂಬಂಧಿಸಿದ ಮುನ್ನೆಚ್ಚರಿಕೆ ಕ್ರಮಗಳನ್ನು ಶೀಘ್ರವೇ ಕೈಗೊಳ್ಳಬೇಕೆಂದು ತಿಳಿಸಿದರು.
ನಾಗಮಂಗಲ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಅದಕ್ಕೆ ಸಂಬಂಧಿಸಿದ ಪರಿಹಾರ ಕ್ರಮಗಳನ್ನು ತಹಶೀಲ್ದಾರರು ಶೀಘ್ರವೇ ಕೈಗೊಳ್ಳಬೇಕು ಎಂದರು.
ಶ್ರೀರಂಗಪಟ್ಟಣ ತಾಲೂಕಿನಲ್ಲಿ ಕಾವೇರಿ ನದಿಯು ಹೆಚ್ಚು ಉಕ್ಕಿ ಹರಿಯುವುದರಿಂದ ನದಿ ಪ್ರದೇಶದ ಸುತ್ತಮುತ್ತಲಿನ ಜನರಲ್ಲಿ ಹರಿವು ಮೂಡಿಸಿ, ಅವರನ್ನು ಸ್ಥಳಾಂತರಿಸುವ ಕಾರ್ಯವಾಗಬೇಕು ಎಂದರು.
ಜಿಲ್ಲೆಯಲ್ಲಿ ಕಳೆದ ವರ್ಷದಲ್ಲಿ ಕೆರೆಗಳ ಹಾನಿಗಳಿಂದಾಗಿ ಗ್ರಾಮಗಳಲ್ಲಿ ಅನೇಕ ಸಮಸ್ಯೆಗಳು ಉದ್ಭವವಾಗಿದ್ದು, ಆ ಸಮಸ್ಯೆಗಳು ಪುನಃ ಉದ್ಭವಿಸದಂತೆ ಎಚ್ಚರಿಕೆವಹಿಸಿ ಎಂದರು.
ಪ್ರವಾಹ ಅಥವಾ ನೆರೆ ಹಾನಿಯನ್ನು ಎದುರಿಸಲು ಜಿಲ್ಲಾಡಳಿತವು ತಾಲೂಕು ಆಡಳಿತದಿಂದ ಕೆಲವು ಕ್ರಮಗಳನ್ನು ಕೈಗೊಂಡಿದ್ದು ಅವುಗಳೆಂದರೆ ಸರ್ಕಾರಕ್ಕೆ ಪ್ರತಿದಿನ ದೈನಂದಿನ ಹಾನಿ ವರದಿ ಸಲ್ಲಿಸಬೇಕು, ಜಿಲ್ಲೆಯಲ್ಲಿ ಕಾವೇರಿ ನದಿನೀರಿನ ಪ್ರವಾಹದ ಸಮಸ್ಯೆಗಳಿಗೆ ಒಳಗಾಗುವ ಸಮಸ್ಯೆಗಳ ಕುರಿತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಿರ್ವಹಣೆ ಯೋಜನೆಯನ್ನು 24 ಗಂಟೆಯೊಳಗೆ ತಯಾರಿಸುವುದು.
ಪ್ರವಾಹ ನೆರೆ ಹಾನಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಲಭ್ಯವಿರುವ ರಕ್ಷಣಾ ಉಪಕರಣಗಳ ವಿವರವನ್ನು ಶೀಘ್ರವಾಗಿ ಸಲ್ಲಿಸಬೇಕು ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಸಲಹಾ ಸಮಿತಿ ರಚಿಸಿ ಶೀಘ್ರವೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಡಿ.ಎಚ್.ಒ ಧನಂಜಯ್, ಮಂಡ್ಯ ಉಪವಿಭಾಗಧಿಕಾರಿ ಐಶ್ವರ್ಯ, ಪಾಂಡವಪುರ ಉಪವಿಭಾಗಧಿಕಾರಿ ಶಿವಾನಂದ ಮೂರ್ತಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎನ್. ಡಿ ಪ್ರಕಾಶ್, ಕಾವೇರಿ ನೀರಾವರಿ ನಿಗಮದ ಸೂಪಡೆರ್ಂಟ್ ಆಫ್ ಇಂಜಿನಿಯರ್ ವಿಜಯಕುಮಾರ್, ಜಿಲ್ಲೆಯ ತಾಲ್ಲೂಕುಗಳ ತಹಶೀಲ್ದಾರರು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here